ಶುಕ್ರವಾರ, ಸೆಪ್ಟೆಂಬರ್ 20, 2019
27 °C

ಕಲಿತವರೆಲ್ಲಾ ಎಲ್ಲಿ ಹೋಗುತ್ತಿದ್ದಾರೆ?

Published:
Updated:
Prajavani

ಒಂದಾದ ಮೇಲೊಂದರಂತೆ ಪರೀಕ್ಷಾ ಫಲಿತಾಂಶಗಳು ಹೊರಬೀಳುತ್ತಿವೆ. ಇತ್ತೀಚಿನ ವರ್ಷಗಳಲ್ಲಂತೂ ಅಂಕಗಳ ವಿಷಯದಲ್ಲಿ ಮಕ್ಕಳದು ಭರ್ಜರಿ ಬ್ಯಾಟಿಂಗ್! ತೆಗೆಯಲು ಇನ್ನೇನೂ ಇಲ್ಲದಂತೆ ಮಕ್ಕಳು ಅಂಕಗಳನ್ನು ಕಬಳಿಸಿ ಗೆಲುವಿನ ನಗೆ ಬೀರುತ್ತಿದ್ದಾರೆ. ಅಂತಹ ಸಾಧನೆ ಮಾಡಿದ ಮಕ್ಕಳ ಚಿತ್ರಗಳನ್ನು, ಅವರು ಗಳಿಸಿದ ಅಂಕಗಳನ್ನು ನಿತ್ಯವೂ ಪತ್ರಿಕೆಗಳಲ್ಲಿ ನೋಡಿ ಖುಷಿಯಾಗುತ್ತದೆ.

ನಮ್ಮ ಹೊಸ ತಲೆಮಾರು ಸಾಕಷ್ಟು ಪ್ರತಿಭಾವಂತರಿಂದ ತುಂಬಿ ಹೋಗುತ್ತಿದೆ ಅನ್ನುವ ಸಮಾಧಾನ ಪ್ರತಿ ಬಾರಿ ಫಲಿತಾಂಶ ಬಂದಾಗಲೂ ನನಗಾಗುತ್ತದೆ. ಆದರೆ ಈ ಪರಿ ಅಂಕ ಬಾಚಿದ ಮಕ್ಕಳೆಲ್ಲಾ ಎಲ್ಲಿ ಹೋಗುತ್ತಿದ್ದಾರೆ, ಏನಾಗುತ್ತಿದ್ದಾರೆ ಎಂಬುದು ಮಾತ್ರ ಯಕ್ಷಪ್ರಶ್ನೆ.

ಕಳೆದ ಬಾರಿ ಹತ್ತು ಸಾವಿರ ಶಿಕ್ಷಕರನ್ನು ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಅರ್ಹ ಅಭ್ಯರ್ಥಿಗಳು ಸಿಗದೇ ಸೀಟುಗಳು ಖಾಲಿ ಉಳಿದವು. ಈ ಬಾರಿ ಮತ್ತೆ ಹತ್ತು ಸಾವಿರ ಶಿಕ್ಷಕರ ಹುದ್ದೆಗೆ ಅರ್ಜಿ ಕರೆಯಲಾಗಿದೆ. ಅಭ್ಯರ್ಥಿಗಳು ಸಿಗುವ ಬಗ್ಗೆ ಇಲಾಖೆ ಅನುಮಾನ ವ್ಯಕ್ತಪಡಿಸಿದೆ. ಇಂದಿಗೂ ಹಳ್ಳಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಅಭಾವವಿದೆ. ಜಾಗತಿಕ ಮಟ್ಟದಲ್ಲಿ ಸವಾಲೆನಿಸುವ ಎಂಜಿನಿಯರುಗಳ ಕೊರತೆ ನಮ್ಮಲ್ಲಿದೆ.

ಇಡೀ ತಲೆಮಾರು ‘ಇಂಗ್ಲಿಷ್... ಇಂಗ್ಲಿಷ್’ ಎಂದು ಅದರ ಹಿಂದೆ ಓಡುತ್ತಿದೆ. ಆದರೆ ಒಬ್ಬನೇ ಒಬ್ಬ ವರ್ಡ್ಸ್‌ವರ್ತ್, ಶೇಕ್ಸ್‌ಪಿಯರ್ ಹುಟ್ಟಲಿಲ್ಲ. ಸೈನ್ಸ್... ಸೈನ್ಸ್... ಅಂತ ಬಹಳಷ್ಟು ಪೋಷಕರು ಮಕ್ಕಳಿಗೆ ಕಾಟ ಕೊಡುತ್ತಿದ್ದಾರೆ. ಆದರೆ ಒಬ್ಬ ಐನ್‍ಸ್ಟೀನ್‌ ಹುಟ್ಟಲಿಲ್ಲ. ಇದೇ ನೆಲದ ಮತ್ತೊಬ್ಬ ಕುವೆಂಪು ಕಾಣಿಸಲಿಲ್ಲ. ಹೌದು, ಅಷ್ಟೊಂದು ಅಂಕ ಪಡೆದು ಬುದ್ಧಿವಂತರು ಎನಿಸಿಕೊಂಡ ಅವರೆಲ್ಲ ಎಲ್ಲಿ ಹೋಗುತ್ತಿದ್ದಾರೆ?

ಕಳೆದ ವಾರವಷ್ಟೇ ಕೆಲಸದ ನಿಮಿತ್ತ ಕೋರ್ಟಿಗೆ ಹೋಗಿದ್ದೆ. ಅಲ್ಲಿ ದ್ವಿತೀಯ ದರ್ಜೆ ಸಹಾಯಕಿಯೊಬ್ಬರು ಬಹಳ ಚುರುಕಾಗಿ ಕೆಲಸ ಮಾಡುತ್ತಿದ್ದರು. ನಿಜಕ್ಕೂ ಖುಷಿಯಾಯಿತು. ಚಿಕ್ಕ ವಯಸ್ಸು. ಓದು, ಊರು ಕೇರಿಯ ಬಗ್ಗೆ ಮಾತಾಡಿಸಿದೆ. ಅವರು, ಎಸ್‌ಎಸ್‌ಎಲ್‌ಸಿಯಲ್ಲಿ 95%,  ಪಿಯುಸಿ ಸೈನ್ಸ್‌ನಲ್ಲಿ 90% ಅಂಕ ಪಡೆದು ಈಗ ಅಲ್ಲಿ ಕೆಲಸದಲ್ಲಿದ್ದಾರೆ.

‘ಮುಂದೆ ಓದಬಹುದಿತ್ತಲ್ಲಮ್ಮ; ಬಂಗಾರದಂತಹ ಬಾಳಿತ್ತು’ ಅಂದಾಗ (ಹಾಗಂತ ಅವರ ಆ ಕೆಲಸ ಕಡಿಮೆಯದು ಅಂತಲ್ಲ, ಅವರ ಪ್ರತಿಭೆಗೆ ಅದಲ್ಲ ಎಂಬುದು ನನ್ನ ವಾದ) ಹುಡುಗಿ ಹೇಳಿದ್ದಿಷ್ಟೆ: ‘ಬಡತನವಿತ್ತು ಸರ್. ತುರ್ತಿಗೆ ನನಗೊಂದು ನೌಕರಿ ಬೇಕಿತ್ತು. ಇಲ್ಲಿ ಸಿಕ್ತು, ಇಲ್ಲಿಯೇ ಉಳಿದುಬಿಟ್ಟೆ’. ತುಂಬಾ ಮಾರ್ಕ್ಸ್‌ ತೆಗೆದುಕೊಂಡ ಮಕ್ಕಳು ಎಲ್ಲಿ ಹೋಗುತ್ತಾರೆ ಅನ್ನುವ ನನ್ನ ಬಹುದಿನದ ಪ್ರಶ್ನೆಗೆ ಉತ್ತರ ಸಿಕ್ಕಿತ್ತು. 

ನೆಹರೂ ಈ ದೇಶವನ್ನು ‘ಕರಗಿಸುವ ಮೂಸೆ’ (melting pot) ಅಂದರು. ಎಲ್ಲಾ ಜಾತಿ, ಧರ್ಮ, ಭಾಷೆ, ಸಂಸ್ಕೃತಿಗಳನ್ನು ಈ ದೇಶ ತನ್ನೊಳಗೆ ಕರೆಸಿಕೊಂಡು ತಾನು ಭಾರತವಾಗಿದೆ. ಅದೇ ರೀತಿ ಈ ದೇಶ ನನಗೆ ಇನ್ನೊಂದು ತರಹದಲ್ಲಿ ‘ಕರಗಿಸುವ ಮೂಸೆ’ ಎಂಬಂತೆ ಅರ್ಥವಾಗುತ್ತಿದೆ. ಎಂತಹ ಪ್ರತಿಭೆಗಳಿದ್ದರೂ ಅವು ಈ ದೇಶದ ಒಡಲಲ್ಲಿ ಉಳಿದು ಹೋಗಿರುವ ಬಡತನ, ಅನಕ್ಷರತೆ, ನಿರುದ್ಯೋಗದೊಳಗೆ ಕರಗಿ ಹೋಗಿಬಿಡುತ್ತವೆ. ಯಾವ ಮಗುವನ್ನು ಎಲ್ಲಿ ತೊಡಗಿಸಬೇಕು, ಅವರನ್ನು ಹೇಗೆ ದೇಶದ, ಸಮಾಜದ ಆಸ್ತಿಯನ್ನಾಗಿ ಮಾಡಬೇಕು ಎಂಬುದು ಎಷ್ಟೋ ಪಾಲು ಪೋಷಕರಿಗೂ ಗೊತ್ತಿಲ್ಲ.

ಇನ್ನೊಂದು ವರ್ಗವಿದೆ. ಅವರು ಕೋರ್ಸ್ ಸೇರುವ ಮುನ್ನವೇ ಆ ಕೋರ್ಸಿಗೆ ಬೇರೆ ದೇಶಗಳಲ್ಲಿ ಎಷ್ಟು ಅವಕಾಶಗಳಿವೆ ಎನ್ನುವುದನ್ನು ನೋಡಿಕೊಳ್ಳುತ್ತಾರೆ. ಅದರಂತೆ ಓದಿ, ದೇಶ ಬಿಟ್ಟು ಹೊರಟು ಬಿಡುತ್ತಾರೆ. ಇಂದು ಹಳ್ಳಿಗಾಡಿನ ಸರ್ಕಾರಿ ಆಸ್ಪತ್ರೆಗಳು ವೈದ್ಯರಿಲ್ಲದೆ ಪರದಾಡುತ್ತಿವೆ. ಪ್ರತಿವರ್ಷ ಹೊಸ ವೈದ್ಯರು ನದಿಯಂತೆ ಹರಿದು ಬರುತ್ತಿದ್ದರೂ ವೈದ್ಯರ ಅಭಾವವಿದೆ. ಒಬ್ಬ ವಿದ್ಯಾರ್ಥಿಯನ್ನು ಡಾಕ್ಟರ್ ಮಾಡಲು ಸರ್ಕಾರ ಮಾಡುವ ವೆಚ್ಚದ ಅನುಕೂಲ ಜನಸಾಮಾನ್ಯರಿಗೆ ತಲುಪದೇ ಹೋಗುತ್ತದೆ. ಅವರ ಪ್ರತಿಭೆ ಅವರು ಮಾಡಿಕೊಳ್ಳುವ ಹಣಕ್ಕಷ್ಟೇ ಸೀಮಿತವಾಗುತ್ತದೆ.

ಇತ್ತ ತಾಯಿ ಭಾಷೆಯಲ್ಲೂ ಉಳಿಯದೆ ಅತ್ತ ಇಂಗ್ಲಿಷೂ ರಕ್ತಗತವಾಗದೆ ವ್ಯಕ್ತಿತ್ವವೊಂದು ಎಡಬಿಡಂಗಿ ಆಗಿಬಿಡುತ್ತದೆ. ಇಂಥವರಿಂದ ಎಂಥ ಸೃಜನಾತ್ಮಕತೆ ಹುಟ್ಟಲು ಸಾಧ್ಯ? ಓದು, ಪ್ರತಿಭೆ ಅಂದರೆ ಹಣ ಮಾತ್ರವೇ? ನಾವು ಇಂಗ್ಲಿಷ್‌ ಅನ್ನು ಈ ಪರಿ ಪ್ರೀತಿಸಿದರೂ ಯಾಕೆ ಆ ಭಾಷೆಯಲ್ಲಿ ಅಂತಹ ಸೃಜನಾತ್ಮಕತೆ ಸಾಧ್ಯವಾಗುತ್ತಿಲ್ಲ?

ಇಂಗ್ಲಿಷ್ ಕಲಿತವರು ನೌಕರಿ ಗಳಿಸಿದ್ದು ಬಿಟ್ಟರೆ ಬೇರೇನೂ ಮಾಡಲಾಗುತ್ತಿಲ್ಲ. ಒಂದು ಎಂಜಿನಿಯರಿಂಗ್ ಇಲ್ಲವೇ ಮೆಡಿಕಲ್ ಪದವಿಗೆ ಮುಗಿಯಿತು ಸೈನ್ಸ್ ಮೇಲಿನ ಅವರ ಅಭಿಮಾನ. ಮಾತೃಭಾಷೆಯಲ್ಲಿ ಕರತಲಾಮಲಕ ಎಂದುಕೊಳ್ಳುವವರೂ ಅಂತಹ ಹೇಳಿಕೊಳ್ಳುವಂತಹ ಭಾಷಾ ಸಾಧನೆಯನ್ನು ಮಾಡಿದ್ದಾದರೂ ಎಲ್ಲಿ? ಇವುಗಳಿಗೆಲ್ಲ ಉತ್ತರಗಳು ನಾವು ಕಲಿಸುತ್ತಿರುವ ವ್ಯವಸ್ಥೆಯಲ್ಲಿ, ಜನರ ಮನಃಸ್ಥಿತಿಯಲ್ಲಿ, ದೇಶವನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿವೆ. ನಾವು ನೋಡಿಕೊಳ್ಳಬೇಕು ಅಷ್ಟೇ! 

Post Comments (+)