ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ: ರಾಜಕೀಯ ಪ್ರಜ್ಞೆ ಮತ್ತು ರಾಜಕಾರಣ

Published : 22 ನವೆಂಬರ್ 2022, 19:42 IST
ಫಾಲೋ ಮಾಡಿ
Comments

ಪ್ರಸ್ತುತ ಸಂದರ್ಭದಲ್ಲಿ ಎಲ್ಲರೂ ಕೇಳಿಕೊಳ್ಳಲೇಬೇಕಾದ ವಿಚಾರವೊಂದನ್ನು ಎಚ್.ಕೆ.ಶರತ್ ತಮ್ಮ ಲೇಖನದಲ್ಲಿ (ಸಂಗತ, ನ. 15) ಮುಂದಿಟ್ಟಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾವು ಒಪ್ಪಿಕೊಂಡಿರು
ವುದರಿಂದ ದೇಶದ ಸಕಲ ಆಗುಹೋಗುಗಳನ್ನೂ ನಿರ್ಧರಿಸುವ ಪ್ರಸ್ತುತ ರಾಜಕೀಯ ವ್ಯವಸ್ಥೆ ಬಗೆಗೆ ದೇಶದಲ್ಲಿರುವ ಯಾರೂ ನಿರ್ಲಿಪ್ತರಾಗಿ ಉಳಿಯಲು ಸಾಧ್ಯವಿಲ್ಲ.

ರಾಜಪ್ರಭುತ್ವವಿದ್ದಾಗ ಹೇಳಬಹುದಾಗಿದ್ದ ‘ಯಾರೇ ಅಧಿಕಾರಕ್ಕೆ ಬಂದರೂ ರಾಗಿ ಬೀಸೋದು ತಪ್ಪಲ್ಲ’ ಎನ್ನುವ ಮಾತನ್ನು ಈಗ ನಾವು ಆಡಿಕೊಂಡು ಸುಮ್ಮನಿದ್ದುಬಿಡಲು ಆಗುವುದಿಲ್ಲ. ಅದರರ್ಥ ಪ್ರಜೆಗಳೆಲ್ಲರೂ ಜಾಗೃತವಾದ ರಾಜಕೀಯ ಪ್ರಜ್ಞೆಯನ್ನು ಹೊಂದಿದ್ದು, ತಮ್ಮ ಮತದ ಶಕ್ತಿಯನ್ನು ಅರ್ಥ ಮಾಡಿಕೊಂಡು, ಆಮಿಷಗಳಿಗೆ ಬಲಿ ಬೀಳದೆ ಚುನಾವಣೆಯಲ್ಲಿ ದೇಶವನ್ನು ಮುನ್ನಡೆಸಿಕೊಂಡು ಹೋಗಲು ಸಮರ್ಥವೆಂದು ತಮಗೆ ಅನ್ನಿಸಿದ ಪಕ್ಷವೊಂದರ ಪರವಾಗಿ ತಮ್ಮ ಒಲವಿನಂತೆ ಮತ ನೀಡಬೇಕಾಗುತ್ತದೆ.

ಇನ್ನು ಸಾಹಿತಿಗಳು, ವೈದ್ಯರು, ವಕೀಲರು, ಇತಿಹಾಸಕಾರರು, ಪತ್ರಕರ್ತರಂತಹ ಸಮಾಜದ ಬೇರೆ ಬೇರೆ ವರ್ಗಗಳವರು ಎಲ್ಲರಂತೆಯೇ ರಾಜಕೀಯ ನಿಲುವು, ಧೋರಣೆ ಹೊಂದಿರುವುದು ಅರ್ಥವಾಗು
ವಂಥದ್ದೇ ಮತ್ತು ಅದು ಅವರ ತೀಕ್ಷ್ಣ ರಾಜಕೀಯ ಪ್ರಜ್ಞೆಯ ದ್ಯೋತಕವೂ ಹೌದು. ಆದರೆ ಅವರು ರಾಜಕೀಯ ಪಕ್ಷವೊಂದರ ಸಕ್ರಿಯ ಸದಸ್ಯರಾಗಿ ಇಲ್ಲವೆ ಯಾವುದೋ ಒಂದು ಪಕ್ಷದ ಪರವಾಗಿ ವೇದಿಕೆಗಳನ್ನು ರಚಿಸಿಕೊಂಡು ಪಕ್ಷವೊಂದರ ಸಕ್ರಿಯ ಸದಸ್ಯರಿಗಿಂತ ಹೆಚ್ಚಾಗಿ ಆಳುವ ಸರ್ಕಾರವೊಂದನ್ನು ಇಲ್ಲವೆ ತಮ್ಮ ಒಲವಿನ ರಾಜಕೀಯ ಪಕ್ಷವೊಂದನ್ನು ಸಮರ್ಥಿಸುವುದನ್ನೋ ಇಲ್ಲವೆ ಟೀಕಿಸುವುದನ್ನೋ ಮಾಡತೊಡಗಿದಾಗ ಅವರ ಬರಹ ಇಲ್ಲವೆ ಸಾಹಿತ್ಯ, ಅವರ ವೈದ್ಯಕೀಯ ಜ್ಞಾನ, ಕಾನೂನು ಜ್ಞಾನ ಗೌಣವಾಗಿ ಅವರು ರಾಜಕೀಯಸ್ಥರೆಂದೇ, ಒಂದು ಪಕ್ಷದವರೆಂದೇ ಮುಖ್ಯವಾಗಿ ಗುರುತಿಸಲ್ಪಡುತ್ತಾರೆ;
ಮತ್ತು ಗುರುತಿಸಲ್ಪಡಬೇಕಾಗುತ್ತದೆ. ಆಗ ಅದರ ಹಿಂದೆ ಅಧಿಕಾರದ ಆಸೆಯೂ ಇರಬಹುದು. ಆಗ ಅಂಥವರಿಗೆ, ಅಂಥವರ ಮಾತುಗಳಿಗೆ ರಾಜಕಾರಣಿಗಳಿಗೆ ನೀಡುವ ಗೌರವ, ಬೆಲೆಗಿಂತ ಹೆಚ್ಚಿನ ಗೌರವ, ಬೆಲೆ ಇರುವುದಿಲ್ಲ.

ನಿಷ್ಪಕ್ಷಪಾತ ದೃಷ್ಟಿಯಿಂದ ಸಾಹಿತಿಗಳು, ವೈದ್ಯರು, ಸಮಾಜಸೇವಾ ಕಾರ್ಯಕರ್ತರು, ಗೌರವಾನ್ವಿತರು ಯಾವುದೇ ಪಕ್ಷದ ನೇತೃತ್ವದ ಸರ್ಕಾರಕ್ಕೆ ತಮ್ಮದೇ ಒಂದು ವೇದಿಕೆಯ ಮೂಲಕ ರಾಜಕೀಯ ಸಲಹೆಗಳನ್ನು ನೀಡುವುದು, ಇಲ್ಲವೆ ತಪ್ಪಿ ನಡೆದಾಗ ಟೀಕಿಸುವುದು ಮಾಡಿದರೆ ಅದನ್ನು ಯಾರೂ ತಪ್ಪೆನ್ನು
ವುದಿಲ್ಲ. ಅದು ಸಮಾಜಕ್ಕೆ ಅರ್ಥವಾಗುತ್ತದೆ ಮತ್ತು ಅದನ್ನು ಗುರುತಿಸುತ್ತದೆ. ಹಿಂದೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಲೋಕನಾಯಕ ಜಯಪ್ರಕಾಶ್ ನಾರಾಯಣ ಅವರು ಆಗಿನ ಆಳುವ ಸರ್ಕಾರದ ಸರ್ವಾಧಿಕಾರಿ ಧೋರಣೆಯ ವಿರುದ್ಧ ಪಕ್ಷರಾಜಕಾರಣದಿಂದ ದೂರವಾದಂಥ ಹೋರಾಟವೊಂದನ್ನು ರೂಪಿಸಿದ್ದರು. ಆಗ ಜನಸಾಮಾನ್ಯರೊಂದಿಗೆ ಮೇಲೆ ಹೆಸರಿಸಲಾದ ಸಮಾಜದ ಪ್ರತಿಷ್ಠಿತ ವರ್ಗದ ಎಲ್ಲರೂ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಕೈಜೋಡಿಸಿದ್ದರು. ಪತ್ರಿಕೆಗಳೂ ಆಗ ಅತ್ಯಂತ ಧೀಮಂತವಾಗಿಯೇ ನಡೆದುಕೊಂಡವು.

ಆದರೆ ಸಮಷ್ಟಿ ದೃಷ್ಟಿಯಿಂದ ಅಥವಾ ಸಾರ್ವಜನಿಕ ಹಿತಾಸಕ್ತಿಯಿಂದ ಯಾವುದೇ ಸರ್ಕಾರ ಕೈಗೊಳ್ಳುವಂಥ ಕ್ರಮಗಳು ಅಥವಾ ಅದರ ನಡೆ ಸರಿಯಿದ್ದಾಗಲೂ ಬೇಕೆಂದೇ ರಂಧ್ರಾನ್ವೇಷಣೆ ಮಾಡುವುದು, ಅದರ ಒಳ್ಳೆಯ ಕಾರ್ಯಗಳಿಗೆ ಕುರುಡಾಗಿರುವುದು, ಯಾವುದೋ ಒಂದು ಪಕ್ಷದ ಹಿತಾಸಕ್ತಿಯನ್ನೇ ಮುಂದೆ ಮಾಡುವುದು, ಅದರ ನಡೆ ಹೇಗೇ ಇರಲಿ ಅದರ ಮುಖವಾಣಿಯಂತೆ ಮಾತಾಡುವುದು, ತಮ್ಮ ಒಲವಿನ ರಾಜಕೀಯ ಪಕ್ಷ ಏನೇ ತಪ್ಪು ಮಾಡಿದರೂ ಅದಕ್ಕೆ ಪೂರ್ತಿ ಕುರುಡಾಗಿ, ಇನ್ನೊಂದು ಪಕ್ಷ ಸರಿಯಾಗಿದ್ದಾಗಲೂ ಮೆಚ್ಚದೆ ಅಥವಾ ಸಮರ್ಥಿಸದೆ ಇರುವುದನ್ನೇ ರಾಜಕೀಯ ಎನ್ನುವುದು ಹಾಗೂ ರಾಜಕೀಯವನ್ನು ಬೆರೆಸುವುದು ಎನ್ನುವುದು.

ಸಕ್ರಿಯ ರಾಜಕಾರಣಿಗಳು, ಅಧಿಕಾರದಲ್ಲಿರುವ ಮಂತ್ರಿಗಳು ಜನರ ಹಿತವನ್ನು ಕಡೆಗಣಿಸಿ, ಸಾರ್ವಜನಿಕರ ಸಮಸ್ಯೆಗಳಿಗೆ ಮುಖ ತಿರುಗಿಸಿ ತಮ್ಮ ಅಧಿಕಾರ ಉಳಿಸಿಕೊಳ್ಳಲು, ಹಣ ಮಾಡಲು, ಪಕ್ಷದ ಹಿತ ಕಾಪಾಡಲು ಮಾಡುವಂಥದ್ದೆಲ್ಲವೂ ರಾಜಕೀಯ ಬೆರೆಸುವುದು, ರಾಜಕಾರಣ ಮಾಡುವುದು ಎನಿಸುತ್ತವೆ. ಇಂಗ್ಲಿಷಿನಲ್ಲಿ ‘ಪೊಲಿಟಿಕಿಂಗ್’ ಎನ್ನುವುದು ಇದನ್ನೇ. ಇದಕ್ಕೆ ಇರುವುದು ಕೆಟ್ಟ ಅರ್ಥವೇ; ಅಗೌರವದ ಅರ್ಥವೇ. ಇದನ್ನು ಮಂತ್ರಿ, ಸಾಹಿತಿ, ಪತ್ರಕರ್ತ ಯಾರೇ ಮಾಡಿದರೂ ಅದು ರಾಜಕಾರಣವೇ, ರಾಜಕೀಯವೇ.

ಹಲವಾರು ಕೋಮುಗಳು, ಸಾವಿರಾರು ಜಾತಿಗಳಿಂದ ಇಡಿಕಿರಿದಿರುವ ನಮ್ಮ ದೇಶದ ಸಂದರ್ಭದಲ್ಲಿ, ಆಳುವ ಸರ್ಕಾರಗಳು ರಾಜಕೀಯವನ್ನು ಬೆರೆಸದೆ ಅರ್ಥಾತ್ ಪೊಲಿಟಿಕಿಂಗ್ ಮಾಡದೆ ಅಥವಾ ಮಾಡಿದರೂ ಅದು ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ಇರುವ ಹಾಗೆ ನೋಡಿಕೊಳ್ಳುವುದೆಂದರೆ ಅದೊಂದು ಕತ್ತಿಯಂಚಿನ ನಡಿಗೆಯ ಹಾಗೆ. ಯಾವುದೇ ಪಕ್ಷದ ನೇತೃತ್ವದ ಸರ್ಕಾರವೇ ಆದರೂ ಕತ್ತಿಯಂಚಿನ ನಡಿಗೆಗೆ ತಪ್ಪಿದರೆ ಅದನ್ನು ಮತ್ತೆ ಹಳಿಗೆ ತರುವ ಹೊಣೆಗಾರಿಕೆ ಎಲ್ಲ ಪ್ರಜ್ಞಾವಂತ ರಾಜಕಾರಣಿಗಳು, ಪ್ರಜೆಗಳು, ಬರಹಗಾರರು, ವಕೀಲರು ಮತ್ತು ವೈದ್ಯರದ್ದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT