ಭಾನುವಾರ, ಜನವರಿ 17, 2021
23 °C
ಬಂದ್ ಎಂಬುದು ಮಾನವ ಹಕ್ಕುಗಳ ಮೇಲಿನ ಅತಿಕ್ರಮಣವೇ ಸರಿ

ಸಂಗತ: ಪ್ರತಿರೋಧದ ಕಣ್ಣು ದಿನಚರಿ ಮೇಲೇಕೆ?

ಯೋಗಾನಂದ Updated:

ಅಕ್ಷರ ಗಾತ್ರ : | |

Prajavani

ನಮ್ಮ ಇಡೀ ದಿನಚರಿಯನ್ನು ಅಪಹರಿಸುವ ಬಂದ್ ಎಷ್ಟರಮಟ್ಟಿಗೆ ಸರಿ? ಅಹವಾಲು, ಬೇಡಿಕೆ ಏನೇ ಇರಲಿ ಸಾಂಕೇತಿಕವಾಗಿ ಅವನ್ನು ಪ್ರಭುತ್ವದ ಮುಂದಿಡುವ ಮಾರ್ಗಗಳಿವೆ.

ನಿಸರ್ಗವೆಂಬ ಅಪ್ರತಿಮವೂ ಅಚ್ಚುಕಟ್ಟೂ ಆದ ವ್ಯವಸ್ಥೆಯಿಂದ ಕಲಿಯುವುದು ಅಗಾಧವಿದೆ. ಪ್ರಕೃತಿ ಕ್ರಮಬದ್ಧ, ಅದರ ಶಿಸ್ತೇ ಶಿಸ್ತು. ನದಿ ತುಸು ಮಂದಗತಿಯಲ್ಲಿ ಹರಿದರೆ ನದೀಮುಖಜ ಭೂಮಿಯಲ್ಲಿನ ನೀರು ಬೇಸಾಯಕ್ಕೆ ಹಾಗೂ ಸೇವನೆಗೆ ಯೋಗ್ಯವಿರದಷ್ಟು ಲವಣಯುಕ್ತವಾಗುವುದು. ಭೂಮಿ ಒಂದು ಗಳಿಗೆ ಗಿರಕಿ ಸ್ಥಗಿತಗೊಳಿಸಿದರಾಯಿತು... ಬಂಡೆಗಳು, ಯಂತ್ರೋಪಕರಣಗಳು, ಮರಗಳು, ಮೇಲ್ಮಣ್ಣು, ಕಟ್ಟಡಗಳಿರಲಿ, ನಮ್ಮ ಸಾಕುಪ್ರಾಣಿಗಳ ಸಮೇತ ನಾವು ಸೆಕೆಂಡಿಗೆ 1,770 ಕಿ.ಮೀ. ವೇಗದಲ್ಲಿ ವಾಯುಮಂಡಲಕ್ಕೆ ಒಗೆಯಲ್ಪಡುತ್ತೇವೆ!

ಸೂರ್ಯ ಒಂದು ದಿನ ಉದಯಿಸದಿದ್ದರೆ ಭೂಮಿಯ ಮೇಲ್ಮೈನ ಮೂರನೇ ಎರಡು ಭಾಗ ಹಿಮಾವೃತವಾಗುವುದು. ಮಳೆ, ಮಾರುತ, ಋತುಮಾನ, ಜೀವಸಂಕುಲ ಒಳಪಟ್ಟಿರುವ ಅಂಕೆಗೆ ಸಾಟಿಯಿಲ್ಲ. ಬಂದ್ ‘ನಿಮ್ಮ ಕರ್ತವ್ಯದಲ್ಲಿ ಭಾಗಿಯಾಗಬೇಡಿ’, ‘ನೀವು ಪ್ರಯಾಣಿಸಬಾರದು’, ‘ನಳಪಾಕಕ್ಕೆ ತುಪ್ಪ, ಹಿಟ್ಟು ಖರೀದಿ ಮುಂದೂಡಿ’, ‘ನಿಮ್ಮ ವ್ಯಾಪಾರ, ವಹಿವಾಟು ನಿಲ್ಲಿಸಿ’ ಮುಂತಾಗಿ ಒತ್ತಾಸೆಗಳ ರೂಪಕವೇ ಆಗಿರುತ್ತದೆ. ಹಾಗಾಗಿ, ಬಂದ್ ಎಂಬುದು ಮಾನವ ಹಕ್ಕುಗಳ ಮೇಲಿನ ಅತಿಕ್ರಮಣ. ಬಂದ್ ಕರೆಗೆ ಓಗೊಡದಿದ್ದರೆ ತಮ್ಮ ಜೀವಕ್ಕೆ, ಆಸ್ತಿಪಾಸ್ತಿಗೆ ಇನ್ನೇನು ಸಂಚಕಾರವೋ ಎಂಬ ಆತಂಕವನ್ನೂ ಸೃಷ್ಟಿಸುತ್ತದೆ ಇದು.

ಪರರಲ್ಲಿ ಭಯ– ಭೀತಿ ಸೃಷ್ಟಿಸಿ ಅವರ ನೆಮ್ಮದಿಗೆ ಭಂಗ ತರುವುದೂ ಮಾನವ ಹಕ್ಕಿನ ಉಲ್ಲಂಘನೆಯೇ ಹೌದು. ಮೆರವಣಿಗೆ, ಪ್ರತಿಭಟನೆ, ಮುಷ್ಕರ, ಚಳವಳಿಗಳು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿ ಸಾಗಿದ್ದು ಸರಿ. ಅಂದು ಇದ್ದಿದ್ದು ಬ್ರಿಟಿಷರ ವಸಾಹತುಶಾಹಿ ಆಳ್ವಿಕೆ. ಅದರ ವಿರುದ್ಧ ಗಾಂಧೀಜಿ ಹೋರಾಟ ಅಹಿಂಸಾತ್ಮಕವಾಗಿತ್ತು ಎನ್ನುವುದು ಮುಖ್ಯವಾಗುತ್ತದೆ.

ನಾವೀಗ ಸ್ವತಂತ್ರ ಭಾರತದಲ್ಲಿದ್ದೇವೆ. ನಾವೇ ಆಯ್ಕೆ ಮಾಡಿದ ಸರ್ಕಾರಗಳಿವೆ. ಸ್ವಾತಂತ್ರ್ಯ ಹೋರಾಟದ ವಿಧಾನಗಳನ್ನೇ ಇಂದೂ ಬೆನ್ನುಹತ್ತುವುದೇ? ಸಂವಿಧಾನಾತ್ಮಕ ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗಳು ಯಾವ ತೆರನಾಗಿರಬೇಕು ಎನ್ನುವುದರ ಕುರಿತು ವ್ಯಾಪಕ ಚರ್ಚೆಗಳಾಗಿಲ್ಲ. ಪ್ರಜಾಸತ್ತೆಎಂದೊಡನೆ ಹಕ್ಕುಗಳೇ ಕಣ್ಮುಂದೆ ಬಂದು ಹೊಣೆಗಾರಿಕೆಗಳು ಗೌಣವಾಗಿಬಿಡುತ್ತವೆ! ಬಾಳು, ಬಾಳಗೊಡು ತತ್ವ ಸವಕಲಾಗುತ್ತದೆ. ತನ್ನಂತೆ ಪರರು ಎನ್ನುವ ಭಾವದಿಂದ ಮಾತ್ರವೇ ಪ್ರಜಾರಾಜ್ಯದ ಬೆಳಗು.

ಗಾಂಧಿಯವರ ಸತ್ಯಾಗ್ರಹದ ಪರಿಕಲ್ಪನೆಯು ರೋಷಾವಿಷ್ಟ ಪ್ರತಿರೋಧವಲ್ಲ. ಅದು ಒಣಹಿರಿಮೆ, ಅಸೂಯೆಯಿಂದ ಮುಕ್ತ. ಎದುರಾಳಿಯಲ್ಲಿ ದ್ವೇಷದ ಬದಲಿಗೆ ಪ್ರೀತಿ, ವಿಶ್ವಾಸದ ಮೂಲಕವೇ ವಾಸ್ತವವನ್ನು ಮಂಡಿಸಿ ಮನದಟ್ಟಾಗಿಸುವ ಕೌಶಲ. ಸತ್ಯ ಮತ್ತು ಅಹಿಂಸೆ ಒಂದನ್ನೊಂದು ಬೆಸೆದಿರುವ ಪ್ರಾಂಜಲ ಮನಸ್ಸಿನ ಎದೆಗುದಿ ಅದು. ಯಾವುದೇ ವ್ಯಕ್ತಿ, ವರ್ಗ ಸಬಲವಿರಲಿ, ದುರ್ಬಲವಿರಲಿ ತನಗೆ ಅನ್ಯಾಯವಾಗುತ್ತಿದೆಯೆಂದು ಭಾವಿಸಿದಾಗ ಸತ್ಯಾಗ್ರಹವನ್ನು ಅವಲಂಬಿಸಬಹುದು.

ಗಾಂಧಿಯವರ ಸಿದ್ಧಾಂತವು ವಿಶ್ವದಾದ್ಯಂತ ಸಾಮಾಜಿಕ ನ್ಯಾಯ, ನಾಗರಿಕ ಹಕ್ಕುಗಳಿಗಾಗಿ ಹೋರಾಟಕ್ಕಿಳಿದ ನೇತಾರರನ್ನು ಘನವಾಗಿ ಪ್ರಭಾವಿಸಿತು. ಅವರಲ್ಲಿ ಮಾರ್ಟಿನ್ ಲೂಥರ್ ಕಿಂಗ್, ಜೇಮ್ಸ್ ಬೆವೆಲ್, ನೆಲ್ಸನ್ ಮಂಡೇಲ ಪ್ರಮುಖರು.

ಆ ವೃತ್ತದಲ್ಲಿ ದಿನನಿತ್ಯ ಬೆಳಿಗ್ಗೆ ಎಂಟು–ಹತ್ತು ಮಂದಿ ಪರ ಊರಿನಿಂದ ಎಳನೀರು ವ್ಯಾನಿಗಾಗಿ ಕಾಯುತ್ತಾರೆ. ವಾಹನ ಬಂದೊಡನೆ ತಮ್ಮ ಬೈಸಿಕಲ್ಲುಗಳಿಗೆ ಎಳನೀರು ಪೇರಿಸಿಕೊಂಡು ಆಸುಪಾಸಿನ ಬೀದಿಗಳಲ್ಲಿ ಮಾರಲು ಹೊರಡುತ್ತಾರೆ. ಬಂದ ಅಷ್ಟಿಷ್ಟು ಲಾಭದಿಂದ ಬದುಕು ಕಟ್ಟಿಕೊಳ್ಳುವವರು ಅವರು. ವ್ಯಾನ್ ಕ್ರಮಿಸುವ ರಸ್ತೆಗೆ ತಡೆಯಾದರೆ ಅವರ ಪಾಡೇನು? ಅಂತೆಯೇ ದೂಡು ಗಾಡಿಯಲ್ಲಿ ಸೊಪ್ಪುಸದೆ, ತರಕಾರಿ, ಹಣ್ಣು, ಕಾಯಿ, ಹೂವು ಮಾರುವವವರ ಬಗ್ಗೆ ಆಲೋಚಿಸಬೇಕಲ್ಲವೇ? ದಿನಗೂಲಿಗಳ ಪಾಲಿಗಂತೂ ‘ಬಂದ್’ ನಿಜಕ್ಕೂ ಬಂದ್! ಆಳುವವರ ಕಣ್ಣು, ಕಿವಿ ಬೆಂಕಿ ದಹಿಸುವಷ್ಟು, ಹೊಗೆ ಕಾರಿಸುವಷ್ಟು ಮಂದವೇ? ಅವರಿಗೆ ಮನವರಿಕೆ ಮಾಡುವುದು ಅಷ್ಟು ದುಸ್ಸಾಧ್ಯವೇ?

‘ನನ್ನನ್ನು ಹತ್ತಿಕ್ಕಿ ನೋಡೋಣ’ ಅಂತ ಖಂಡಾಂತರ ಸೋಂಕು ಕೊರೊನಾದ ಸವಾಲು ಮುಂದುವರಿದಿದೆ. ಜಾಗತಿಕ ಆರ್ಥಿಕ ಪರಿಸ್ಥಿತಿ ಹಿಂದೆಂದೂ ಇರದಷ್ಟು ಸೊರಗಿದೆ. ನ್ಯಾಯಯುತ ಬೇಡಿಕೆಗಳ ಬಗ್ಗೆ ಪ್ರಭುತ್ವದ ಗಮನ ಸೆಳೆಯಲು ಪ್ರತಿಭಟನೆ ಸಾಂಕೇತಿಕಗೊಳಿಸುವುದು ಅನಿವಾರ್ಯವಾಗಿದೆ. ಪ್ರತಿಷ್ಠೆ, ಸೇಡಿನಿಂದ ಅರ್ಥವ್ಯವಸ್ಥೆಯ ಪುನಶ್ಚೇತನಕ್ಕೆ ಹಿನ್ನಡೆ. ಕರ್ನಾಟಕ ರಾಜ್ಯ ಒಂದು ದಿನ ಬಂದ್ ಆದರೆ ಅಂದಾಜು ₹ 1,500 ಕೋಟಿಯಷ್ಟು ನಷ್ಟ. ಬೆಂಗಳೂರೊಂದೇ ಸುಮಾರು 700 ಕೋಟಿ ರೂಪಾಯಿಗಳ ಲುಕ್ಸಾನಿಗೆ ಸಿದ್ಧವಾಗಬೇಕಾಗುವುದು. ‘ರವಿಕೆ ತ್ಯಾಪೆಗೆ ಸೀರೆ ಹರಿದಂತೆ’ ಆಗಬಾರದು. ಕೈಗಾರಿಕೋದ್ಯಮಗಳ ಉತ್ಪಾದನಾ ಕುಸಿತ ರಾಷ್ಟ್ರೀಯ ನಷ್ಟವಲ್ಲದೆ ಮತ್ತೇನು?

ಸಾರಿಗೆ, ಸಂಪರ್ಕ, ವ್ಯಾಪಾರ, ವಹಿವಾಟು... ಎಲ್ಲ ಚಟುವಟಿಕೆಗಳೂ ಶರೀರದ ರಕ್ತ ಪರಿಚಲನೆಯಂತೆ ಅಡೆತಡೆಯಿಲ್ಲದೆ ಸಾಗುತ್ತಿರಬೇಕು. ನಮ್ಮ ದಿನಮಾನವನ್ನು ಬಂದ್ ಮೂಲಕ ಯಾವುದೇ ಕಾರಣಕ್ಕೂ ದಿಗ್ಬಂಧಿಸಬಾರದು. ನಿತ್ಯೋತ್ಸವ, ನಿತ್ಯುತ್ಸಾಹಕ್ಕೆ ಭಂಗ ತಂದುಕೊಳ್ಳುವುದು ಬೇಡ. ಪ್ರತಿರೋಧದ ಕಣ್ಣು ನಮ್ಮ ಅಮೂಲ್ಯ ದಿನಚರಿಯ ಮೇಲೆ ಸಲ್ಲದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.