ಮಂಗಳವಾರ, ಏಪ್ರಿಲ್ 7, 2020
19 °C
ಸರ್ವೋದಯ ಶಿಕ್ಷಣದ ಪರಿಕಲ್ಪನೆಯಲ್ಲಿ ಸಾರ್ವಜನಿಕ ವ್ಯವಸ್ಥೆಯನ್ನು ಬಲಿಷ್ಠಗೊಳಿಸಬೇಕಿದೆ

ಸಮಾನ ಶಾಲಾ ಶಿಕ್ಷಣಕ್ಕೆ ಹೊಸ ಭಾಷ್ಯ

ನಿರಂಜನಾರಾಧ್ಯ ವಿ.ಪಿ. Updated:

ಅಕ್ಷರ ಗಾತ್ರ : | |

ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಬಲ್ಲ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಇಂದಿನ ತುರ್ತು ಅಗತ್ಯ ಎಂಬುದನ್ನು ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಇಡೀ ದೇಶಕ್ಕೆ ಸಾರಿ ಹೇಳಿದೆ. ಈ ಫಲಿತಾಂಶದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರಗಳು ತಮ್ಮ ಆದ್ಯತೆಯ ವಿಷಯ ಏನಾಗಬೇಕೆಂಬುದನ್ನು ವಿಮರ್ಶಿಸಿ, ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸಿ ಅಧಿಕಾರ ನಡೆಸಬೇಕಾದ ಅನಿವಾರ್ಯ ಈಗ ಬಂದೊದಗಿದೆ.

ಕರ್ನಾಟಕ ಇದಕ್ಕೆ ಹೊರತಲ್ಲ. ಈಗಿರುವ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಸಮಗ್ರವಾಗಿ ಪುನರ‍್ರಚಿಸದೆ ಎಲ್ಲಾ ಮಕ್ಕಳಿಗೆ ಸಮಾನ ಗುಣಮಟ್ಟದ ಶಿಕ್ಷಣ ಸಾಧ್ಯವಿಲ್ಲ ಎಂಬುದನ್ನು ಹಲವು ಸಂಶೋಧನೆಗಳು ನಿರೂಪಿಸಿವೆ. 18 ವರ್ಷದವರೆಗಿನ ಎಲ್ಲಾ ಮಕ್ಕಳಿಗೆ ಗುಣಾತ್ಮಕ ಆರೈಕೆ, ರಕ್ಷಣೆ, ಶಿಕ್ಷಣ ಮತ್ತು ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಎರಡು ಹಂತದಲ್ಲಿ ಶಿಕ್ಷಣ ವ್ಯವಸ್ಥೆಯು ಸಮಗ್ರವಾಗಿ ಪುನರ‍್ರಚನೆ ಆಗಬೇಕಾಗಿದೆ. ಇದು ರಾಜಕೀಯ ಇಚ್ಛಾಶಕ್ತಿ ಮತ್ತು ಅಗತ್ಯ ಸಂಪನ್ಮೂಲಗಳ ಹೂಡಿಕೆಯಿಂದ ಮಾತ್ರ ರೂಪುಗೊಳ್ಳಲು ಸಾಧ್ಯ. ಸರ್ವರಿಗೂ ಸಮಗ್ರ ಶಿಕ್ಷಣದ ಗುರಿಯನ್ನು ಸಾಕಾರಗೊಳಿಸಲು ಮತ್ತು ಸಂವಿಧಾನಬದ್ಧ ಆಶಯಗಳನ್ನು ಈಡೇರಿಸಲು ದೂರದೃಷ್ಟಿ, ಆರ್ಥಿಕ ಮಿತವ್ಯಯ ಮತ್ತು ಸರ್ವೋದಯ ಶಿಕ್ಷಣದ ಪರಿಕಲ್ಪನೆಯಲ್ಲಿ ಸಮಾನತೆ, ಸಮಾನ ಅವಕಾಶಗಳನ್ನು ಎಲ್ಲಾ ಮಕ್ಕಳಿಗೆ ಒದಗಿಸಬಲ್ಲ ಬಲಿಷ್ಠ ಸಾರ್ವಜನಿಕ ವ್ಯವಸ್ಥೆಯನ್ನು ನಿರ್ಮಿಸಿಕೊಳ್ಳುವತ್ತ ನಾವು ಸಾಗಬೇಕಿದೆ.

ಮೊದಲನೆಯದಾಗಿ, ಈಗಿರುವ ಕಿರಿಯ ಪ್ರಾಥಮಿಕ ಶಾಲೆಗಳನ್ನು ಬುನಾದಿ ಪ್ರಾಥಮಿಕ ಶಾಲೆಗಳನ್ನಾಗಿ ಪುನರ್‌ರಚಿಸಬೇಕು. ಪೂರ್ವ ಪ್ರಾಥಮಿಕ ಹಂತವು ಬುನಾದಿ ಪ್ರಾಥಮಿಕ ಶಾಲಾ ವ್ಯಾಪ್ತಿಗೆ ಒಳಪಡುವುದರಿಂದ ಖಾಸಗಿ ಶಾಲೆಗಳತ್ತ ಪಾಲಕರ ಆಕರ್ಷಣೆಯನ್ನು ತಪ್ಪಿಸಿ, ಮಕ್ಕಳಿಗೆ ಆರೈಕೆ ಜೊತೆ ಜೊತೆಗೆ ಆಟ-ಪಾಠದ ಮೂಲಕ ಸಂತಸದಾಯಕ ಚಟುವಟಿಕೆ ಆಧಾರಿತ ಗುಣಮಟ್ಟದ ಬಾಲ್ಯಪೂರ್ವ ಸೇವೆಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಪೂರ್ವ ಪ್ರಾಥಮಿಕ ಹಂತವನ್ನು ಕಿರಿಯ ಪ್ರಾಥಮಿಕ ಶಾಲೆಗಳೊಂದಿಗೆ ವಿಲೀನಗೊಳಿಸುವುದರಿಂದ ಉತ್ತಮ ರೀತಿಯ ಕಲಿಕಾ ಪರಿಸರ ನಿರ್ಮಾಣಗೊಳ್ಳುತ್ತದೆ. ಪರಸ್ಪರ ಸಹಸಂಬಂಧ ಶಿಕ್ಷಣ ಸಾಧ್ಯವಾಗಿ, ತಾರತಮ್ಯವಿಲ್ಲದ ಗುಣಾತ್ಮಕ ಕಲಿಕೆಗೆ ಭೂಮಿಕೆ ಸಿದ್ಧಗೊಳ್ಳುತ್ತದೆ.

ಎರಡನೆಯದಾಗಿ, ಈಗಿರುವ ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳನ್ನು ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿ ಹಾಗೂ ನಗರ ಪ್ರದೇಶದಲ್ಲಿ ವಾರ್ಡ್ ಮಟ್ಟದ ಸಾರ್ವಜನಿಕ ಶಾಲೆಗಳನ್ನಾಗಿ ಪುನರ‍್ರಚಿಸುವುದು. ಈ ಪ್ರಕ್ರಿಯೆಯ ಭಾಗವಾಗಿ 5ರಿಂದ 12ನೇ ತರಗತಿವರೆಗಿನ ಶಿಕ್ಷಣವನ್ನು ನೆರೆಹೊರೆಯ ತತ್ವದ ಆಧಾರದಲ್ಲಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಹಾಗೂ ಪಟ್ಟಣ, ನಗರ ಪ್ರದೇಶಗಳ ವ್ಯಾಪ್ತಿಯ ವಾರ್ಡ್ ಮಟ್ಟದಲ್ಲಿ ಸಮಾನ ಸಾರ್ವಜನಿಕ ಶಾಲೆಗಳನ್ನಾಗಿ ಮಾರ್ಪಡಿಸುವುದು. ಈ ಶಾಲೆಗಳು 5ರಿಂದ 12ನೇ ತರಗತಿಯವರೆಗೆ ಒಳಗೊಂಡಿದ್ದು ಸುಸಜ್ಜಿತ ಭೌತಿಕ ವ್ಯವಸ್ಥೆಯನ್ನು ಹೊಂದಿರುತ್ತವೆ.

ಇವು ಸಂವಿಧಾನದ ಆಶಯದಂತೆ ದೇಶ ಕಟ್ಟುವ ಪುಟ್ಟ ಸಮಾಜಗಳಾಗಿರುತ್ತವೆ. ಈ ಮೂಲಕ ಸರ್ವರಿಗೂ ಸಮಾನ ಶಿಕ್ಷಣದ ಗುರಿ ಸಾಕಾರಗೊಂಡಂತೆ ಆಗುತ್ತದೆ. ಈ ಹೊಸ ವ್ಯವಸ್ಥೆಯಿಂದ, ಅಗತ್ಯ ಸೌಲಭ್ಯಗಳಿಲ್ಲದೆ ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣದಿಂದ ವಂಚಿತರಾಗುತ್ತಿರುವ ಗ್ರಾಮೀಣ ಪ್ರದೇಶದಲ್ಲಿನ ಹೆಣ್ಣು ಮಕ್ಕಳು ತಮ್ಮ ನೆರೆಹೊರೆಯಲ್ಲಿಯೇ ಈ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ.

ಪುನರ‍್ರಚಿತ ಗ್ರಾಮ ಪಂಚಾಯಿತಿ, ವಾರ್ಡ್ ಮಟ್ಟದ ಸಾರ್ವಜನಿಕ ಶಾಲೆಯು 5ರಿಂದ 12ನೇ ತರಗತಿಯವರೆಗೆ ಕಲಿಸುವ ವ್ಯವಸ್ಥೆಯನ್ನು ಹೊಂದಿದ್ದು ವೈವಿಧ್ಯಮಯ ಸಂದರ್ಭೋಚಿತ ಪಠ್ಯವಸ್ತುಗಳನ್ನು ಅಳವಡಿಸಿಕೊಂಡು ಕಲಿಸುವ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ಇಲ್ಲಿ ಎಲ್ಲಾ ವಿಷಯಗಳನ್ನು ಸಮಗ್ರವಾಗಿ ಬೋಧಿಸುವುದರಿಂದ ಯಾವುದೇ ವಿಷಯದ ಕಲಿಕೆಯಿಂದ ವಿದ್ಯಾರ್ಥಿಗಳು ವಂಚಿತರಾಗುವುದಿಲ್ಲ.

ಈ ಹೊಸ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಿಂದ ಪ್ರತೀ ವಿದ್ಯಾರ್ಥಿ ಎಲ್ಲಾ ವಿಷಯಗಳ ಪ್ರಾಥಮಿಕ ಜ್ಞಾನವನ್ನು ಪಡೆದು ತನಗೆ ಬೇಕೆನಿಸುವ ವಿಷಯದ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ. ಈ ವ್ಯವಸ್ಥೆಯು ಅನಾರೋಗ್ಯಕರ ಸ್ಪರ್ಧೆಯಿಲ್ಲದೆ, ಪರೀಕ್ಷೆಗಳ ಭಯವಿಲ್ಲದೆ ನಿರಂತರ ಮೌಲ್ಯಮಾಪನ ಮತ್ತು ಮಾರ್ಗದರ್ಶನದ ಮೂಲಕ ಕಲಿಕೆಯ ಹೊಸ ಸಂಸ್ಕೃತಿಯನ್ನು ಹುಟ್ಟುಹಾಕುತ್ತದೆ. ಈ ಬುನಾದಿ ಶಿಕ್ಷಣವು ಪೋಷಕರಿಗೆ ಆರ್ಥಿಕವಾಗಿ ಹೊರೆಯಾಗದೆ ಮಕ್ಕಳಿಗೂ ಒತ್ತಡ ಹಾಗೂ ಭಯದ ವಾತಾವರಣವನ್ನು ನಿರ್ಮಿಸದೆ ವಿದ್ಯಾರ್ಥಿಯು ತನ್ನ ಪರಿಸರದಲ್ಲಿಯೇ ಅತ್ಯಂತ ಶ್ರೇಷ್ಠ ಗುಣಾತ್ಮಕ ಶಿಕ್ಷಣವನ್ನು ಪಡೆಯಲು ಸಾಧ್ಯವಾಗಿ, ನಗರ ಅಥವಾ ಪಟ್ಟಣ ಪ್ರದೇಶಗಳಿಗೆ ಅಲೆಯುವುದು ತಪ್ಪಿದಂತಾಗುತ್ತದೆ.

ಎಲ್ಲಕ್ಕಿಂತ ಮಿಗಿಲಾಗಿ, ಶೋಚನೀಯ ಸ್ಥಿತಿಯಲ್ಲಿರುವ ಹಲವು ಸಾವಿರ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಬದಲಾಗಿ ಪಂಚಾಯಿತಿ, ವಾರ್ಡ್‌ಗೊಂದರಂತೆ ಸುಮಾರು 6,000ದಿಂದ 7,000 ಸುಸಜ್ಜಿತ ಶಾಲೆಗಳು ಅಸ್ತಿತ್ವಕ್ಕೆ ಬಂದು, ಒಂದೇ ಸೂರಿನಡಿ 5ರಿಂದ 12ನೇ ತರಗತಿವರೆಗಿನ ಎಲ್ಲ ಮಕ್ಕಳಿಗೆ ಸಮಾನ ಗುಣಮಟ್ಟದ ಶಿಕ್ಷಣ ನೀಡುವಂತಹ ಹೊಸ ಶಿಕ್ಷಣ ವ್ಯವಸ್ಥೆಗೆ ಈ ಶಾಲೆಗಳು ಭಾಷ್ಯ ಬರೆಯುತ್ತವೆ. ವಿಧಾನಮಂಡಲದ ಈ ಅಧಿವೇಶನದಲ್ಲಿ ಈ ವಿಷಯದ ಬಗ್ಗೆ ಕೂಲಂಕಷವಾಗಿ ಚರ್ಚಿಸಿ, ಆಯವ್ಯಯದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡುವುದು ಇಂದಿನ ತುರ್ತು ಅಗತ್ಯವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)