ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾ ವಿಭಾಗಕ್ಕೆ ಬೇಕು ಕಾಯಕಲ್ಪ

Last Updated 22 ಜುಲೈ 2020, 20:18 IST
ಅಕ್ಷರ ಗಾತ್ರ

ಈ ಬಾರಿಯ ದ್ವಿತೀಯ ಪಿಯು ಕಲಾ ವಿಭಾಗದಲ್ಲಿ ಕೇವಲ ಶೇ 41.27ರಷ್ಟು ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗಕ್ಕೆ ಶೇ 76.20 ಹಾಗೂ ವಾಣಿಜ್ಯ ವಿಭಾಗಕ್ಕೆ ಶೇ 65.52ರಷ್ಟು ಫಲಿತಾಂಶ ದೊರೆತಿದೆ. ಈ ಮೂರೂ ವಿಭಾಗಗಳಲ್ಲಿ ಒಟ್ಟಾರೆ ಅನುತ್ತೀರ್ಣಆದವರಲ್ಲಿ ಕಲಾ ವಿಭಾಗದವರ ಪಾಲೇ ಅತಿಹೆಚ್ಚು.

ಎಸ್‌ಎಸ್‌ಎಲ್‌ಸಿ ಪಾಸಾದವರು ಪದವಿಪೂರ್ವ ಹಂತದಲ್ಲಿ ಏಕೆ ಅನುತ್ತೀರ್ಣರಾಗುತ್ತಾರೆ? ವಯಸ್ಸು ಹೆಚ್ಚಿದಂತೆ ಮಕ್ಕಳ ಬೌದ್ಧಿಕ ಬೆಳವಣಿಗೆಯೂ ಹೆಚ್ಚಬೇಕು. ಆದರೆ ಇಲ್ಲಿ ಅದು ಸಾಧ್ಯವಾಗದಿರುವುದಕ್ಕೆ ಕಾರಣವೇನು? ಪದವಿಪೂರ್ವ ಹಂತದಲ್ಲಿ ಕಲಾ ವಿಭಾಗದ ಫಲಿತಾಂಶ ಮತ್ತು ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವುದಕ್ಕೆ ಯಾರು ಹೊಣೆ ಎನ್ನುವ ಪ್ರಶ್ನೆಗಳು ಸಮಾಜದ ಮುಂದಿವೆ. ಉಪನ್ಯಾಸಕರೇ, ಪ್ರಾಂಶುಪಾಲರೇ, ವಿದ್ಯಾರ್ಥಿಗಳೇ, ಪೋಷಕರೇ, ಆಡಳಿತಾಧಿಕಾರಿಗಳೇ ಅಥವಾ ಶಿಕ್ಷಣ ಇಲಾಖೆಯೇ ಎಂದು ನೋಡಿದಾಗ, ಎಲ್ಲರೂ ಕಾರಣರು ಎಂದೇ ಹೇಳಬೇಕಾಗುತ್ತದೆ.

ಹತ್ತನೇ ತರಗತಿ ಉತ್ತೀರ್ಣರಾಗಿ ಪದವಿಪೂರ್ವ ಕಾಲೇಜಿಗೆ ದಾಖಲಾಗುವಾಗ ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಸಹ ಕೆಲವು ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆ. ಇಂತಹ ದುಃಸ್ಥಿತಿಗೆ ಪ್ರಮುಖ ಕಾರಣ, ವಿದ್ಯಾರ್ಥಿಗಳಲ್ಲಿ ಅಧ್ಯಯನಶೀಲತೆ ಇಲ್ಲದಿರುವುದೇ ಆಗಿದೆ. ಪಿಯುಗೆ ಬಂದಿದ್ದರೂ ಈ ಮಕ್ಕಳಿಗೆ ಸರಿಯಾದ ಅಕ್ಷರ ಜ್ಞಾನವೇ ಇಲ್ಲ ಎನ್ನುತ್ತಾ ಉಪನ್ಯಾಸಕರು ಗೊಣಗುತ್ತಲೇ ಪಾಠ ಮಾಡುತ್ತಾರೆ.

ಪದವಿಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಇದೆ. ಕಡಿಮೆ ಕಾರ್ಯಭಾರವಿರುವ ಉಪನ್ಯಾಸಕರನ್ನು ನಿಯೋಜಿಸಿದರೆ, ರಾಜಕಾರಣಿ
ಗಳಿಂದ ಅಧಿಕಾರಿಗಳ ಮೇಲೆ ಒತ್ತಡ ಹಾಕಿಸುತ್ತಾರೆ. ನಿಯೋಜನೆ ಆದೇಶಕ್ಕೆ ಕಿಮ್ಮತ್ತೇ ಕೊಡುವುದಿಲ್ಲ. ‘ಪೂರ್ಣ ಪ್ರಮಾಣದ ಕಾರ್ಯಭಾರವಿಲ್ಲದಿದ್ದರೂ ಪೂರ್ಣವೇತನ ಪಡೆಯುತ್ತಿದ್ದಾರೆ, ನಿಯೋಜನೆ ಆದೇಶ ಪಾಲಿಸಲಿ’ ಎನ್ನುವ ಧೋರಣೆ ಅಧಿಕಾರಿಗಳದು. ಈ ಹಗ್ಗಜಗ್ಗಾಟದಲ್ಲಿ ಮೂರ್ನಾಲ್ಕು ತಿಂಗಳು ಕಳೆದೇ ಹೋಗಿರುತ್ತದೆ. ಅಷ್ಟುಹೊತ್ತಿಗೆ ಮಕ್ಕಳಲ್ಲಿ ಓದಿನ ಆಸಕ್ತಿ ಕ್ಷೀಣಿಸಿರುತ್ತದೆ.

ಪಿಯು ಕಲಾ ವಿಭಾಗದ ಶಿಕ್ಷಣದಲ್ಲಿ ಅನಗತ್ಯ ಪಠ್ಯದ ಹೊರೆ ಅಧಿಕ. ನಿಷ್ಪ್ರಯೋಜಕ ಅಧ್ಯಾಯಗಳನ್ನು ತೆಗೆದು, ಆಧುನಿಕ ಪ್ರಪಂಚಕ್ಕೆ ಪೂರಕವಾದ ಅಧ್ಯಾಯಗಳನ್ನು ಸೇರಿಸಬೇಕು. ಸಿದ್ಧಾಂತಗಳನ್ನು ಕಡಿಮೆ ಮಾಡಿ ಪ್ರಾಯೋಗಿಕತೆಗೆ ಹೆಚ್ಚು ಆದ್ಯತೆ ನೀಡಬೇಕು. ಮೂರು ದಶಕಗಳ ಹಿಂದೆ ನಾವು ವಿದ್ಯಾರ್ಥಿಗಳಾಗಿದ್ದಾಗ ಓದಿದ ಎಷ್ಟೋ ಪಾಠಗಳು ಇಂದಿಗೂ ಇವೆ. ಎಷ್ಟೋ ಉಪನ್ಯಾಸಕರು ತಾವು ವಿದ್ಯಾರ್ಥಿಯಾಗಿದ್ದಾಗ ಬರೆದಿಟ್ಟುಕೊಂಡಿದ್ದ ಟಿಪ್ಪಣಿಗಳನ್ನು ಪಾಠ ಮಾಡಲು ಮತ್ತು ಟಿಪ್ಪಣಿ ಬರೆಸಲು ಇಂದಿಗೂ ಬಳಸಿಕೊಳ್ಳುತ್ತಿದ್ದಾರೆ ಎಂದರೆ ಪಠ್ಯದ ಹಳಸಲುತನದ ಅರಿವಾಗುತ್ತದೆ. ಈ ವರ್ಷದ ಬ್ಯಾಚ್ ಹೀಗಿತ್ತು, ಮುಂದಿನ ವರ್ಷ ಸುಧಾರಿಸೋಣ ಎನ್ನುವ ಕುಂಟು ನೆಪಗಳ ಸರಣಿಯಲ್ಲಿ ಸಮಸ್ಯೆಯು ದಶಕಗಳಿಂದ ಮುಂದುವರಿದುಕೊಂಡು ಬರುತ್ತಲೇ ಇದೆ. ಪಿಯು ಫಲಿತಾಂಶ ಪ್ರಕಟವಾದಾಗ ಮಾತ್ರ ವಿಷಯ ಸಾರ್ವಜನಿಕ ಚರ್ಚೆಗೆ ಬರುತ್ತದೆ. ತದನಂತರ ತೆಪ್ಪಗಾಗುತ್ತದೆ.

ಕೆಲವು ವಿಷಯಗಳ ಪಠ್ಯದ ಪರಿಕಲ್ಪನೆಗಳಂತೂ ಶತಮಾನಗಳಷ್ಟು ಹಳತಾಗಿವೆ. ಕಾಲಕ್ಕೆ ತಕ್ಕಂತೆ, ಅಗತ್ಯಕ್ಕೆ ಪೂರಕವಾಗಿ ಮಾರ್ಪಾಡಾಗಿಲ್ಲ. ಕೌತುಕ, ಅನ್ವೇಷಣೆ, ಸಾಹಸಪ್ರಿಯತೆ, ಉದ್ಯಮಶೀಲತೆ, ಜೀವನ ಪ್ರಾಧಾನ್ಯ ಇವ್ಯಾವುವನ್ನೂ ಹೊಂದದ ಅಧ್ಯಯನದಲ್ಲಿ ವಿದ್ಯಾರ್ಥಿಗಳು ನಿರಾಸಕ್ತರಾಗಿದ್ದಾರೆ. ಅನವಶ್ಯಕ ಎನ್ನುವಂತಿರುವ ಪಾಠಗಳನ್ನು ಏಕತಾನತೆಯಿಂದ ಕೇಳಲು ಸಾಧ್ಯವಾಗದೆ ಓದಿಗೆ ಮುಖ ತಿರುಗಿಸುತ್ತಾರೆ.

ಕಲಾ ವಿಭಾಗದಲ್ಲಿ ಇರುವ ಸಂಯೋಜಿತ ವಿಷಯಗಳ ಅಧ್ಯಯನದಿಂದ ವಿದ್ಯಾರ್ಥಿಗಳಿಗೆ ಉದ್ಯೋಗ ಭದ್ರತೆಯಿಲ್ಲ. ಉದ್ಯೋಗ ದಕ್ಕಿಸಿಕೊಳ್ಳಲು,
ಸಂದರ್ಶನ ಎದುರಿಸಲು ಜೀವನ ಕೌಶಲಗಳು ಮುಖ್ಯವಾಗುತ್ತವೆ. ಕಲಾ ವಿಭಾಗ ಜೀವಂತಿಕೆ ಪಡೆಯಬೇಕಾದರೆ ಸಾಂಪ್ರದಾಯಿಕ ವಿಷಯಗಳನ್ನು ಬದಲಾಯಿಸಬೇಕಾಗಿದೆ. ಇಲ್ಲವೇ ಎಲ್ಲವನ್ನೂ ಒಗ್ಗೂಡಿಸಿ ಒಂದೇ ವಿಷಯದಲ್ಲಿ ಕ್ರೋಡೀಕರಿಸಿ ‘ಸಾಮಾನ್ಯಜ್ಞಾನ’ ಎನ್ನುವ ಶೀರ್ಷಿಕೆಯಡಿ ಅಧ್ಯಯನಕ್ಕೆ ಅವಕಾಶ ಮಾಡಿಕೊಡಬೇಕಾಗಿದೆ. ವಾಸ್ತವಿಕ ಜೀವನಕ್ಕೆ ಸನಿಹವಿರುವ, ವೃತ್ತಿ ನಿರ್ವಹಣೆಗೆ ರಹದಾರಿ ನೀಡುವ, ಜೀವನ ಭದ್ರತೆ ದೊರಕಿಸಿಕೊಡುವ ಪರಿಕಲ್ಪನೆಗಳನ್ನು ಸೇರಿಸಿ ಪಠ್ಯವನ್ನು ರೂಪಿಸಬೇಕಾಗಿದೆ.

ಕಲಾ ವಿಭಾಗದ ವಿದ್ಯಾರ್ಥಿಗಳ ಸಂಖ್ಯಾಬಲ ಮತ್ತು ಫಲಿತಾಂಶದ ಪ್ರಮಾಣ ಕುಸಿತವು ದೀರ್ಘಕಾಲದಿಂದ ಪರಿಹಾರ ಕಾಣದ ಜ್ವಲಂತ ಸಮಸ್ಯೆಗಳಾಗಿವೆ. ಆದರೂ ಪರಿಹಾರ ಕಂಡುಕೊಳ್ಳುವಲ್ಲಿ ಸೋತರೆ ಮುಂದಿನ ತಲೆಮಾರು ನಮ್ಮನ್ನು ಕ್ಷಮಿಸುವುದಿಲ್ಲ. ಶಿಕ್ಷಣವು
ವ್ಯಾಪಾರೀಕರಣಗೊಂಡು ದುಬಾರಿಯಾಗಿರುವಾಗಮಕ್ಕಳ ಶ್ರಮ, ಸಮಯ, ಹಣದ ಅಪವ್ಯಯ ಆಗದಿರುವಂತೆ ನೋಡಿಕೊಳ್ಳಬೇಕಾಗಿದೆ. ಹದಿಹರೆಯದವರಲ್ಲಿ ಓದುವಿಕೆಯು ಉದ್ಯೋಗಾವಕಾಶ ದೊರಕಿಸಿಕೊಡುತ್ತದೆ ಎನ್ನುವ ಭರವಸೆ ಬರಬೇಕಾಗಿದೆ. ಓದಿನಿಂದ ಉದ್ಯೋಗವಿಹೀನತೆ ಎಂದಾಗ ‘ಪುಸ್ತಕದ ಬದನೆಕಾಯಿ ಊಟಕ್ಕೆ ಬರದು’ ಎನ್ನುವ ನಾಣ್ನುಡಿ ನಿಜವಾದಂತೆ ಆಗುತ್ತದೆ. ಶಿಕ್ಷಣವು ವ್ಯಕ್ತಿತ್ವ ಮತ್ತು ಉದ್ಯೋಗ ಎರಡನ್ನೂ ಸೃಜಿಸುವಂತೆ ಮಾಡಿದಾಗ ಮಾತ್ರ ಫಲಿತಾಂಶದ ಪ್ರಮಾಣ ಹಾಗೂ ಅಧ್ಯಯನಾಸಕ್ತರ ಸಂಖ್ಯೆ ಎರಡೂ ಏರುಗತಿಯಲ್ಲಿ ಸಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT