ಬುಧವಾರ, ಜೂನ್ 29, 2022
24 °C
ವಿವಿಧ ಪರಿಸರದಿಂದ ಬಂದಿರುವ ವಿದ್ಯಾರ್ಥಿಗಳ ಮನಸ್ಸನ್ನು ಮುದಗೊಳಿಸಿ ಪಾಠ ಆರಂಭ ಮಾಡುವುದು ಒಂದು ಉತ್ತಮ ವಿಧಾನ

ಸಂಗತ| ಸಂಬಳದ ಕೆಲಸವಲ್ಲ, ‘ಕಾಯಕ’ದ ಶ್ರದ್ಧೆ

ಮಲ್ಲಿಕಾರ್ಜುನ ಹೆಗ್ಗಳಗಿ Updated:

ಅಕ್ಷರ ಗಾತ್ರ : | |

Prajavani

ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ನಾನು ವಿದ್ಯಾರ್ಥಿಯಾಗಿದ್ದಾಗ ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ) ಅವರು ಇಂಗ್ಲಿಷ್‌ ವ್ಯಾಕರಣದ ಪಾಠ ಮಾಡುತ್ತಿದ್ದರು. ಅವರ ಹಾವಭಾವ ಮತ್ತು ವಿಶಿಷ್ಟ ಧ್ವನಿ ಕೇಳುವುದೇ ಒಂದು ಸಂಭ್ರಮ.

ಪ್ರಾಥಮಿಕದಿಂದ ಪದವಿವರೆಗೆ ಅನೇಕ ಅಧ್ಯಾಪಕರಿಂದ ಪಾಠ ಕೇಳಿದ್ದೇನಾದರೂ ಆ ಪಾಠಗಳಾವುವೂ ನನ್ನ ನೆನಪಿನಲ್ಲಿ ಉಳಿದಿಲ್ಲ. ಆದರೆ ಚಂಪಾ ಕಲಿಸಿದ ಪಾಠ ಹಾಗೂ ಪಾಠಕ್ಕೆ ಸಂಬಂಧಿಸಿದ ಜೋಕುಗಳು ಇಷ್ಟು ವರ್ಷಗಳ ನಂತರವೂ ಚೆನ್ನಾಗಿ ನೆನಪಿನಲ್ಲಿವೆ.

‘ಮೈ ಲವ್ ಈಸ್ ಲೈಕ್ ರೆಡ್ ರೆಡ್ ರೋಜ್’. ಇದು, ಅವರು ಇಂಗ್ಲಿಷ್‌ ವ್ಯಾಕರಣದ ಉಪಮೆ, ರೂಪಕಗಳನ್ನು ಕಲಿಸಲು ಬಳಸುತ್ತಿದ್ದ ಒಂದು ಉದಾಹರಣೆಯಾಗಿತ್ತು. ‘ಇಲ್ಲಿ ಕವಿ ರೆಡ್ ರೆಡ್ ಶಬ್ದ ಎರಡು ಬಾರಿ ಏಕೆ ಬಳಸಿದ್ದಾನೆ’ ಎಂದು ಅವರು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು.

‘ಗೊತ್ತು ಸರ್, ಲವ್ ಈಸ್ ವೆರೀ ಡೆಂಜರಸ್. ಆದ್ದರಿಂದ ಕವಿ ರೆಡ್‌ ರೆಡ್ ಶಬ್ದ ಎರಡು ಬಾರಿ ಬಳಸಿದ್ದಾನೆ’ ಎಂದು ಒಬ್ಬ ವಿದ್ಯಾರ್ಥಿ ಥಟ್ಟನೆ ಎದ್ದುನಿಂತು ಉತ್ತರಿಸಿದ. ಕ್ಲಾಸಿನಲ್ಲಿನ ವಿದ್ಯಾರ್ಥಿಗಳು ಖೊಳ್‌ ಎಂದು ನಕ್ಕುಬಿಟ್ಟರು. ಒಂದು ರಸಮಯ ವಾತಾವರಣ ಸೃಷ್ಟಿಯಾಯಿತು. ಇಂತಹ ಲವಲವಿಕೆಯ ಸನ್ನಿವೇಶದೊಂದಿಗೆ ಅವರ ಪಾಠ ಆರಂಭವಾಗುತ್ತಿತ್ತು.

ವಿದ್ಯಾರ್ಥಿಗಳು ವಿವಿಧ ಪರಿಸರದಿಂದ ವಿವಿಧ ಮನಃಸ್ಥಿತಿಯಲ್ಲಿ ತರಗತಿಗೆ ಬಂದಿರುತ್ತಾರೆ. ನಗು ಅವರನ್ನು ಒಂದುಗೂಡಿಸುತ್ತದೆ. ವಿದ್ಯಾರ್ಥಿಗಳ ಸಾಮೂಹಿಕ ನಗೆಯಿಂದ ತರಗತಿಯಲ್ಲಿ ಆರೋಗ್ಯಕರ ವಾತಾವರಣ ರೂಪುಗೊಳ್ಳುತ್ತದೆ.

ವಿದ್ಯಾರ್ಥಿಗಳ ಮನಸ್ಸನ್ನು ಮುದಗೊಳಿಸಿ ಪಾಠ ಆರಂಭ ಮಾಡುವುದು ಒಂದು ಉತ್ತಮ ವಿಧಾನ. ಬೋಧನೆ ಒಂದು ಕಲೆ. ಅದು ಸೃಜನಾತ್ಮಕ ಸ್ವರೂಪದ್ದು. ನಟರು ನಾಟಕದ ಪಠ್ಯವನ್ನು ರಮ್ಯವಾಗಿ ಪುನರ್‌ಸೃಷ್ಟಿ ಮಾಡುವಂತೆ ಬೋಧಕರು ಪಠ್ಯವನ್ನು ವಿದ್ಯಾರ್ಥಿಗಳ ಮನದ ಕಣ್ಣಿಗೆ ಕಾಣುವಂತೆ ಪುನರ್‌ಸೃಷ್ಟಿ ಮಾಡಬೇಕು. ಆಗ ವಿದ್ಯಾರ್ಥಿಗಳ ಮನಸ್ಸು ಏಕಾಗ್ರತೆಗೊಂಡು ಪಾಠ ಆಲಿಸಲು ಸಿದ್ಧವಾಗುತ್ತದೆ. ಮಕ್ಕಳಲ್ಲಿ ಪಾಠ ಕೇಳಬೇಕು ಎಂಬ ಹಂಬಲ ಮೂಡಿಸುವುದು ಶಿಕ್ಷಕರ ಆದ್ಯತೆಯಾಗಬೇಕು.

‘ಸಭಾ ನೋಡಿ ರಾಗಾ ಮಾಡಬೇಕು, ಕ್ಲಾಸ್ ನೋಡಿ ಪಾಠ ಮಾಡಬೇಕು’ ಎಂಬ ಮಾತೊಂದಿದೆ. ತಾವು ಯಾವ ಕ್ಲಾಸಿಗೆ ಪಾಠ ಮಾಡುತ್ತಿದ್ದೇವೆ ಎಂಬ ಅರಿವು ಶಿಕ್ಷಕರಿಗೆ ಇರಬೇಕು. ಎದುರಿಗೆ ಕುಳಿತ ವಿದ್ಯಾರ್ಥಿಗಳ ಗ್ರಹಿಕೆ ಸಾಮರ್ಥ್ಯ ಅರಿತುಕೊಂಡು ಬೋಧನಾ ವಿಧಾನಗಳನ್ನು ವಿನ್ಯಾಸಗೊಳಿಸಿ
ಕೊಳ್ಳಬೇಕು. ಪರಿಣಾಮಕಾರಿ ಸಂವಹನವೇ ಉತ್ತಮ ಬೋಧನೆಯ ವಿಧಾನವಾಗಿದೆ.

ಪಠ್ಯಪುಸ್ತಕ ಒಂದು ಮಾರ್ಗಸೂಚಿ ಮಾತ್ರ. ಶಿಕ್ಷಕ ನಿಜವಾದ ಮಾರ್ಗದರ್ಶಕ ಮತ್ತು ಬೆಳಕು. ಪಠ್ಯದ ಮಿತಿಯ ಆಚೆಗೂ ಮಹತ್ವದ್ದನ್ನು ರಮ್ಯವಾಗಿ ಹೇಳಿ ಕುತೂಹಲ ಕೆರಳಿಸಬೇಕು.

ಪಾಠ ಬೋಧಿಸುವಾಗ ಬಹಳಷ್ಟು ವಿವರಗಳನ್ನು ಹೇಳಲು ಶಿಕ್ಷಕರಿಗೆ ಅವಕಾಶ ಇರುತ್ತದೆ. ಇದಕ್ಕೆ ಸಿದ್ಧತೆ ಮತ್ತು ಅಧ್ಯಯನ ಬೇಕು. ಬೋಧನೆ ಪ್ರವೃತ್ತಿಯಾದಾಗ ಮಾತ್ರ ಇದು ಸಾಧ್ಯ.

ಮಕ್ಕಳ ಮುಂದೆ ನಿಂತು ಪಾಠ ಮಾಡುವುದು ಬರೀ ಸಂಬಳದ ಕೆಲಸ ಆಗದೆ, ಅದು ‘ಕಾಯಕ’ವಾದಾಗ ಬೋಧನೆಯಾಗುತ್ತದೆ. ಎಲ್ಲ ವಿದ್ಯಾರ್ಥಿಗಳೂ ಒಂದೇ ರೀತಿಯಾಗಿ ಇರುವುದಿಲ್ಲ. ಕಡಿಮೆ ಗ್ರಹಿಕೆ ಸಾಮರ್ಥ್ಯದ ವಿದ್ಯಾರ್ಥಿಯನ್ನು ‘ನೀನು ಸಮರ್ಥ’ ಎಂದು ಪ್ರೋತ್ಸಾಹಿಸಿ ಅವನಲ್ಲಿ ಆತ್ಮವಿಶ್ವಾಸ ಮೂಡಿಸಬೇಕು.

ಮಹಾಲಿಂಗಪುರದ ಕನ್ನಡ ಅಧ್ಯಾಪಕ ಡಾ. ಅಶೋಕ ನರೋಡೆ ಅವರು ವಿದ್ಯಾರ್ಥಿಗಳಿಗೆ ಹಳೆಗನ್ನಡ ಕಾವ್ಯ ಬೋಧಿಸುವಾಗ ‘ಚಂಪು’ ಕಾವ್ಯ ಕಬ್ಬು ಇದ್ದಂತೆ, ಅದನ್ನು ಓದುವುದೆಂದರೆ ಕಬ್ಬನ್ನು ಹಲ್ಲಿನಿಂದ ಜಗಿದು ತಿಂದ ಅನುಭವವಾಗುತ್ತದೆ. ಕಬ್ಬು ತಿನ್ನುವುದರಲ್ಲಿ ಇರುವ ಮಜಾ ಕಬ್ಬಿನ ಹಾಲು ಕುಡಿಯುವುದರಲ್ಲಿ ಇಲ್ಲ’ ಎಂದು ಹೇಳುತ್ತಾರೆ. ಇದು ವಿದ್ಯಾರ್ಥಿಗಳಲ್ಲಿ ಹಳೆಗನ್ನಡ ಓದುವ ಪ್ರೀತಿ ಹೆಚ್ಚಿಸಿದೆ.

ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಉತ್ತಮ ಬಾಂಧವ್ಯ ಬೆಳೆಯಬೇಕು. ಇದು, ಮಾತು ಮತ್ತು ನಗೆಯಿಂದ ಸಾಧ್ಯವಾಗುತ್ತದೆ. ಪರಿಣಾಮಕಾರಿಯಾಗಿ ಬೋಧನೆ ಮಾಡುವವರನ್ನು ವಿದ್ಯಾರ್ಥಿಗಳು ಸಹಜವಾಗಿ ಮೆಚ್ಚಿಕೊಳ್ಳುತ್ತಾರೆ. ಅವರ ಬಗ್ಗೆ ಗೌರವ, ಅಭಿಮಾನ ಮೂಡುತ್ತದೆ. ವಿದ್ಯಾರ್ಥಿಗಳ ಪ್ರೀತಿ, ವಿಶ್ವಾಸ ಗಳಿಸಿದ ಶಿಕ್ಷಕನನ್ನು ವಿದ್ಯಾರ್ಥಿಗಳು ಬದುಕಿನುದ್ದಕ್ಕೂ ಸ್ಮರಿಸುತ್ತಾರೆ.

‘ನನ್ನ ಸುತ್ತಲೂ ಹುಡುಗರಿದ್ದರು. ಅವರಿಗೆ ನಾನು ಕಲಿಸತೊಡಗಿದೆ ಮತ್ತು ಅವರನ್ನು ಸಂತೋಷವಾಗಿ ಇಡಲು ಪ್ರಾರಂಭಿಸಿದೆ. ನಾನು ಸಹ ಆಟಗಾರ
ನಾಗಿದ್ದೆ, ಸ್ನೇಹಿತನಾಗಿದ್ದೆ. ಅವರ ಜೀವನದ ಅನುಭವಗಳನ್ನು ನಾನು ಆಲಿಸಿದೆ ಮತ್ತು ಅವರ ಗುಂಪಿನಲ್ಲಿರುವ ದೊಡ್ಡ ಮಗು ನಾನೆಂದು ಭಾವಿಸಿದೆ. ನಾವೆಲ್ಲರೂ ಒಂದಾಗಿ ಸ್ವಚ್ಛಂದದ ವಾತಾವರಣದಲ್ಲಿ ಬೆಳೆಯತೊಡಗಿದೆವು. ಇದಕ್ಕಿಂತ ಹೆಚ್ಚಿನ ಸಂತೋಷ ನನಗೆ ಬೇರೆಲ್ಲೂ ಸಿಕ್ಕಿಲ್ಲ’ ಎಂದು ಕವಿ ರವೀಂದ್ರನಾಥ ಟ್ಯಾಗೋರ್ ಅವರು ತಾವು ಶಿಕ್ಷಕರಾಗಿದ್ದಾಗಿನ ದಿನಗಳನ್ನು ‘ಗೀತಾಂಜಲಿ’
ಯಲ್ಲಿ ದಾಖಲಿಸಿದ್ದಾರೆ. ಶಾಲಾ ಕಾಲೇಜುಗಳು ಆರಂಭವಾಗಿರುವ ಈ ಹೊತ್ತಿನಲ್ಲಿ ಬೋಧಕರಿಗೆಲ್ಲ ಈ
ಮಾತು ಮನನೀಯ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.