ಗುರುವಾರ , ಸೆಪ್ಟೆಂಬರ್ 24, 2020
20 °C
ಅಯೋಧ್ಯೆಯಲ್ಲಿ ಮೇಲೇಳುತ್ತಿರುವುದು ಬರೀ ಮಂದಿರವಲ್ಲ...

ಸಂಗತ | ಕಾಳಾರಾಮನಿಂದ ಅಯೋಧ್ಯಾರಾಮನವರೆಗೆ

ವಾದಿರಾಜ್ Updated:

ಅಕ್ಷರ ಗಾತ್ರ : | |

ರಾಮ ಮಂದಿರ ನಿರ್ಮಾಣ

ಡಾ.ಶಂಕರರಾವ್ ಕಾರತ್ ಅವರು ನಾಗಪುರದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡಾ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದವರು. ತಾರುಣ್ಯದಲ್ಲಿ ಬಾಬಾಸಾಹೇಬರ ಒಡನಾಡಿಯಾಗಿದ್ದವರು. ಕಾರತ್‌ರ ಆತ್ಮಕಥೆ ‘ಕರಾಳ ಅಂತರಾಳ’ದಲ್ಲಿ ಒಂದು ಪ್ರಸಂಗ ಬರುತ್ತದೆ. ಅದು ನಾಸಿಕ್‌ನ ಐತಿಹಾಸಿಕ ಕಾಳಾರಾಮ ಮಂದಿರ ಪ್ರವೇಶಕ್ಕಾಗಿ ನಡೆದ ಹೋರಾಟದ ಸಂದರ್ಭ. ಬಾಬಾಸಾಹೇಬರನ್ನು ಕಾರತ್‌ ಕೇಳುತ್ತಾರೆ: ‘ಇದೇ ದೇವಾಲಯ ಪ್ರವೇಶಿಸಬೇಕು ಎಂಬ ಹೋರಾಟ ಏಕೆ?’

ಬಾಬಾಸಾಹೇಬರು ಉತ್ತರಿಸುತ್ತಾರೆ: ‘ನಮಗೆ ಸುಲಭಕ್ಕೆ ಪ್ರವೇಶ ಸಿಗುವ ಯಾವುದಾದರೂ ದೇವಿಯ ಗುಡಿಯನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು. ಈ ಕಾಳಾ (ಕಪ್ಪುಶಿಲೆಯ) ರಾಮ ತನ್ನ ನಡವಳಿಕೆಯಿಂದ ದೊಡ್ಡವನಾದವನು. ಆದಿವಾಸಿ ಮಹಿಳೆ ಶಬರಿ ಕೊಟ್ಟ ಎಂಜಲು ಹಣ್ಣನ್ನು ಪ್ರಸಾದವೆಂದು ಸ್ವೀಕರಿಸಿದವನು. ಅಸ್ಪೃಶ್ಯತೆ ಆಚರಿಸುವ ಸವರ್ಣೀಯರು ರಾಮನನ್ನು ಆರಾಧಿಸುತ್ತಾರೆ. ಆದರೆ ರಾಮನ ನಡವಳಿಕೆಯನ್ನು ಮರೆತುಬಿಡುತ್ತಾರೆ. ಈ ಮಾನಸಿಕ ಪರಿವರ್ತನೆಯೇ ಕಾಳಾರಾಮ ಮಂದಿರ ಪ್ರವೇಶ ಹೋರಾಟದ ಗುರಿ’.

ಇಂತಹುದೇ ಮಾತನ್ನು ಇತಿಹಾಸಕಾರ ಕೆ.ಎಂ.ಮುನ್ಶಿ ಹೇಳಿದ್ದಾರೆ. ‘ಜೈ ಸೋಮನಾಥ’ ಮುನ್ಶಿ ಅವರ ಪ್ರಸಿದ್ಧ ಪುಸ್ತಕ. ದೇಶಕ್ಕೆ ಸ್ವಾತಂತ್ರ್ಯ ಬಂದ ತರುವಾಯ ಗಾಂಧಿ ಬೆಂಬಲದೊಂದಿಗೆ ಗೃಹ ಸಚಿವ ವಲ್ಲಭಭಾಯಿ ಪಟೇಲರು ಸೋಮನಾಥ ಮಂದಿರದ ಪುನರ್‌ನಿರ್ಮಾಣ ಪ್ರಕ್ರಿಯೆ ಆರಂಭಿಸಿದರು. ಕೆಲವೇ ತಿಂಗಳಲ್ಲಿ ಗಾಂಧಿ, ಪಟೇಲ್ ತೀರಿಕೊಂಡಿದ್ದರಿಂದ ಸೋಮನಾಥದ ಹೊಣೆ, ನೆಹರೂ ಸಂಪುಟದಲ್ಲಿ ಸಚಿವರಾಗಿದ್ದ ಮುನ್ಶಿ ಅವರ ಹೆಗಲಿಗೆ ಬಂತು. ಗಾಂಧಿ, ಪಟೇಲ್ ಇರುವವರೆಗೆ ಖಾಸಗಿಯಾಗಿ ಗೊಣಗುತ್ತಿದ್ದ ನೆಹರೂ ಆನಂತರ ಬಹಿರಂಗವಾಗಿ ಟೀಕಿಸಲು ಶುರು ಮಾಡಿದ್ದರು. ಆಗ ನೆಹರೂ ಅವರಿಗೆ ಮುನ್ಶಿ ಬರೆದ ಪತ್ರದಲ್ಲಿ ‘ಗಾಸಿಗೊಂಡಿರುವ ಕೋಟ್ಯಂತರ ಹಿಂದೂಗಳಿಗೆ ಸಾಂತ್ವನ ಸಿಗದ ಹೊರತು ನಮಗೆ ಸಿಕ್ಕಿರುವ ಸ್ವಾತಂತ್ರ್ಯಕ್ಕೆ ಬೆಲೆ ಇಲ್ಲ. ಈ ಸೋಮನಾಥ ಮಂದಿರದಲ್ಲಿ ಹರಿಜನರಿಗೂ ಪ್ರವೇಶ ನೀಡುವ ನಿರ್ಧಾರದಿಂದ ಕೆಲ ಸಂಪ್ರದಾಯವಾದಿ ಹಿಂದೂಗಳು ಅಸಮಾಧಾನಗೊಳ್ಳಬಹುದು. ಆದರೆ ಹರಿಜನ ಮಾತ್ರವಲ್ಲ, ಹಿಂದೂಯೇತರರಿಗೂ ಇಲ್ಲಿ ಮುಕ್ತ ಪ್ರವೇಶ ಇರುತ್ತದೆ’ ಎಂದು ಹೇಳಿದ್ದರು.

ಹದಿನೇಳು ಸಲ ದಂಡೆತ್ತಿ ಬಂದಿದ್ದ ಮಹಮದ್ ಘಜ್ನಿಯ ಕ್ರೌರ್ಯದ ಬಗ್ಗೆ ಡಾ. ಅಂಬೇಡ್ಕರ್ ತಮ್ಮ ‘ಥಾಟ್ಸ್‌ ಆನ್‌ ಪಾಕಿಸ್ತಾನ್‌’ ಪುಸ್ತಕದಲ್ಲಿ ವಿವರವಾಗಿ ಚರ್ಚಿಸಿದ್ದಾರೆ. ಘಜ್ನಿ ತಾನೇ ನುಗ್ಗಿ ಸೋಮನಾಥ ಜ್ಯೋತಿರ್ಲಿಂಗವನ್ನು ಪುಡಿಗಟ್ಟಿದ್ದಲ್ಲದೆ ಅಲ್ಲಿನ ವಿಗ್ರಹ
ಗಳನ್ನು ಅಫ್ಗಾನಿಸ್ತಾನದ ಮಸೀದಿಯೊಂದರ ಮೆಟ್ಟಿಲುಗಳನ್ನಾಗಿ ಮಾಡಿದ್ದ. ಕೊನೆಗೆ ಸೋಮನಾಥ ಮಂದಿರವನ್ನು ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಉದ್ಘಾಟಿಸಿದರು. ನೆಹರೂ ಮತ್ತಿತರರನ್ನು ಅಣಕಿಸುವಂತೆ ಅದೇ ಸಮಯದಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.

1528ರಲ್ಲಿ ದಿಲ್ಲಿಯ ನವಾಬ ಬಾಬರ್‌ನ ಆಣತಿಯಂತೆ ಅಯೋಧ್ಯೆಯ ಮೇಲೆ ದಂಡೆತ್ತಿ ಬಂದ ಮೀರ್ ಬಾಕಿ ಸೈನ್ಯ, ಜನ್ಮಸ್ಥಾನದಲ್ಲಿದ್ದ ರಾಮ ಮಂದಿರವನ್ನು ಪುಡಿ ಮಾಡಿತು. ಅಲ್ಲೊಂದು ‌ದೊಡ್ಡ ಮಸೀದಿಯನ್ನು ಎಬ್ಬಿಸಿ ಬಾಬರಿ ಮಸೀದಿ ಎಂದು ಹೆಸರಿಸಲಾಯಿತು.

ಶಾ ಬಾನೊ ಪ್ರಕರಣದಲ್ಲಿ ತೀವ್ರ ಟೀಕೆಗೊಳಗಾಗಿದ್ದ ಅಂದಿನ ಪ್ರಧಾನಿ ರಾಜೀವ್ ಗಾಂಧಿ, ಹಿಂದೂಗಳಿಗೆ ಜನ್ಮಸ್ಥಾನದ ಜಾಗ ಒಪ್ಪಿಸಲು ಸಿದ್ಧರಾಗಿದ್ದರು. ಆಗಲೇ ಬಾಬರಿ ಮಸೀದಿ ಕ್ರಿಯಾ ಸಮಿತಿಯು ‘ಇಸ್ಲಾಂ ಅಪಾಯದಲ್ಲಿದೆ’ ಎಂಬ ಗುಲ್ಲೆಬ್ಬಿಸಿ, ಗಣರಾಜ್ಯೋತ್ಸವ ಬಹಿಷ್ಕರಿಸುವ ಕರೆ ನೀಡಿತು. ಹೆದರಿದ ರಾಜೀವ್ ಅರ್ಧದಾರಿಯಲ್ಲಿ ನಿಂತರು.

ಆನಂತರ ಬಿಜೆಪಿಯ ಬೆಂಬಲದಿಂದ ಪ್ರಧಾನಿಯಾದ ವಿ.ಪಿ.ಸಿಂಗ್ ‘ಅರೆ ಭಾಯ್ ಮಸ್ಜೀದ್ ಹೈ ಕಹಾ? ಅಲ್ಲಿರುವುದು ಮಂದಿರ, ನಿತ್ಯ ಪೂಜೆ ನಡೆಯುತ್ತಿದೆ. ಆ ಹಳೆ ಕಟ್ಟಡ ತೀರಾ ದುರ್ಬಲವಾಗಿದೆ’ ಎಂದಿದ್ದು ದೊಡ್ಡ ಸುದ್ದಿಯಾಗಿತ್ತು. ಅವರು ಹಿಂದೂಗಳಿಗೆ ಜಾಗ ಒಪ್ಪಿಸಲು ಮುಂದಾಗಿದ್ದರು. ಧೈರ್ಯ ಸಾಕಾಗಲಿಲ್ಲ.

1992ರ ಡಿ. 6ರಂದು ಹೋರಾಟ ತೀವ್ರ ಸ್ವರೂಪ ಪಡೆದು, ಬಾಬರ್ ಹೆಸರಿನ ಹಳೆ ಕಟ್ಟಡ ಉರುಳಿಬಿತ್ತು. ಉರುಳಿ ಬಿದ್ದದ್ದು ಹಳೆ ಕಟ್ಟಡ ಮಾತ್ರವಲ್ಲ, ಅದು ವೋಟ್ ಬ್ಯಾಂಕ್ ರಾಜಕಾರಣ... ಮುಸ್ಲಿಮರನ್ನು ಓಲೈಸುವ ನಕಲಿ ಜಾತ್ಯತೀತತೆಯ ರಾಜಕಾರಣ... ಹಿಂದೂಗಳಲ್ಲಿ ಜಾತಿ- ಜಾತಿಗಳನ್ನು ಎತ್ತಿ ಕಟ್ಟುವ ಹೊಲಸು ರಾಜಕಾರಣ...

ಇದೀಗ ನ್ಯಾಯಾಲಯದ ತೀರ್ಪಿನಂತೆಯೇ ಅಯೋಧ್ಯೆಯಲ್ಲಿ ಮೇಲೇಳುತ್ತಿರುವುದು ಬರೀ ಮಂದಿರವಲ್ಲ, 1989ರ ನ. 8ರಂದು ಮೊದಲ ಇಟ್ಟಿಗೆ ಇಡುವ ಮೂಲಕ ಶಿಲಾನ್ಯಾಸ ಮಾಡಿದ್ದ ಬಿಹಾರದ ದಲಿತ ನಾಯಕ ಕಾಮೇಶ್ವರ ಚೌಪಾಲ್ ಅವರ ಸಮರಸದ ಕನಸಿನ ನನಸು... ಜಾತಿಭಾವ ಮೀರಿದ ಹಿಂದೂ ಏಕತೆ... ಬ್ರಿಟಿಷರಿಗಿಂತ ಮೊದಲಿನ ಆಕ್ರಮಣಗಳನ್ನು ತೆಳುವಾಗಿಸುವ ವೈಚಾರಿಕ ಹುನ್ನಾರವನ್ನು ಮೆಟ್ಟಿಹಾಕಿದ ಸ್ವಾಭಿಮಾನ ಜಾಗೃತಿ...

ರಾಮಜನ್ಮಭೂಮಿ ಹೋರಾಟ ಒಂದು ಮಂದಿರ ಕಟ್ಟುವ ಹೋರಾಟವಾಗಿರಲಿಲ್ಲ. ಭಾರತದ ರಾಜಕಾರಣ, ವೈಚಾರಿಕತೆ- ಎರಡಕ್ಕೂ ಹೊಸ ದಿಕ್ಕು ಕೊಟ್ಟ ಐತಿಹಾಸಿಕ ಸಂಘರ್ಷ. ಬಾಬಾಸಾಹೇಬರು ಅಂದು ಸವರ್ಣೀಯ ಸಮಾಜದಲ್ಲಿ ನಿರೀಕ್ಷಿಸಿದ್ದ ಮಾನಸಿಕ ಪರಿವರ್ತನೆ ಒಂದಿಷ್ಟಾದರೂ ಹರಳುಗಟ್ಟಿದ ಸನ್ನಿವೇಶವಿದು.

(ಲೇಖಕ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು