ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಲಿಂಗಸಂವೇದಿ ಆಯವ್ಯಯ ಆದ್ಯತೆಯಾಗಲಿ

ಎಲ್ಲ ಕ್ಷೇತ್ರಗಳ ಮಹಿಳೆಯರ ಸಮಗ್ರ ಅಭಿವೃದ್ಧಿಯನ್ನು ಪರಿಗಣಿಸುವ ಆಯವ್ಯಯ ರೂಪಿಸಲು ಈಗಲಾದರೂ ಸಾಧ್ಯವಾಗಬೇಕು
Last Updated 17 ಫೆಬ್ರುವರಿ 2022, 20:37 IST
ಅಕ್ಷರ ಗಾತ್ರ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಾರ್ಷಿಕ ಬಜೆಟ್‍ನಲ್ಲಿ, ಮಹಿಳೆಯರ ಅಭಿವೃದ್ಧಿಗೆ ಎಷ್ಟು ಆದ್ಯತೆ ನೀಡಲಾಗುತ್ತಿದೆ ಎಂದು ಪರಿಶೀಲಿಸಹೊರಟರೆ, ನಿರಾಸೆಯಾಗುತ್ತದೆ. ಲಿಂಗಾಧಾರಿತ ಆಯವ್ಯಯವೆಂಬುದು ಹೆಸರಿಗಿದೆಯಷ್ಟೇ. ಬಜೆಟ್‍ನಲ್ಲಿ ಪ್ರತಿವರ್ಷವೂ ಮಹಿಳೆಯರಿಗಾಗಿ ಹಿಂದಿನ ಯೋಜನೆಗಳ ಮುಂದುವರಿಕೆಯ ಜೊತೆಗೆ, ಕೆಲವು ಹೊಸ ಯೋಜನೆಗಳು ಮತ್ತು ಕಾರ್ಯಕ್ರಮಕ್ಕಾಗಿ ಒಂದಷ್ಟು ಹಣ ಮೀಸಲಿಟ್ಟಿರುವುದನ್ನು ಘೋಷಿಸಿದರೆ ಮುಗಿಯಿತು! ಮಹಿಳೆಯರ ಬದುಕಿನ ಆಮೂಲಾಗ್ರ ಬದಲಾವಣೆಯ ದೃಷ್ಟಿಯಿಂದ ವಿಸ್ತೃತ ಚರ್ಚೆಯಾಗಲೀ ಅನುಷ್ಠಾನದ ಸಾಧ್ಯತೆಗಳ ಆಲೋಚನೆಯಾಗಲೀ ನಡೆಯುವುದೇ ಇಲ್ಲ.

ಮುಖ್ಯವಾಗಿ, ಎಲ್ಲ ರೀತಿಯ ಅಂಚಿಗೊತ್ತರಿಸಲ್ಪಟ್ಟ, ಗ್ರಾಮೀಣ ಮಹಿಳೆಯರನ್ನೂ ಒಳಗೊಳ್ಳುವ ಆಯವ್ಯಯ ಇದುವರೆಗೆ ರೂಪಿತವಾಗಿಯೇ ಇಲ್ಲ! ಸರ್ಕಾರವು ತನ್ನ ಪ್ರತೀ ಇಲಾಖೆಯ ಆಯವ್ಯಯದಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕವಾಗಿ ಹಣ ಮೀಸಲಿಟ್ಟು, ಪರಿಣಾಮಕಾರಿ ಯೋಜನೆಗಳನ್ನು ಜಾರಿಗೊಳಿಸಬೇಕಿರುವುದು ನಿಜವಾದಲಿಂಗಸಂವೇದಿಬಜೆಟ್‍ನ ಮುಖ್ಯ ಆಶಯವಾಗಬೇಕು.

ಹಳ್ಳಿಗಾಡಿನ ಹೆಣ್ಣುಮಕ್ಕಳು ಕುಡಿಯುವ ನೀರಿಗಾಗಿ, ಉರುವಲಿಗಾಗಿ ಮೈಲಿಗಟ್ಟಲೆ ನಡೆದುಕೊಂಡು ಹೋಗಬೇಕಾದ ಸಂಕಷ್ಟದ ಪರಿಸ್ಥಿತಿ ಇಂದಿಗೂ ಇರುವುದು ನಮಗೆ ನಾಚಿಕೆಗೇಡಿನ ಸಂಗತಿ ಎನಿಸದಿದ್ದರೆ ಹೇಗೆ?

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಶೇ 80ಕ್ಕಿಂತ ಹೆಚ್ಚು ಕೆಲಸ ಮಾಡುತ್ತಿರುವವರು ಸ್ಥಳೀಯ ಮಹಿಳೆಯರೇ. ಆದರೆ ಅದಕ್ಕೆ ಬಜೆಟ್‍ನಲ್ಲಿ ತೆಗೆದಿಡುವ ಹಣ ಕಡಿಮೆಯಾಗುತ್ತಲೇ ಸಾಗಿದೆ. ಕೇಳಿದಷ್ಟು ದಿನಗಳ ಕೆಲಸ, ದುಡಿಮೆಗೆ ಸಮರ್ಪಕ ಲೆಕ್ಕಾಚಾರದ ಕೂಲಿ ಸಿಗುವಂತಾದರೆ ಬಡ ಮಹಿಳೆಯರೇ ತಮ್ಮ ಕುಟುಂಬವನ್ನು ಬದುಕಿಸಿಕೊಳ್ಳುತ್ತಾರೆ. ಜೊತೆಗೆ ಸಾಮುದಾಯಿಕ ಆಸ್ತಿ ರಕ್ಷಣೆ ಹಾಗೂ ಅಭಿವೃದ್ಧಿ ಕೆಲಸಗಳೂ ಆಗುತ್ತವೆ.

ಕುಟುಂಬದ ನೆಮ್ಮದಿಗಾಗಿ ಮದ್ಯಪಾನ ನಿಷೇಧ ಆಗಲೇಬೇಕೆಂದು ಮಹಿಳೆಯರು ದಶಕದಾಚೆಯಿಂದ ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ ರಾಜ್ಯದಾದ್ಯಂತ ಸಮರ್ಪಕ ಕುಡಿಯುವ ನೀರನ್ನೇ ಒದಗಿಸಲು ಸಾಧ್ಯವಾಗಿಲ್ಲದ ಸರ್ಕಾರಕ್ಕೆ, ಹಳ್ಳಿ ಹಳ್ಳಿಗೂ ಮದ್ಯ ಪೂರೈಸಲು ಸಾಧ್ಯವಾಗಿರುವುದು, ಅದರ ಆದ್ಯತೆಯ ದ್ಯೋತಕ! ಹೀಗೆಂದೇ ಹಂತ ಹಂತದ ಮದ್ಯನಿಷೇಧದತ್ತ ಪ್ರಥಮ ಆದ್ಯತೆಯಾಗಿ ಗಮನಹರಿಸಬೇಕಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಕೌಶಲಾಭಿವೃದ್ಧಿ ತರಬೇತಿ ಪಡೆದು, ಕಿರು ಮತ್ತು ಗೃಹ ಉದ್ದಿಮೆಗಳನ್ನು ಸ್ಥಾಪಿಸಿದವರು ಉತ್ಪಾದನೆಗೆ ತಕ್ಕ ಮಾರುಕಟ್ಟೆ ವ್ಯವಸ್ಥೆಯನ್ನು ರೂಪಿಸಬೇಕಾಗಿದೆ.

ಕರ್ನಾಟಕ ರಾಜ್ಯ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನ ಸಮಿತಿಯು 2017ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಲಕ್ಷದಷ್ಟು ಲೈಂಗಿಕ ದಮನಿತರಲ್ಲಿ ಶೇ 72ರಷ್ಟು ಮಹಿಳೆಯರು ವೇಶ್ಯಾವಾಟಿಕೆ ಬಿಟ್ಟು ಹೊರಬರಲು ಪರ್ಯಾಯ ಆರ್ಥಿಕ ಸ್ವಾವಲಂಬನೆಗೆ ಬೇಡಿಕೆ ಇಟ್ಟಿದ್ದಾರೆ. ಇವರ ಸಮಗ್ರ ಸಮೀಕ್ಷೆ ನಡೆಸಬೇಕು. ಈ ಜಾಲದಲ್ಲಿ ಬಿದ್ದಿರುವ ಚಿಕ್ಕವಯಸಸಿನ ಸಾವಿರಾರು ಹೆಣ್ಣುಮಕ್ಕಳು, ಅಂಗವಿಕಲರು, ಎಚ್‍ಐವಿ ಪೀಡಿತರಾಗಿದ್ದೂ ದಂಧೆಯೊಳಗಿರುವ ಸೋಂಕಿತ ದಮನಿತರನ್ನು ತಕ್ಷಣವೇ ವೇಶ್ಯಾವಾಟಿಕೆಯಿಂದ ಹೊರತಂದು ಪುನರ್ವಸತಿ ಕಲ್ಪಿಸಲು ಪ್ರಬಲ ಕೋಶವೊಂದನ್ನು ರೂಪಿಸಬೇಕು.

ಗ್ರಾಮ ಪಂಚಾಯಿತಿಗೆ ಒಂದರಂತಾದರೂ ಗುಡಿ ಕೈಗಾರಿಕೆಯ ಕಿರು ಉತ್ಪನ್ನಗಳ ಘಟಕವನ್ನು ಸ್ಥಾಪಿಸಬೇಕು. ಸರ್ಕಾರಿ ಕೆಲಸದಲ್ಲಿ ಶೇ 50ರಷ್ಟನ್ನು ಕಡ್ಡಾಯವಾಗಿ ಮಹಿಳೆಯರಿಗೆ ಮೀಸಲಿಡಬೇಕು. ಅಸಂಘಟಿತ ಮಹಿಳಾ ಕಾರ್ಮಿಕರಿಗೆ ಸಶಕ್ತವಾದ ಕಲ್ಯಾಣ ಯೋಜನೆಗಳನ್ನು ರೂಪಿಸಬೇಕು.

ಬಹುತೇಕ ಉದ್ದಿಮೆಗಳಲ್ಲಿ ಮಹಿಳಾ ಕಾರ್ಮಿಕರಿಗೆ ನಿಗದಿಪಡಿಸಿರುವ ವೇತನವು ಕನಿಷ್ಠ ಮಟ್ಟದಲ್ಲಿದೆ. ಹೀಗಾಗಿ ಐ.ಎಲ್.ಒ. (ಇಂಟರ್‌ನ್ಯಾಷನಲ್ ಲೇಬರ್ ಆರ್ಗನೈಸೇಷನ್) ನಿಗದಿಪಡಿಸಿದ ಮಾನದಂಡವನ್ನು ಅನ್ವಯಿಸಿ, ವೇತನ ಪರಿಷ್ಕರಣೆ ಮಾಡಬೇಕು.

ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಬಿಸಿಯೂಟ ನೌಕರರಿಗೆ ನೀಡಲಾಗುತ್ತಿರುವ ಅಲ್ಪ ಗೌರವಧನದ ಬದಲಿಗೆ ಸೂಕ್ತವಾದ ಮಾಸಿಕ ವೇತನ ನಿಗದಿಪಡಿಸಬೇಕು. ಇವರಿಗಾಗಿ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು. ಮನೆಕೆಲಸದ ಮಹಿಳಾ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ತಮಿಳುನಾಡು ಸರ್ಕಾರದ ಮಾದರಿಯಲ್ಲಿ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಬೇಕು.

