ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಮಕ್ಕಳಸ್ನೇಹಿ ತರಗತಿ: ಬೇಕು ಖಾತರಿ

ಮಕ್ಕಳು ಮಧ್ಯದಲ್ಲೇ ಶಾಲೆ ತೊರೆಯುವುದಕ್ಕೆ ಅಥವಾ ಕಲಿಕೆಯಲ್ಲಿ ಹಿಂದೆ ಉಳಿಯುವುದಕ್ಕೆ ಕಾರಣಗಳನ್ನು ಕಂಡುಕೊಂಡು ನಿವಾರಣೆಯತ್ತ ಗಮನಹರಿಸಬೇಕಿದೆ
Published 3 ಜನವರಿ 2024, 23:40 IST
Last Updated 3 ಜನವರಿ 2024, 23:40 IST
ಅಕ್ಷರ ಗಾತ್ರ

ಕೆಲವು ದಿನಗಳ ಹಿಂದೆ ಅಂಗಡಿಯೊಂದರಲ್ಲಿ, ಮಗನೊಟ್ಟಿಗೆ ಬಂದಿದ್ದ ತಾಯಿಯನ್ನು ಗಮನಿಸಿದೆ. ಮುಖದಲ್ಲಿದ್ದ ಆಯಾಸ, ಮಾಸಿದ ಕೂದಲನ್ನು ಕಂಡು, ಆ ಬಾಲಕ ಕಟ್ಟಡ ಕಾರ್ಮಿಕನಿರಬಹುದು ಎಂದು ಊಹಿಸಿ, ಆತನ ಪೂರ್ವಾಪರ ವಿಚಾರಿಸಿದೆ. ರಾಯಚೂರು ಜಿಲ್ಲೆಯ ಹಳ್ಳಿಯೊಂದರಿಂದ ಬಂದಿರು ವುದಾಗಿಯೂ ಮನೆಯವರು ಮಾಡಿಕೊಂಡಿರುವ ಸಾಲವನ್ನು ತೀರಿಸುವ ಸಲುವಾಗಿ ಮೂರ್ನಾಲ್ಕು ತಿಂಗಳುಗಳ ಕಾಲ ಬೆಂಗಳೂರಿನಲ್ಲಿದ್ದು ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿರುವುದಾಗಿಯೂ ತಾಯಿ ತಿಳಿಸಿದಳು. ಊರಿನಲ್ಲಿ 8ನೇ ತರಗತಿ ಓದುತ್ತಿದ್ದ ಬಾಲಕ ಕೆಲ ತಿಂಗಳ ಹಿಂದೆಯೇ ಶಾಲೆಯನ್ನು ಬಿಟ್ಟಿದ್ದ. ಬೆಂಗಳೂರಿನಲ್ಲಿ ಮತ್ತೆ ಶಾಲೆಗೆ ಸೇರಿಸುವುದಾಗಿ ನಾನು ಹಲವು ಬಾರಿ ಮನವೊಲಿಸಲು ಪ್ರಯತ್ನಿಸಿದರೂ ‘ಬ್ಯಾಡ ಸಾರ್‌, ಸಾಲೆ ಒಲ್ಲೆ’ ಎಂದೇ ಹೇಳಿದ.

ಬಡತನ, ನಿರುದ್ಯೋಗದಂತಹ ಕಾರಣಗಳಿಂದ ಉತ್ತರ ಕರ್ನಾಟಕ ಹಾಗೂ ಇತರ ಭಾಗಗಳಿಂದ ಜನ ಬೆಂಗಳೂರು, ಗೋವಾದಂತಹ ನಗರ ಪ್ರದೇಶಗಳಿಗೆ ವಲಸೆ ಹೋಗುವುದು ಸಾಮಾನ್ಯ. ಆಗ ಇಂತಹ ಪೋಷಕರ ಜೊತೆ ತಾವೂ ತೆರಳುವ ಕೆಲವು ಮಕ್ಕಳು ಶಾಲೆ ತೊರೆಯುತ್ತಾರೆ. ಸ್ವಲ್ಪ ಕಾಲಾನಂತರ ಆ ಕುಟುಂಬಗಳು ತಮ್ಮ ಗ್ರಾಮಗಳಿಗೆ ಹಿಂದಿರುಗಿದರೂ ದೀರ್ಘಾವಧಿಯಲ್ಲಿ ಶಾಲೆಯನ್ನು ತಪ್ಪಿಸಿದ್ದರಿಂದ ಹೆಚ್ಚಿನ ಮಕ್ಕಳು ಮರಳಿ ಶಾಲೆಗೆ ಹಾಜರಾಗುವ ಗೋಜಿಗೆ ಹೋಗುವುದಿಲ್ಲ.

ವಾಸಸ್ಥಳದ ಬಗ್ಗೆ ಸ್ಥಿರತೆ ಇಲ್ಲದಿರುವುದು, ಬಾಲಕಾರ್ಮಿಕರಾಗಿ ತಮ್ಮ ತಂದೆ–ತಾಯಿ ಜೊತೆ ಕೆಲಸ ಮಾಡಬೇಕಾದ ಅನಿವಾರ್ಯ ಸಂದರ್ಭಗಳು ಸೃಷ್ಟಿಯಾಗುವುದು ಅಥವಾ ತಮ್ಮ–ತಂಗಿಯರನ್ನು ನೋಡಿಕೊಳ್ಳುವ ಸಲುವಾಗಿಯೂ ಕೆಲವು ಮಕ್ಕಳ ಶಾಲಾ ಶಿಕ್ಷಣ ಮೊಟಕುಗೊಳ್ಳುತ್ತದೆ.

ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮುಸ್ಲಿಂ ಸಮುದಾಯದ ಮಕ್ಕಳು, ವಿವಿಧ ವರ್ಗಗಳ ಹೆಣ್ಣುಮಕ್ಕಳ ಜೊತೆಗೆ ಕುಟುಂಬ ವಂಚಿತರಾದ ಬೀದಿ ಮಕ್ಕಳು, ಅಂಗವಿಕಲ ಮಕ್ಕಳು ಮಧ್ಯದಲ್ಲಿ ಶಾಲೆಯನ್ನು ತೊರೆಯುವುದು ಹೆಚ್ಚು ಎಂದು ವಿವಿಧ ಅಧ್ಯಯನಗಳು ನಮಗೆ ತಿಳಿಸುತ್ತವೆ.

ಕೇಂದ್ರ ಸರ್ಕಾರವು 2021-22ರಲ್ಲಿ ಪ್ರಕಟಿಸಿರುವ ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿ ಪ್ರೌಢಶಾಲಾ ಹಂತದಲ್ಲಿ (9-10ನೇ ತರಗತಿ) ಮಕ್ಕಳ ಶಾಲೆ ಬಿಡುವ ಪ್ರಮಾಣವು ಶೇಕಡ 14.7ರಷ್ಟು ಇದೆ. ಶಾಲೆ ಬಿಡುವ ಮಕ್ಕಳ ರಾಷ್ಟ್ರೀಯ ಸರಾಸರಿ ಪ್ರಮಾಣಕ್ಕಿಂತ (ಶೇ 12.6) ಇದು ಹೆಚ್ಚು. ಒಡಿಶಾ ರಾಜ್ಯವು ಪ್ರೌಢಶಾಲಾ ಹಂತದಲ್ಲಿ ದೇಶದಲ್ಲಿ ಅತಿಹೆಚ್ಚು ಶಾಲೆ ಬಿಡುವವರ ಪ್ರಮಾಣವನ್ನು (ಶೇ 27.3) ಹೊಂದಿದೆ. ನಂತರದ ಸ್ಥಾನಗಳಲ್ಲಿ ಮೇಘಾಲಯ (ಶೇ 21.7), ಬಿಹಾರ (ಶೇ 20.5), ಅಸ್ಸಾಂ (ಶೇ 20.3) ರಾಜ್ಯಗಳು ಇವೆ. ಇದೇ ವರದಿಯಲ್ಲಿ 2020-21 ಮತ್ತು 2021-22ರಲ್ಲಿ ಪೂರ್ವಪ್ರಾಥಮಿಕ ಹಂತದಿಂದ 12ನೇ ತರಗತಿಯವರೆಗೆ ದಾಖಲಾಗಿದ್ದ ಮಕ್ಕಳ ಸಂಖ್ಯೆಯನ್ನು ನೀಡಲಾಗಿದೆ. ಅದರ ಪ್ರಕಾರ, ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಉಳಿದ ಎಲ್ಲ ಜಾತಿ–ಸಮುದಾಯಗಳ ಮಕ್ಕಳ ದಾಖಲಾತಿ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ. ಅಲ್ಪಸಂಖ್ಯಾತ ವರ್ಗದ ಮಕ್ಕಳ ದಾಖಲಾತಿ ಪ್ರಮಾಣ ಮಾತ್ರ ಕಡಿಮೆಯಾಗಿದೆ ಎಂಬುದು ಗಮನಾರ್ಹ.

ಸ್ವಾತಂತ್ರ್ಯಪೂರ್ವ ಭಾರತದಲ್ಲಿ 9 ಶಿಕ್ಷಣ ಆಯೋಗಗಳು ನೀಡಿದ ವರದಿಗಳಲ್ಲಿ ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಸಿಗಲಿಲ್ಲ. ಸ್ವಾತಂತ್ರ್ಯಾನಂತರ ರಚನೆಯಾದ ಶಿಕ್ಷಣ ಆಯೋಗಗಳು ನೀಡಿದ ವರದಿಗಳಿಂದಾಗಿ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ– 1968 ಹಾಗೂ 1986, ಸರ್ವಶಿಕ್ಷಣ ಅಭಿಯಾನ ಹಾಗೂ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯ ಫಲವಾಗಿ ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ತಕ್ಕಮಟ್ಟಿಗೆ ಪ್ರಗತಿ ಆಗಿರುವುದನ್ನು ಅಲ್ಲಗಳೆಯಲಾಗದು. ಆದರೆ ಶಿಕ್ಷಣದ ಖಾತರಿಯನ್ನು ಎಲ್ಲ ವರ್ಗದ ಮಕ್ಕಳಿಗೂ ಸಮಾನ ನೆಲೆಯಲ್ಲಿ ದೊರಕಿಸಿಕೊಡಲು ಸಾಧ್ಯವಾಗಿಲ್ಲ. ಈ ನ್ಯೂನತೆಯನ್ನು ನಿವಾರಿಸುವ ಕೆಲಸ ಆಗಬೇಕಾಗಿದೆ.

ಶೈಕ್ಷಣಿಕ ವ್ಯವಸ್ಥೆಯು ಶಾಲೆಗಳ ಲಭ್ಯತೆಯನ್ನು ಖಾತರಿಪಡಿಸಿಕೊಳ್ಳಲು ಸಫಲವಾಗಿರುವುದನ್ನು ಗಮನಿಸಬಹುದು. ಆದರೆ ಕೆಲವು ವರ್ಗಗಳ ಮಕ್ಕಳು ಶಾಲೆಗೆ ಹಾಜರಾಗದೇ ಇರುವುದಕ್ಕೆ ಅಥವಾ ಹಾಜರಾದರೂ ಕಲಿಕೆಯಲ್ಲಿ ಯಶಸ್ಸು ಸಾಧಿಸದೇ ಇರುವುದಕ್ಕೆ ಇರಬಹುದಾದ ಸಾಮಾಜಿಕ, ಆರ್ಥಿಕ ಅಥವಾ ಸಾಂಸ್ಕೃತಿಕ ಕಾರಣಗಳನ್ನು ಕಂಡುಕೊಳ್ಳದೇ ಇದ್ದಲ್ಲಿ ಪೂರ್ಣ ಪ್ರಗತಿ ಸಾಧಿಸಲು ಸಾಧ್ಯವಾಗದು.

ಎಷ್ಟೋ ಬಾರಿ ಸೂಕ್ಷ್ಮ ಮನೋಭಾವ ಹೊಂದಿಲ್ಲದ ಶಿಕ್ಷಕರ ವರ್ತನೆಗಳು, ಆಸಕ್ತಿ ಕೆರಳಿಸದ ತರಗತಿ ಪ್ರಕ್ರಿಯೆಗಳು ಸಹ ಮಕ್ಕಳು ಶಾಲೆಯಿಂದ ಹೊರಗುಳಿಯುವಂತೆ ಮಾಡುತ್ತವೆ. ಮಕ್ಕಳ ವೈವಿಧ್ಯದ ಹಿನ್ನೆಲೆಯನ್ನು ಯಶಸ್ವಿಯಾಗಿ ಕಂಡುಕೊಂಡು, ಅದಕ್ಕೆ ತಕ್ಕಂತೆ ಅನುಭೂತಿಯಿಂದ ಸ್ಪಂದಿಸುವುದು ಹೆಚ್ಚು ಪರಿಣಾಮಕಾರಿ ಆಗಬಲ್ಲದು.

ಮಕ್ಕಳ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಹಿನ್ನೆಲೆ ಹಾಗೂ ಅನನ್ಯತೆಯನ್ನು ಗುರುತಿಸುವುದು ಮತ್ತು ಅನನುಕೂಲ ಹೊಂದಿರುವ ಮಕ್ಕಳನ್ನು ನಿರ್ದಿಷ್ಟವಾಗಿ ಗುರುತಿಸಿ, ಅದಕ್ಕೆ ತಕ್ಕಂತೆ ಶಾಲೆ ಹಾಗೂ ತರಗತಿಯ ಪ್ರಕ್ರಿಯೆಗಳನ್ನು ಮಕ್ಕಳಸ್ನೇಹಿಯಾಗಿ ರೂಪಿಸುವುದು ಎಲ್ಲಾ ವರ್ಗಗಳ ಮಕ್ಕಳ ಶಿಕ್ಷಣವನ್ನು ಖಾತರಿಪಡಿಸುವಲ್ಲಿ ಪರಿಣಾಮಕಾರಿ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT