ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಮತ್ತೆ ಶುರುವಾಗಿದೆ ‘ಕೋಳಿ ಜಗಳ’!

ಆಮದು ಕೋಳಿಮಾಂಸದ ಮೇಲಿನ ಸುಂಕವನ್ನು ಸರ್ಕಾರ ಇಳಿಸಿರುವುದು, ಸ್ಥಳೀಯ ಕುಕ್ಕುಟ ಉದ್ಯಮದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ
ಶ್ರೀಗುರು
Published 7 ಫೆಬ್ರುವರಿ 2024, 19:37 IST
Last Updated 7 ಫೆಬ್ರುವರಿ 2024, 19:37 IST
ಅಕ್ಷರ ಗಾತ್ರ

ಹದಿನೇಳು ವರ್ಷಗಳ ಹಳೆಯ ಜಗಳವೀಗ ಮತ್ತೆ ಶುರುವಾಗುತ್ತಿದೆ. ಅದು ಅಂತಿಂತಹ ಜಗಳವಲ್ಲ, ‘ಕೋಳಿ ಜಗಳ’. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಕೋಳಿ ಮತ್ತು ಬಾತುಕೋಳಿಗಳ ಮಾಂಸದ ಕುರಿತಾದ ಜಗಳ. ಇದೇನು ಬೀಗರೂಟಕ್ಕೆ ಮಾಡಿಸಿದ ಬಾಡೂಟದ ಜಗಳ ಎಂದುಕೊಂಡಿರಾ? ಅಲ್ಲ. ಇದು ನಮ್ಮ ಮತ್ತು ಅಮೆರಿಕ ದೇಶದ ನಡುವಿನ ಮಾಂಸ ವ್ಯವಹಾರದ ಜಗಳ. ಇದನ್ನು ಬಗೆಹರಿಸಲು ವಿಶ್ವ ವಾಣಿಜ್ಯ ಸಂಘಟನೆ (ಡಬ್ಲ್ಯುಟಿಒ) ಎಂಬ ಪಂಚಾಯಿತಿ ಕಟ್ಟೆ ಇದೆ.

2007ರಲ್ಲಿ ಭಾರತವು ಅಮೆರಿಕದಿಂದ
ಆಮದಾಗುತ್ತಿದ್ದ ಪೌಲ್ಟ್ರಿ ಉತ್ಪನ್ನಗಳ ಮೇಲೆ ನಿಷೇಧ ಹೇರಿತ್ತು. ಆಗ ಹಕ್ಕಿಜ್ವರದ ಆತಂಕ ಹೆಚ್ಚಾಗಿದ್ದುದರಿಂದ ಕೋಳಿಮಾಂಸದ ಆಮದಿಗೆ ಕಟ್ಟುನಿಟ್ಟಿನ ನಿಷೇಧವಿತ್ತು. ಭಾರತದ ಈ ನಿರ್ಧಾರವನ್ನು ಡಬ್ಲ್ಯುಟಿಒ ಎದುರು ಪ್ರಶ್ನಿಸಿದ ಅಮೆರಿಕ, ಏಳು ವರ್ಷಗಳ ನಂತರ ಕೇಸು ಗೆದ್ದು ಬೀಗಿತ್ತು. ಒಲ್ಲದ ಮನಸ್ಸಿನಿಂದ 2017ರಲ್ಲಿ ಕೋಳಿಮಾಂಸದ ಆಮದಿಗೆ ಒಪ್ಪಿದ ನಾವು, ಅಲ್ಲಿನ ಉತ್ಪನ್ನದ ಮೇಲೆ ಅತಿ ಹೆಚ್ಚು ತೆರಿಗೆ ವಿಧಿಸಿ ಆಮದು ಮಾಡಿಕೊಳ್ಳಲು ಶುರುಮಾಡಿದೆವು. ದೇಸಿ ಕೋಳಿಮಾಂಸದ ಮಾರುಕಟ್ಟೆಯನ್ನು ಸಂರಕ್ಷಿಸಲು ನಾವು ತೆಗೆದುಕೊಂಡ ಈ ನಿರ್ಧಾರ ಬಹಳ ಕಾಲ ನಿಲ್ಲಲಿಲ್ಲ.

ದೇಶದ ಪೌಲ್ಟ್ರಿ ಉದ್ಯಮದ ಉತ್ಪನ್ನದ ಶೇ 10ರಷ್ಟಿರುವ ಬಾತುಕೋಳಿ ಮಾಂಸವು ಕೋಳಿಮಾಂಸದ ನಂತರದ ಸ್ಥಾನದಲ್ಲಿದೆ. ಭಾರತದ ಪೂರ್ವ ಮತ್ತು ದಕ್ಷಿಣ ಭಾರತದ ಕರಾವಳಿಯುಕ್ತ ರಾಜ್ಯಗಳು ದೇಶದ ಮೊಟ್ಟೆ ಉತ್ಪಾದನೆಯ ಒಟ್ಟು ಪ್ರಮಾಣದ ಶೇ 7ರಷ್ಟನ್ನು ಪೂರೈಸುತ್ತಿವೆ ಎಂದು ಲೆಕ್ಕ ನೀಡುವ ಇಟಾನಗರದ ಬಾನಾಡಿ ಸಂಶೋಧನಾ ಸಂಸ್ಥೆಯ ತಜ್ಞರು, ನಮ್ಮ ಮಾರುಕಟ್ಟೆಯನ್ನು ಉಳಿಸಿಕೊಳ್ಳುವ ಉದ್ದೇಶವಿದ್ದರೆ ಈಗ ಆಮದಾಗು ತ್ತಿರುವ ಸಂಸ್ಕರಿತ ಮಾಂಸಕ್ಕೆ ಅತಿ ಹೆಚ್ಚಿನ ಸುಂಕ ಹಾಕಬೇಕು ಎಂದಿದ್ದಾರೆ. ಆದರೆ ಆಗುತ್ತಿರುವುದೇನು? ಹಿಂದಿನ ಡಿಸೆಂಬರ್‌ವರೆಗೆ ಆಮದಾಗುತ್ತಿದ್ದ ಕೋಳಿ ಹಾಗೂ ಬಾತುಕೋಳಿ ಮಾಂಸದ ಮೇಲೆ ಶೇ 30ರಷ್ಟು ಆಮದು ಸುಂಕವಿತ್ತು. ಕೇಂದ್ರ ಸರ್ಕಾರ ಈಗ ಅದನ್ನು ಶೇ 5ಕ್ಕೆ ಇಳಿಸಿದೆ.

ಕೋಳಿಮಾಂಸದ ಮಾರುಕಟ್ಟೆಗೆ ಹೋಲಿಸಿದರೆ ಬಾತುಕೋಳಿ ಮಾಂಸದ ನಮ್ಮ ಮಾರುಕಟ್ಟೆ ತೀರಾ ಸೀಮಿತ ಎಂದಿರುವ ಉತ್ಪಾದಕರು, ಸರ್ಕಾರದ ಈ ನಿರ್ಧಾರದಿಂದ ನಮ್ಮ ಸ್ಥಳೀಯ ಮಾರುಕಟ್ಟೆ ವಲಯಕ್ಕೆ ತೀವ್ರ ಹೊಡೆತ ಬೀಳುತ್ತದೆ, ಈ ನಿರ್ಧಾರದ ವಿರುದ್ಧ ಕಾನೂನು ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದಿದ್ದಾರೆ. ವಿಶೇಷವಾಗಿ, ಬಾತುಕೋಳಿ ಸಾಕಾಣಿಕೆಯಲ್ಲಿ ತೊಡಗಿರುವವರೆಲ್ಲ ಬುಡಕಟ್ಟು ಸಮುದಾಯಕ್ಕೆ ಸೇರಿದ ಬಡವರು, ಇವರ ಹೊಟ್ಟೆಯ ಮೇಲೆ ಹೊಡೆಯುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ. ಅಮೆರಿಕದಿಂದ ಬರುವ ಕೋಳಿಮಾಂಸ, ಬಾತುಕೋಳಿ ಮಾಂಸವು ಅತ್ಯಂತ ಕಡಿಮೆ ಬೆಲೆಗೆ ದೊರಕುವುದರಿಂದ ಜನ ಅದನ್ನೇ ಕೊಳ್ಳುತ್ತಾರೆ, ಆಗ ನಮ್ಮ ಗತಿಯೇನು ಎಂದು ಕೇಳುತ್ತಾರೆ ಪೌಲ್ಟ್ರಿ ಉದ್ಯಮ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಎಫ್.ಎಮ್.ಶೇಖ್.

‘ಅಮೆರಿಕದವರು ಕೋಳಿಯ ಎದೆ ಭಾಗದ ಮಾಂಸವನ್ನು (ಫಿಲ್ಲೆಟ್) ತಾವೇ ಇಟ್ಟುಕೊಂಡು ಬರೀ ಕಾಲು, ಮತ್ತಿತರ ಭಾಗಗಳನ್ನು ಹೊರಗಡೆಯವರಿಗೆ ಕಳಿಸುತ್ತಾರೆ. ಇದು ಅವರಿಗೆ ತ್ಯಾಜ್ಯ ಸಮಾನವಾದ್ದರಿಂದ ಬೇಕಾಬಿಟ್ಟಿ ಬೆಲೆಗೆ ಮಾರುತ್ತಾರೆ. ಆಗ ನಮ್ಮ ಕೋಳಿಮಾಂಸದ ಬೆಲೆ ಹೆಚ್ಚು ಎನ್ನಿಸಿ, ಜನ ಅಮೆರಿಕ ಕಳಿಸುವ ಮಾಂಸಕ್ಕೇ ಮುಗಿಬೀಳುವ ಸಾಧ್ಯತೆಯಿದೆ. ಹಾಗಾದರೆ ನಮ್ಮ ಉದ್ಯಮದ ಗತಿಯೇನು?’ ಎನ್ನುತ್ತಾರೆ.

ತಮ್ಮ ದೇಶದಲ್ಲಿ ಕೋಳಿಕಾಲಿನ ಮಾಂಸದ ವಿಲೇವಾರಿಗೆ ತಗಲುವ ಖರ್ಚಿಗಿಂತ ಅದರ ರಫ್ತಿನ ಖರ್ಚು ಕಡಿಮೆಯಾದ್ದರಿಂದ ಅಮೆರಿಕ ತನಗೆ ಬೇಡದ ಮಾಂಸವನ್ನು ನಮಗೆ ತಳ್ಳುತ್ತಿದೆ. ಅಮೆರಿಕದಲ್ಲಿ ಕುಲಾಂತರಿ ಕೋಳಿ ತಳಿಗಳು ಬಹಳಷ್ಟಿವೆ. ತೆರಿಗೆಯೂ ಸೇರಿ ಅಲ್ಲಿಂದ ಬರುವ ಒಂದು ಟನ್ ಸಂಸ್ಕರಿತ ಕೋಳಿಕಾಲಿನ ಮಾಂಸಕ್ಕೆ ತಗಲುವ ಹಣ ಒಂದೂ ಕಾಲು ಲಕ್ಷ ರೂಪಾಯಿ. ನಮ್ಮಲ್ಲೇ ಸಂಸ್ಕರಿಸಿದರೆ ಅದಕ್ಕೆ ಒಂದೂವರೆ ಲಕ್ಷ ರೂಪಾಯಿ ಬೇಕು. ಹಾಗಾಗಿ ಅಲ್ಲಿಂದ ಬರುವ ಮಾಂಸವೇ ಅಗ್ಗ. ಇದು ಸರ್ಕಾರಕ್ಕೆ ಅಪೇಕ್ಷಣೀಯ. ಈಗಾಗಲೇ ನಮ್ಮಲ್ಲಿ ಬ್ರಾಯ್ಲರ್ ಕೋಳಿಗಳ ಉತ್ಪಾದನೆ ಅಗತ್ಯಕ್ಕಿಂತ ಜಾಸ್ತಿ ಇದೆ. ಕೆಲವು ಕಂಪನಿಗಳು ಉತ್ಪಾದಕರೊಂದಿಗೆ ಒಪ್ಪಂದ ಮಾಡಿಕೊಂಡಿರುವುದರಿಂದ ಬೆಲೆ ನಿಯಂತ್ರಣದಲ್ಲಿದೆ.

ಸ್ಥಳೀಯ ಕುಕ್ಕುಟ ಉದ್ಯಮವನ್ನು ಸದೃಢವಾಗಿಸಲು ಹೊರಗಿನಿಂದ ಬರುವ ಉತ್ಪನ್ನದ ಮೇಲಿನ ತೆರಿಗೆ ಹೆಚ್ಚಿಸುವ ಬದಲು ಕಡಿತ ಮಾಡಿದರೆ ನಮ್ಮ ಉದ್ಯಮ ನೆಲಕಚ್ಚುವುದ ರಲ್ಲಿ ಯಾವ ಅನುಮಾನವೂ ಇಲ್ಲ. 2007ರಲ್ಲಿ ಆಮದು ನಿಷೇಧಿಸಿದಾಗ ಬರೀ 5 ಲಕ್ಷದಷ್ಟಿದ್ದ ಪೌಲ್ಟ್ರಿ ಉದ್ಯಮಗಳು ಮುಂದಿನ ಐದು ವರ್ಷಗಳಲ್ಲಿ 5.2 ಕೋಟಿಯಷ್ಟಾಗಿ ಅಸಾಧಾರಣ ಬೆಳವಣಿಗೆಯಾಗಿತ್ತು. ಭಾರತದ ಕೃಷಿ ಉದ್ಯಮಗಳ ಪೈಕಿ ಅತ್ಯಂತ ವೇಗದ ಬೆಳವಣಿಗೆ ಕಂಡ ಕ್ಷೇತ್ರವಿದು.

ನಮ್ಮ ಹೊಲ, ಗದ್ದೆ, ತೋಟಗಳ ಬೆಳೆಯ ವಾರ್ಷಿಕ ಬೆಳವಣಿಗೆ ಪ್ರಮಾಣ ಶೇ 2ರಷ್ಟಿದ್ದರೆ, ಬ್ರಾಯ್ಲರ್ ಕೋಳಿ ಮೊಟ್ಟೆಗಳ ಬೆಳವಣಿಗೆ ಪ್ರಮಾಣ ಶೇ 8-10ರಷ್ಟಿದೆ. ಅಭಿವೃದ್ಧಿ ಬಯಸುವ ದೇಶಗಳ ನಾಯಕನಂತಿರುವ ಭಾರತ, ತಾನೇ ಅಮೆರಿಕದೆದುರು ಮಂಡಿಯೂರಿದರೆ, ನಮ್ಮನ್ನು ಬೆಂಬಲಿಸುತ್ತಿರುವ ಸಾಧಾರಣ ದೇಶಗಳ ಗತಿಯೇನು? ಡಬ್ಲ್ಯುಟಿಒ ನಿರ್ದೇಶನವು ಭಾರತ ಮಾತ್ರವಲ್ಲದೆ ಇತರ ದೇಶಗಳಿಗೂ ಆರ್ಥಿಕ ಆಘಾತ ತರಲಿದೆ ಎಂಬ ಮಾತು ವಿಶ್ವದಾದ್ಯಂತ ಕೇಳಿಬರುತ್ತಿದೆ. ಸಂಬಂಧಪಟ್ಟವರು ಕೇಳಿಸಿಕೊಳ್ಳುತ್ತಿದ್ದಾರೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT