ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಗಾವಣೆ: ಅಸಮರ್ಥನೀಯ ನಡೆ

ವೈಜ್ಞಾನಿಕ ಕ್ರಮಗಳಿಂದ, ಶಿಕ್ಷಕರ ವರ್ಗಾವಣೆಯಲ್ಲಿನ ಗೊಂದಲ ನಿವಾರಣೆ ಸಾಧ್ಯ
Last Updated 1 ಸೆಪ್ಟೆಂಬರ್ 2019, 18:36 IST
ಅಕ್ಷರ ಗಾತ್ರ

‘ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚುವುದಿಲ್ಲ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲವರ್ಧನೆ
ಗೊಳಿಸುತ್ತೇವೆ’ ಎಂದು ರಾಜ್ಯ ಸರ್ಕಾರ ಹೇಳುತ್ತಲೇ ಬಂದಿದೆ. ಆದರೆ, ಶಿಕ್ಷಣ ಇಲಾಖೆಯ ಕಾರ್ಯವೈಖರಿ ಮಾತ್ರ ಈ ಶಾಲೆಗಳನ್ನು ಮುಚ್ಚಲು ಅನುವಾಗುವ ಮತ್ತು ಪಾಲಕರಿಗೆ ಅವುಗಳ ಮೇಲಿನ ನಂಬಿಕೆ ಮತ್ತಷ್ಟು ಹುಸಿಯಾಗುವ ರೀತಿಯಲ್ಲಿಯೇ ನಡೆಯುತ್ತಿದೆ.

ಉತ್ತರಪ್ರದೇಶದ ಅಲಹಾಬಾದ್ ಹೈಕೋರ್ಟ್‌ ಈ ಹಿಂದೆ, ಸರ್ಕಾರಿ ಶಾಲೆಗಳ ಸ್ಥಿತಿಗತಿಗೆ ಕಾರಣ ನೀಡಿದ ಮಹತ್ವದ ತೀರ್ಪಿನಲ್ಲಿ ಪ್ರಸ್ತಾಪಿಸಿದ ಕೆಲವು ಅಂಶಗಳನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತ. ತೀರ್ಪಿನ ಅನ್ವಯ, ಸರ್ಕಾರಿ ಶಾಲೆಗಳು ಏಕೆ ಸುಧಾರಿಸುತ್ತಿಲ್ಲವೆಂದು ಅರ್ಥ ಮಾಡಿಕೊಳ್ಳುವುದು ಕಷ್ಟವೇನಲ್ಲ.

ಶಿಕ್ಷಣ ಇಲಾಖೆಯ ಆಡಳಿತ ಮತ್ತು ನೌಕರ ವರ್ಗದವರು ತಮ್ಮ ಮಕ್ಕಳನ್ನು ಉತ್ತಮ ಸೌಲಭ್ಯವಿರುವ ಶಾಲೆ
ಗಳಿಗೆ ಕಳಿಸುತ್ತಾರೆ. ಅದು ಜಿಲ್ಲಾಧಿಕಾರಿಯಾಗಿರಲಿ, ಪೊಲೀಸ್ ಮುಖ್ಯಸ್ಥರಿರಲಿ ಅಥವಾ ಸರ್ಕಾರಿ ನೌಕರ
ರಾಗಲಿ ತಮ್ಮ ಮಕ್ಕಳು ಉತ್ತಮ ಶಾಲೆಗಳಲ್ಲಿ ಶಿಕ್ಷಣ ಪಡೆಯುವುದನ್ನು ಖಾತರಿಪಡಿಸಿಕೊಳ್ಳುತ್ತಾರೆ. ಆದ್ದರಿಂದ, ಜನಸಾಮಾನ್ಯರ ಮಕ್ಕಳು ಕಲಿಯುವ ಸರ್ಕಾರಿ ಅಥವಾ ಸಾರ್ವಜನಿಕ ಶಾಲೆಗಳ ಕಾರ್ಯ ನಿರ್ವಹಣೆ ಬಗ್ಗೆ ಅವರು ನಿಜವಾದ ಕಾಳಜಿ ಹೊಂದಿರುವುದಿಲ್ಲ.

ಇದು ನಮ್ಮ ರಾಜ್ಯಕ್ಕೂ ಅಕ್ಷರಶಃ ಅನ್ವಯಿಸುತ್ತದೆ. ಹಿರಿಯ ಅಧಿಕಾರಿಗಳ ಮಕ್ಕಳಿಂದ ಹಿಡಿದು ಎಲ್ಲಾ ಸರ್ಕಾರಿ ನೌಕರರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದರೆ, ಬಹುಶಃ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ವರ್ಗಾವಣೆ ಪ್ರಕ್ರಿಯೆಯನ್ನು ನಡೆಸುವ ಅವಿವೇಕದ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳುತ್ತಿರಲಿಲ್ಲ. ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಬಹುತೇಕ ಮಕ್ಕಳು ಧ್ವನಿಯಿಲ್ಲದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಬಡ ಕುಟುಂಬಗಳಿಗೆ ಸೇರಿದವರು. ಹೀಗಾಗಿ, ಸರ್ಕಾರ ಮತ್ತು ಅಧಿಕಾರಿಗಳು ಈ ಮಕ್ಕಳನ್ನು ಬಾವಿಗೆ ದೂಡಿ ಆಳ ನೋಡುವ ಕೆಲಸವನ್ನು ನಿರಂತರವಾಗಿ ಮುಂದುವರಿಸಿಕೊಂಡು ಬಂದಿದ್ದಾರೆ.

ಶಿಕ್ಷಣ ಹಕ್ಕು ಕಾಯ್ದೆ ಅನ್ವಯ, ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳು ಕ್ರಮವಾಗಿ ಕನಿಷ್ಠ 200 ಮತ್ತು 220 ದಿನಗಳು ಕಾರ್ಯ ನಿರ್ವಹಿಸಲೇ ಬೇಕು. ಆ ಮೂಲಕ ಕನಿಷ್ಠ 800 ಮತ್ತು 1,000 ಕಲಿಕಾ ಅವಧಿಯನ್ನು ಪೂರ್ಣಗೊಳಿಸಬೇಕು. ಮೂರು ತಿಂಗಳ ಹಿಂದೆ ಶಾಲೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ಅಧಿಕಾರಿಗಳು ಹಾಗೂ ಶಿಕ್ಷಕರು ಕೇವಲ ವರ್ಗಾವಣೆ ವಿಷಯದಲ್ಲಿ ಮುಳುಗಿದ್ದಾರೆಯೇ ಹೊರತು ಮಕ್ಕಳ ಕಲಿಕೆ ಬಗ್ಗೆ ಯೋಚಿಸಲು ಅವರಿಗೆ ಬಿಡುವಿಲ್ಲ. ಹೀಗಾದರೆ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೇಗೆ ತಾನೇ ಸುಧಾರಿಸುತ್ತದೆ!

ಜೊತೆಗೆ, ಈ ಪ್ರಕ್ರಿಯೆಯಲ್ಲಿ ಅನುಸರಿಸುತ್ತಿರುವ ಮಾನದಂಡಗಳು ಅವೈಜ್ಞಾನಿಕ ಮಾತ್ರವಲ್ಲ ಹಾಸ್ಯಾಸ್ಪದ ಕೂಡ. ಈ ಹಿಂದೆ ವರ್ಗಾವಣೆಗೆ ಸಂಬಂಧಿಸಿದಂತೆ ಇಲಾಖೆ ಜಾರಿಗೊಳಿಸಿದ ಕಾನೂನಿನಲ್ಲಿ ಕೋರಿಕೆ ಮತ್ತು ಪರಸ್ಪರ ಒಪ್ಪಿಗೆ ವರ್ಗಾವಣೆಗೆ ಅವಕಾಶವಿತ್ತು. ನಂತರ, ಕಾಯ್ದೆಗೆ ತಿದ್ದುಪಡಿ ತಂದು ಕಡ್ಡಾಯ ವರ್ಗಾವಣೆ ಎಂಬ ಅಂಶವನ್ನು ಸೇರಿಸಲಾಯಿತು. ಅದರ ಅನ್ವಯ, ಎ ವಲಯದಲ್ಲಿ 10 ವರ್ಷ ಸೇವೆ ಸಲ್ಲಿಸಿರುವ ಶಿಕ್ಷಕರು ಸಿ ವಲಯಕ್ಕೆ ಕಡ್ಡಾಯವಾಗಿ ವರ್ಗಾವಣೆಗೊಳ್ಳಬೇಕಾಗುತ್ತದೆ. ಆಶ್ಚರ್ಯವೇನೆಂದರೆ ಎ, ಬಿ ಮತ್ತು ಸಿ ವಲಯಗಳೆಂಬ ವರ್ಗೀಕರಣವೇ ಸೇವಾ ವಲಯವಾದ ಶಿಕ್ಷಣದಲ್ಲಿ ಅವೈಜ್ಞಾನಿಕ. ಅದರ ಜೊತೆಗೆ ನಾವು ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿಯನ್ನು ಹನುಮಂತನ ಬಾಲದ ರೀತಿಯಲ್ಲಿ ವಿಸ್ತರಿಸುವುದರಲ್ಲಿ ಯಾವುದೇ ಅರ್ಥವಿಲ್ಲ.

ವೈಜ್ಞಾನಿಕವಾಗಿ, ಶಿಕ್ಷಕರನ್ನು ನೇಮಕಾತಿಯ ಸಂದರ್ಭದಲ್ಲಿಯೇ ಒಂದು ನಿರ್ದಿಷ್ಟ ಶೈಕ್ಷಣಿಕ ವಲಯದ ಘಟಕಕ್ಕೆ ನೇಮಿಸಿದರೆ, ಅವರ ವರ್ಗಾವಣೆ ಆ ವಲಯಕ್ಕೇ ಸೀಮಿತವಾಗುತ್ತದೆ ಮತ್ತು ಶಿಕ್ಷಕರು ಶೈಕ್ಷಣಿಕ ವಲಯದೊಳಗೆ ವರ್ಗಾವಣೆಗೊಂಡರೂ ಆತಂಕಗೊಳ್ಳುವ ಅಥವಾ ಶಿಫಾರಸಿಗೆ ದುಂಬಾಲು ಬೀಳುವ ಪ್ರಶ್ನೆ ಉದ್ಭವಿಸುವುದಿಲ್ಲ. ಜೊತೆಗೆ ಅವರು ಆ ವಲಯದಲ್ಲಿ ಕಾಯಂ ಆಗಿ ನೆಲೆಸಲು ಮಾನಸಿಕ ಸಿದ್ಧತೆ ಮಾಡಿಕೊಳ್ಳುತ್ತಾರೆ. ಜೊತೆಗೆ, ಶಾಲೆ ಯಾವ ವಲಯದಲ್ಲಿದ್ದರೂ ಅದಕ್ಕೆ ಅಗತ್ಯವಾಗಿ ಬೇಕಾದ ಶಿಕ್ಷಕರನ್ನು ಒದಗಿಸುವುದು ಸರ್ಕಾರದ ಮುಖ್ಯ ಕರ್ತವ್ಯ. ಇದು ಯಶಸ್ವಿಯಾಗಬೇಕಾದರೆ, ಒಂದು ಶೈಕ್ಷಣಿಕ ವಲಯದಲ್ಲಿ ತರಬೇತಿ ಹೊಂದಿರುವ ಶಿಕ್ಷಕರು ಆಯಾ ವಲಯದಲ್ಲಿಯೇ ನೇಮಕವಾಗುವಂತಾಗಬೇಕು.

ಒಂದು ವೇಳೆ ನಿರೀಕ್ಷಿತ ಸಂಖ್ಯೆಯಲ್ಲಿ ತರಬೇತಿ ಹೊಂದಿದ ಶಿಕ್ಷಕರು ಸಿಕ್ಕದಿದ್ದರೆ, ಜಿಲ್ಲೆಯನ್ನು ಲಭ್ಯತೆಯ ಘಟಕವನ್ನಾಗಿ ಪರಿಗಣಿಸಿ, ತರಬೇತಿ ಹೊಂದಿರುವ ಶಿಕ್ಷಕರು ಅದೇ ಜಿಲ್ಲೆಯ ಬೇರೊಂದು ಶೈಕ್ಷಣಿಕ ವಲಯದಲ್ಲಿ ಕಾಯಂ ಆಗಿ ಕಾರ್ಯ ನಿರ್ವಹಿಸುವ ಷರತ್ತಿನೊಂದಿಗೆ ನೇಮಕವಾಗಬಹುದು. ಆಗ, ವರ್ಗಾವಣೆಯು ಶಿಕ್ಷಕರಿಗೆ ಯಾವುದೇ ರೀತಿಯ ಆತಂಕ ಸೃಷ್ಟಿಸುವುದಿಲ್ಲ. ಜೊತೆಗೆ ವರ್ಗಾವಣೆ ದಂಧೆಗೆ ಪೂರ್ಣ ವಿರಾಮ ಹಾಕಬಹುದಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ, ಮಕ್ಕಳ ಕಲಿಕೆಗೆ ಮತ್ತು ಶಾಲೆಯ ಕಾರ್ಯ ನಿರ್ವಹಣೆಗೆ ಯಾವುದೇ ತೊಂದರೆಯಾಗದು.

ಈ ಎಲ್ಲ ಕಾರಣಗಳಿಂದ, ಹಾಲಿ ನಡೆಯುತ್ತಿರುವ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ರದ್ದುಗೊಳಿಸುವುದು ಸಮಂಜಸ ನಿರ್ಧಾರವಾಗುತ್ತದೆ. ಈಗಿರುವ ಗೊಂದಲಗಳನ್ನು ಸರಿಪಡಿಸಿ, ಅಗತ್ಯವಿದ್ದಲ್ಲಿ ಶಿಕ್ಷಕರ ಸಂಘವನ್ನೂ ಒಳಗೊಂಡಂತೆ ತಜ್ಞರ ಸಮಿತಿಯನ್ನು ರಚಿಸಿ ವರ್ಗಾವಣೆ ಕಾಯ್ದೆ ಮತ್ತು ಪ್ರಕ್ರಿಯೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ, ಮುಂದಿನ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿಯೇ ವರ್ಗಾವಣೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT