ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ವ್ಯಕ್ತಿ ಸ್ವಾತಂತ್ರ್ಯ ಮತ್ತು ಜುಬೈರ್‌ ಪ್ರಕರಣ

ಕೋರ್ಟ್‌ಗಳು ನೀಡಿರುವ ಮಹತ್ವದ ತೀರ್ಪುಗಳ ಹಿನ್ನೆಲೆಯಲ್ಲಿ, ಸದ್ಯ ಜೈಲಿನಲ್ಲಿರುವ ಆಲ್ಟ್‌ನ್ಯೂಸ್ ಸಹಸಂಸ್ಥಾಪಕ ಜುಬೈರ್‌ ಅವರ ಸ್ಥಿತಿಯನ್ನು ವಿಶ್ಲೇಷಿಸಬೇಕಾಗುತ್ತದೆ
Last Updated 18 ಜುಲೈ 2022, 19:39 IST
ಅಕ್ಷರ ಗಾತ್ರ

ಮೊದಲಿಗೆ, ವ್ಯಕ್ತಿ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ ನೀಡಿರುವ ಇತ್ತೀಚಿನ ತೀರ್ಪುಗಳನ್ನು ನೋಡೋಣ:

1. ಧಾರ್ಮಿಕ ಭಾವನೆಗಳಿಗೆ ಅಪಮಾನ: ‘ಭಾರತವು 130 ಕೋಟಿಯನ್ನೂ ಮೀರಿದ ಜನಸಂಖ್ಯೆಯ ದೇಶವಾಗಿದೆ ಮತ್ತು ಯಾವುದೇ ವಿಷಯವಾದರೂ ಅದರ ಬಗ್ಗೆ 130 ಕೋಟಿ ವಿಚಾರಗಳು ಹಾಗೂ ಗ್ರಹಿಕೆ ಸಾಧ್ಯ. ವ್ಯಕ್ತಿ ಯೊಬ್ಬನ ‘ನೋವಿನ ಭಾವನೆ’ ಇಡೀ ಗುಂಪಿನ ಅಥವಾ ಸಮುದಾಯದ ಭಾವನೆಗಳನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಗುವುದಿಲ್ಲ’ (ದೆಹಲಿ ಹೈಕೋರ್ಟ್, 21.5.22, ಪ್ರೊ. ರತನ್‍ಲಾಲ್ ಮೊಕದ್ದಮೆ. ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದ ಒಂದು ಕಿರು ಲೇಖನಕ್ಕೆ ಸಂಬಂಧಿಸಿದಂತೆ).

2. ಸರ್ಕಾರದ ನೀತಿ-ಕಾರ್ಯಗಳ ಟೀಕೆ: ‘ಸರ್ಕಾರದ ವಿರುದ್ಧದ ಟೀಕೆಯು ದಂಡನೆಗೆ ಆಧಾರವಾಗಲು ಸಾಧ್ಯವಿಲ್ಲ. ಸರ್ಕಾರದ ಕಾರ್ಯಗಳನ್ನು ವಿಮರ್ಶಿಸುವ ಅಥವಾ ಅವುಗಳ ಬಗ್ಗೆ ತನ್ನ ಅಭಿಪ್ರಾಯಗಳನ್ನು ಮಂಡಿಸುವ ಹಕ್ಕು ಎಲ್ಲಾ ಪ್ರಜೆಗಳಿಗೂ ಇದೆ’ (ಸುಪ್ರೀಂ ಕೋರ್ಟ್, 3.6.2021: ಪತ್ರಕರ್ತ ವಿನೋದ್ ದುವಾ ಅವರು ಯುಟ್ಯೂಬ್‍ನಲ್ಲಿ ದಾಖಲಿಸಿದ ಅಭಿಪ್ರಾಯಗಳ ಬಗ್ಗೆ).

3. ಒಂದೇ ಆಪಾದನೆಯ ಬಗ್ಗೆ ಬೇರೆ ಬೇರೆ ರಾಜ್ಯಗಳಲ್ಲಿ ದೂರು ಸಲ್ಲಿಕೆ: ‘ಸರ್ಕಾರವನ್ನು ಟೀಕಿಸುವ ಒಂದು ಸಾಮಾಜಿಕ ಮಾಧ್ಯಮದ ಬರಹಕ್ಕಾಗಿ, ಭಾರತದ ಪ್ರಜೆಗಳನ್ನು ದೇಶದ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಅಲೆದಾಡಿಸುವುದನ್ನು ನಾವು ಸಹಿಸಲು ಸಾಧ್ಯವಿಲ್ಲ. ಭಾರತವು ಒಂದು ಮುಕ್ತ ದೇಶವಾಗಿಯೇ ಉಳಿಯಲಿ. ಸುಪ್ರೀಂ ಕೋರ್ಟ್‌ನಲ್ಲಿ ನಾವಿರುವುದು ಎಲ್ಲಾ ಪ್ರಜೆಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲು’ (ಸುಪ್ರೀಂ ಕೋರ್ಟ್, 28.10.2020; ರೋಶ್ನಿ ಬಿಶ್ವಾಸ್ ಮೊಕದ್ದಮೆ: ಫೇಸ್‍ಬುಕ್‍ನಲ್ಲಿ ದಾಖಲಿಸಿದ ಒಂದು ಬರಹದ ಬಗ್ಗೆ).

4. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ರಾಜಕೀಯ ಪಕ್ಷಗಳ ಬಗ್ಗೆ ಟೀಕೆ: ‘ಭಾರತೀಯ ಪ್ರಜಾ ಪ್ರಭುತ್ವ ಮತ್ತು ರಾಜಕೀಯ ಪಕ್ಷಗಳು ಟೀಕೆ-ಟಿಪ್ಪಣಿಳಿಗೆ ಹೊರತಾಗಿಲ್ಲ. ಇದರ ಅರ್ಥ, ಯಾವುದೇ ಪಕ್ಷದ ವಿರುದ್ಧದ ಟೀಕೆ ಆ ವ್ಯಕ್ತಿಯನ್ನು ಶಿಕ್ಷಿಸಲು ಆಧಾರವಾಗುವುದಿಲ್ಲ’ (ದೆಹಲಿ ಹೈಕೋರ್ಟ್, 15.7.2022; ಮಹಮ್ಮದ್ ಜುಬೈರ್‌ ಅವರಿಗೆ ಜಾಮೀನು ಕೊಡುವಾಗ. ಆಪಾದನೆ: ಜುಬೈರ್‌ ಅವರ 2018ರ ಟ್ವೀಟ್‌ವೊಂದು ಹಿಂದೂಗಳ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುತ್ತದೆ).

ಈ ಮಹತ್ವದ ತೀರ್ಪುಗಳ ಹಿನ್ನೆಲೆಯಲ್ಲಿ, ಸದ್ಯ ದೆಹಲಿಯ ತಿಹಾರ್ ಜೈಲಿನಲ್ಲಿರುವ ಜುಬೈರ್‌ ಅವರ ಸ್ಥಿತಿಯನ್ನು ನೋಡಿದರೆ ಕೇವಲ ಆಶ್ಚರ್ಯವಲ್ಲ, ಪರಮಾಶ್ಚರ್ಯವಾಗುತ್ತದೆ.

ಆಲ್ಟ್‌ನ್ಯೂಸ್ ಸಂಸ್ಥೆಯ ಸಹಸಂಸ್ಥಾಪಕ ಜುಬೈರ್‌ (ಮತ್ತೊಬ್ಬ ಸಂಸ್ಥಾಪಕ ಸಾಫ್ಟ್‌ವೇರ್‌ ಪರಿಣತ ಪ್ರತೀಕ್ ಸಿನ್ಹಾ) 2017ರಲ್ಲಿ ‘ಆಲ್ಟ್‌ನ್ಯೂಸ್‌’ ಎಂಬ ಪೋರ್ಟಲ್‌ ಆರಂಭಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಬರುವ ‘ಸುಳ್ಳು ಸುದ್ದಿ’ಗಳನ್ನು ಅಪಾರ ಶ್ರಮದಿಂದ ಪರೀಕ್ಷಿಸಿ, ಅವುಗಳ ಅಡಿಯಲ್ಲಿರುವ ಸತ್ಯವನ್ನು ಆ ಮೂಲಕ ಬಯಲು ಮಾಡುತ್ತಿದ್ದಾರೆ. ಆ ಸತ್ಯವನ್ನು ಅನೇಕ ಪತ್ರಿಕೆಗಳು ಹಾಗೂ ಸುದ್ದಿವಾಹಿನಿಗಳು ಪ್ರಸಾರ ಮಾಡುತ್ತಿವೆ.

‘2018ರಲ್ಲಿ ಅವರು ಮಾಡಿದ ಟ್ವೀಟ್, ಹಿಂದೂಗಳ ಧಾರ್ಮಿಕ ನಂಬಿಕೆಗಳಿಗೆ ನೋವು ಉಂಟುಮಾಡುತ್ತದೆ’ ಎಂಬ ಕಾರಣದಿಂದ ಅವರ ಮೇಲೆ ದಾಖಲಿಸಿದ ಎಫ್‌ಐಆರ್ ಆಧರಿಸಿ, ಇದ್ದಕ್ಕಿದ್ದಂತೆಯೇ ಕಳೆದ ತಿಂಗಳ 27ರಂದು ದೆಹಲಿಯಲ್ಲಿ ಅವರನ್ನು ಬಂಧಿಸಲಾಯಿತು. ಅದಾಗಲೇ ಅವರ ಮೇಲೆ 2020ರ ಆಗಸ್ಟ್‌ನಲ್ಲಿ ಎನ್‌ಸಿಪಿಸಿಆರ್ (ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಇರುವ ಸಂಸ್ಥೆ) ಬೇರೊಂದು ಬಗೆಯ ಆಪಾದನೆ ಮಾಡಿ ಮೊಕದ್ದಮೆಯನ್ನು ಹೂಡಿತ್ತು. ಆದರೆ, ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ಜುಬೈರ್ ಅವರನ್ನು ಬಂಧಿಸಬಾರದೆಂದು ದೆಹಲಿ ಹೈಕೋರ್ಟ್ ಹೇಳಿತ್ತು. ಆನಂತರ 2021ರ ಫೆಬ್ರುವರಿಯಲ್ಲಿ ‘ಜುಬೈರ್ ಮಾಡಿದ ಟ್ವೀಟ್ ಯಾವುದೇ ಕಾಗ್ನಿಜಬಲ್ (ಸಂಜ್ಞೇಯ) ಅಪರಾಧವಾಗುವುದಿಲ್ಲ’ ಎಂದು ಹೈಕೋರ್ಟ್‌ಗೆ ದೆಹಲಿ ಪೊಲೀಸರು ಹೇಳಿಕೆ ಕೊಟ್ಟರು. ಆದರೆ, ಈ ವರ್ಷ ಅವರ ಬಂಧನವಾದ ಕೂಡಲೇ, 2018ರ ಟ್ವೀಟ್ ಆಧರಿಸಿ ಬೇರೆ ಬೇರೆ ನಗರಗಳಲ್ಲಿ ಅವರ ಮೇಲೆ ಮೊಕದ್ದಮೆ ಹೂಡಲಾಯಿತು.

ಜೂನ್ 27ರಂದು ದೆಹಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಇದೇ 8ರಂದು ಸೀತಾಪುರ್
ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ದೆಹಲಿ ಹೈಕೋರ್ಟ್ 2020ರ ಮೊಕದ್ದಮೆಗೆ ಸಂಬಂಧಿಸಿದಂತೆ 15ರಂದು ಜಾಮೀನು ನೀಡಿದ್ದರೆ, 2021ರ ಮೊಕದ್ದಮೆಗೆ ಸಂಬಂಧಿಸಿದಂತೆ ಲಖಿಂಪುರ್ ನ್ಯಾಯಾಲಯವು 16ರಂದು ಜಾಮೀನು ನಿರಾಕರಿಸಿದೆ. ಇನ್ನೂ ನಾಲ್ಕು ಮೊಕದ್ದಮೆಗಳಲ್ಲಿ ಜಾಮೀನು ದೊರೆಯುವ ತನಕ ಜುಬೈರ್ ಅವರು ತಿಹಾರ್ ಜೈಲಿನಲ್ಲಿ ಇರಬೇಕಾಗುತ್ತದೆ.

ಈ ವಿವರಗಳೇ ಎಲ್ಲವನ್ನೂ ಹೇಳುವುದರಿಂದ, ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ
ನ್ಯಾಯಮೂರ್ತಿಯವರು ಇದೇ 16ರಂದು ಜೈಪುರದಲ್ಲಿ ಹೇಳಿರುವ ಒಂದು ವಾಕ್ಯವನ್ನು ಉದ್ಧರಿಸಹುದು: ‘ಆತುರದ, ವಿವೇಚನಾರಹಿತ ಬಂಧನ ಗಳಿಂದ ಹಿಡಿದು, ಜಾಮೀನು ಪಡೆಯುವಲ್ಲಿನ ಕಷ್ಟದವರೆಗೆ ಈ ಪ್ರಕ್ರಿಯೆ ಕ್ರಿಮಿನಲ್ ನ್ಯಾಯವ್ಯವಸ್ಥೆಯಲ್ಲಿ ‘ಒಂದು ಶಿಕ್ಷೆ’ಯೇ ಆಗಿದೆ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT