ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ನಾಯಿ ಗಣತಿ: ನಿರರ್ಥಕ ಪ್ರಹಸನ?

ಪ.ರಾಮಕೃಷ್ಣ ಶಾಸ್ತ್ರಿ
Published 21 ಜನವರಿ 2024, 21:26 IST
Last Updated 21 ಜನವರಿ 2024, 21:26 IST
ಅಕ್ಷರ ಗಾತ್ರ

ಕೆಲವು ದಿನಗಳ ಹಿಂದೆ, ಯಾವುದೇ ಗ್ರಾಮ ಪಂಚಾಯಿತಿ ಕಚೇರಿಗೆ ಹೋದರೂ ಅಭಿವೃದ್ಧಿ ಅಧಿಕಾರಿ ಕಾಣಲು ಸಿಗುತ್ತಿರಲಿಲ್ಲ. ನಾಯಿ ಗಣತಿಗೆ ಹೋಗಿದ್ದಾರೆ ಎಂಬ ಉತ್ತರ ಬರುತ್ತಿತ್ತು. ಸರ್ಕಾರದ ಆಜ್ಞೆಯೊಂದು, ಅವರವರ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಸಂಖ್ಯೆ ಎಷ್ಟಿದೆ ಎಂದು ಕೂಡಲೇ ಖಚಿತವಾಗಿ ಲೆಕ್ಕ ಕೊಡುವಂತೆ ಸೂಚಿಸಿತ್ತು. ಅದೆಷ್ಟೋ ಕಡೆ ಬೀದಿನಾಯಿಗಳ ಹಾವಳಿ ಎಲ್ಲೆ ಮೀರಿ, ಮಕ್ಕಳು, ಮಹಿಳೆಯರು, ವಯಸ್ಸಾದವರು ಅವುಗಳಿಂದ ಕಚ್ಚಿಸಿಕೊಂಡು ತೀವ್ರ ತೊಂದರೆ ಎದುರಿಸಿದ್ದನ್ನು ತಿಳಿದು ಸರ್ಕಾರ ಎಚ್ಚೆತ್ತುಕೊಂಡದ್ದು ಸಕಾಲಿಕ ನಡೆಯೇನೋ ಹೌದು. ಆದರೆ, ಜನಗಣತಿ ಮಾಡಿದ ಹಾಗೆಯೇ ನಾಯಿ ಗಣತಿಗಾಗಿ ಅಧಿಕಾರಿಗಳು ಬೀದಿ ಸುತ್ತಬೇಕಾಗಿ ಬಂದದ್ದು ಮಾತ್ರ ವಿಪರ್ಯಾಸವೋ ನಗೆಪಾಟಲೋ ಹೇಳುವಂತಿಲ್ಲ.

ಮೊದಲನೆಯದಾಗಿ, ನಾಯಿಗಳ ತಲೆಎಣಿಕೆಯ ವಿಧಾನವೇ ವಿಲಕ್ಷಣವಾದುದು. ನಿಂತಲ್ಲಿ ನಿಲ್ಲದೆ ಬೀದಿ ಸುತ್ತುವ ನಾಯಿಗಳನ್ನು ನಿಖರವಾಗಿ ಎಣಿಸುವ ವೈಜ್ಞಾನಿಕ ವಿಧಾನವಾದರೂ ಇದೆಯೇ? ಅವುಗಳನ್ನು ಹಿಡಿದು ಕಿವಿಗೋ ಕುತ್ತಿಗೆಗೋ ಗುರುತಿನ ಪಟ್ಟಿ ಅಂಟಿಸುವ ಎದೆಗಾರಿಕೆಯಂತೂ ಇರಲಾರದು. ಈಗಾಗಲೇ ಕೆಲವರು ತಮ್ಮ ಗ್ರಾಮ ವ್ಯಾಪ್ತಿಯ ಬೀದಿ ನಾಯಿಗಳ ಗಣತಿಯನ್ನು ಕುಳಿತಲ್ಲೇ ಮಾಡಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಒಪ್ಪಿಸಿದ್ದೂ ಆಗಿದೆ.

ಕೆಲವು ಗ್ರಾಮಗಳಲ್ಲಿ ಜನಸಂಖ್ಯೆಗಿಂತ ಹೆಚ್ಚು ಬೀದಿ ನಾಯಿಗಳಿರುವ ಸೋಜಿಗದ ಅಂಕಿ ಸಂಖ್ಯೆಯೂ ಹೊರಬಿದ್ದಿದೆ. ಈ ಗಣತಿ ಎಂಬ ಮಹತ್ಕಾರ್ಯಕ್ಕೆ ಸರ್ಕಾರದ ಬೊಕ್ಕಸದಿಂದ ಜಾರಿ ಹೋದ ಹಣದ ಮೊತ್ತದ ಲೆಕ್ಕ ಇನ್ನು ಸಿಗಬೇಕಷ್ಟೇ.

ಇಂಥ ವೃಥಾಲಾಪದ ಮೂಲಕ ನಾಯಿಗಳ ತಲೆ ಎಣಿಕೆ ಮಾಡುವ ಬದಲು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಸರ್ಕಾರಕ್ಕೆ ಅವಕಾಶ ಗಳಿದ್ದವು. ಕಾರ್ಕಳ ತಾಲ್ಲೂಕಿನ ಬಜಗೋಳಿಯ ಬಳಿ ಅಹಿಂಸಾ ಟ್ರಸ್ಟ್‌ ಮೂಲಕ ಒಬ್ಬ ಯುವಕ ಮಾಡಿರುವ ಏಕಾಂಗಿ ಸಾಹಸವನ್ನು ಗಮನಿಸಬಹುದಿತ್ತು. ಇಲ್ಲಿ ನಾಲ್ಕು ನೂರರಷ್ಟು ಬೀದಿ ನಾಯಿಗಳನ್ನು ಹಿಡಿದು ತಂದು ಆಶ್ರಯ ನೀಡಲಾಗಿದೆ. ಅವುಗಳಿಗೆ ಪುಷ್ಕಳವಾಗಿ ಮೊಸರನ್ನದ ಭೋಜನ, ಮಲಗಲು ಮಂಚ, ಔಷಧೋಪಚಾರ, ಸ್ನಾನದಂತಹ ಎಲ್ಲ ಸೌಲಭ್ಯಗಳ ಮೂಲಕ ಮಮತೆಯಿಂದ ಸಲಹಲಾಗುತ್ತಿದೆ. ಸಾಕಲು ಇಚ್ಛಿಸಿದವರಿಗೆ ಅವರ ಮನೆಗೇ ನಾಯಿಯನ್ನು ತಂದುಕೊಟ್ಟು ಹೋಗುತ್ತಾರೆ. ಇಷ್ಟಕ್ಕೂ ಈ ವ್ಯವಸ್ಥೆಗೆ ಸರ್ಕಾರ ಯಾವುದೇ ಅನುದಾನ ನೀಡಿಲ್ಲ. ದಾನಿಗಳು ಕೊಡುವ ದೇಣಿಗೆಯಿಂದಲೇ ನಾಯಿಗಳ ಈ ಆಶ್ರಯಧಾಮ ನಡೆಯುತ್ತಿದೆ. ಬೀದಿನಾಯಿಗಳನ್ನು ಹಿಡಿದು ತಂದು ಸ್ವತಃ ಸಾಕುವುದಲ್ಲದೆ ಯಾರೋ ತಂದುಕೊಟ್ಟ ನಾಯಿಗೂ ಜಾಗ ನೀಡುವ ಪ್ರಾಣಿಪ್ರೇಮ ಇಲ್ಲಿ ಎದ್ದು ಕಾಣುತ್ತದೆ.

ಬೀದಿನಾಯಿ ಲೆಕ್ಕಾಚಾರ ಪಡೆದ ಬಳಿಕ, ರಾಜ್ಯದಾದ್ಯಂತ ಇರುವ ಸಹಸ್ರಾರು ನಾಯಿಗಳನ್ನು ಸರ್ಕಾರ ಏನು ಮಾಡುತ್ತದೆ? ಬಹುಸಂಖ್ಯೆಯ ನಾಯಿಗಳನ್ನು ಹಿಡಿದು, ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸುವುದು ಸುಲಭದ ಮಾತೇ? ಇದರ ಬದಲು, ತಾಲ್ಲೂಕಿನಲ್ಲಿ ಯಾರಾದರೂ ಶ್ವಾನಪ್ರೇಮಿಗಳಿಗೆ ಆಸಕ್ತಿಯಿದ್ದರೆ ಬೀದಿನಾಯಿಗಳಿಗೊಂದು ನೆಲೆ ಕಲ್ಪಿಸಲು ನೆರವಾಗಬಹುದು. ಒಂದು ಸಣ್ಣ ಪಟ್ಟಣದ ಬಸ್‌ ನಿಲ್ದಾಣದಲ್ಲಿ ರಾತ್ರಿ ಒಟ್ಟು ಸೇರುವ ನಾಯಿಗಳು, ನೋಡಿದರೆ ಭಯಭೀತರಾಗುವಷ್ಟು ಸಂಖ್ಯೆಯಲ್ಲಿ ಇರುತ್ತವೆ. ಇನ್ನು ಬೆಂಗಳೂರಿನಂತಹ ಮಹಾನಗರದಲ್ಲಿ ಅವುಗಳ ಲೆಕ್ಕ ಹಿಡಿಯುವುದು ಸುಲಭವಲ್ಲ. ಹೀಗಾಗಿ, ಬೀದಿನಾಯಿಗಳ ಸಮಸ್ಯೆಯನ್ನು ಇತ್ಯರ್ಥ ಮಾಡುವುದಂತೂ ಸುಲಭದ ಮಾತಲ್ಲ.

ಬೀದಿನಾಯಿಯ ಕಡಿತಕ್ಕೆ ಒಳಗಾದವರಿಗೆ ಸರ್ಕಾರವು ₹ 5 ಸಾವಿರ ಪರಿಹಾರ ನೀಡಿ ನುಣುಚಿಕೊಳ್ಳುತ್ತದೆ. ಸಮಸ್ಯೆ ಮಾತ್ರ ಜೀವಂತವಾಗಿ ಉಳಿಯುತ್ತದೆ. ಒಂದು ನಾಯಿಯನ್ನೂ ಬಿಡದಂತೆ ಕರಾರುವಾಕ್ಕಾಗಿ ಹಿಡಿದು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿ, ಅಂತಹ ನಾಯಿಯ ಕಿವಿಗೆ ಗುರುತಿನೋಲೆ ಅಂಟಿಸುವ ಕೆಲಸವನ್ನು ಮಾಡುವಂತೆ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಬಹುದಿತ್ತು. ಇದರಿಂದ ಒಮ್ಮೆಗೇ ಬಹಳಷ್ಟು ವೆಚ್ಚವಾದರೂ ನಿಧಾನವಾಗಿ ಸಮಸ್ಯೆ ಇಳಿಮುಖವಾಗುತ್ತಾ ಹೋಗಬಹುದು. ಹೆಣ್ಣುಮರಿಗಳನ್ನು ಬೀದಿಯಲ್ಲಿ ಅನಾಥವಾಗಿ ತಂದುಬಿಡುವ ಶ್ವಾನಪ್ರೇಮಿಗಳಿಗೆ ಕಠಿಣ ದಂಡನೆಯ ಭಯ ಹುಟ್ಟಿಸುವ ಕೆಲಸವೂ ಆಗಬೇಕು.

ಇದರೊಂದಿಗೆ, ಶ್ವಾನಗಳ ಕಡಿತಕ್ಕೊಳಗಾದ ಸಂತ್ರಸ್ತರಿಗೆ ಅನೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ರೇಬಿಸ್‌ ನಿರೋಧಕ ಚುಚ್ಚುಮದ್ದು ಸಿಗುವುದಿಲ್ಲ. ಇದರ ಪೂರೈಕೆ ಕಡಿಮೆಯಾಗದಂತೆ ಸರ್ಕಾರ ನೋಡಿಕೊಳ್ಳಬೇಕು. ‘ಬೀದಿನಾಯಿ ಮುಕ್ತ ಗ್ರಾಮ ಪಂಚಾಯಿತಿ’ ಎಂಬ ಆಂದೋಲನವನ್ನು ಆರಂಭಿಸಬೇಕು. ನಾಯಿಗಳನ್ನು ಹಿಡಿದು ಸಾಕುಪ್ರಾಣಿ ಸಂರಕ್ಷಣಾ ಧಾಮಗಳಿಗೆ ಸೇರಿಸುವ ಕೆಲಸ ಮಾಡಬೇಕು. ನಾಯಿ ಗಣತಿಯಂತಹ ನಿರರ್ಥಕ ಪ್ರಹಸನಕ್ಕೆ ವೆಚ್ಚವಾಗುವ ಹಣ ಇಂತಹ ಸಂಸ್ಥೆಗಳಿಗೆ ತಲುಪಿದರೆ ಸಾರ್ಥಕವಾಗಬಹುದು.

ಶ್ವಾನಗಳ ಸಂತಾನಶಕ್ತಿಹರಣ ಯೋಜನೆಯನ್ನು ಪ್ರತಿ ತಾಲ್ಲೂಕಿನಲ್ಲೂ ಜಾರಿಗೆ ತರಲು ಸರ್ಕಾರ ನೀಡುತ್ತಿರುವ ಅನುದಾನವಿದೆ. ಇದರ ಸದ್ಬಳಕೆ ಆಗುತ್ತಿದೆಯೇ? ಆಗಿದ್ದಲ್ಲಿ ಈಗ ಅಧಿಕಾರಿಗಳು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಷ್ಟು ಸಾವಿರ ಬೀದಿ ನಾಯಿಗಳಿವೆ ಎಂದು ಸಲ್ಲಿಸುತ್ತಿರುವ ಅಚ್ಚರಿಯ ಲೆಕ್ಕ ಸಲ್ಲಿಕೆಯಾಗಲು ಅವಕಾಶವೇ ಇರುತ್ತಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT