ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಅಂಕಪಟ್ಟಿ: ಬದುಕಿನ ಹಕ್ಕುಪತ್ರವಲ್ಲ

ಬದುಕು ಕಲಿಸಬೇಕಾದ ಶಾಲೆಯು ಮಕ್ಕಳನ್ನು ಅಂಕದ ಹಿಂದೆ ಓಡಲು ನಿಲ್ಲಿಸಿದರೆ ಅಂತಹ ಸ್ಥಿತಿಗೆ ಯಾರನ್ನು ದೂರುವುದು?
Published 10 ಮೇ 2024, 0:30 IST
Last Updated 10 ಮೇ 2024, 0:30 IST
ಅಕ್ಷರ ಗಾತ್ರ

ಇದು, ನನ್ನ ಪರಿಚಿತ ವಲಯದಲ್ಲಿ ಕೆಲವು ವರ್ಷಗಳ ಹಿಂದೆ ನಡೆದ ಪ್ರಕರಣ. ಅಂದು ಎಸ್ಎಸ್ಎಲ್‌ಸಿ ಪರೀಕ್ಷೆಯ ಫಲಿತಾಂಶ ಘೋಷಣೆಯಾಗಲಿತ್ತು. ಪರೀಕ್ಷೆ ಬರೆದಿದ್ದ ಒಬ್ಬಳು ಹುಡುಗಿ ಬೆಳಿಗ್ಗೆಯಿಂದ ಆತಂಕದಲ್ಲಿ ಫಲಿತಾಂಶಕ್ಕಾಗಿ ಕಾದಿದ್ದಳು. ಆಗಿನ್ನೂ ಸ್ಮಾರ್ಟ್‌ಫೋನ್‌ ಹೆಚ್ಚಿನ ಜನರ ಬಳಿ ಇರಲಿಲ್ಲ. ಪಕ್ಕದ ಪಟ್ಟಣದಂತಹ ಊರಿನ ಕಂಪ್ಯೂಟರ್ ಸೆಂಟರಿನಲ್ಲಿ ಪರೀಕ್ಷೆಯ ಫಲಿತಾಂಶ ನೋಡಬಹುದಿತ್ತು. ಈ ಹುಡುಗಿಗೆ ಹೋಗಲಾಗಲಿಲ್ಲ. ಫಲಿತಾಂಶ ನೋಡಲೆಂದೇ ಹೋದ ಗೆಳತಿಯೊಬ್ಬಳಿಗೆ ತನ್ನ ಫಲಿತಾಂಶವನ್ನೂ ನೋಡಿಕೊಂಡು ಬರಲು ಹೇಳಿ ಕಾದು ಕುಳಿತಳು.

ಒಂದೆರಡು ಗಂಟೆಗಳ ತರುವಾಯ, ಫಲಿತಾಂಶ ನೋಡಲು ಹೋದ ಗೆಳತಿ ಬಂದು ‘ನಿಂದು ಫೇಲಾಗಿಬಿಟ್ಟಿದೆ ಕಣೇ’ ಅಂದು ಹೊರಟುಹೋದಳು. ಅದೇನನ್ನಿಸಿತೋ ಏನೋ ಈ ಹುಡುಗಿ ಏಕಾಏಕಿ ಕೋಣೆಯ ಒಳಗೆ ಹೋಗಿ ನೇಣಿಗೆ ಶರಣಾಗಿಬಿಟ್ಟಳು. ಆದರೆ ನಂತರ ಗೊತ್ತಾದ ಸತ್ಯವೆಂದರೆ, ಆ ಹುಡುಗಿ ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದಳು. ಅವಳ ಗೆಳತಿ ಸುಮ್ಮನೆ ರೇಗಿಸಲು ಹೇಳಿದ ಮಾತು ಆ ಮುಗ್ಧ ಮಗುವಿನ ಜೀವವನ್ನೇ ಬಲಿ ತೆಗೆದುಕೊಂಡುಬಿಟ್ಟಿತು.

ಇಲ್ಲಿ ಮಗುವಿಗೆ ಕೈಕೊಟ್ಟದ್ದು ಅದರ ಆತ್ಮವಿಶ್ವಾಸ. ಮಕ್ಕಳ ಮುಗ್ಧತೆ, ಬೆರಗು, ಭರವಸೆ, ಆತ್ಮವಿಶ್ವಾಸ, ಸೃಜನಾತ್ಮಕತೆ ಮತ್ತು ಎಲ್ಲಾ ಒಳಿತುಗಳು, ಒತ್ತಡಗಳನ್ನು
ಅವರ ಮೇಲೆ ವ್ಯವಸ್ಥಿತವಾಗಿ ಹೇರುವ ಮೂಲಕ ಅವರನ್ನು ದಿಕ್ಕೆಡಿಸುವುದೇ ಶಿಕ್ಷಣವೇನೊ ಅನ್ನಿಸಿ
ಬಿಡುತ್ತದೆ ಒಮ್ಮೊಮ್ಮೆ. 

ಈ ಬಾರಿ ಫೇಲಾದರೆ ಇನ್ನೊಮ್ಮೆ ಪರೀಕ್ಷೆ ಬರೆಯಬಹುದು ಎಂಬುದು ಆ ಮಗುವಿಗೆ ಗೊತ್ತಿರದಿದ್ದ ಸಂಗತಿಯೇನಲ್ಲ. ಒಂದು ವೇಳೆ ಈ ಪರೀಕ್ಷೆ ಫೇಲಾಗಿಬಿಟ್ಟರೆ ಬದುಕೂ ಫೇಲಾಗಿಬಿಡುತ್ತದೆ ಎಂದು ಆಕೆ ಅರ್ಥೈಸಿಕೊಂಡಿರಲಿಲ್ಲ. ಓದು ಮತ್ತು ಪರೀಕ್ಷೆಯ ಗೊಡವೆ ಇಲ್ಲದೆ ಒಳ್ಳೆಯ ಜೀವನ ಸಾಗಿಸುತ್ತಿರುವ ಬಹಳಷ್ಟು ಜನ ಆಕೆಯ ಸುತ್ತಮುತ್ತಲೇ ಇದ್ದರು. ಅದು ಅವಳಿಗೂ ಗೊತ್ತಿತ್ತು. ಆದರೂ ಆಕೆ ಈ ಬದುಕೇ ಬೇಡ ಎಂದುಕೊಂಡು ಹೊರಟುಹೋದದ್ದು ಯಾಕೆ?

ಒಂದು ಪರೀಕ್ಷೆಯ ಗೆಲುವನ್ನು ಬದುಕಿನ ಗೆಲುವು ಎಂದೂ ಅಂಕಗಳನ್ನು ಪ್ರತಿ ತಿಂಗಳೂ ಬರುವ ಸಂಬಳವೆಂದೂ ಅಂಕಪಟ್ಟಿಯನ್ನು ಕೆಲಸಕ್ಕೆಂದು ಕೊಡುವ ಆದೇಶಪತ್ರವೆಂದೂ ಒಳ್ಳೆಯ ಕಾಲೇಜಿನಲ್ಲಿ ಸಿಕ್ಕ ಸೀಟೇ ತನಗೆ ದಕ್ಕಿದ ಮಹಲಿನ ಸುಖವೆಂದೂ ಈ ಸಮಾಜ ಮಗುವನ್ನು ನಂಬಿಸಿದೆ ಮತ್ತು ಅದನ್ನು ಮಕ್ಕಳಿಂದ ಬಯಸುತ್ತದೆ.

ಪರೀಕ್ಷೆಯಲ್ಲಿ ಸೋತ ವಿದ್ಯಾರ್ಥಿಗೆ ತನ್ನನ್ನು ತಾನು ನಿಭಾಯಿಸಿಕೊಳ್ಳುವುದು ಅಷ್ಟೇನೂ ಕಷ್ಟವಲ್ಲ. ತನ್ನನ್ನು ಸಮಾಧಾನಪಡಿಸಿಕೊಳ್ಳುವುದು ಗೊತ್ತಿರುತ್ತದೆ. ಕದಡಿದ ನೀರು ಸದಾ ಕಾಲ ಕದಡಿಕೊಂಡೇ ಇರುವುದಿಲ್ಲ. ಆದರೆ ಸತತವಾಗಿ ಕಾಡುವ ಪೋಷಕರನ್ನು, ಒತ್ತಡ ಹಾಕುವ ಶಿಕ್ಷಕರನ್ನು, ನೋಡಿ ನಗುವ ಗೆಳೆಯರನ್ನು, ಹೀನಾಯವಾಗಿ ನಡೆಸಿಕೊಳ್ಳುವ ಸಮಾಜವನ್ನು ಎದುರಿಸಲಾಗುವುದಿಲ್ಲ. ಅವರ ಪ್ರಶ್ನೆಗಳಿಗೆ ಉತ್ತರಿಸಲಾಗುವುದಿಲ್ಲ. ‘ಇರಲಿ ಬಿಡು ಕಂದ. ಮತ್ತೊಮ್ಮೆ ಓದಿ ಬರೆದರಾಯಿತು. ಅದೇ ಬದುಕಲ್ಲವಲ್ಲ’
ಎನ್ನುವ ಒಂದು ಮಾತು ಆ ಹೊತ್ತಿನಲ್ಲಿ ಮಗುವಿಗೆ ಸಿಕ್ಕಿಬಿಟ್ಟರೆ, ಆ ಕ್ಷಣದಲ್ಲಿ ಅದರೊಳಗೆ ಸಮಾಧಾನದ ಅಲೆ. ನಾವು ಸಮಾಧಾನ ಮತ್ತು ಬುದ್ಧಿ ಹೇಳಬೇಕಾಗಿರುವುದು ಮಗುವಿಗಿಂತ ಅದರ ಹೆತ್ತವರಿಗೆ, ಶಿಕ್ಷಕರಿಗೆ ಮತ್ತು ಸಮಾಜಕ್ಕೆ. ಅವರೆಲ್ಲಾ ಸರಿಯಾದ ದಿನ ಮಕ್ಕಳು ಒಂಚೂರು ನಿರಾಳರಾಗುತ್ತಾರೆ.

‘ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ.‌ ಅವರು ನಿಮ್ಮ ಮೂಲಕ ಬರುತ್ತಾರೆಯೇ ವಿನಾ ನಿಮ್ಮಿಂದ ಅಲ್ಲ. ಅವರು ನಿಮ್ಮೊಂದಿಗೇ ಇದ್ದರೂ ನಿಮ್ಮ ಒಡೆತನಕ್ಕೆ ಒಳಪಟ್ಟವರಲ್ಲ. ನೀವು ಅವರಿಗೆ ನಿಮ್ಮ ಒಲವನ್ನು ನೀಡಬಹುದು, ಆಲೋಚನೆಗಳನ್ನಲ್ಲ. ಅವರಿಗೆ ಅವರದೇ ಆದ ಆಲೋಚನೆಗಳು ಇರುತ್ತವೆ. ಅವರ ದೇಹಗಳಿಗೆ ನೀವು ಆಶ್ರಯ ನೀಡಬಹುದು, ಆತ್ಮಗಳಿಗಲ್ಲ’ ಎನ್ನುತ್ತಾನೆ ಖಲೀಲ್‌ ಗಿಬ್ರಾನ್.

ನಮ್ಮ‌ ಮಕ್ಕಳು ನಮ್ಮ ಗುಲಾಮರಲ್ಲ. ಹುಟ್ಟುವ ಪ್ರತಿ ಮಗುವೂ ಒಳ್ಳೆಯದಾಗಿಯೇ ಹುಟ್ಟಿರುತ್ತದೆ. ಹುಟ್ಟಿದ ನಂತರ ಅದನ್ನು ಹಂತ ಹಂತವಾಗಿ ಹಾಳು ಮಾಡುವ ಗುತ್ತಿಗೆಯನ್ನು ನಾವು ತೆಗೆದುಕೊಳ್ಳುತ್ತೇವೆ.‌ ‘ಮಗು ಹುಟ್ಟುವಾಗ ವಿಶ್ವಮಾನವನಾಗಿಯೇ ಹುಟ್ಟುತ್ತದೆ. ಅದನ್ನು ನಾವು ಅಲ್ಪಮಾನವನನ್ನಾಗಿ ಮಾಡುತ್ತೇವೆ’ ಎನ್ನುವ ಕುವೆಂಪು ಅವರ ಮಾತು ಎಷ್ಟೊಂದು ಅರ್ಥಗಳನ್ನು ಹೊಮ್ಮಿಸುತ್ತದೆ. 

ಫಲಿತಾಂಶದ ಈ ದಿನಗಳಲ್ಲಿ ನನಗೆ ಪತ್ರಿಕೆಗಳನ್ನು ನೋಡಲು, ವಾರ್ತೆಗಳನ್ನು ಕೇಳಲು ಭಯವಾಗುತ್ತದೆ. ಮಕ್ಕಳು ಆತ್ಮಹತ್ಯೆ ಮಾಡಿಕೊಂಡವು ಎಂಬ ಸುದ್ದಿಗಿಂತ ಕೆಟ್ಟ ಸುದ್ದಿ ಬಹುಶಃ ಜಗತ್ತಿನಲ್ಲಿ ಮತ್ತೆ ಯಾವುದೂ ಇರಲಿಕ್ಕಿಲ್ಲ. ಮಕ್ಕಳ ಆತ್ಮಹತ್ಯೆಗಳ ಪೈಕಿ, ಪರೀಕ್ಷಾ ಒತ್ತಡದಿಂದಾದ ಸಾವುಗಳ ಸಂಖ್ಯೆಯೇ ಹೆಚ್ಚಾಗಿರುತ್ತದೆ
ಎಂಬುದು ದಿಗಿಲು ಹುಟ್ಟಿಸುವ ಸಂಗತಿ.

ಹುಟ್ಟು ಎಂದರೇನು, ಸಾವು ಎಂದರೇನು, ಬದುಕು ಎಂದರೇನು ಎಂಬುದು ಗೊತ್ತಿರದ ಮಕ್ಕಳೆಲ್ಲಾ ಉಸಿರು ಚೆಲ್ಲುವುದನ್ನು ನೋಡುವುದಕ್ಕೆ ಸಂಕಟವಾಗುತ್ತದೆ. ‘ಎಂಥದ್ದೇ  ಸಂದರ್ಭ ಬಂದರೂ ನಾನು ಬದುಕಬಲ್ಲೆ’ ಎಂಬುದನ್ನು ಕಲಿಸುವುದು ಶಿಕ್ಷಣವಾಗಬೇಕಿತ್ತು. ಅಂಕ ಕಡಿಮೆ ಬಂತು ಎಂದು ಸತ್ತುಹೋಗುವ ವಿದ್ಯಾರ್ಥಿಗಳ ಎದುರು ಶಿಕ್ಷಣವನ್ನು ಏನೆಂದು ವ್ಯಾಖ್ಯಾನಿಸುವುದು? ಬದುಕು ಕಲಿಸಬೇಕಾದ ಶಾಲೆಯು ಮಕ್ಕಳನ್ನು ಅಂಕದ ಹಿಂದೆ ಓಡಲು ನಿಲ್ಲಿಸಿದರೆ ಯಾರನ್ನು ದೂರುವುದು? ಅಂಕ ಇಲ್ಲದವನಿಗೂ ಇಲ್ಲಿ ಹೊಟ್ಟೆ ತುಂಬಾ ಅನ್ನವಿದೆ ಎಂದು ಹೇಳಿಕೊಡಬಾರದೇ ಶಾಲೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT