ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಖುಷಿಯ ಓದಿಗೆ ಅಣಿಯಾಗಿ

ಸೂಕ್ತವಾದ ಓದುವ ಆಯ್ಕೆ ಮತ್ತು ಕ್ರಮವನ್ನು ಒಮ್ಮೆ ಒಲಿಸಿಕೊಂಡರೆ ಮುಗಿಯಿತು, ಮನಸ್ಸು ಸದ್ದಿಲ್ಲದೇ ವಿಷಯಾಂತರಾಳಕ್ಕೆ ನುಸುಳುತ್ತದೆ
Last Updated 11 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಹೌದು, ಓದುವಿಕೆಗಿಂತಲೂ ಮಿಗಿಲಾದ ಮತ್ತೊಂದು ಹವ್ಯಾಸವು ಜಗತ್ತಿನಲ್ಲಿ ಯಾವುದೂ ಇರಲಾರದು. ಉತ್ತಮ ಪುಸ್ತಕಗಳ ಒಡನಾಟ ಆಪ್ತವಾದ ಗೆಳೆತನದಂತೆಯೇ. ಓದುವ ಹುಚ್ಚುಳ್ಳವನಿಗೆ ಒಂಟಿತನ ಎಂದಿಗೂ ಕಾಡಲಾರದು. ಮೇಷ್ಟ್ರ ಪ್ರಕಾರ ‘ಮನೆಯೊಳಗೆ ದೇವರ ಕೋಣೆಗಿಂತಲೂ ಮಿಗಿಲಾಗಿ ಇರಬೇಕಾದದ್ದು ಓದುವ ಕೋಣೆ’.

ಓದು ಎಲ್ಲ ವಯೋಮಾನದವರಿಗೂ ಬೇಕಿರುವ ಅತ್ಮನಿವೇದನೆಯ ಮಾರ್ಗ. ‘ಪುಸ್ತಕವಿಲ್ಲದ ಮನೆ ಆತ್ಮವಿಲ್ಲದ ಜೀವ’ವಿದ್ದಂತೆ. ಮನೆಯೊಳಗೆ ಅನುಪಯೋಗಿ ವಸ್ತುಗಳನ್ನು ತಂದು ಗುಡ್ಡೆಹಾಕಿ ಸಂಭ್ರಮಿಸುವ ಬದಲು, ಬದುಕು ಕಲಿಸುವ ಪುಸ್ತಕಗಳ ಸಂಗ್ರಹದಲ್ಲಿ ಮನೆಯನ್ನು ಸಿಂಗರಿಸುವುದು ಹೆಚ್ಚು ಅರ್ಥಪೂರ್ಣ. ಪುಸ್ತಕಕ್ಕಾಗಿ ಹಣ ವಿನಿಯೋಗಿಸುವುದು ಎಂದಿಗೂ ವ್ಯರ್ಥವಲ್ಲ.

ಇವತ್ತಿನ ಶಿಕ್ಷಣ ವ್ಯವಸ್ಥೆಯ ಕಲಿಕೆಯ ವ್ಯಾಪ್ತಿ ಕೇವಲ ಅಂಕ ಗಳಿಕೆ ಮತ್ತು ಉದ್ಯೋಗ ಬೇಟೆಗಷ್ಟೇ ಸೀಮಿತವಾಗಿ, ಸಂಕುಚಿತಗೊಂಡಾಗಿದೆ. ಕಲಿಕೆಯನ್ನು ‘ವಿದ್ಯಾರ್ಥಿ, ಶಿಕ್ಷಕ, ಪೋಷಕರ ಒಳಗೊಳ್ಳುವಿಕೆಯಿಂದ ಉಂಟಾಗುವ ಸಂಯುಕ್ತ, ಸಾವಯವ ಚಟುವಟಿಕೆ’ ಎಂಬುದನ್ನೇ ಮರೆತ ವ್ಯವಸ್ಥೆಯು ಸಮಗ್ರ ದೃಷ್ಟಿಕೋನವಿರದ, ಮಕ್ಕಳ ಆಸಕ್ತಿ, ಅಭಿರುಚಿಗಳನ್ನು ಕಡೆಗಣಿಸಿದ, ಒತ್ತಾಯಪೂರ್ವಕವೂ ಕೃತಕವೂ ಅರ್ಥರಹಿತವೂ ಆದ ಶಿಕ್ಷಣಕ್ರಮವನ್ನು ಜಾರಿಯಲ್ಲಿಟ್ಟಿದೆ. ಇಂತಹ ಹೊತ್ತಿನಲ್ಲಿ ವಿದ್ಯಾರ್ಥಿ- ಪೋಷಕರಿಗೆ ಅಂಕಗಳಿಗಿಂತ, ಅರಿವು ಮುಖ್ಯ, ಹಣ ಗಳಿಕೆಗಿಂತ ಮಾನವೀಯ ಮೌಲ್ಯಗಳಿಗೆ ಹೆಚ್ಚುತೂಕ ಎಂಬುದನ್ನು ಸಾಧಿಸಿ ತೋರಿಸುವ ಪಠ್ಯಕ್ರಮದ, ಓದುವಿಕೆಯ ಅಗತ್ಯವಿದೆ.

ವಿದ್ಯಾರ್ಥಿ ಸಮುದಾಯವು ಗಮನಿಸಬೇಕಾದ ಅಂಶವೆಂದರೆ, ತಾವು ಕಲಿಯುತ್ತಿರುವ ಪಠ್ಯ, ಪರಿಕಲ್ಪನೆಗಳೆಲ್ಲಾ ವಯೋಮಾನಕ್ಕೆ ತಕ್ಕಂತೆ ನಾಡಿನ ಶಿಕ್ಷಣ ತಜ್ಞರು, ಮನೋವಿಜ್ಞಾನಿಗಳು, ಅನುಭಾವಿಗಳು ಸುದೀರ್ಘವಾಗಿ ಅಧ್ಯಯನ-ಅನುಭವದಲ್ಲಿ, ಅಳೆದುತೂಗಿ ರೂಪುಗೊಳಿಸಿದ ಅಗತ್ಯವಾದ ಅರಿವಿನ ಆಕರಗಳಾಗಿವೆ ಎಂಬುದು.

ಪಠ್ಯವು ಒಳಗೊಂಡ ಪ್ರತೀ ಪದ-ವಾಕ್ಯವೂ ನಿರ್ಜೀವ ಅಕ್ಷರ ಸಮೂಹವಾಗಲೀ ಅಥವಾ ಬರೀ ಶಬ್ದ ಸರಪಣಿಯಾಗಲೀ ಅಲ್ಲ. ಅವೆಲ್ಲಕ್ಕೂ ಹಿನ್ನೆಲೆಯಿದೆ, ಅರ್ಥವಿದೆ, ಜೀವವಿದೆ, ಭಾವವಿದೆ. ಪ್ರತಿಯೊಂದು ಪರಿಕಲ್ಪನೆ-ಸಂಗತಿಗಳೂ ತಲೆಮಾರುಗಳಿಂದ ಅಸಂಖ್ಯ ಜನ-ಜೀವಿಗಳು ಕಂಡುಂಡ ಅನುಭವಸಾರಗಳೇ. ಅದೆಷ್ಟೋ ಕಾಲದಿಂದ ಮನುಕುಲವು ಗಳಿಸಿಕೊಂಡ ಜ್ಞಾನ-ವಿಜ್ಞಾನವನ್ನು ಸೂಕ್ಷ್ಮವಾಗಿ ಪೋಣಿಸಿ ಪಠ್ಯವನ್ನಾಗಿ ನೀಡಲಾಗಿರುತ್ತದೆ. ಪಠ್ಯ ಮತ್ತು ಇತರ ಪೂರಕವಾದ ಪುಸ್ತಕಗಳ ಓದಿನಲ್ಲಿ ಮಕ್ಕಳ ಒಳಮನಸ್ಸನ್ನು ಸ್ಪರ್ಶಿಸುವ, ದರ್ಶಿಸುವ, ಪೊರೆಯುವಂತಹ ವಿವೇಕವಿದೆ, ಸತ್ಯಕಥೆಗಳಿವೆ, ಜೀವತೆತ್ತು ಸಂಶೋಧಿಸಿದ, ಸೃಷ್ಟಿರಹಸ್ಯಗಳನ್ನು ಭೇದಿಸಿದ ಪ್ರಖರ ಹೊಳಹುಗಳಿವೆ. ಭೂತದ ತಲ್ಲಣಗಳು, ವಿಶ್ವಚರಿತ್ರೆಯ ಹೆಜ್ಜೆಗುರುತುಗಳು, ವರ್ತಮಾನದ ಪುರಾವೆಗಳು, ನಿಜದರ್ಶನದ ಸಾಬೀತುಗಳು, ಭವಿಷ್ಯತ್ತಿನ ನಿರೀಕ್ಷೆ-ಕನಸುಗಳಿಂದ ಮಾಹಿತಿಗಳಾಗಿ ಬೆಸೆದುಕೊಂಡಿವೆ. ಸುದೀರ್ಘ ಚಿಂತನೆ, ಒಳನೋಟ, ಸಂವೇದನೆಗಳಿಂದ ಮಿಳಿತಗೊಂಡ ಬರಹಗಳು ಎಂದಿಗೂ ಓದುಗದೊರೆಗಳ ಅರಿವಿನ ದಾರಿಯ ತೋರುಗಂಬಗಳಾಗಿ ಉಳಿದಿರುತ್ತವೆ.

ಸೂಕ್ತವಾದ ಓದುವ ಆಯ್ಕೆ ಮತ್ತು ಕ್ರಮವನ್ನು ಒಮ್ಮೆ ಒಲಿಸಿಕೊಂಡರೆ ಮುಗಿಯಿತು ಮತ್ತೆ ಅದೇ ನಮ್ಮನ್ನು ಓದಿಸಿಕೊಂಡು ಹೋಗುತ್ತದೆ. ಮನಸ್ಸು ಸದ್ದಿಲ್ಲದೇ ವಿಷಯಾಂತರಾಳಕ್ಕೆ ನುಸುಳಿ ಅದರಲ್ಲೇ ವಿಲೀನಗೊಳಿಸಿಕೊಳ್ಳುತ್ತದೆ. ಒಳ್ಳೆಯ ಓದುವಿಕೆಯಾದಲ್ಲಿ ಓದುತ್ತಿದ್ದಂತೆ ಅದು ಮನಸ್ಸನ್ನು ಅರಳಿಸಬೇಕು, ಕೆರಳಿಸಬಾರದು. ಓದುವವರು ಹಗುರಾಗಬೇಕು, ಬೆರಗಾಗಬೇಕು. ಓದಿದ ಸಂಗತಿಗಳೆಲ್ಲಾ ತನ್ನನ್ನು ಬಿಡದೇ ಕಾಡಬೇಕು.

ಆಧ್ಯಯನವೆಂಬುದು ಒಂದು ಧ್ಯಾನ, ಅದು ಅರಿವಿನ ಯಾನ. ಹಾಗೆಯೇ ನಮ್ಮ ಮನಸ್ಸು ಕೂಡ ಕಸುವು, ಕುತೂಹಲ, ಉತ್ಸಾಹ, ನಿರೀಕ್ಷೆಗಳ ಕಣಜ. ಹಾಗಾಗಿ ಕಲಿಕೆಯೆಂಬುದು ಖುಷಿಯ ಕೃಷಿ, ಆಸಕ್ತಿ- ಅರ್ಪಣೆಗಳೇ ಅಲ್ಲಿಯ ನೀರು– ಗೊಬ್ಬರ. ಕೇವಲ ಅಗತ್ಯಕ್ಕೋ ಅನಿವಾರ್ಯಕ್ಕೋ ಕೈಗೊಳ್ಳುವ ಅಧ್ಯಯನದಲ್ಲಿ ಅದ್ಭುತ ಅನುಭವವು ದಕ್ಕಲಾರದು. ಕಷ್ಟಪಟ್ಟು ಕಲಿಯುವುದಕ್ಕಿಂತ ಇಷ್ಟಪಟ್ಟು ಕಲಿಯುವುದು ಮುಖ್ಯ. ಅದು ನಮ್ಮ ತಿಳಿವಳಿಕೆ ಮತ್ತು ನಡವಳಿಕೆಯಲ್ಲಿ ಪರಿವರ್ತನೆ ತಂದು ಹೊಸ ಬದುಕನ್ನು ರೂಪಿಸುತ್ತದೆ.

ಕಲಿಕೆಯು ಎಂದಿಗೂ ಏಕಾಗ್ರತೆ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಬೇಡುವ ಪ್ರಕ್ರಿಯೆ. ಮಣ್ಣಿನ ಮೂರ್ತಿಯೊಂದನ್ನಿಟ್ಟುಕೊಂಡು ವಿದ್ಯೆ ಕಲಿತ ಏಕಲವ್ಯ ‘ಕಲಿವ ಮನಸಿರೆ ಕಲ್ಗೊಂಬೆ ಸಾಲದೇ...?’ ಅಂತ ಸಾರಿಹೋದ. ಹಾಗಾಗಿ ಗ್ರಂಥಾಲಯದೊಟ್ಟಿಗೆ ಬಾಂಧವ್ಯ ಹೊಂದುತ್ತಾ ಅದನ್ನೂ ವಿದ್ಯಾರ್ಥಿಗಳು ದುಡಿಸಿಕೊಳ್ಳಬೇಕು. ಹೇಗೆ ರೈತನು ಬೀಜದ ಮೂಟೆಗಳನ್ನಿಟ್ಟುಕೊಂಡು ಕಾಯುತ್ತಾ ಕೂತರೆ ಫಸಲು ತೆಗೆಯಲು ಸಾಧ್ಯವಾಗದೋ ಹಾಗೆ, ಪುಸ್ತಕರಾಶಿಯನ್ನು ಹರವಿಕೊಂಡು ತೂಕಡಿಸುತ್ತಾ ಕೂತ ವ್ಯಕ್ತಿಯೂ ಜ್ಞಾನಾರ್ಜನೆಯನ್ನು ಮಾಡಲಾರ. ಅದು ಕಾಲಹರಣವಷ್ಟೇ. ಓದುವ ಪುಸ್ತಕಗಳ ಜೊತೆಗೆ ಓದಬಾರದ ಪುಸ್ತಕಗಳ ಕುರಿತಾದ ಜಾಗೃತಿಯೂ ಅವಶ್ಯಕ.

ಮಾನಸಿಕ ಒತ್ತಡ ಮತ್ತು ನಿತ್ಯದ ಜಂಜಡಗಳಿಂದ ನಮ್ಮನ್ನು ನಾವು ಪಾರು ಮಾಡಿಕೊಳ್ಳಲು ಧ್ಯಾನದಂತಹ ಅಧ್ಯಯನ ಮಾರ್ಗವನ್ನು ಒಲಿಸಿಕೊಳ್ಳಬೇಕಾದ್ದು ಹಿಂದಿಗಿಂತಲೂ ಈಗ ಅಗತ್ಯ. ಇದ್ದುದರಲ್ಲಿಯೇ ಬಿಡುವು ಮಾಡಿಕೊಂಡು ಉತ್ತಮ ಪುಸ್ತಕಗಳ ಸಾಂಗತ್ಯ ಸಾಧಿಸುವುದು ಎಂದಿಗೂ ಆರೋಗ್ಯಕರ. ನಿರಂತರ ಓದುವಿಕೆಯು ನಿತ್ಯದ ಬದುಕಿಗೆ ನವಚೈತನ್ಯ ತುಂಬುತ್ತಾ ಹೊಸಬೆಳಕಿನೆಡೆಗೆ ಮುನ್ನಡೆಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT