ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ದತ್ತು: ಆದ್ಯತೆಯಾಗಿಸುವ ಹೊತ್ತು

ಜಾನುವಾರುಗಳ ಸಂರಕ್ಷಣೆ ಎಲ್ಲರ ಹೊಣೆಯೂ ಹೌದು
Last Updated 10 ಅಕ್ಟೋಬರ್ 2022, 20:05 IST
ಅಕ್ಷರ ಗಾತ್ರ

‘ತಬ್ಬಲಿಯು ನೀನಾದೆ ಮಗನೆ...’ ಗೋವು, ಗೋಪಾಲಕರ ಅಳಲಿನ ಕುರಿತಾದ ವರದಿ (ಒಳನೋಟ, ಪ್ರ.ವಾ., ಅ. 9) ಪ್ರಸಕ್ತ ಪರಿಸ್ಥಿತಿಯ ಚಿತ್ರಣ ಕಟ್ಟಿಕೊಟ್ಟಿದೆ. ಗಂಡು ಕರುಗಳು, ಹಾಲು ಕರೆಯದ ವಯಸ್ಸಾದ ಜಾನುವಾರುಗಳು, ಅಶಕ್ತ ಎತ್ತುಗಳನ್ನು ಸಾಕುವುದು ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಹತ್ತಾರು ಸಮಸ್ಯೆಗಳ ಕಾರಣ ಕೃಷಿ ಹಿಡುವಳಿ ಕಮ್ಮಿಯಾಗುತ್ತಿರುವುದರಿಂದ ಹುಲ್ಲು, ಪಶುಆಹಾರದ ಧಾರಣೆ ದುಬಾರಿಯಾಗುತ್ತಲೇ ಸಾಗಿದೆ. ಇತ್ತ ಮೇಯಲು ಹುಲ್ಲುಗಾವಲೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಅನುತ್ಪಾದಕ ಜಾನುವಾರುಗಳ ನಿರ್ವಹಣೆ ಕಷ್ಟವಾಗಿದೆ. ಅದರಲ್ಲೂ ಗೋಹತ್ಯೆ ನಿಷೇಧ ಕಾನೂನು ಜಾರಿಯಾದ ನಂತರ ಸಮಸ್ಯೆಯೂ ದೊಡ್ಡದಾಗಿದೆ.

ಇದಕ್ಕೆ ಪರಿಹಾರ ಮಾರ್ಗವೆಂದರೆ, ರಾಜ್ಯದ ಎಲ್ಲಾ ಗೋಶಾಲೆಗಳನ್ನು ಸಶಕ್ತಗೊಳಿಸುವುದು. ಪ್ರತೀ ಜಿಲ್ಲೆಯಲ್ಲಿಯೂ ಗೋಶಾಲೆಗಳನ್ನು ತೆರೆಯಲು ಸರ್ಕಾರ ಕಾರ್ಯೋನ್ಮುಖವಾಗಿದೆ. ಗೋಧಾಮವೆಂದರೆ ಕೊಟ್ಟಿಗೆ, ಹುಲ್ಲುಗಾವಲು, ಮೇವು ಬೆಳೆಯಲು ನೂರಾರು ಎಕರೆ ಜಾಗ ಬೇಕು. ಇಷ್ಟೊಂದು ವಿಸ್ತೀರ್ಣದ ಕಂದಾಯ ಭೂಮಿ ಒಂದೆಡೆ ಸಿಗುವುದು ತುಂಬಾ ಕಷ್ಟ. ಸವಾಲಿನ ನಡುವೆಯೂ ಪ್ರಯತ್ನಗಳು ವೇಗವಾಗಿ ಸಾಗುತ್ತಿದ್ದು, ಕೆಲವೆಡೆ ಸರ್ಕಾರಿ ಗೋಶಾಲೆಗಳು ಆರಂಭಗೊಂಡಿವೆ.

ರಾಜ್ಯದಲ್ಲಿ ಸರ್ಕಾರಿ, ಖಾಸಗಿ ಸೇರಿದಂತೆ ಸುಮಾರು 220 ಗೋ ಆಶ್ರಮಗಳಿವೆ. ರೈತರಿಗೆ ಹೊರೆಯಾಗಿರುವ ಜಾನುವಾರುಗಳಿಗೆ ಸೂಕ್ತ ಆಶ್ರಯ ಕಲ್ಪಿಸುವುದು ಸರ್ಕಾರವೊಂದರಿಂದಲೇ ಸಾಧ್ಯವಾಗದ ಕೆಲಸ. ಸಾರ್ವಜನಿಕ ಸಹಭಾಗಿತ್ವದೊಂದಿಗೆ ಜಾನುವಾರುಗಳ ಸಂರಕ್ಷಣೆ, ಪಾಲನೆ, ಪೋಷಣೆ ಸುಗಮಗೊಳಿಸಲು ರಾಜ್ಯ ಸರ್ಕಾರ ‘ಪುಣ್ಯಕೋಟಿ ದತ್ತು ಯೋಜನೆ’ ಜಾರಿಗೊಳಿಸಿದೆ.

ಮೃಗಾಲಯಗಳು, ಹುಲಿ-ಸಿಂಹಧಾಮಗಳು, ಆನೆ ಬಿಡಾರಗಳು, ಪ್ರಾಣಿ ಉದ್ಯಾನಗಳಲ್ಲಿರುವ ವನ್ಯಮೃಗಗಳು, ಪಶುಪಕ್ಷಿಗಳನ್ನು ಸಾರ್ವಜನಿಕರು ದತ್ತು ತೆಗೆದುಕೊಳ್ಳುವ ಯೋಜನೆ ಎರಡು ದಶಕಗಳಿಂದಲೂ ಜಾರಿಯಲ್ಲಿದೆ. ತುಂಬಾ ಜನಪ್ರಿಯವಾಗಿರುವ ಈ ಕಾರ್ಯಕ್ರಮದಿಂದ ದೊಡ್ಡ ಮೊತ್ತದ ದೇಣಿಗೆಯೂ ಹರಿದುಬರುತ್ತಿದ್ದು, ವನ್ಯಧಾಮಗಳ ನಿರ್ವಹಣೆಯನ್ನು ಸುಗಮಗೊಳಿಸಿದೆ. ಇದೇ ಮಾದರಿಯಲ್ಲಿ ಜುಲೈ 28ರಿಂದ ಆರಂಭವಾದ ಪುಣ್ಯಕೋಟಿ ದತ್ತು ಯೋಜನೆಯ ಉದ್ದೇಶವೂ ಸರ್ಕಾರಿ ಮತ್ತು ಖಾಸಗಿ ಗೋಶಾಲೆಗಳಿಗೆ ಶಕ್ತಿ ತುಂಬುವುದೇ ಆಗಿದೆ.

ಗೋಧಾಮಗಳಲ್ಲಿರುವ ದನಕರುಗಳ ತೃಪ್ತಿಕರ ನಿರ್ವಹಣೆಗೆ ದೊಡ್ಡ ಪ್ರಮಾಣದಲ್ಲಿ ಹಣದ ಅಗತ್ಯವಿದೆ. ಜಾನುವಾರುಗಳ ಮೇವು, ಹಿಂಡಿ, ವೈದ್ಯಕೀಯ ವೆಚ್ಚವೆಂದೆಲ್ಲಾ ಖರ್ಚು ಹೆಚ್ಚು. ರಾಜ್ಯದಲ್ಲಿನ ಸರ್ಕಾರಿ, ಖಾಸಗಿ ಗೋಶಾಲೆಗಳ ಮಾಹಿತಿ ಡಿಜಿಟಲೀಕರಣಗೊಂಡಿದೆ. ಪ್ರತೀ ಗೋಶಾಲೆಯಲ್ಲಿನ ದನಕರುಗಳ ಸಂಪೂರ್ಣ ವಿವರ ಚಿತ್ರಗಳ ಸಮೇತ ಲಭ್ಯವಿದೆ. ದಾನಿಗಳು ಯಾವುದೇ ಗೋಶಾಲೆ ಆಯ್ದುಕೊಂಡು ತಾವು ಬಯಸುವ ಗೋವನ್ನು ದತ್ತು ತೆಗೆದುಕೊಳ್ಳ ಬಹುದು. ಇದಕ್ಕಾಗಿ ಗೋಶಾಲೆಗಳಿಗೆ ಭೇಟಿ ಕೊಡಬೇಕೆಂದಿಲ್ಲ. https://punyakoti.karahvs.in ಪೋರ್ಟಲ್‌ನಲ್ಲಿ ಲಾಗಿನ್ ಆಗಿ, ಇಚ್ಛಿಸಿದ ಗೋವನ್ನು ದತ್ತು ಪಡೆಯಬಹುದು ಇಲ್ಲವೆ ಆ ಗೋಶಾಲೆಗೆ ದೇಣಿಗೆ ನೀಡಬಹುದು. ಆನ್‌ಲೈನ್‌ ಪಾವತಿ ನೇರವಾಗಿ ಸಂಬಂಧಿಸಿದ ಟ್ರಸ್ಟ್ ಖಾತೆಗೆ ಜಮಾ ಆಗುತ್ತದೆ.

ವಾರ್ಷಿಕವಾಗಿ ₹ 11,000 ನೀಡಿ ಒಂದು ಹಸುವನ್ನು ದತ್ತು ಪಡೆಯಬಹುದು. ಒಮ್ಮೆಲೆ ಐದು ವರ್ಷಗಳವರೆಗೂ ಹೀಗೆ ದತ್ತು ಪಡೆಯುವ ಅವಕಾಶವುಂಟು. ಆಹಾರ ವೆಚ್ಚಕ್ಕೆಂದು ದಿನಕ್ಕೆ ₹ 70ರ ಲೆಕ್ಕದಲ್ಲೂ ಹಣ ಸಂದಾಯ ಮಾಡಬಹುದು. ಗೋಶಾಲೆಯ ನಿರ್ವಹಣಾ ವೆಚ್ಚವಾಗಿ ಕನಿಷ್ಠ ₹ 10ರಿಂದ ಆರಂಭಿಸಿ ಎಷ್ಟೇ ಮೊತ್ತದ ನೆರವು ನೀಡಲು ಅವಕಾಶವುಂಟು. ನಿಯಮಗಳನ್ನು ಪೂರೈಸಿದ ಗೋಶಾಲೆಗಳಿಗೆ ನೀಡುವ ದೇಣಿಗೆ ವರಮಾನ ತೆರಿಗೆ ಕಾಯ್ದೆಯ 80 ಜಿ ಅಡಿಯಲ್ಲಿ ರಿಯಾಯಿತಿಗೂ ಅರ್ಹ.

ಕೊಡುಗೆ ನೀಡಿದವರು ಆ ಗೋಶಾಲೆಗೆ ಭೇಟಿ ನೀಡಬಹುದು. ದತ್ತು ಪಡೆದ ಹಸುವಿಗೆ ತಮ್ಮಿಷ್ಟದ ಹೆಸರಿಡಬಹುದು. ಬಯಸಿದಾಗಲೆಲ್ಲಾ ಆ ಗೋವಿನ ಜೊತೆಗೆ ಭಾವನಾತ್ಮಕವಾಗಿ ಕಾಲ ಕಳೆಯಬಹುದು. ಜನ್ಮದಿನ, ವಾರ್ಷಿಕೋತ್ಸವ, ಸಂಭ್ರಮಾಚರಣೆಯ ಸಂದರ್ಭಗಳಲ್ಲಿ ಗೋಶಾಲೆಗಳಿಗೆ ದೇಣಿಗೆ ನೀಡುವುದರ ಮೂಲಕ ಧನ್ಯತೆಯ ಭಾವ ಅನುಭವಿಸಬಹುದು. ಬಯಕೆಯಿದ್ದರೂ ಸೌಕರ್ಯವಿಲ್ಲದೆ ಹಸುಗಳನ್ನು ಸಾಕಲಾಗದಿದ್ದವರೂ ಹೀಗೆ ದತ್ತು ತೆಗೆದುಕೊಳ್ಳುವ ಮೂಲಕ ತಮ್ಮಾಸೆ ಪೂರೈಸಿಕೊಳ್ಳಬಹುದು.

ಮಣ್ಣಲ್ಲಿ ಬೆಳೆದ ಬೆಳೆ ಮನುಜನಿಗೆ, ಬೆಳೆಯ ತ್ಯಾಜ್ಯ ಜಾನುವಾರುವಿಗೆ, ಜಾನುವಾರು ತ್ಯಾಜ್ಯ ಮರಳಿ ಮಣ್ಣಿಗೆ ಎಂಬುದು ಪ್ರಕೃತಿಯ ಸಾವಯವ ನಿಯಮ. ನಿಸರ್ಗ ಸಮತೋಲನದ ಕೊಂಡಿಯೂ ಇದೇ. ಮಾನವ ಸ್ವಾಸ್ಥ್ಯಕ್ಕೆ ಅಗತ್ಯವಾದ ಹೈನು, ಹೈನೋತ್ಪನ್ನಗಳ ಜೊತೆಗೆ ಮಣ್ಣಿನ ಫಲವತ್ತತೆ ಕಾಪಾಡಲು, ಬೆಳೆಗಳ ರೋಗ ನಿರೋಧಕ ಗುಣ ಹೆಚ್ಚಿಸಲು, ರಾಸಾಯನಿಕಮುಕ್ತ ಶುದ್ಧ ಆಹಾರದ ಉತ್ಪಾದನೆಯಲ್ಲಿ ಸಗಣಿ ಗೊಬ್ಬರದ ಪ್ರಾಮುಖ್ಯವೂ ಹೆಚ್ಚು. ಹಾಗಾಗಿ ಜಾನುವಾರುಗಳ ಸಂರಕ್ಷಣೆ ಎಲ್ಲರ ಹೊಣೆಯೂ ಹೌದು.
ಅನಾಥ, ಅಂಗವಿಕಲ, ಅಪಘಾತಕ್ಕೆ ತುತ್ತಾದ, ಪರಿತ್ಯಕ್ತ, ಅನುತ್ಪಾದಕ, ವೃದ್ಧ ಜಾನುವಾರುಗಳ ಜೊತೆಗೆ ಗಂಡು ಕರುಗಳು, ಬೀಡಾಡಿ ದನಗಳು, ಅಕ್ರಮವಾಗಿ ಸಾಗಾಣಿಕೆಯಾಗುತ್ತಿರುವಾಗ ವಶಪಡಿಸಿಕೊಂಡಂತಹ ಜಾನುವಾರುಗಳಿಗೆ ಆಶ್ರಯ ನೀಡಲು ಎಲ್ಲೆಡೆ ಗೋಶಾಲೆಗಳ ಅಗತ್ಯ ಖಂಡಿತಾ ಇದೆ.

ಸರ್ಕಾರದ ಜೊತೆಯಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳು ಕೈಜೋಡಿಸಿದಾಗ ಮಾತ್ರ ಗೋಶಾಲೆಗಳ ವಿಸ್ತರಣೆ, ನಿರ್ವಹಣೆ ಸಾಧ್ಯ.

ಲೇಖಕ: ಮುಖ್ಯ ಪಶುವೈದ್ಯಾಧಿಕಾರಿ
ಸರ್ಕಾರಿ ಪಶು ಆಸ್ಪತ್ರೆ, ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT