ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ಜನಪರ ಕೆಲಸ, ಜನಮನದ ಅರಸ

ಸಾಮಾಜಿಕ ಪರಿವರ್ತನೆಯ ಹರಿಕಾರ ಎನ್ನಿಸಿಕೊಂಡಿರುವ ದೇವರಾಜ ಅರಸು ಅವರ ಜನಪರ ಕೆಲಸಗಳನ್ನು ಬರೀ ಅಂಕಿ-ಅಂಶಗಳಿಂದ ನೋಡದೆ, ಹೃದಯದ ಭಾಷೆಯಿಂದ ಓದಬೇಕು
ಕೋಟ ಶ್ರೀನಿವಾಸ ಪೂಜಾರಿ
Published 20 ಆಗಸ್ಟ್ 2024, 0:45 IST
Last Updated 20 ಆಗಸ್ಟ್ 2024, 0:45 IST
ಅಕ್ಷರ ಗಾತ್ರ

ರಾಜಕಾರಣ ಎಂಬ ಚದುರಂಗ ದಾಟದಲ್ಲಿ ಯಾರೂ ನಿರಂತರ ವಾಗಿ ಗೆಲ್ಲಲು ಸಾಧ್ಯವಿಲ್ಲ. ಹಿಂದೆ, ಇಂದು, ಮುಂದೂ ರಾಜ ಕಾರಣದ ತಂತ್ರ, ಪ್ರತಿತಂತ್ರ, ಏರಿಳಿತ, ಪರ, ವಿರೋಧ, ಸೋಲು, ಗೆಲುವೆಲ್ಲಾ ಜನತಂತ್ರ ವ್ಯವಸ್ಥೆಯ ಒಂದು ಭಾಗ. ಭೋರ್ಗರೆದು ಬರುವ ಕಡಲ ತೆರೆಯನ್ನು ಎದುರಿಸಿ ಈಜಿದರೆ, ಹೊಟ್ಟೆ ತುಂಬಾ ಉಪ್ಪು ನೀರು ಕುಡಿಯದೇ ಬೇರೆ ಮಾರ್ಗವಿಲ್ಲ.

ಇಂತಹ ದಿನಗಳಲ್ಲಿ ದೇವರಾಜ ಅರಸು ಎಂಬ ‘ಕಲ್ಲಹಳ್ಳಿ ಪೈಲ್ವಾನ್’ ರಾಜಕಾರಣದಲ್ಲಿ ಸೆಟೆದು ನಿಂತ ಪರಿ, ಸಡಿಲಿಸದ ಪಟ್ಟು, ಎದುರಾಳಿಯನ್ನು ಮಣ್ಣಿನ ಅಂಗಳದಲ್ಲಿ ಕೆಡವಿದ ಪರಿ, ಅವರು ತಂದ ಸಾಮಾಜಿಕ ಪರಿವರ್ತನೆ ಊಹಿಸಲು ಅಸಾಧ್ಯ.

ಅರಸು ಅವರ ಜನಪರ ಕೆಲಸಗಳನ್ನು ಬರೀ ಅಂಕಿ-ಅಂಶಗಳಿಂದ ನೋಡುವ ಬದಲು, ಹೃದಯದ ಭಾಷೆ ಯಿಂದ ಓದಬೇಕು. ರಾಜ್ಯದಲ್ಲಿ ಭೂ ಸುಧಾರಣೆ ಕಾಯ್ದೆ ಜಾರಿ ಮಾಡಿದ ಸಂದರ್ಭದಲ್ಲಿ, ಬಡ ಗೇಣಿದಾರರು ಮತ್ತು ಭೂಮಾಲೀಕರ ನಡುವೆ, ಕರುನಾಡಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸಂಘರ್ಷವೊಂದು ಏರ್ಪಟ್ಟಿತ್ತು. ಭೂ ಮಾಲೀಕರ ಸ್ಥಾನದಲ್ಲಿ ಗೇಣಿದಾರರನ್ನು, ಗೇಣಿದಾರರ ಸ್ಥಾನದಲ್ಲಿ ಭೂಮಾಲೀಕರನ್ನು ತಂದು ನಿಲ್ಲಿಸಿಬಿಟ್ಟಿತ್ತು. ಭಾರತದಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಅನುಷ್ಠಾನಕ್ಕೆ ಕರ್ನಾಟಕವೇ ಪ್ರಯೋಗಶಾಲೆಯಾಯಿತು.

ಆಗ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ಭೀಮಯ್ಯ, ‘ದೇಶದ ಯಾವುದೇ ರಾಜ್ಯದಲ್ಲಿ ಕರ್ನಾಟಕದ ಮಾದರಿಯಲ್ಲೇನಾದರೂ ಭೂ ಸುಧಾರಣೆ ಜಾರಿಯಾಗಿದ್ದಿದ್ದರೆ ಅಂತಹ ಕಾನೂನು ತಂದ ಮಂತ್ರಿಗಳ ತಲೆಯೇ ಉರುಳುತ್ತಿತ್ತು’ ಎಂದು ಉದ್ಗರಿಸಿದ್ದರು. ಭೂ ಸುಧಾರಣೆಯ ಮೂಲಕ ಬಡವರು ಮೊದಲ ಬಾರಿಗೆ ಅನ್ನವನ್ನು ಕೈತುಂಬ ಹಿಡಿದು ಉಂಡದ್ದು ಇದೇ ಅರಸು ಎಂಬ ಸ್ಥಿತಪ್ರಜ್ಞ ರಾಜಕಾರಣಿಯ ಆಡಳಿತದಲ್ಲಿ.

ರಾಜಕಾರಣದಲ್ಲಿ ಕಟ್ಟಿದ ಕೋಟೆ, ಸಾಮಾಜಿಕ ನ್ಯಾಯದ ಸ್ಪಷ್ಟತೆ, ಹಿಂದುಳಿದ ವರ್ಗಕ್ಕೆ ಮತ್ತು ದಲಿತರಿಗೆ ಕೊಟ್ಟಿರುವ ನೆರವು, ಋಣ ಪರಿಹಾರ ಕಾಯ್ದೆ, ಬಡವರ ಮನೆಗೆ ಭಾಗ್ಯಜ್ಯೋತಿ, ಬಸವಲಿಂಗಪ್ಪನವರ ಮೂಲಕ ತಂದ ಮಲ ಹೊರುವ ಪದ್ಧತಿ ನಿಷೇಧ ಇವೆಲ್ಲವೂ ಅರಸು ಅವರ ರಾಜಕಾರಣದ ತಳಹದಿಯನ್ನು ಗಟ್ಟಿಯಾಗಿಸಿದ್ದವು. ದುರದೃಷ್ಟಕ್ಕೆ ಇಂದಿರಾ ಗಾಂಧಿಯವರು ತಂದ ತುರ್ತುಪರಿಸ್ಥಿತಿಯ ಬೆಂಕಿ ಅರಸು ಅವರ ಸುತ್ತ ಕಾವು ಕೊಡದೇ ಬಿಡಲಿಲ್ಲ. ಈ ವೇಳೆ ದೇಶದೆಲ್ಲೆಡೆಯಂತೆ ರಾಜ್ಯದಲ್ಲೂ ಹಲವು ರಾಜಕಾರಣಿಗಳು, ಪತ್ರಕರ್ತರು ಬಂಧನಕ್ಕೆ ಒಳಗಾದರು. ಬರಹಗಾರರಾದ ಕುವೆಂಪು, ಶಿವರುದ್ರಪ್ಪ, ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ, ಲಂಕೇಶ್, ಮಾಸ್ಟರ್ ಹಿರಣ್ಣಯ್ಯ ಅವರಂತಹ ಸಾಹಿತಿಗಳು, ಕಲಾವಿದರು, ಲೇಖಕರು ತುರ್ತು ಪರಿಸ್ಥಿತಿಯ ವಿರುದ್ಧ ಸೆಟೆದು ನಿಂತಿದ್ದರು. ಆದರೆ ಅವರ್‍ಯಾರನ್ನೂ ಅರಸು ಬಂಧಿಸದಿದ್ದುದು ಅಂದಿನ ಮಟ್ಟಿಗೆ ಸೋಜಿಗದ ಸಂಗತಿಯೇ ಹೌದು. ಹಾಗಿದ್ದರೆ ವಿರೋಧ ಪಕ್ಷದ ನಾಯಕರನ್ನು ಬಂಧಿಸಿದ್ದು ಯಾರು ಎಂಬ ಪ್ರಶ್ನೆಗೆ, ಅರಸು ಅವರ ಒಡನಾಡಿಗಳು ಕೇಂದ್ರದತ್ತ ಬೊಟ್ಟು ಮಾಡಿದ್ದರು. ಅರಸು ಅವರನ್ನು ಆಡಳಿತದಲ್ಲಿ ಕಹಿನೆನಪಾಗಿ ಕಾಡಿದ್ದು ಅಳಿಯ ನಟರಾಜ ಅವರಿಗೆ ಸಂಬಂಧಿಸಿದ ಪ್ರಕರಣ. ಆಯುರ್ವೇದ ಗಿಡಮೂಲಿಕೆ ಬೆಳೆಯಲು ತಮ್ಮ ಶಿಫಾರಸು ಬಳಸಿ ಭೂಮಿ ಮಂಜೂರು ಮಾಡಿಕೊಟ್ಟ ಸ್ವಜನಪಕ್ಷಪಾತದ ಆರೋಪ ಅವರನ್ನು ಅಸಹಾಯಕರನ್ನಾಗಿ ಮಾಡಿತ್ತು.

ಮುಖ್ಯಮಂತ್ರಿಯಾಗಿ ಅರಸು ಕ್ರಾಂತಿಕಾರಿ ಕೆಲಸ ವನ್ನೇ ಮಾಡಿದ್ದರೂ ಅಲ್ಲಲ್ಲಿ ವಿರೋಧವೂ ತಲೆ ಎತ್ತುತ್ತಿತ್ತು. ಅನಿವಾರ್ಯ ಕಾರಣಗಳಿಂದ ಅರಸು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕಾಗಿ ಬಂದಾಗ ಅವರು ಶಾಸಕರ ಸಭೆ ಕರೆದು, ‘ಯಾರು ನನ್ನೊಟ್ಟಿಗೆ ಉಳಿಯಬೇಕೆಂದು ಯೋಚಿಸಿದ್ದೀರೋ ಅವರು ಉಳಿಯಬಹುದು. ಉಳಿದವರು ತಮ್ಮ ಭವಿಷ್ಯದ ದೃಷ್ಟಿಯಿಂದ ಬಿಟ್ಟು ಹೋಗಬಹುದು’ ಎಂದು ಮೃದುವಾಗಿಯೇ ಹೇಳಿದ್ದರು. ಕರುನಾಡಿನ ರಾಜಕಾರಣವೆಂದರೆ ಅವಕಾಶವಾದಿತನ ಎಂಬುದು ಸಾಕ್ಷಾತ್ಕಾರವಾದ ಸಂದರ್ಭವದು.

ಸಣ್ಣಪುಟ್ಟ ಸಮುದಾಯಗಳನ್ನು ಹೆಕ್ಕಿ, ರಾಜಕಾರಣದ ಗಂಧ ಗಾಳಿಯನ್ನೇ ಅರಿಯದಿದ್ದ ಕಡುಬಡವರ ಮಕ್ಕಳನ್ನು ವಿಧಾನಸೌಧದ ಪಡಸಾಲೆಗೆ ತಂದು ಬಿಟ್ಟಿದ್ದವರು ದೇವರಾಜ ಅರಸು ಎಂಬ ಜಗಜಟ್ಟಿ ರಾಜಕಾರಣಿ. ಅಂತಹವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡುತ್ತಲೇ, ಮುಳುಗುವ ಹಡಗಿನಿಂದ ಪ್ರಾಣ ಉಳಿಸಿಕೊಳ್ಳಲು ಹೊರಟ ಹೆಗ್ಗಣಗಳಂತೆ ದಡ ಸೇರಲೋಸುಗ ಅನೇಕ ಮಂದಿ ರಾಜಕಾರಣಿಗಳು ಅವರನ್ನು ಬಿಟ್ಟು ಹೊರಟಿದ್ದರು. ಅರಸು ಅವರ ಒಂದು ಮುಗುಳ್ನಗುವಿಗಾಗಿ ಕಾತರಿಸುತ್ತಿದ್ದವರೂ ಇವರಲ್ಲಿ ಸೇರಿದ್ದರು. ‘ನೀವೇ ನಮ್ಮ ನಾಯಕ. ನೀವಲ್ಲದಿದ್ದರೆ ವಿಷ ಕುಡಿಯುತ್ತೇವೆ ಎಂದಿದ್ದವರೆಲ್ಲಾ ನಾನು ರಾಜೀನಾಮೆ ಕೊಟ್ಟ ಒಂದು ಗಂಟೆಯೊಳಗೇ ನನ್ನನ್ನು ಬಿಟ್ಟುಹೋದರಲ್ಲ’ ಎಂದು ಅರಸು ನೊಂದು ಹೇಳಿದ್ದರು.

ಇಂದು (ಆ. 20) ಅರಸು ಅವರ ಜನ್ಮದಿನ. ವೈಚಾರಿಕವಾಗಿ ನಮಗೆಲ್ಲ ಅವರ ಬಗ್ಗೆ ಸಹಜವಾದ ಅಭಿಪ್ರಾಯಭೇದ ಇರಬಹುದು. ಆದರೆ, ದಿನದಿಂದ ದಿನಕ್ಕೆ ಹೌದಪ್ಪಗಳ ಚಾವಡಿ ಆಗುತ್ತಿರುವ ರಾಜಕಾರಣ ದಲ್ಲಿ, ಅಧಿಕಾರ ಇರಲಿ, ಹೋಗಲಿ ಬಡವರ ಬದುಕಿನಲ್ಲಿ ಬದಲಾವಣೆ ತರುತ್ತೇವೆ ಎಂಬ ನಿಷ್ಠುರ ನಿಲುವು ಹೊಂದಿರುವವರು ಕಡಿಮೆ. ಅರಸು ಮಾತ್ರ ಬಡವರ ಪಾಲಿಗೆ ಅನ್ನದಾತ. ನನ್ನ ಕುಟುಂಬವೂ ಸೇರಿ.

ಲೇಖಕ: ಲೋಕಸಭೆಯ ಬಿಜೆಪಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT