ಶನಿವಾರ, ಏಪ್ರಿಲ್ 1, 2023
23 °C
ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿ ಕೇಂದ್ರಿತ ಮಾದರಿಯಿಂದ ಶಿಕ್ಷಕ ಕೇಂದ್ರಿತ ಮಾದರಿಗೆ ಹಿಂದಿರುಗುತ್ತಿರುವುದು ಆತಂಕಕಾರಿ ಬೆಳವಣಿಗೆ

ತಂತ್ರಜ್ಞಾನದ ಸೇತು: ವಿದ್ಯಾರ್ಥಿ ಹೊಣೆಗಾರಿಕೆ

ಪ್ರೊ. ಶಿವಲಿಂಗಸ್ವಾಮಿ ಎಚ್.ಕೆ. Updated:

ಅಕ್ಷರ ಗಾತ್ರ : | |

ಬದಲಾದ ಈಗಿನ ಪರಿಸ್ಥಿತಿಯಲ್ಲಿ, ನಮ್ಮ ದಿನಚರಿಯನ್ನು ಆಕ್ರಮಿಸಿಕೊಂಡಿರುವ ಹಲವಾರು ಸಂಗತಿಗಳಲ್ಲಿ ಆನ್‌ಲೈನ್ ಶಿಕ್ಷಣ ಬಹಳ ಮುಖ್ಯವಾದದ್ದು. ಶಾಲೆಗಳಿಗೆ ಹೋಗದೆ ಮನೆಯ ಹಿತಕರ ವಾತಾವರಣದಲ್ಲಿ ಆಗುವ ಕಲಿಕೆಯು ವಾಸ್ತವದಲ್ಲಿ ರಚನಾತ್ಮಕವೇ ಅಥವಾ ತೊಡಕಿನದೇ ಎಂಬುದು ಗಂಭೀರವಾದ ವಿಷಯ.

ಸದ್ಯದ ಪರಿಸ್ಥಿತಿಯಲ್ಲಿ ಇಂದಿನ ತಲೆಮಾರಿನ ಶಿಕ್ಷಣ ತಜ್ಞರಿಗೆ ಆನ್‌ಲೈನ್ ತರಗತಿಗಳು ಬಹಳ ಸೂಕ್ತವಾದ ಪರ್ಯಾಯವಾಗಿ ತೋರಬಹುದು. ಇದಕ್ಕೆ ಮೂಲ ಕಾರಣ, ಜಗತ್ತಿನಾದ್ಯಂತ ಈಗಾಗಲೇ ವೆಬಿನಾರುಗಳು, ಸಭೆಗಳು ಮತ್ತು ಶಾಪಿಂಗ್‌ಗಳು ಯಥೇಚ್ಛವಾಗಿ ಆನ್‌ಲೈನ್ ಮೂಲಕ ನಡೆಯುತ್ತಿರುವುದು. ಆದರೆ ಸಮಸ್ಯೆ ಉದ್ಭವಿಸುವುದು, ಆನ್‌ಲೈನ್ ಮಾದರಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿನ ಯಶಸ್ಸು ಎಷ್ಟಿದೆ ಮತ್ತು ಅದನ್ನು ಅಳೆಯುವ ಸೂಕ್ತ ಮಾಪನ ಯಾವುದು ಎಂಬ ಚಿಂತನೆಗೆ ತೊಡಗಿದಾಗ.

ಒಂದು ತರಗತಿಯಲ್ಲಿ ಶಿಕ್ಷಕ ಪಾಠ ಮಾಡುವಾಗ ಗೋಚರಿಸುವುದು ಪಠ್ಯ ಮತ್ತು ಮಕ್ಕಳ ಹಾಜರಾತಿ. ಇದರ ಜೊತೆಗೆ ಬಹಳ ಪ್ರಮುಖವಾದ ಮತ್ತು ಅಗೋಚರವಾದ ಸಂಗತಿಗಳೆಂದರೆ, ಪಾಠವು ವಿದ್ಯಾರ್ಥಿ ಕೇಂದ್ರಿತವಾಗಿರುತ್ತದೆ ಮತ್ತು ವಿದ್ಯಾರ್ಥಿ
ಗಳಲ್ಲಿ ಹೊಣೆಗಾರಿಕೆ ಕೂಡ ಇರುತ್ತದೆ. ಇಂತಹ ಅಂಶಗಳು ಆನ್‌ಲೈನ್ ತರಗತಿಗಳಲ್ಲಿ ಸಾಧ್ಯವೇ?

ಆನ್‌ಲೈನ್ ತರಗತಿ ನಡೆಸಿ ಒಂದು ಮಟ್ಟಕ್ಕೆ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಶಿಕ್ಷಕರ ಶ್ರಮ ಖಂಡಿತ ಶ್ಲಾಘನೀಯ. ತಂತ್ರಜ್ಞಾನದ ಪರಿಣತಿಯಿಲ್ಲದ ಎಷ್ಟೋ ಹಿರಿಯ ಶಿಕ್ಷಕರು ವೆಬಿನಾರುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೇಲ್ನೋಟಕ್ಕೆ ಇವೆಲ್ಲ ಸಕಾರಾತ್ಮಕ ಬೆಳವಣಿಗೆಗಳೆಂದು ತೋರಿದರೂ ಕಲಿಕೆಯಲ್ಲಿ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ಮತ್ತು ವಿದ್ಯಾರ್ಥಿ ಹೊಣೆಗಾರಿಕೆ ಕುಂಠಿತವಾಗುತ್ತಿರುವುದು ಮಕ್ಕಳ ಬೆಳವಣಿಗೆಯ ಮೇಲೆ ಗಾಢವಾದ ಪರಿಣಾಮ ಬೀರುವುದು ನಿಶ್ಚಿತ.

ಕಲಿಕೆಯಲ್ಲಿ ವಿದ್ಯಾರ್ಥಿಯ ‘ದನಿ’ಗೆ ಆದ್ಯತೆ ಸಿಗುವುದು ಸಾಂಪ್ರದಾಯಿಕ ಶಿಕ್ಷಣದ ವಿಶೇಷ. ತರಗತಿಯಲ್ಲಿ ನಡೆಯುವ ಚರ್ಚೆಗಳಲ್ಲಿ ವಿದ್ಯಾರ್ಥಿಯ ಪಾಲ್ಗೊಳ್ಳುವಿಕೆಯು ಅವನ ಮುಂದಿನ ಬೆಳವಣಿಗೆಯ ಮೇಲೆ ಮಹತ್ತರ ಪರಿಣಾಮ ಬೀರುತ್ತದೆ. ಅದು ಈಡೇರಲು ಗುರು– ಶಿಷ್ಯರ ಮುಖಾಮುಖಿ ಕಡ್ಡಾಯವಾಗಿ ಆಗಲೇಬೇಕು.

ತಂತ್ರಜ್ಞಾನವು ಅದ್ಭುತಗಳನ್ನು ಸೃಷ್ಟಿಸಿರುವುದು ಪ್ರಶ್ನಾತೀತ. ಆದರೆ ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನವು ಸಾಂಪ್ರದಾಯಿಕ ತರಗತಿಗಳ ಬದಲಿ ವ್ಯವಸ್ಥೆಯಾಗಿ ರೂಪುಗೊಳ್ಳುವುದು ಕಷ್ಟಸಾಧ್ಯ. ಪ್ರತೀ ಶಿಕ್ಷಕ ಎದುರಿಸಲೇಬೇಕಾದ ಮೂಲ ಸಮಸ್ಯೆ ಎಂದರೆ, ತರಗತಿಗೆ ಬಹಳ ಪ್ರಾಮಾಣಿಕವಾಗಿ ಪ್ರಜಾಸತ್ತಾತ್ಮಕ ಆಯಾಮ ದೊರಕಿಸಲು ಪ್ರಯತ್ನಪಟ್ಟರೂ ಆತನಿಗೆ ಆನ್‌ಲೈನ್ ತರಗತಿಗಳ ಇತಿಮಿತಿಗಳನ್ನು ಮೀರುವುದು ಬಹಳ ಕಷ್ಟವಾಗುವುದು. ಆನ್‌ಲೈನ್ ಶಿಕ್ಷಣ ನಮ್ಮನ್ನು ಪುನಃ ಶಿಕ್ಷಕ ಕೇಂದ್ರಿತ ಮಾದರಿಗೆ ಹಿಂದಿರುಗುವಂತೆ ಮಾಡುತ್ತಿರುವುದು ಅತ್ಯಂತ ಆತಂಕಕಾರಿ. ಇದಕ್ಕೆ ನಿದರ್ಶನವೆಂದರೆ, ವಿದ್ಯಾರ್ಥಿಗಳು ಪಾಠ ಕೇಳುವಾಗ ತಮ್ಮ ಮೈಕ್ರೊಫೋನನ್ನು ಸ್ತಬ್ಧಗೊಳಿಸಬೇಕಿರುವುದು. ಇದರಿಂದ ಅವರ ಪಾಲ್ಗೊಳ್ಳುವಿಕೆಯನ್ನು ಸ್ತಬ್ಧಗೊಳಿಸಿದಂತೆ ಆಗುತ್ತದೆ.

ವಿದ್ಯಾರ್ಥಿಗಳ ಆಕಾಂಕ್ಷೆ, ದೌರ್ಬಲ್ಯ ಮತ್ತು ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ತಕ್ಕಂತೆ ಶಿಕ್ಷಕ ತನ್ನ ಪಾಠವನ್ನು ರಚಿಸಿಕೊಳ್ಳುವುದು ಸಾಂಪ್ರದಾಯಿಕ ತರಗತಿಗಳಷ್ಟು ಪರಿಣಾಮಕಾರಿಯಾಗಿ ಇರುವುದಿಲ್ಲ. ಜೊತೆಗೆ, ಪಾಠ ಮಾಡುವಾಗ ಶಿಕ್ಷಕ ತನ್ನ ಪಾಠವನ್ನು ಯಾಂತ್ರಿಕವಾಗಿ ಮುಗಿಸಬೇಕಾಗುತ್ತದೆ. ವಿದ್ಯಾರ್ಥಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯ ಮೂಲಕ ಆಗಬೇಕಿರುವ ಕಲಿಕೆಯನ್ನು ನಿರ್ಲಕ್ಷಿಸಬೇಕಾಗುತ್ತದೆ.

ಪ್ರತಿಯೊಂದು ಕಲಿಕಾ ಸಾಮಗ್ರಿಯನ್ನೂ ವಿದ್ಯಾರ್ಥಿಯು ಅರ್ಥ ಮಾಡಿಕೊಂಡು ಪ್ರಶ್ನೆ ಕೇಳುವುದು ಅಥವಾ ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕಿರುವುದು ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದ ಉದ್ದೇಶಗಳಲ್ಲೊಂದು. ಆನ್‌ಲೈನ್ ತರಗತಿಗಳಲ್ಲಿ, ಶಿಕ್ಷಕನ ಉಪಸ್ಥಿತಿಯು ತಂತ್ರಜ್ಞಾನದ ಸೇತುವೆಯ ಮೂಲಕ ಆಗುವುದರಿಂದ ಹಾಗೂ ಮನೆಯ ಶ್ರೀರಕ್ಷೆಯ ಧೈರ್ಯವೂ ಇರುವುದರಿಂದ ಕಲಿಕೆಯಲ್ಲಿನ ತನ್ನ ಹೊಣೆಗಾರಿಕೆಯನ್ನು ವಿದ್ಯಾರ್ಥಿಯು ಮರೆಯುವ ಸಾಧ್ಯತೆ ಇರುತ್ತದೆ.

ವಿದ್ಯಾರ್ಥಿಯು ತನ್ನ ಸಹಪಾಠಿಗಳೊಂದಿಗೆ ವಾಸ್ತವವಾಗಿ ಬೆರೆತಾಗ ಪೈಪೋಟಿ, ಸ್ಪರ್ಧೆ ಅಥವಾ ಹೋಲಿಕೆಯ ಸಂದರ್ಭಗಳು ಸೃಷ್ಟಿಯಾಗಿ ತನ್ನ ಹೊಣೆಗಾರಿಕೆಯ ಅರಿವಾಗುತ್ತದೆ. ಆನ್‌ಲೈನ್ ಪಾಠ ಕೇಳಿದ ನಂತರ ಹೀಗೆ ತನ್ನನ್ನು ತಾನು ಪರೀಕ್ಷೆಗೆ ಒಡ್ಡಿಕೊಳ್ಳಲು ಸಾಧ್ಯವಾಗದೇ ಹೋಗುವುದರಿಂದ ಪಾರದರ್ಶಕವಾದ ಆತ್ಮವಿಮರ್ಶೆ ಕಷ್ಟವಾಗುತ್ತದೆ. ಮುಕ್ತವಾದ ಚರ್ಚೆ ಸಹ ಸಾಧ್ಯವಾಗದೆ ಪ್ರಶ್ನೆ ಕೇಳುವ ಹಂಬಲ ಕ್ಷೀಣಿಸುತ್ತಾ ಹೋಗುವುದರಿಂದ ವಿದ್ಯಾರ್ಥಿಗಳ ಸೃಜನಶೀಲತೆ ಕೂಡ ಕುಂದುತ್ತದೆ.

ಆನ್‌ಲೈನ್ ತರಗತಿಯ ನಂತರ ಆನ್‌ಲೈನ್ ಪರೀಕ್ಷೆ ನಡೆದರೆ, ಮಕ್ಕಳಿಗೆ ಬಹು ಆಯ್ಕೆಯ ಪ್ರಶ್ನೆಗಳನ್ನೇ ಕೇಳಬೇಕಾಗುತ್ತದೆ. ಇದರಿಂದ ಅಂಕಿ ಅಂಶಗಳಿಗೇ ಹೆಚ್ಚು ಪ್ರಾಶಸ್ತ್ಯ ದೊರೆತು, ಅವರ ಜ್ಞಾನ, ಕೌಶಲಗಳ ಪರೀಕ್ಷೆ ಮರೀಚಿಕೆಯಾಗುತ್ತದೆ. ಸದ್ಯದ ಪರಿಸ್ಥಿತಿಯನ್ನು ಆಮೂಲಾಗ್ರವಾಗಿ ನೋಡುವುದಾದರೆ, ಆನ್‌ಲೈನ್ ತರಗತಿಯು ಸಾಂಪ್ರದಾಯಿಕ ತರಗತಿಯ ಒಂದು ಭಾಗವಾಗಬಹುದೇ ಹೊರತು ಪರ್ಯಾಯ ಆಗಲಾರದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು