ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಅತಿಯಾದ ನಿರೀಕ್ಷೆಯೇ ತೊಡಕಾದೀತು

ಪೋಷಕರ ಅಸಹಜ ನಿರೀಕ್ಷೆಗಳು ಮಕ್ಕಳಲ್ಲಿ ನಾನಾ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ
Last Updated 24 ಆಗಸ್ಟ್ 2022, 19:45 IST
ಅಕ್ಷರ ಗಾತ್ರ

ಮಕ್ಕಳ ಪಾಲನೆ, ಪೋಷಣೆ ಕುರಿತಾಗಿ ಪೋಷಕರಿಗೆ ಮಾಹಿತಿ ನೀಡುವ ವಿಡಿಯೊವೊಂದನ್ನು ಯುಟ್ಯೂಬ್ ಚಾನೆಲ್‌ನಲ್ಲಿ ನೋಡಿದ ಪೋಷಕರೊಬ್ಬರು, ತಮ್ಮ ಮಗ ಸರಿಯಾಗಿ ಓದುತ್ತಿಲ್ಲ ಎಂದು ಅಳಲು ತೋಡಿಕೊಂಡರು. ‘ಸ್ವಲ್ಪ ಹೊತ್ತು ಓದಿದ ನಂತರ ಆಟ ಆಡುವ ಕಡೆಯೇ ಅವನ ಗಮನ, ಹಿಂದೆ ತೆಗೆದಷ್ಟು ಅಂಕಗಳು ಈಗ ಬರುತ್ತಿಲ್ಲ’ ಎಂದೂ ಹೇಳಿದರು.

ಈ ಕುರಿತು ಒಂದಷ್ಟು ಮಾತುಕತೆಯಾದ ಮೇಲೆ ತಿಳಿದುಬಂದ ವಿಷಯವಿಷ್ಟು. ಮಗನ ವಿದ್ಯಾಭ್ಯಾಸದ ಸಲುವಾಗಿಯೇ ಹಳ್ಳಿಯಿಂದ ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಗೊಂಡು, ಖಾಸಗಿ ಶಾಲೆಯೊಂದಕ್ಕೆ ಮಗನನ್ನು ದಾಖಲಿಸಿ, ದುಬಾರಿ ಶುಲ್ಕವನ್ನು ನೀಡುತ್ತಿದ್ದಾರೆ. ಮಗನ ವಿದ್ಯಾಭ್ಯಾಸವೇ ಏಕೈಕ ಉದ್ದೇಶವಾಗಿರುವ ಕಾರಣ ಸಹಜವಾಗಿ ಮಗನ ಬಗ್ಗೆ ನಿರೀಕ್ಷೆಯೂ ಹೆಚ್ಚಿದೆ.

ಮಗ ಯಾವಾಗಲೂ ಓದಲಿ, ಹೆಚ್ಚು ಅಂಕ ಪಡೆದು ತರಗತಿಗೆ ಮೊದಲನೆಯವನಾಗಲಿ ಎಂಬ ಆಸೆ ಪೋಷಕರದು. ಕೋವಿಡ್ ಉಲ್ಬಣಿಸಿದ ಕಾಲದಲ್ಲಿ ತರಗತಿಗಳಿಗೆ ಹಾಜರಾಗದೆ ಇದ್ದ ಪರಿಣಾಮವೋ ಏನೋ ಪರೀಕ್ಷೆಗಳಲ್ಲಿ ಪಡೆದ ಅಂಕಗಳು ಅವನಿಗೆ ಕಡಿಮೆಯಾಗಿವೆ. ಇದರಿಂದ ಹತಾಶೆಗೊಂಡ ಪೋಷಕರು ‘ನೀನು ಉಪಯೋಗಕ್ಕೆ ಬಾರದವನು’, ‘ಹೀಗಾದರೆ ನಿನ್ನ ಮುಂದಿನ ಜೀವನ ಕಷ್ಟ’, ‘ನಿನಗಾಗಿ ನಾವು ಎಷ್ಟು ಕಷ್ಟಪಡುತ್ತಿದ್ದೇವೆ ಗೊತ್ತಾ’ ಎಂಬಂಥ ಮಾತುಗಳನ್ನು ಆಡುತ್ತಾ ಅವನನ್ನು ಒಮ್ಮೆ ಮೂದಲಿಸುತ್ತಾ, ಇನ್ನೊಮ್ಮೆ ಚೆನ್ನಾಗಿ ಓದಬೇಕು ಎಂದು ಪುಸಲಾಯಿಸುತ್ತಾ ಇದ್ದರು. ಮಗನನ್ನು ಹೇಗಾದರೂ ಮಾಡಿ ಚೆನ್ನಾಗಿ ಓದಿಸಬೇಕು ಎಂಬ ಹಟಕ್ಕೆ ಬಿದ್ದು ಮಾಹಿತಿಗಾಗಿ ತಡಕಾಡುತ್ತಿ
ದ್ದಾಗ ಆ ವಿಡಿಯೊವನ್ನು ಗಮನಿಸಿ, ಪರಿಹಾರಕ್ಕಾಗಿ ಸಮಾಲೋಚನೆಗೆ ಕರೆ ಮಾಡಿದರು.

ಮಾತಿನ ನಂತರ ಪೋಷಕರಿಗೆ ನೀಡಿದ ಒಂದಷ್ಟು ಸಲಹೆಗಳು ಹೀಗಿವೆ: ‘ಅತಿ ನಿರೀಕ್ಷೆಯ ಕಾರಣದಿಂದ ನಿಮ್ಮ ಮಗನಿಗೆ ಮನೆಯಲ್ಲಿ ಉಸಿರುಗಟ್ಟಿಸುವ ವಾತಾವರಣವನ್ನು ಸೃಷ್ಟಿ ಮಾಡಿದ್ದೀರಿ. ಇದರಿಂದ ಅವನಿಗೆ ಓದಿನಲ್ಲಿ ಆಸಕ್ತಿ ಕುಂದಿದೆ. ಪದೇ ಪದೇ ಮೂದಲಿಕೆ, ಹಂಗಿಸುವಿಕೆಯ ಮಾತುಗಳಿಂದ ಅವನಲ್ಲಿ ಕೀಳರಿಮೆಯ ಭಾವನೆ ಮೂಡಿದ್ದು, ಅವನ ಆತ್ಮವಿಶ್ವಾಸ ಪಾತಾಳ ಸೇರಿದೆ. ಅವನ ಕುರಿತಾಗಿ ಪದೇ ಪದೇ ನೀವಾಡುತ್ತಿರುವ ನಕಾರಾತ್ಮಕ ಹೇಳಿಕೆಗಳನ್ನು ತಕ್ಷಣ ನಿಲ್ಲಿಸಿ. ಅವನಲ್ಲಿನ ಒಳ್ಳೆಯ ಗುಣ, ಸ್ವಭಾವ
ಗಳನ್ನು ಗುರುತಿಸಿ, ಸಾಂದರ್ಭಿಕವಾಗಿ ಪ್ರಶಂಸೆ ಮಾಡಿ. ಅವನ ಓದು, ಬರಹಗಳಲ್ಲಿ ಒಳ್ಳೆಯ ಅಂಶಗಳನ್ನು ಗಮನಿಸಿ. ‘ನಿನ್ನ ಬರವಣಿಗೆ ಮುದ್ದಾಗಿದೆ’ (ಅವನ ಬರವಣಿಗೆ ಚೆನ್ನಾಗಿರುವುದನ್ನು ಅವರು ಈ ಮೊದಲು ಗುರುತಿಸಿದ್ದರು), ‘ನೀನು ಜಾಣ’, ‘ನಿನಗೆ ಉತ್ತಮ ಭವಿಷ್ಯವಿದೆ’ ಎಂಬಂಥ
ಮಾತುಗಳನ್ನು ಹೇಳಿ’.

ಮೂರು ವಾರ ಕಳೆದ ಮೇಲೆ ಅವರು ದೂರವಾಣಿ ಕರೆ ಮಾಡಿ, ತಮ್ಮ ಮಗ ಈಗ ಪರವಾಗಿಲ್ಲ ಎಂದು ತಿಳಿಸಿದರಲ್ಲದೆ, ಸ್ವಲ್ಪ ಮಟ್ಟಿಗೆ ಸಮಾಧಾನವನ್ನೂ
ವ್ಯಕ್ತಪಡಿಸಿದರು. ಆದರೆ ಮಗನ ವ್ಯಥೆ ಬೇರೆಯದೇ ಆಗಿತ್ತು. ‘ನನಗೆ ಆಟವಾಡಲು ಅವಕಾಶ ನೀಡುತ್ತಿಲ್ಲ. ಎಲ್ಲಾ ಸ್ನೇಹಿತರು ಆಟವಾಡುವಾಗ ನನಗೂ ಆಡಬೇಕೆನಿಸುತ್ತದೆ. ನನಗೆ ಆ ಸಮಯದಲ್ಲಿ ಓದಿನತ್ತ ಗಮನ ಕೊಡಲು ಆಗುತ್ತಿಲ್ಲ. ನಾನು ಏನು ಮಾಡ ಬೇಕು’ ಎಂಬುದು ಅವನ ಮುಗ್ಧ ಪ್ರಶ್ನೆಯಾಗಿತ್ತು.

ಮಕ್ಕಳು ಆಟವಾಡುವ ಸಮಯದಲ್ಲೂ ಓದಬೇಕೆಂದು ಅನೇಕ ಪೋಷಕರು ಅಪೇಕ್ಷಿಸುತ್ತಾರೆ. ಆಟವಾಡಲು ಅವಕಾಶ ನೀಡಿ, ಇಂತಿಷ್ಟು ಸಮಯಕ್ಕೆ ಆಟ ಮುಗಿಸಿ ಹಿಂತಿರುಗಬೇಕು ಎಂದು ತಿಳಿಹೇಳಿದರೆ, ಅವರು ಆಟವಾಡಿ ಬಂದ ನಂತರ ಓದಿನಲ್ಲಿ ತೊಡಗಿ
ಕೊಳ್ಳುತ್ತಾರೆ. ಇದು ತಕ್ಷಣಕ್ಕೆ ಆಗದಿದ್ದರೂ ಪದೇ ಪದೇ ತಿಳಿಹೇಳಿದರೆ ಮಕ್ಕಳು ಖಂಡಿತವಾಗಿಯೂ ಕೇಳುತ್ತಾರೆ.

ಸಂಶೋಧನೆಗಳ ಪ್ರಕಾರ, ಮಕ್ಕಳ ಕುರಿತಾದ ಪೋಷಕರ ನಿರೀಕ್ಷೆ, ಆಕಾಂಕ್ಷೆಗಳು ಮಕ್ಕಳ ಶೈಕ್ಷಣಿಕ ಸಾಧನೆಗೆ ಅನುಕೂಲ ಕಲ್ಪಿಸುತ್ತವಾದರೂ ಅವರ ಕುರಿತಾದ ಪೋಷಕರ ಅತಿ ಮತ್ತು ಅಸಹಜ ಆಕಾಂಕ್ಷೆ, ನಿರೀಕ್ಷೆಗಳು ಶೈಕ್ಷಣಿಕ ಸಾಧನೆ ಕುಂಠಿತವಾಗಲು
ಕಾರಣವಾಗುತ್ತವೆ.

ಶೈಕ್ಷಣಿಕ ಸಾಧನೆ ಕುರಿತ ತಮ್ಮ ನಿರೀಕ್ಷೆಗಳು ತಲೆಕೆಳಗೆ ಆಗುವಂತಹ ಸಾಧನೆಯನ್ನು ಮಕ್ಕಳು ತೋರಿದಲ್ಲಿ ಪೋಷಕರು ಹತಾಶೆಗೊಂಡು ಅವರಿಗೆ ಬಯ್ಯುವುದು, ಹೀಯಾಳಿಸುವುದು, ದೈಹಿಕವಾಗಿ ಹಲ್ಲೆ ಮಾಡುವುದನ್ನು ಮಾಡುತ್ತಾರೆ. ಇದರಿಂದ ಮಕ್ಕಳ ಶೈಕ್ಷಣಿಕ ಸಾಧನೆಯ ಮಟ್ಟ ಇನ್ನಷ್ಟು ಕುಸಿಯುತ್ತದೆ.

ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಸದೆ, ಅವರು ಉತ್ತಮ ವರ್ತನೆ ತೋರಿದಾಗ ಅಥವಾ ಸಣ್ಣಮಟ್ಟದ ಶೈಕ್ಷಣಿಕ ಸಾಧನೆ ಮಾಡಿದರೂ ಮೆಚ್ಚುಗೆ ವ್ಯಕ್ತಪಡಿಸಿ ಪ್ರೇರಣೆ ನೀಡುತ್ತಾ ಇದ್ದಲ್ಲಿ, ಅವರ ಸಾಧನೆ ನಿಧಾನವಾಗಿ ಉತ್ತಮಗೊಳ್ಳುತ್ತಾ
ಹೋಗುತ್ತದೆ.

ಮಕ್ಕಳನ್ನು ಅರ್ಥಮಾಡಿಕೊಂಡು, ಅವರ ಬೆಳವಣಿಗೆಗೆ ಅನುಕೂಲ ಕಲ್ಪಿಸುವ ಕಾರ್ಯವನ್ನು ಪೋಷಕರು ಮಾಡಬೇಕು. ಪರೀಕ್ಷೆಗಳ ಅಂಕಗಳನ್ನು ಮಾತ್ರ ಆಧರಿಸಿ ಮಕ್ಕಳ ಸಾಧನೆ ಅಳೆಯುವುದು ಮತ್ತು ಅವರನ್ನು ದಡ್ಡ, ಉಪಯೋಗಕ್ಕೆ ಬಾರದವ ಎಂದು ಹಣೆಪಟ್ಟಿ ಹಚ್ಚುವುದು ಅಪಾಯಕಾರಿ. ಪೋಷಕರ ಅಸಹಜ ನಿರೀಕ್ಷೆಗಳು ಮಕ್ಕಳನ್ನು ತೀವ್ರ ಖಿನ್ನತೆಗೆ ದೂಡಿ, ಅವರಲ್ಲಿ ನಾನಾ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT