ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಹೀಗಿತ್ತು ಬದುಕಿನ ಪಯಣದ ಪಾಠ...

Published 5 ಸೆಪ್ಟೆಂಬರ್ 2023, 21:53 IST
Last Updated 5 ಸೆಪ್ಟೆಂಬರ್ 2023, 21:53 IST
ಅಕ್ಷರ ಗಾತ್ರ

– ಎಚ್‌.ಬಿ.ಚಂದ್ರಶೇಖರ್‌

ಎಸ್ಎಸ್ಎಲ್‌ಸಿಯಲ್ಲಿ ಸಹಪಾಠಿಗಳಾಗಿದ್ದ ಎಲ್ಲಾ ಸ್ನೇಹಿತರು 42 ವರ್ಷಗಳ ಬಳಿಕ ಸೇರಿದ್ದೆವು. ಎಸ್ಎಸ್ಎಲ್‌ಸಿ ಪೂರೈಸಿದ ನಂತರ ನಮ್ಮ ಶಿಕ್ಷಣ ಮತ್ತು ಬದುಕಿನ ಹಾದಿಗಳು ನಮ್ಮನ್ನು ಎಲ್ಲಿಗೆ ಕೊಂಡೊಯ್ದು ನಿಲ್ಲಿಸಿವೆ ಎಂಬುದನ್ನು ಎಲ್ಲರೂ ಮೆಲುಕು ಹಾಕಿದೆವು. ನಾವು ತರಗತಿಯಲ್ಲಿ ಕೂರುತ್ತಿದ್ದ ಜಾಗ, ಅಲ್ಲಿ ಮಾಡಿದ ಕೀಟಲೆ, ತುಂಟಾಟಗಳನ್ನು ನೆನಪಿಸಿಕೊಂಡು ಸಂಭ್ರಮಿಸಿದೆವು.

ಓದುವಾಗ ನಾವೆಲ್ಲಾ ಹೇಗೇಗೋ ಇದ್ದವರು ನಿಧಾನವಾಗಿ ಬದುಕಿನ ಪಯಣದ ಓಟದ ಲಯ ಕಂಡುಕೊಂಡಿದ್ದು ವಿಸ್ಮಯದ ಸಂಗತಿ ಎನಿಸುತ್ತದೆ. ಎಸ್ಎಸ್ಎಲ್‌ಸಿಯಲ್ಲಿ ಫೇಲ್ ಆಗಿ, ಪೂರಕ ಪರೀಕ್ಷೆಯಲ್ಲಿ ಸಹ ಫೇಲ್ ಆಗಿ ನಂತರದ ವಾರ್ಷಿಕ ಪರೀಕ್ಷೆಯಲ್ಲಿ ಪಾಸಾಗಿ, ಇಂಗ್ಲಿಷ್‌ ಭಾಷಾ ವಿಷಯದಲ್ಲಿ ಸ್ನಾತಕ ಪದವಿ ಪಡೆದು, ಉಪನ್ಯಾಸಕನಾಗಿ, ನಂತರ ಕೆಪಿಎಸ್‌ಸಿ ಪರೀಕ್ಷೆ ಬರೆದು ಪಾಸಾಗಿ ಈಗ ಜಿಲ್ಲಾ ಮಟ್ಟದ ಅಧಿಕಾರಿಯಾಗಿರುವ ಸ್ನೇಹಿತನ ಸಾಧನೆಯ ಕತೆ ನಮಗೆ ತಿಳಿದೇ ಇರಲಿಲ್ಲ.

ಪ್ರೌಢಶಾಲಾ ಹಂತದಲ್ಲಿ ಓದುತ್ತಿದ್ದಾಗ ಹೆಚ್ಚು ಮಾತನಾಡದೆ ಮೌನಿಯಾಗಿದ್ದ ಇನ್ನೊಬ್ಬ ಸ್ನೇಹಿತ ಹಲವು ವರ್ಷಗಳಿಂದ ಕಾಲೇಜೊಂದನ್ನು ನಡೆಸುತ್ತಿದ್ದಾನೆ. ಸದ್ಯದಲ್ಲೇ ಇನ್ನೊಂದು ಕಾಲೇಜು ಪ್ರಾರಂಭ ಮಾಡುತ್ತಿರುವುದಾಗಿ ಆತ ಹೇಳಿದಾಗ ನಂಬಲಾಗಲೇ ಇಲ್ಲ.

ಹೀಗೆ ಕೆಲವರು ಉಪನ್ಯಾಸಕರು, ಇನ್ನು ಹಲವರು ಎಂಜಿನಿಯರ್‌ಗಳು, ಉದ್ಯಮಿಗಳು ಆಗಿರುವ ಕತೆಗಳನ್ನು ತೆರೆದಿಟ್ಟರು. ಕೆಲವರು ತಮ್ಮ ಜೀವನದ ಏರಿಳಿತಗಳನ್ನು ನಿಭಾಯಿಸಿಕೊಂಡು ತಮ್ಮದೇ ಗತಿಯಲ್ಲಿ ಮುಂದುವರಿಯುತ್ತಿರುವ ಪರಿ ಕುತೂ ಹಲಕರವಾಗಿತ್ತು. ಒಂದಿಬ್ಬರು ಬದುಕಿನ ಪಯಣವನ್ನೇ ಮುಗಿಸಿದ್ದಾರೆ ಎಂಬ ಸಂಗತಿ ತಿಳಿದು ನೋವಾಯಿತು. ಇನ್ನು ಕೆಲವರು ಎಲ್ಲಿದ್ದಾರೆ, ಹೇಗಿದ್ದಾರೆ ಎಂಬ ಸುಳಿವು ಸಿಕ್ಕಿಲ್ಲ.

ಇವರೆಲ್ಲರಲ್ಲಿ ಸ್ನೇಹಿತನೊಬ್ಬ ಹಂಚಿಕೊಂಡ ಮಾತು ಚಿಂತನೆಗೆ ಹಚ್ಚುವಂತಿತ್ತು. ಓದುವಾಗ ಸೌಮ್ಯ ಸ್ವಭಾವದ ಅವನ ಮನೆಯಲ್ಲಿ ಸವಾಲಿನ ಜೀವನದ ಜೊತೆಗೆ ಕಠಿಣ ಶಿಸ್ತು ಇತ್ತು. ಒಂದಷ್ಟು ಆತ್ಮ ವಿಶ್ವಾಸದ ಕೊರತೆ ಇದ್ದಂತೆ ಕಾಣುತ್ತಿದ್ದ ಇವನು ಶಾಲೆಯಲ್ಲಿ ಇತರ ಕೆಲವು ಹುಡುಗರಂತೆ ಮುದುಡಿಕೊಂಡು ಇರುತ್ತಿದ್ದ. ಆದರೆ ಹಲವು ಬಾರಿ ತಾನು ಮಾಡದಿದ್ದ ತಪ್ಪುಗಳಿಗೆ ಶಿಕ್ಷಕರಿಂದ ಹೊಡೆತ, ಬಿರುನುಡಿಗಳನ್ನು ಕೇಳಿದ್ದ ಇವನಲ್ಲಿ ಮೊದಲೇ ಮುರುಟಿದ್ದ ಆತ್ಮವಿಶ್ವಾಸ ಚಿಗುರಲೇ ಇಲ್ಲ ಎಂಬುದು ಅವನು ಹಂಚಿಕೊಂಡ ಮಾತುಗಳಿಂದ ಮೊನ್ನೆ ತಿಳಿಯಿತು.

ಎಲ್ಲರೂ ತಮ್ಮದೇ ರೀತಿಯಲ್ಲಿ ತಮ್ಮ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರೆ ಇವನು ಮಾತ್ರ ‘ನನಗೆ ಹೇಳಲು ಏನೂ ಇಲ್ಲ. ನನಗಿರುವ ನೆನಪುಗಳು ಶಿಕ್ಷಕರಿಂದ ತಿಂದ ಹೊಡೆತಗಳು ಅಷ್ಟೆ’ ಎಂದು ಕಣ್ಣಂಚಿನಲ್ಲಿ ನೀರು ತಂದುಕೊಂಡಾಗ ಎಲ್ಲರೂ ಬೇಸರದಿಂದ ಅರೆಕ್ಷಣ ಮೌನಕ್ಕೆ ಜಾರಿದೆವು. ಪ್ರಸ್ತುತ ತನ್ನದೇ ರೀತಿಯಲ್ಲಿ ಬದುಕನ್ನು ಪ್ರಾಮಾಣಿಕವಾಗಿ ಕಟ್ಟಿಕೊಂಡು ಜೀವನ ಮುಂದುವರಿಸಿದ್ದಾನೆ.

ನಾವೆಲ್ಲರೂ ಹೀಗೇ ಅಲ್ಲವೇ, ಹೇಗೋ ಇದ್ದವರು ಒಂದಷ್ಟು ಮೇಲೆ ಕೆಳಗೆ ಆಚೆ ಈಚೆ ಎಂಬಂತೆ ನಮ್ಮದೇ ವಿಧಾನದಲ್ಲಿ ವಿಶಿಷ್ಟ ರೀತಿಯಲ್ಲಿ ಒಂದು ಬದುಕು ಕಟ್ಟಿಕೊಳ್ಳುತ್ತೇವೆ ತಾನೇ. ಯಾರ ಬದುಕೂ ಶ್ರೇಷ್ಠ ಅಥವಾ ಕನಿಷ್ಠ ಎಂದಾಗಿರುವುದಿಲ್ಲ ಎನಿಸಿತು.

ಹೌದು, ಶಾಲೆಯಲ್ಲಿ ಓದುವಾಗ ನೋಡಲು ಪೀಚಲು, ತಡವರಿಸುವ ಓದು, ಬಾರದ ಗಣಿತ ಹೀಗೆ ಹಲವು ರೀತಿಯಲ್ಲಿ ಮಿತಿಗಳನ್ನು ಹೊಂದಿದ ಮಕ್ಕಳು ಹಲವು ವರ್ಷಗಳ ನಂತರ ಉತ್ತಮ ಸಾಧನೆ ಮಾಡಿ, ಶಿಕ್ಷಕರೆದುರು ನಿಲ್ಲುತ್ತಾರೆ. ಆದರೆ ತಮ್ಮ ಶಾಲಾ ದಿನಗಳಲ್ಲಿ ಶಿಕ್ಷಕರು ಮಾಡಿದ ಅವಮಾನ, ನೀಡಿದ ಶಿಕ್ಷೆ ಅವರ ಮನದಲ್ಲಿ ಮಡುಗಟ್ಟಿ ನಿಂತಿರುತ್ತವೆ.

ಎಸ್ಎಸ್ಎಲ್‌ಸಿ ನಪಾಸಾದರೆ ಎಲ್ಲಾ ಮುಗಿಯಿತು ಎಂಬಂತೆ ಹೆಚ್ಚಿನ ಪೋಷಕರು, ಶಿಕ್ಷಕರು ಅವರೊಂದಿಗೆ ವ್ಯವಹರಿಸುತ್ತಾರೆ. ಓದು, ಬರಹ, ಲೆಕ್ಕದ ಕೌಶಲ ಇಲ್ಲದವರೂ ಹಂತ ಹಂತವಾಗಿ ಎದ್ದು, ಬಿದ್ದು, ಸುಧಾರಿಸಿಕೊಂಡು, ಸಾಧನೆಯ ಮೆಟ್ಟಿಲನ್ನು ಒಂದೊಂದಾಗಿ ಏರುತ್ತಾ ಹೋಗುತ್ತಾರೆ. ಕೆಲವೊಮ್ಮೆ ಶಾಲಾ ದಿನಗಳಲ್ಲಿ ಅವರಿಗಿಂತ ಬುದ್ಧಿವಂತ ಎಂದು ಕರೆಸಿಕೊಳ್ಳುವ ಸಹಪಾಠಿಗಳಿಗಿಂತ ಜೀವನದಲ್ಲಿ ಅಗಾಧ ಮಟ್ಟದ ಸಾಧನೆಯನ್ನೇ ಮಾಡಿಬಿಡುತ್ತಾರೆ. ಆದರೆ ಅವರ ಆರಂಭದ ದಿನಗಳಲ್ಲಿ ಅವರಲ್ಲಿರುವ ವಯೋಸಹಜ ಮಿತಿ, ನ್ಯೂನತೆಗಳನ್ನು ಲೆಕ್ಕಿಸದೆ, ಅವರಿಗೊಂದಿಷ್ಟು ಪ್ರೀತಿ ತೋರಿ, ಗಮನ ಹರಿಸಿದಲ್ಲಿ ಅವರು ಇನ್ನಷ್ಟು ಎತ್ತರಕ್ಕೆ ಏರಿಯಾರು. ಅದಕ್ಕೂ ಮಿಗಿಲಾಗಿ ಅವರ ಮುಗ್ಧ ಮನಸ್ಸು ಮುದುಡದೆ ಹೂವಿನಂತೆ ಅರಳಲು ಶಿಕ್ಷಕರು ಕಾರಣರಾಗುತ್ತಾರೆ.

ಈ ದಿಸೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ಒಂದಷ್ಟು ಪ್ರೀತಿಯನ್ನು ಸಮನಾಗಿ ಉಣಬಡಿಸುವ ಶಿಕ್ಷಕರು ಅವರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತಾರೆ.

15-20 ವರ್ಷ ಸೇವೆ ಸಲ್ಲಿಸಿರುವ ಶಿಕ್ಷಕರು ಒಂದು ಪ್ರಯತ್ನ ಮಾಡಿ, ಹಲವು ವರ್ಷಗಳ ಹಿಂದೆ ಅವರ ದೃಷ್ಟಿಯಲ್ಲಿ ಹೇಗೇಗೋ ಎನ್ನುವಂತೆ ಇದ್ದವರು ಮುಂದೆ ಏನಾಗಿದ್ದಾರೆ ಎನ್ನುವುದನ್ನು ಕಂಡುಕೊಳ್ಳುವ ಕಿರು ಪ್ರಯತ್ನ ಮಾಡಬೇಕು. ಇಂತಹ ದಾಖಲೀಕರಣದಿಂದ, ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯ ಎನಿಸುವ ಒಂದಷ್ಟು ಹೊಳಹುಗಳು ಸಿಗುವುದರಲ್ಲಿ ಸಂಶಯವಿಲ್ಲ.

ಲೇಖಕ: ಹಿರಿಯ ಉಪನ್ಯಾಸಕ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)‌, ಬೆಂಗಳೂರು ನಗರ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT