‘ಭೂಮಿ ನಿನ್ನದಲ್ಲ, ಹೇಮ ನಿನ್ನದಲ್ಲ, ನಿನ್ನ ಒಡವೆ ಎಂಬುದು ಜ್ಞಾನರತ್ನ’ ಎಂಬ ಅಲ್ಲಮನ ವಚನವು ನಾನು, ತಾನು ಎಂಬ ಅಹಂಕಾರ, ಒಣಪ್ರತಿಷ್ಠೆಯಲ್ಲಿ ಹೊಯ್ದಾಡುತ್ತಿರುವ ಅಜ್ಞಾನದ ಕಣ್ಣು ತೆರೆಸುತ್ತದೆ.

ಅಸಲಿಗೆ ಜಗತ್ತೇ ಒಂದು ಪ್ರವಾಸಿ ತಾಣ. ನಾವೆಲ್ಲರೂ ಪ್ರವಾಸಿಗರಾಗಿ ಕೆಲವು ದಿನಗಳ ಮಟ್ಟಿಗೆ ಬಂದು ಹೋಗುವವರು. ಮನುಷ್ಯ ಯಾವುದೋ ಭೂಭಾಗದಲ್ಲಿ ಉಗಮವಾಗಿ ಮತ್ತೆಲ್ಲಿಗೋ ವಲಸೆ ಹೋಗಿ ನೆಲೆ ಕಂಡುಕೊಳ್ಳುತ್ತಾನೆ. ಹಾಗಾಗಿ, ಜಗತ್ತಿನ ಬಹುತೇಕ ದೇಶಗಳು ವಾಸ್ತವದಲ್ಲಿ ವಲಸಿಗರ ದೇಶಗಳೇ. ಭರತ ಭೂಮಿಯೂ ವಲಸಿಗರ ನೆಲವೇ.

ಎಲ್ಲರನ್ನೂ ಒಳಗೊಂಡು ಸಮೃದ್ಧದಿಂದ ಬೆಳೆದ ವಿಶಿಷ್ಟ ಭೂಖಂಡವಿದು. ಸ್ವಾತಂತ್ರ್ಯ ಹೋರಾಟದಲ್ಲಿ ಭೇದ ಎಣಿಸದೆ ಎಲ್ಲರ ಬೆವರು- ನೆತ್ತರು ಹರಿದಿದೆ. ಬಹುಬಗೆಯ ಕಲೆ, ಸಾಹಿತ್ಯ, ಸಂಗೀತ, ವಾಸ್ತುಶಿಲ್ಪದಲ್ಲಿ
ಮಿಳಿತಗೊಂಡ ‘ಬಹುತ್ವ ಭಾರತ’ ನಮ್ಮದು. ಬಹುಪದರದ ಜನಸಮುದಾಯದ ಕನಸು, ಆಶಯ,
ನಿರೀಕ್ಷೆಗಳ ಮಿಳಿತದಲ್ಲಿಯೇ ಸರ್ವಶ್ರೇಷ್ಠ- ಸಂವೇದನಾಶೀಲ ಮತ್ತು ಜೀವಪರ ಸಂವಿಧಾನ ಇಲ್ಲಿ ರೂಪುಗೊಂಡಿದೆ. ಸಂವಿಧಾನ ಜಾರಿಗೆ ಬಂದು ಮುಕ್ಕಾಲು ಶತಮಾನ ಕಳೆಯುವಷ್ಟರಲ್ಲಿ
ಅಭಿವೃದ್ಧಿಯೆಡೆಗೆ ಹೊರಳಿಕೊಂಡ ದೇಶವು ಹಲವಾರು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದೆ.

ಅಭಿವೃದ್ಧಿಶೀಲ ದೇಶವು ಉನ್ನತ ಧ್ಯೇಯೋದ್ದೇಶಗಳೊಂದಿಗೆ ಮುನ್ನಡೆಯುವಾಗಲೂ ಬಡತನ,
ನಿರುದ್ಯೋಗ, ಕೃಷಿ ಬಿಕ್ಕಟ್ಟು, ಕಾರ್ಮಿಕರ ಸಮಸ್ಯೆ, ಜಾತಿ ಪಿಡುಗು, ಸಾಮಾಜಿಕ ತಾರತಮ್ಯ, ದೌರ್ಜನ್ಯ,
ಗಲಭೆಗಳಿಗೆ ಇಂದಿಗೂ ಶಾಶ್ವತ ಪರಿಹಾರ ಕಂಡುಕೊಳ್ಳಲಾಗಿಲ್ಲ. ಹಸಿವು, ಅಸ್ಪೃಶ್ಯತೆ, ಲಿಂಗತಾರತಮ್ಯ, ಸಾಮಾಜಿಕ– ಆರ್ಥಿಕ ಅಸಮಾನತೆಯನ್ನು ಮೀರಿ ನಿಲ್ಲಲು ಸಾಧ್ಯವಾಗಿಲ್ಲ.

ಸಮ ಸಮಾಜದ ಆಶಯ ಈಗಲೂ ಕನಸಾಗಿರುವ ಸಂದರ್ಭದಲ್ಲಿ ಹಿರಿಯರು ಹೇಳುವಂತೆ ‘ದಮನಿತರು, ಶೋಷಿತರು ತಿರುಗಿಬಿದ್ದರೆ ಅಧಿಕಾರಸ್ಥರು ಉಳಿ ಯುವುದಿಲ್ಲ. ಹಾಗಾಗಿಯೇ, ಅಧಿಕಾರ ಕಬಳಿಸಲು, ಕೈಯಲ್ಲಿರುವ ಅಧಿಕಾರ ಉಳಿಸಿಕೊಳ್ಳಲು ಅಥವಾ ಮುಂದುವರಿಸಲು ಅಧಿಕಾರಸ್ಥರು ಕಂಡುಕೊಂಡ ಯಶಸ್ವಿ ಕಾರ್ಯತಂತ್ರವೆಂದರೆ ಜನರ ಗಮನವನ್ನು ಬೇರೆಡೆಗೆ ತಿರುಗಿಸುವುದು, ಮೈಮರೆಸುವುದಾಗಿದೆ’.

ಜಗತ್ತು ಮುನ್ನಡೆದಂತೆಲ್ಲ ಇಲ್ಲಿಯೂ ಸಂವಿಧಾನದ ಬಲದಲ್ಲಿ ಅವಕಾಶವಂಚಿತರು ಬೆಳಕಿನೆಡೆಗೆ ಮುಖ ಮಾಡುವಂತಾಗಿರುವುದು ಸತ್ಯ. ಆದರೆ, ಮುಖ್ಯವಾಹಿನಿಗೆ ಮರಳುವ ಸಂಜ್ಞೆ ಮೂಡುವಷ್ಟರಲ್ಲಿ ಸಂತ್ರಸ್ತರನ್ನು ವ್ಯವಸ್ಥಿತವಾಗಿ ದಿಕ್ಕು ತಪ್ಪಿಸಲಾಗುತ್ತದೆ. ಜಾತಿ, ಧರ್ಮವನ್ನು ಮುನ್ನೆಲೆಗೆ ತಂದು ಪರಸ್ಪರರಲ್ಲಿ ದ್ವೇಷ ಬಿತ್ತಲಾಗುತ್ತಿದೆ. ತಳವರ್ಗಗಳನ್ನು ವಾಸ್ತವದ ಅರಿವಿನಿಂದ ವಿಮುಖಗೊಳಿಸುವ ಸಂಚಿಗೆ ಅತಿಹೆಚ್ಚು ಬಲಿಯಾಗುತ್ತಿರುವುದು ಯುವಶಕ್ತಿಯೇ.

ದ್ವೇಷಕ್ಕಿಂತ ದೇಶದ ಹಿತಕ್ಕಾಗಿ ಎಲ್ಲ ವರ್ಗದ ವಿಶ್ವಾಸ ಗಳಿಸಿಕೊಳ್ಳುವುದು ಮತ್ತು ಭೇದವೆಣಿಸದೆ ಒಮ್ಮತದಿಂದ ಅಭಿವೃದ್ಧಿಯ ಭಾಗವಾಗಿಸಿಕೊಳ್ಳುವುದು ಆದ್ಯತೆಯಾಗಬೇಕು. ಸಮಾಜವು ಯಾವುದೋ ಒಬ್ಬಿಬ್ಬ ಕಿಡಿಗೇಡಿಗಳ ಪ್ರಮಾದಕ್ಕೆ ಕ್ಷೋಭೆಗೊಳ್ಳದಷ್ಟು ಪ್ರಬುದ್ಧವಾಗಬೇಕು. ಎಳೆಯರಿಗೆ ಚರಿತ್ರೆಯ ಅರಿವು, ಮೌಲ್ಯಯುತ ಶಿಕ್ಷಣ ಮತ್ತು ಜಗತ್ತಿನ ವಿಶಾಲ ದರ್ಶನ ದಕ್ಕಬೇಕು.

ಯಾವುದೇ ದೇಶವೊಂದರ ನಾಗರಿಕರಲ್ಲಿ ಒಡಮೂಡಬೇಕಾದ ಸೌಹಾರ್ದ, ಸಮಗ್ರತೆ, ಸಹಬಾಳ್ವೆಯ ಮಟ್ಟವೇ ಆ ದೇಶದ ಉನ್ನತಿ- ಅವನತಿಯ ಅಳತೆಗೋಲು.

‘ವಿಕಾಸಗೊಳ್ಳದ ಮೆದುಳು ಜಾತಿ, ಧರ್ಮದಲ್ಲಿ ನರಳುತ್ತದೆ. ದೇಶದ ವಿನಾಶಕ್ಕೆ ಅಷ್ಟು ಸಾಕು. ಜಾತಿ- ಧರ್ಮಗಳ ಆಧಾರದಲ್ಲಿ ಜನಸ್ತೋಮವು ಭುಗಿಲೇಳುವ ದೇಶವನ್ನು ನಾಶ ಮಾಡಲು ಬೇರಾವ ಶಸ್ತ್ರಾಸ್ತ್ರಗಳೂ ಬೇಕಾಗುವುದಿಲ್ಲ’ ಎಂಬ ದಾರ್ಶನಿಕ ಲಿಯೊ ಟಾಲ್ಸ್ಟಾಯ್ ನುಡಿಬೆಳಕಲ್ಲಿ ಜನಜಾಗೃತಿ ಮೂಡಬೇಕು.

ಆದರೆ, ಅಂತರರಾಷ್ಟ್ರೀಯ ಮಾಧ್ಯಮಗಳ ಪ್ರಕಾರ, ದೇಶದ ಬಹುತೇಕ ಹಗೆ–ದ್ವೇಷ, ಕೋಮುಗಲಭೆಗಳು ಉದ್ದೇಶಪೂರ್ವಕ ಮತ್ತು ಪೂರ್ವಯೋಜಿತವಾಗಿವೆ. ಇಲ್ಲಿ ಸುಳ್ಳುಸುದ್ದಿ ಸೃಷ್ಟಿಸುವ ಕಾರ್ಖಾನೆಗಳಿವೆ. ಪ್ರಸಾರಕ್ಕೆ ವಾಹಕಗಳಿವೆ. ಗಲಭೆ ಪ್ರಚೋದನೆಯ ದುಷ್ಟಕೂಟಗಳೂ ಕ್ರಿಯಾಶೀಲವಾಗಿವೆ. ಕಾಲಾಂತರದಿಂದ ಅಮಾಯಕರ ಮೇಲೆ ಹೇರಿಕೊಂಡು ಬರಲಾದ ಅಸಮಾನತೆ, ಜಾತೀಯತೆ, ವರ್ಗ ಸಂಘರ್ಷ, ರಾಗದ್ವೇಷಗಳನ್ನು ಕಿತ್ತೊಗೆದು ಮನುಷ್ಯ ಧರ್ಮವನ್ನು ಮರುಸ್ಥಾಪಿಸಲು ಪ್ರಯತ್ನಿಸಿದ ಸಂತರು- ಸದ್ಗುಣಿಗಳನ್ನು ದೇವರು ಮಾಡಿ ಪ್ರತಿಮೆ ಕೆತ್ತಿಟ್ಟು ಕತ್ತಲ ಕೋಣೆಯಲ್ಲಿ ಕೂಡಿಹಾಕಲಾಗಿದೆ. ಇಲ್ಲವೇ ಫೋಟೊ ಮಾಡಿ ಗೋಡೆಗೆ ನೇತು ಹಾಕಲಾಗಿದೆ.

ಭಾವೈಕ್ಯದ ಬದುಕು ಕಲಿಸಿಕೊಟ್ಟವರ ನೀತಿ– ತತ್ವಗಳು ಪೂಜೆಗಷ್ಟೇ, ಪಾಲನೆಗಲ್ಲ ಎಂಬುದೇ ಧೋರಣೆ. ಹಾಗೆ ಒಮ್ಮೆ ದೇವರಾದರೆ ಮುಗಿಯಿತು; ಅವರೆಲ್ಲಾ ವಿಮರ್ಶಾತೀತರು. ಅವರ ತತ್ವಾದರ್ಶಗಳನ್ನು
ಪ್ರಶ್ನಿಸುವ ಹಕ್ಕನ್ನು ಜನಸಾಮಾನ್ಯರಿಂದ ಕಸಿದುಕೊಳ್ಳಲಾಗುತ್ತದೆ.

ಬಹುತ್ವದ ಇಟ್ಟಿಗೆಗಳನ್ನು ಇರಿಸಿ ಕಟ್ಟಿದ ದೇಶವೆಂಬ ಕನಸಿನ ಸೌಧದೊಳಗೆ ಯಾವೊಂದು ವರ್ಗ ಅನಾದರಕ್ಕೆ ಒಳಗಾದರೂ ಅದರಿಂದ ಹಾನಿಯಾಗುವುದು ಇಡೀ ಸೌಧಕ್ಕೆ. ಹಾಗಾಗಿ, ಎಲ್ಲರ ಮನಗೆದ್ದು ಉನ್ನತಿಯೆಡೆಗೆ ಕೊಂಡೊಯ್ಯುವ ತಾಯ್ತನದ ಆಡಳಿತ- ನಾಯಕತ್ವ ಎಲ್ಲ ಕಾಲದ ಅಗತ್ಯ. ಸಂತಸ–ಸಂಕಟಗಳ ಹಿನ್ನೆಲೆ ಯಾವುದೇ ಇದ್ದರೂ ದೇಶಕ್ಕೆ ಬೇಕಿರುವುದು ಸಂಘರ್ಷವಲ್ಲ; ಸಹನೆಯ ಮಾರ್ಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.