ಹೆಣ್ಣುಭ್ರೂಣ ಹತ್ಯೆ ತಡೆಗಾಗಿ ಒಂದು ಪ್ರತ್ಯೇಕ, ವಿಕೇಂದ್ರೀಕೃತ ಆಯೋಗ ರಚನೆಯಾಗಬೇಕು. ಬಾಲ್ಯವಿವಾಹ ವಿರುದ್ಧದ ಅರಿವಿನ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ರೂಪಿಸಬೇಕು. ಪಡಿತರಚೀಟಿಯನ್ನು ಕಡ್ಡಾಯವಾಗಿ ಮಹಿಳೆಯರ ಹೆಸರಲ್ಲಿ ಮರು ನೋಂದಣಿ ಮಾಡಿಸಬೇಕು. ಶಾಲೆಯ ಬಿಸಿಯೂಟ ತಯಾರಿ ಜವಾಬ್ದಾರಿಯನ್ನು ಕಡ್ಡಾಯವಾಗಿ ಸ್ಥಳೀಯ ಮಹಿಳೆಯರಿಗೆ ಕೊಡಬೇಕು.

ಗುಜ್ಜರ್ ಮದುವೆ ಹೆಸರಿನ ವಧು ರಫ್ತು ಉದ್ಯಮವನ್ನು ನಿರ್ಬಂಧಿಸಲು ಮತ್ತು ಹೆಣ್ಣುಮಕ್ಕಳ ನಾಪತ್ತೆ, ಕಳ್ಳಸಾಗಾಣಿಕೆ ಹಾಗೂ ಮಾರಾಟ ಜಾಲಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಯಲ್ಲಿರುವ ಮಾನವ ಸಾಗಾಣಿಕೆ ವಿರೋಧಿ ಕೋಶಗಳನ್ನು ಸಶಕ್ತಗೊಳಿಸಬೇಕು.

ಮಾರಾಟ ಜಾಲಕ್ಕೆ ಸಿಕ್ಕಿ ವಾಪಸಾದವರು, ಅತ್ಯಾಚಾರಕ್ಕೆ ಒಳಗಾದವರು ಹಾಗೂ ನಿರ್ಗತಿಕ, ಪರಿತ್ಯಕ್ತ ಮಹಿಳೆಯರ ಪುನರುಜ್ಜೀವನಕ್ಕಾಗಿ ತುರ್ತು ಪರಿಹಾರ ನಿಧಿಯನ್ನು ಸ್ಥಾಪಿಸಬೇಕು. ರಾಜ್ಯದಾದ್ಯಂತ ಈ ವಿಷಯದಲ್ಲಿ ಗುರುತರ ಲೋಪಗಳಾಗುತ್ತಿದ್ದು ಸಶಕ್ತ ಯೋಜನೆಯೊಂದನ್ನು ರೂಪಿಸಬೇಕು. ಪ್ರತೀ ಜಿಲ್ಲೆಯಲ್ಲಿ ಪ್ರತ್ಯೇಕ ಮಹಿಳಾ ಪೊಲೀಸ್ ಠಾಣೆಗಳು, ತ್ವರಿತಗತಿಯ ನ್ಯಾಯಾಲಯಗಳು ಸ್ಥಾಪನೆಯಾಗಬೇಕು.

ಈ ತುರ್ತು ಆದ್ಯತೆಯ ವಿಷಯಗಳಿಗೆ ಸರ್ಕಾರ ಆಯವ್ಯಯದಲ್ಲಿ ಅವಶ್ಯಕ ಹಣವನ್ನು ತೆಗೆದಿಡುವ ಮೂಲಕ ಸಮರ್ಥಲಿಂಗಸಂವೇದಿಆಯವ್ಯಯಕ್ಕೆ ಇನ್ನಾದರೂ ಮುನ್ನುಡಿ ಹಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT