ಮಂಗಳವಾರ, ಜುಲೈ 27, 2021
28 °C

ಸಂಗತ | ಸಮುದಾಯ ಜೀವಿ ಒಂಟಿಯಾದಾಗ...

ಡಾ. ಜ್ಯೋತಿ Updated:

ಅಕ್ಷರ ಗಾತ್ರ : | |

Prajavani

ಸಮಾಜಶಾಸ್ತ್ರ ಅನಾದಿ ಕಾಲದಿಂದಲೂ ನಮಗೆ ಹೇಳುತ್ತಾ ಬಂದ ಮಂತ್ರವೆಂದರೆ, ‘ಮನುಷ್ಯ ಸಮುದಾಯ ಜೀವಿ’ ಎಂಬುದು. ಹಾಗೆ ನೋಡಿದರೆ, ಸಮಸ್ತ ಜೀವರಾಶಿಗಳು ಭದ್ರತೆಗಾಗಿ ತಂತಮ್ಮ ಪ್ರಭೇದಗಳೊಂದಿಗೆ ಸಮೂಹವಾಗಿರುವುದನ್ನು ಗಮನಿಸುತ್ತೇವೆ. ಮನುಷ್ಯ ಕೂಡ ತನ್ನ ಮೂಲ ವಿಕಾಸದ ದಿನಗಳಿಂದ, ಕಾಡುಮೇಡು ಅಲೆಯುವಾಗ, ಕೃಷಿಕನಾಗಿ ಗ್ರಾಮಗಳ ಪರಿಕಲ್ಪನೆ ಅಳವಡಿಸಿಕೊಳ್ಳುವಾಗ, ತಂತ್ರಜ್ಞಾನಾಧಾರಿತ ಕೈಗಾರಿಕೆಗಳ ಆಸರೆಯನ್ನರಸಿ ನಗರವಾಸಿಯಾದಾಗ, ಸಮುದಾಯದೊಂದಿಗೆ ಸಹಬಾಳ್ವೆ ನಡೆಸುತ್ತಾ ಬಂದಿದ್ದಾನೆ.

ಆದರೆ ನಾವೀಗ, ಸಮುದಾಯ ಕೇಂದ್ರಿತ ಚಿಂತನೆಗಳಿಂದ ವ್ಯಕ್ತಿ ಕೇಂದ್ರಿತ ಚಿಂತನೆಗಳಿಗೆ ನಮ್ಮ ಜೀವನಕ್ರಮವನ್ನು ನಿಧಾನವಾಗಿ ಮಾರ್ಪಡಿಸಿ ಕೊಳ್ಳುತ್ತಿದ್ದೇವೆ. ಉದಾಹರಣೆಗೆ, ಕೂಡು ಕುಟುಂಬದ ಪರಿಕಲ್ಪನೆಯಿಂದ ನಿಧಾನವಾಗಿ ಕಳಚಿಕೊಂಡು, ‘ನಾವಿಬ್ಬರು ನಮಗಿಬ್ಬರು’ ಎನ್ನುವಲ್ಲಿಗೆ ಬಂದು, ಇನ್ನೂ ಮುಂದುವರಿದು, ಪ್ರಸ್ತುತ ‘ಮದುವೆ’ ಎನ್ನುವ ವ್ಯವಸ್ಥೆ ಅನಿವಾರ್ಯವೇ ಎಂದು ಪ್ರಶ್ನಿಸುವ ಕಾಲಘಟ್ಟದಲ್ಲಿದ್ದೇವೆ. ವಿಶೇಷವಾಗಿ, ಕೊರೊನಾ ವೈರಸ್ ಮನುಷ್ಯರನ್ನು ಪರಸ್ಪರ ಸಂಶಯದಿಂದ ನೋಡುವಂತಹ ಪರಿಸ್ಥಿತಿ ತಂದಿರುವಾಗ ಮತ್ತು ವೈರಸ್ ಪೀಡಿತರನ್ನು ಅಸ್ಪೃಶ್ಯರನ್ನಾಗಿಸಿರುವಾಗ ಈ ಚಿಂತನೆ ಅಗತ್ಯವೆನಿಸುತ್ತದೆ.

ಮೂಲತಃ, ಭಾರತೀಯ ಜೀವನವಿಧಾನ ಸಮುದಾಯ ಆಧಾರಿತವೇ ಹೊರತು ವ್ಯಕ್ತಿ ಆಧಾರಿತ ಅಲ್ಲ. ಇಲ್ಲಿ ಸ್ವವಿಕಸನಕ್ಕೆ ನಿರ್ಬಂಧಗಳಿವೆ. ನಮ್ಮ ಜೀವನಕ್ರಮ ಹೇಗಿರಬೇಕೆಂಬುದು ಪೂರ್ವ ನಿರ್ಧರಿತವಾಗಿದ್ದು, ಜೀವನದ ವಿವಿಧ ಕಾಲಘಟ್ಟಗಳಲ್ಲಿ ಏನೇನು ಜವಾಬ್ದಾರಿಗಳಿವೆಯೋ ಅವುಗಳನ್ನು ಪೂರ್ಣಗೊಳಿಸುವುದರಲ್ಲಿಯೇ ಬದುಕಿನ ಸಾರ್ಥಕತೆ ಅಡಗಿದೆ ಎಂಬ ನಂಬಿಕೆಯನ್ನು ನಮ್ಮಲ್ಲಿ ಬೇರೂರಿಸಲಾಗಿದೆ. ಉದಾಹರಣೆಗೆ, ಯಾವ್ಯಾವ ವಯಸ್ಸಿನಲ್ಲಿ ಮನೆ, ಮದುವೆ, ಮಕ್ಕಳು, ಆಸ್ತಿ ಇತ್ಯಾದಿ ಒಗ್ಗಿಕೊಳ್ಳಲೇಬೇಕಾದ ಜವಾಬ್ದಾರಿಗಳು ಅಥವಾ ಸಾರ್ಥಕ ಬದುಕಿನ ಮಾನದಂಡಗಳು ಎಂಬುದು. ಇದನ್ನು ಪ್ರಶ್ನಿಸಿದವರು ಅಥವಾ ವಿಭಿನ್ನವಾಗಿ ಬದುಕಿದವರು ನಮಗೆ ನಾಲಾಯಕರಂತೆ ಕಾಣಿಸುತ್ತಾರೆ. ಹಾಗಾಗಿಯೇ, ಹೆಚ್ಚಿನ ತತ್ವಜ್ಞರು ಆಯಾಯ ಕಾಲದಲ್ಲಿ ಜನರಿಗೆ ಅರ್ಥವಾಗದೇ ಹೋಗಿದ್ದು, ಕಾಲಾನಂತರ ಬಹಳ ಪ್ರಸ್ತುತವೆನಿಸಿದ್ದು. ‌

ಈ ಪ್ರಸ್ತುತತೆಯಲ್ಲಿ ಮಾನವ ಇತಿಹಾಸದ ಪುಟಗಳನ್ನು ಅವಲೋಕಿಸಿದರೆ, ಕೆಲವು ವ್ಯಕ್ತಿಗಳಷ್ಟೇ ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿರುವುದು ತಿಳಿಯುತ್ತದೆ. ವಿಶೇಷವೆಂದರೆ, ಅವರ‍್ಯಾರೂ ಸಮಾಜದ ಚೌಕಟ್ಟಿನೊಳಗೆ ಬದುಕಿದವರಲ್ಲ, ಮಾತ್ರವಲ್ಲ, ಕಟ್ಟುಪಾಡುಗಳನ್ನು ಪ್ರಶ್ನಿಸಿ ಹೊಸ ಸಾಧ್ಯತೆಗಳನ್ನು ಜಗತ್ತಿಗೆ ಪರಿಚಯಿಸಿದವರು. ಉದಾಹರಣೆಗೆ, ಬ್ರಾಹ್ಮಣ್ಯವನ್ನು ಪ್ರಶ್ನಿಸಿ ಸಮಾನತೆ ಸ್ಥಾಪಿಸಿದ ಬಸವಣ್ಣ, ಹೆಣ್ಣು ದೇಹದ ಮೋಹದ ಮುಸುಕನ್ನು ಕಿತ್ತೆಸೆದ ಅಕ್ಕ ಮಹಾದೇವಿ, ರಕ್ತರಹಿತ ಕ್ರಾಂತಿಯ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ ಗಾಂಧಿ, ಅತ್ಯಂತ ಕೆಳಜಾತಿ ಮತ್ತು ಬಡತನದಲ್ಲಿ ಹುಟ್ಟಿದರೂ ಕೇವಲ ಇಚ್ಛಾಶಕ್ತಿಯ ಬಲದಿಂದ ವ್ಯಾಸಂಗ ಮಾಡಿ ದಲಿತರ ಏಳ್ಗೆಗಾಗಿ ಜೀವನಪರ್ಯಂತ ಹೋರಾಡಿದ ಅಂಬೇಡ್ಕರ್, ಅರಮನೆಯ ಸಂಪತ್ತನ್ನೆಲ್ಲ ತ್ಯಜಿಸಿ ಜೋಳಿಗೆಯೊಂದಿಗೆ ಸಂಚಾರಿಯಾಗಿ ಬದುಕಿನ ಅರ್ಥ ಹುಡುಕಿದ ಬುದ್ಧ... ಹೀಗೆ, ವಿಶಿಷ್ಟ ಪಥದಲ್ಲಿ ಚಲಿಸಿದವರಷ್ಟೇ ಜನಮಾನಸದಲ್ಲಿ ಚಿರಸ್ಥಾಯಿಯಾಗಿರುವುದು. ಈ ನಿಟ್ಟಿನಲ್ಲಿ, ಪ್ರಸ್ತುತ ಕಾಲಘಟ್ಟದಲ್ಲಿ ವಯಸ್ಸಾದ ಯಾರನ್ನೇ ಕೇಳಿದರೂ ಸಾಮಾನ್ಯವಾಗಿ ನಿಟ್ಟುಸಿರಿನಿಂದ ಹೇಳುವುದೊಂದೇ, ‘ನಾವು ಕೇವಲ ಬದುಕಿನ ಜವಾಬ್ದಾರಿಗಳನ್ನು ನಿಭಾಯಿಸುವುದರಲ್ಲಿಯೇ ಜೀವನವನ್ನು ಕಳೆದುಕೊಂಡು ಬಿಟ್ಟೆವು. ಏನೇನೋ ಮಾಡಬಹುದಿತ್ತು, ಸಾಧ್ಯವಾಗಲಿಲ್ಲ’.

ಪ್ರಸ್ತುತ ಕೊರೊನಾ ಸಂಕಷ್ಟ ಮನುಷ್ಯನನ್ನು ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಒಂಟಿಯಾಗಿಸಿ ಆತ್ಮವಿಮರ್ಶೆಗೆ ಒಳಗಾಗಿಸಿದೆ. ಇದರೊಂದಿಗೆ, ವೈಫಲ್ಯದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮತ್ತು ‘ಭಯ’ ಉತ್ಪಾದಕ ಕೆಲ ದೃಶ್ಯ ಮಾಧ್ಯಮಗಳು ನಮ್ಮ ವಿಶ್ವಾಸವನ್ನು ಕುಗ್ಗಿಸುತ್ತಿವೆ. ಈ ಸಂದರ್ಭ ದಲ್ಲಿ, ಆರೋಗ್ಯಕರ ರೋಗನಿರೋಧಕ ದೇಹ ಮತ್ತು ಇಚ್ಛಾಶಕ್ತಿಯ ಮನಸ್ಸು ಎರಡೇ ನಮ್ಮನ್ನು ಕಾಪಾಡುವುದು.

ಜೀವನವಿಡೀ ಸಂಪತ್ತನ್ನು ಕೂಡಿಹಾಕುವುದರಲ್ಲಿಯೇ ಕಾಲ ಕಳೆದ ವ್ಯಕ್ತಿಗಳು ಕೂಡ ಅನಾಥ ಶವವಾಗುವುದನ್ನು ನೋಡಿ, ಮನುಷ್ಯ ಜೀವನದ ಆದ್ಯತೆಗಳ ಮರುಪರಿಶೀಲನೆ ಅಗತ್ಯವೆನಿಸುತ್ತದೆ. ಜೀವನವೆಂಬ ಪ್ರಯಾಣದಲ್ಲಿ ಅರಿವೆಂಬ ಟಿಕೆಟ್ ಪಡೆದು, ಪ್ರತಿಕ್ಷಣವೂ ಅನುಭವಿಸುತ್ತ, ವಿವೇಕವನ್ನು ವಿಕಸಿಸುತ್ತ, ಅನಿಶ್ಚಿತತೆಗೆ ಕುಸಿದು ಹೋಗದೆ ಮುಂದೆ ಚಲಿಸುತ್ತ, ತನ್ನ ನಿಲ್ದಾಣದಲ್ಲಿ ಇಳಿಯುವಾಗ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗುವುದೇ ಸಾರ್ಥಕ ಬದುಕೆನ್ನಬಹುದು. ಈ ದಿಸೆಯಲ್ಲಿ, ವ್ಯವಸ್ಥೆಗಳಿಗೆ ಜೋತು ಬೀಳದೆ, ಬಾಹ್ಯ ಒತ್ತಡಗಳಿಗೆ ಬಲಿಪಶುವಾಗದೆ, ಸಾಧ್ಯವಾದಷ್ಟೂ ಪರಾಲಂಬಿಯಾಗದೆ (ತನ್ನ ಇಳಿದಿನಗಳಲ್ಲಿಯೂ), ದೈಹಿಕ, ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವುದು ಸೂಕ್ತ. ಯಾಕೆಂದರೆ, ಕೊರೊನಾದಂತಹ ಅಭೂತಪೂರ್ವ ಸಂದರ್ಭಗಳಲ್ಲಿ ಅಥವಾ ಜೀವನದ ಆಕಸ್ಮಿಕಗಳಲ್ಲಿ ನಿಮ್ಮ ಆತ್ಮಬಲದ ಸಾಂಗತ್ಯ ಸದೃಢವಾಗಿದ್ದಲ್ಲಿ ಮಾತ್ರ ಅಚಲವಾಗಿ ನಿಭಾಯಿಸುತ್ತೀರಿ.

ವ್ಯವಸ್ಥೆಗೆ ಒಪ್ಪಿಸಿಕೊಂಡು ಸಾಮಾನ್ಯ ಜೀವನ ನಡೆಸುವುದು ಸುಲಭ. ಆದರೆ, ನೆಚ್ಚಿಕೊಂಡ ವ್ಯವಸ್ಥೆ ಕಂಪಿಸಿದರೆ ದಿಕ್ಕೆಡುತ್ತೇವೆ. ಅದಕ್ಕಾಗಿಯಾದರೂ ತನ್ನತನ ಗಟ್ಟಿಗೊಳಿಸುವುದು ಅವಶ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು