ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಭಿನ್ನ ಸಾಮರ್ಥ್ಯ, ಭಿನ್ನ ಸವಾಲು

Published 1 ಡಿಸೆಂಬರ್ 2023, 23:21 IST
Last Updated 1 ಡಿಸೆಂಬರ್ 2023, 23:21 IST
ಅಕ್ಷರ ಗಾತ್ರ

ಪ್ರತಿಯೊಬ್ಬರೂ ಒಂದಿಲ್ಲೊಂದು ವಿಧದ ವೈಕಲ್ಯವನ್ನು ಹೊಂದಿರುತ್ತಾರೆ ಎಂಬ ಮಾತಿದೆ. ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ 130 ಕೋಟಿ ಜನರು ಗಮನಾರ್ಹ ಎನಿಸುವಷ್ಟು ವೈಕಲ್ಯವನ್ನು ಹೊಂದಿದ್ದಾರೆ. ಅಂದರೆ, ಪ್ರತಿ ಆರು ವ್ಯಕ್ತಿಗಳಲ್ಲಿ ಒಬ್ಬ ವ್ಯಕ್ತಿಯು ತನ್ನ ವೈಕಲ್ಯದ ಕಾರಣದಿಂದ, ಇತರರಿಗೆ ದೊರೆಯುವ ಅನುಭವಗಳನ್ನು ಗಳಿಸಲು ಅಸಮರ್ಥನಾಗುತ್ತಾನೆ. ಇಂತಹ ವ್ಯಕ್ತಿಗಳಲ್ಲಿ ಎಷ್ಟೋ ಜನರು ಎಲ್ಲರಂತೆ ಸಾಮಾನ್ಯವಾಗಿ ಬದುಕು ನಡೆಸಬಹುದಾಗಿರುತ್ತದೆ. ಆದರೆ, ಅವರಿಗೆ ಅವಕಾಶಗಳು ಇರುವುದಿಲ್ಲ.

ಭಿನ್ನ ಸಾಮರ್ಥ್ಯವಿರುವ ಜನರನ್ನು ಬೇರೆ ಬೇರೆ ಕಾರಣಗಳಿಂದ ಹೊರಗಿಡಲಾಗಿರುತ್ತದೆ. ಇಲ್ಲಿ ಸಾಮಾಜಿಕ ಸ್ಥಾನಮಾನ, ಲಿಂಗ, ಆರ್ಥಿಕ ಸ್ಥಿತಿಗತಿಯಂತಹ ಸಂಗತಿಗಳು ಅವರ ಪರಿಸ್ಥಿತಿ ಎಷ್ಟು ಹೀನಾಯ ಆಗಬಹುದು ಎಂಬುದನ್ನು ನಿರ್ಧರಿಸುತ್ತವೆ. ಶಾಲೆಗಳಲ್ಲೂ ಭಿನ್ನ ಸಾಮರ್ಥ್ಯದ ಮಕ್ಕಳು ಬೇರೆ ಬೇರೆ ಕಾರಣಗಳಿಗಾಗಿ ಹೊರಗಿಡಲ್ಪಡುತ್ತಾರೆ. ಒಂದೇ ಬಗೆಯ ಅಳತೆ ಎಲ್ಲರಿಗೂ ಸರಿಹೊಂದುವುದಿಲ್ಲ. ಒಂದು ವಿಧಾನ, ಒಂದೇ ನೋಟಕ್ರಮ, ಒಂದೇ ಬಗೆಯ ಕಲಿಕೆಯ ಸನ್ನಿವೇಶಗಳು ಭಿನ್ನ ಸವಾಲು ಮತ್ತು ಸಾಮರ್ಥ್ಯಗಳುಳ್ಳ ಮಕ್ಕಳೆಲ್ಲರಿಗೂ ಹೊಂದುವುದಿಲ್ಲ.

ದೇಶದ ಶೇ 10– 12ರಷ್ಟು ಶಾಲಾ ಮಕ್ಕಳಿಗೆ ಕಲಿಕೆಗೆ ಸಂಬಂಧಿಸಿದಂತೆ ವಿಶಿಷ್ಟ ನ್ಯೂನತೆಗಳಿವೆ ಎಂಬ ಅಂದಾಜಿದೆ. ಬರವಣಿಗೆ, ಗ್ರಹಿಕೆಗೆ ಸಂಬಂಧಿಸಿದ ನಿರ್ದಿಷ್ಟ ನ್ಯೂನತೆ, ಏಕಾಗ್ರತೆಯ ಕೊರತೆ ಅಥವಾ ಅತಿ ಚಟುವಟಿಕೆಯ ಸಮಸ್ಯೆ ಇರಬಹುದು. ಆದರೆ, ಅಂತಹ ಮಕ್ಕಳಿರುವುದನ್ನು ಗುರುತಿಸಬಲ್ಲ ಶಾಲೆಗಳ ಸಂಖ್ಯೆ ಬಹಳ ಕಡಿಮೆ. ಏಕೆಂದರೆ, ಶಾಲೆಗಳು ಕೈಗಾರಿಕಾ ಯುಗದ ಉತ್ಪನ್ನಗಳು. ಅಲ್ಲಿಯವರೆಗೂ ಶಾಲೆ ಎಂಬುದು ವಿಶಾಲ ಬಯಲಾಗಿತ್ತು. ತರಗತಿ ಕೋಣೆ ಎಂಬ ಪರಿಕಲ್ಪನೆಯು ಬಯಲನ್ನು ಕೋಣೆಯೊಳಗೆ ಕಲ್ಪಿಸುವ ಅನಿವಾರ್ಯವನ್ನು ಸೃಷ್ಟಿಸಿತು.

ಕಲಿಕೆಯ ಸಂದರ್ಭಗಳನ್ನು ಒಂದು ಕೋಣೆಯೊಳಗೆ ಸೃಷ್ಟಿಸಿದ್ದರಿಂದ, ಒಂದೇ ಸಮಯದಲ್ಲಿ ಹಲವು ಮಕ್ಕಳು ಕಲಿಕೆಯ ಅನುಭವವನ್ನು ಒಟ್ಟಿಗೆ ಗಳಿಸುವ ಒಡನಾಟದ ಸೌಕರ್ಯ ದೊರೆಯಿತು. ಆದರೆ, ಒಂದೇ ಬಗೆಯಲ್ಲಿ ಎಲ್ಲರೂ ಪ್ರತಿಕ್ರಿಯಿಸಬೇಕೆಂಬ ನಿರೀಕ್ಷೆ ಬೆಳೆಯಿತು. ಕಾರ್ಖಾನೆಯಲ್ಲಿ ಒಂದೇ ಬಗೆಯ ಕಚ್ಚಾ ವಸ್ತುಗಳು, ಒಂದೇ ಬಗೆಯ ಸಂಸ್ಕರಣೆಗೊಳಪಟ್ಟು ಒಂದೇ ಬಗೆಯ ಉತ್ಪನ್ನಗಳು ದೊರೆಯುತ್ತವೆ. ಶಾಲೆಗಳನ್ನು ಕಾರ್ಖಾನೆಯ ರೀತಿಯಲ್ಲಿ ಗ್ರಹಿಸಲು ಇದೇ ಕಾರಣವಿರಬಹುದು. ಒಂದು ಅಗಳನ್ನು ಹಿಚುಕಿ ನೋಡಿ ಇಡೀ ಮಡಕೆಯ ಅನ್ನ ಬೆಂದಿದೆಯೆಂಬ ತೀರ್ಮಾನಕ್ಕೆ ಬರಬಹುದು ಎಂಬಂತಹ ಶಿಕ್ಷಣ ಶಾಸ್ತ್ರಗಳು ರೂಪುಗೊಂಡವು. ಈ ಬಗೆಯ ಕಾರ್ಖಾನೆ ಪರಿಕಲ್ಪನೆಯ ಶಿಕ್ಷಣ ಪಡೆದ ವ್ಯಕ್ತಿಗಳೇ ಮುಂದೆ ಶಿಕ್ಷಕರಾದರು. ಒಂದು ತಲೆಮಾರಿನ ಯೋಚನೆಗಳು ಹೀಗೆ ಪಡಿಯಚ್ಚಿನಲ್ಲಿ ಸಾಂದ್ರಗೊಂಡಿದ್ದರಿಂದ, ಶಾಲೆಗಳು ಬರಬರುತ್ತಾ ಜೀವಂತಿಕೆ, ಮಾನವೀಯ ಸಂವೇದನೆಯನ್ನು ಕಳೆದುಕೊಳ್ಳುತ್ತಾ ಹೋದವು.

ಗೋಡಂಬಿ ಕಾರ್ಖಾನೆಯಲ್ಲಿ ಸಾರಣಗೆಯಂತಹ ತೂತುಗಳುಳ್ಳ ತಟ್ಟೆಯ ಮೂಲಕ ಚಲಿಸುತ್ತಾ ಸಾಗಿ, ಬೇರೆ ಬೇರೆ ಗಾತ್ರದ ಗೋಡಂಬಿಗಳು ಪ್ರತ್ಯೇಕವಾಗುವಂತೆ, ಶಾಲೆಗಳಲ್ಲೂ ಗ್ರೇಡಿಂಗ್ ಅಥವಾ ಶ್ರೇಣೀಕರಣ ಪದ್ಧತಿ ಶುರುವಾಯಿತು. ಆದರೆ, ಮಕ್ಕಳು ಬೇರೆ ಬೇರೆ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯಿಂದ ಬಂದಿರುತ್ತಾರೆ. ಪ್ರತಿ ಮಗು ಜೈವಿಕವಾಗಿಯೂ ಅನನ್ಯ. ಪ್ರತಿ ಮಗುವಿನ ನರವ್ಯವಸ್ಥೆ, ದೇಹ ಸೌಕರ್ಯ, ಶಾಲೆಯಿಂದಾಚೆ ದೊರೆಯುವ ಒಡನಾಟದ ಪರಿಸರ ಭಿನ್ನವಾಗಿರುವುದರಿಂದ ಒಂದೇ ಬಗೆಯ ಕಲಿಕೆಯ ಸಂದರ್ಭಗಳು, ‘ಒನ್ ಸೈಜ್‌ ಫಿಟ್ಸ್ ಆಲ್’ ಎಂಬಂತೆ ಎಲ್ಲರಿಗೂ ಹೊಂದುತ್ತವೆ ಎಂದು ಭಾವಿಸಲಾಗದು. ಎಲ್ಲ ಮಕ್ಕಳೂ ಒಂದೇ ವೇಗದಲ್ಲಿ ಕಲಿಯಬೇಕು ಮತ್ತು ಒಂದೇ ಬಗೆಯಲ್ಲಿ ಜಗತ್ತನ್ನು ಗ್ರಹಿಸಬೇಕು ಎಂದು ಪೋಷಕರು ಹಾಗೂ ಶಿಕ್ಷಕರು ನಿರೀಕ್ಷಿಸುವುದು ಮಕ್ಕಳಲ್ಲಿ ಹಿಂಸೆಗೆ ಕಾರಣವಾಗುತ್ತಾ ಬಂದಿದೆ.

ಪಡಿಯಚ್ಚಿಗೆ ಸರಿಹೊಂದದ ಮಕ್ಕಳು ಶಾಲೆಯಿಂದ ಹೊರಹೋಗುತ್ತಾರೆ. ಮಕ್ಕಳು ತರಗತಿಕೋಣೆಗಳಲ್ಲಿ ಅವಮಾನಕ್ಕೊಳಗಾಗುತ್ತಾರೆ. ‘ನಿಮ್ಮ ಮಗುವೊಂದೇ ಅಲ್ಲ ನಮಗೆ’ ಎಂದೋ ‘ಮನೆಯಲ್ಲಿ ಸರಿಯಾಗಿ ನೋಡಿಕೊಳ್ಳಲಾಗದ ಮೇಲೆ ಮಕ್ಕಳೇಕೆ ಬೇಕು ನಿಮಗೆ?’ ಎಂದೋ ಬೈಗುಳ ಪಡೆಯುವ ಪೋಷಕರು ಎಲ್ಲರ ಮುಂದೆ ಕುಬ್ಜರಾಗುತ್ತಾರೆ.

ವಿಭಿನ್ನ ಹಿನ್ನೆಲೆಯ, ವಿಭಿನ್ನ ದೈಹಿಕ ಮತ್ತು ಮಾನಸಿಕ ಸವಾಲುಗಳುಳ್ಳ ಮಕ್ಕಳು ತಮ್ಮ ಭಿನ್ನ ಸಾಮರ್ಥ್ಯಗಳೊಂದಿಗೆ ಒಂದು ತಂಡವಾಗಿ, ಸಮನ್ವಯದಿಂದ ಒಡನಾಡುವ ಅವಕಾಶಗಳನ್ನು ಸೃಷ್ಟಿಸುವ ಅಗತ್ಯ ಇರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿ ಮಗುವನ್ನೂ ಆಲಿಸುವ, ಅರ್ಥಮಾಡಿಕೊಳ್ಳುವ ಅವಕಾಶಗಳು ಕಲಿಕೆಯ ವಿಧಾನದಲ್ಲಿಯೇ ಮಿಳಿತಗೊಳ್ಳಬೇಕಿದೆ. ದೈಹಿಕ ಸವಾಲುಗಳು ಸಾಮಾನ್ಯವಾಗಿ ಮೇಲ್ನೋಟದಲ್ಲಿಯೇ ಕಾಣಿಸುತ್ತವೆ. ಆದರೂ, ಮಗುವಿನ ಕಣ್ಣಿನ ತೊಂದರೆಗಳು ಪೋಷಕರು ಮತ್ತು ಶಿಕ್ಷಕರಿಗೆ ಗೋಚರವಾಗದೇ ಇರಬಹುದು. ಅಂತಹುದರಲ್ಲಿ ನರವ್ಯವಸ್ಥೆಗೆ ಸಂಬಂಧಿಸಿದ ತೊಂದರೆಗಳು, ದೇಹದ ಆಂತರಿಕ ಅಂಗಾಂಗಗಳ ತೊಂದರೆಗಳು ಒಂದೇ ನೋಟದಲ್ಲಿ ಹೇಗೆ ದಕ್ಕಲು ಸಾಧ್ಯ?

ನಮ್ಮ ಶಾಲೆಗಳಲ್ಲಿ ‘ದಡ್ಡ’, ‘ಸೋಮಾರಿ’, ‘ಕೆಲಸಕ್ಕೆ ಬಾರದವನು’ ಎಂಬ ಅವಮಾನದ ಹಣೆಪಟ್ಟಿಯನ್ನು ಅಂಟಿಸಿಕೊಂಡಿರುವ ಸಾವಿರಾರು ಮಕ್ಕಳು ಕಲಿಯುತ್ತಿದ್ದಾರೆ. ಅವರನ್ನು ಗುರುತಿಸಬಲ್ಲ, ಗುರುತಿಸಿದರೂ ಅವರಿಗೆ ಸೂಕ್ತವಾದ ಕಲಿಕೆಯ ಪರಿಸರವನ್ನು ನೀಡಬಲ್ಲ, ಅವರಿಗಾಗಿಯೇ ವಿಶೇಷ ಕೌಶಲಾಧಾರಿತ ತರಬೇತಿ ನೀಡಬಲ್ಲ ಶಾಲೆಗಳು ಎಷ್ಟಿವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT