ಭಾನುವಾರ, ಮೇ 9, 2021
19 °C
ಸ್ನಾತಕೋತ್ತರ ಪದವಿ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿದ್ದ ಯುವವೈದ್ಯರು, ಇತ್ತ ಪರೀಕ್ಷೆಯೂ ಇಲ್ಲ, ಅತ್ತ ಸೇವೆಗೂ ಲಭ್ಯರಿಲ್ಲ ಎಂಬಂಥ ಅತಂತ್ರ ಸ್ಥಿತಿಯಲ್ಲಿದ್ದಾರೆ

ಸಂಗತ| ವೈದ್ಯ ಪದವೀಧರರಿಗೆ ‘ಪರೀಕ್ಷಾ’ ಕಾಲ

ಡಾ. ಎಚ್.ಎಸ್.ಅನುಪಮಾ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಜೊತೆಜೊತೆಗೇ ಬದುಕುವುದು ಹೇಗೆ ಎನ್ನುವುದನ್ನು ನಾವು ನಮ್ಮ ಬರಲಿರುವ ಪೀಳಿಗೆಗೆ ಶಿಕ್ಷಣದ ಮೂಲಕ ಹೇಳಿಕೊಡಬೇಕಾಗಿದೆ. ಆದರೆ ಈ ವೈರಸ್‌ ಇವತ್ತು ಇದೆ, ನಾಳೆ ಇಲ್ಲ ಎನ್ನುವ ಅತ್ಯಂತ ಬೇಜವಾಬ್ದಾರಿಯ ನಡೆಯಿಂದ ಶಿಸ್ತು, ಅದಕ್ಷತೆಯ ಬೀಜವನ್ನು ವಿದ್ಯಾರ್ಥಿಗಳಲ್ಲಿ ನಾವೇ ಬಿತ್ತುತ್ತಿ ದ್ದೇವೆ. ಚುನಾವಣಾ ರ್‍ಯಾಲಿಗಳು, ಕುಂಭಮೇಳವನ್ನು ನಡೆಸುವ, ಪ್ರವಾಸೋದ್ಯಮವೂ ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ನಡೆಸುವ ಆಳುವ ವರ್ಗಗಳು ಪರೀಕ್ಷೆ ನಡೆಸುವುದಕ್ಕೆ ಮಾತ್ರ ಸಿದ್ಧವಾಗಿಲ್ಲ!

ದೇಶದಲ್ಲಿ ಅತ್ಯಂತ ತುರ್ತು ಎಂದು ಪರಿಗಣಿಸಲ್ಪಟ್ಟು ಚುನಾವಣೆಗಳು ನಡೆಯುತ್ತಿದ್ದರೆ, ಪರೀಕ್ಷೆಗಳು ಅತಿ ನಿರ್ಲಕ್ಷ್ಯಕ್ಕೆ ಒಳಪಟ್ಟು ‘ಅವಸರವೂ ಸಾವಧಾನದ ಬೆನ್ನೇರಿದೆ’. ಇದರ ಮುಂದುವರಿಕೆ ಎಂಬಂತೆ, ಸ್ನಾತಕೋತ್ತರ ವೈದ್ಯಕೀಯ ಪದವಿಗಾಗಿ ಇದೇ 18ರಂದು ನಡೆಯಬೇಕಿದ್ದ ನೀಟ್ ಪರೀಕ್ಷೆ ಮುಂದೆ ಹೋಗಿದೆ. ಪರೀಕ್ಷೆಗಾಗಿ ಎಲ್ಲ ತಯಾರಿ ಮುಗಿದಿತ್ತು. ಹಾಲ್ ಟಿಕೆಟ್ ಬಂದಿತ್ತು. ಸಾಧಾರಣವಾಗಿ ಡಿಸೆಂಬರ್ ಕೊನೆಗೆ ಅಥವಾ ಜನವರಿ ಮೊದಲ ವಾರದಲ್ಲಿ ನಡೆಯಬೇಕಿದ್ದ ಪರೀಕ್ಷೆಗೆ ಕಳೆದ ವರ್ಷವಿಡೀ ಮನೆಯಲ್ಲೇ ಕೂತು, ಆನ್‍ಲೈನ್ ಕೋಚಿಂಗ್ ಪಡೆದ ವೈದ್ಯ ವಿದ್ಯಾರ್ಥಿಗಳು ಆನ್‍ಲೈನ್ ಪರೀಕ್ಷೆಗೆ ಸಿದ್ಧರಾಗಿದ್ದರು. ಆದರೆ ಕೊನೇ ಗಳಿಗೆಯಲ್ಲಿ ಓದುಕಳ್ಳರಾದ ಯಾರೋ ಸುಪ್ರೀಂ ಕೋರ್ಟ್‌ಗೆ ತೆರಳಿದರು. ಲಸಿಕೆ ಪಡೆಯದ ತಾವು ಕೋವಿಡ್ ಕಾಲದಲ್ಲಿ ಪರೀಕ್ಷೆ ಬರೆಯುವುದು ಕಷ್ಟ ಎಂದು ನ್ಯಾಯಾಲಯದ ಮುಂದೆ ಅಲವತ್ತು ಕೊಂಡರು. ಪರೀಕ್ಷೆಗೆ ತಡೆಬಿತ್ತು. 

ಒಂದೂಮುಕ್ಕಾಲು ಲಕ್ಷ ವೈದ್ಯ ಪದವೀಧರರು ಪರೀಕ್ಷೆಗೆ ತಯಾರಿ ನಡೆಸಿದ್ದರು. ಪರೀಕ್ಷೆ ಮುಗಿದಿದ್ದರೆ ಅಷ್ಟು ಜನ, ಕೋವಿಡ್ ಸೇರಿದಂತೆ ಎಲ್ಲ ರೋಗಿಗಳ ಸೇವೆಗೆ ಲಭ್ಯರಾಗುತ್ತಿದ್ದರು. ವೈದ್ಯರ ಕೊರತೆ ಎದುರಿಸುತ್ತಿರುವ ಆರೋಗ್ಯ ವ್ಯವಸ್ಥೆಯು ಒಂದಷ್ಟು ಹೊಸ, ಹುರುಪಿನ ವೈದ್ಯರನ್ನು ಪಡೆದು, ಈಗಾಗಲೇ ಅತಿಕೆಲಸದಿಂದ ಬಳಲಿದವರಿಗೆ ಕೊಂಚ ಉಸಿರಾಡುವಷ್ಟು ನಿರಾಳ ಹುಟ್ಟಿಸಬಹುದಿತ್ತು. ಆದರೆ ಇಂಥ ಯಾವ ದೂರದರ್ಶಿ ಯೋಚನೆಗಳಿಲ್ಲದ ಆಳುವವರು ಮತ್ತು ಓದುಕಳ್ಳರ ಕಾರಣದಿಂದ ಪರೀಕ್ಷೆಗಳು ಮತ್ತೆ ಮುಂದೆ ಹೋದವು.

ವೈದ್ಯಕೀಯ ಕ್ಷೇತ್ರಕ್ಕೆ ಕೋವಿಡ್ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಭೀತಿಯಿಂದಲೇ ತಮ್ಮ ವೃತ್ತಿಪರತೆಯನ್ನು ಪ್ರದರ್ಶಿಸುವ ಸವಾಲಿನ ಕಾಲ ಬಂದಿದೆ. ಒಂದುಕಡೆ, ಸಾರ್ವಜನಿಕ ಆಸ್ಪತ್ರೆ ಗಳಲ್ಲಿ, ಆರೋಗ್ಯಸಂಸ್ಥೆಗಳಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ವೈದ್ಯರಿಗೆ ರಜೆಯಿಲ್ಲದೆ, ಬೇರೆ ರೋಗಿಗಳನ್ನು ನೋಡಲಿಕ್ಕೂ ಆಗದೆ ಒಂದೇಸಮ ಕೋವಿಡ್ ರೋಗಿಗಳ ಸಂಪರ್ಕದಲ್ಲಿ ಇದ್ದು ದೈಹಿಕ, ಮಾನಸಿಕ ಆರೋಗ್ಯ ಸಮತೋಲನ ತಪ್ಪುತ್ತಿದೆ. ಮತ್ತೊಂದೆಡೆ, ಖಾಸಗಿ ವಲಯದ ವೈದ್ಯ ಸಮೂಹ ಆಸ್ಪತ್ರೆಗಳಲ್ಲಿ ಸಹಾಯಕರಿಲ್ಲದ, ದುಬಾರಿ ಸಂಬಳ ಕೊಟ್ಟು ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕಾದ, ಬದಲಾಗುತ್ತಿರುವ ಸರ್ಕಾರದ ಆದೇಶಗಳಿಗೆ ಅನುಗುಣವಾಗಿ ತಮ್ಮ ಕ್ಲಿನಿಕ್- ಆಸ್ಪತ್ರೆಗಳನ್ನು ನವೀಕರಣಗೊಳಿಸಿ ದಿನನಿತ್ಯ ವರದಿ ಕಳಿಸಬೇಕಾದ ಭಾರಕ್ಕೆ ಅದಕ್ಷವಾಗುತ್ತ ಆಕ್ರೋಶ ಎದುರಿಸುತ್ತಿದೆ.

ವೈದ್ಯ ವಿದ್ಯಾರ್ಥಿಗಳ ಸಂಕಟ ಬೇರೆಯದೇ ರೀತಿಯದು. ಕಳೆದ ವರ್ಷವಿಡೀ ಕೋವಿಡ್ ಸ್ವಯಂಸೇವಾ ಕಾರ್ಯಕರ್ತರಂತೆ ಕೆಲಸ ಮಾಡಿದ ಹೌಸ್ ಸರ್ಜನ್‍ಗಳು, ಕೊರೊನಾ ವಾರಿಯರ್ಸ್ ಜೊತೆಗೆ ಮನೆಮನೆಗೆ ತೆರಳಿ ಸರ್ವೆ ಮಾಡಿ, ಸೋಂಕಿತರ ಸಂಪರ್ಕ ಸರಪಳಿಯನ್ನು ಗುರುತಿಸಲು ಹಗಲಿರುಳು ಓಡಾಡಿದರೂ ವೈದ್ಯಪದವಿ ನೋಂದಣಿಯಾಗದೆ ಕಷ್ಟ ಎದುರಿಸುತ್ತಿದ್ದರು. ಕೋವಿಡ್ ಬಿಟ್ಟು ಉಳಿದ ವಿಭಾಗಗಳಲ್ಲಿ ಕೆಲಸ ಮಾಡದಿದ್ದಕ್ಕೆ, ಗ್ರಾಮೀಣ ಸೇವೆ ಪೂರೈಸದೇ ಇದ್ದದ್ದಕ್ಕೆ ಕರ್ನಾಟಕದಲ್ಲಿ ಪದವಿ ನೋಂದಣಿ ತಡೆ ಹಿಡಿಯಲಾಗಿತ್ತು. ಎರಡು ದಿನಗಳ ಹಿಂದಿನತನಕ ಇದೇ ಪರಿಸ್ಥಿತಿ ಇತ್ತು. ಈಗಷ್ಟೇ ನೋಂದಣಿ ಪ್ರಕ್ರಿಯೆ ಶುರುವಾಗಿದೆ. ಅವರ ತಂಡಕ್ಕಿಂತ ಮುಂಚೆ, ಎಂದರೆ ಕಳೆದ ವರ್ಷ ಮಾರ್ಚ್‌ ಒಳಗೆ ಪದವಿ ಮುಗಿಸಿ ಸ್ನಾತಕೋತ್ತರ ಪದವಿ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿದ್ದ ಯುವವೈದ್ಯರು ಇತ್ತ ಪರೀಕ್ಷೆಯೂ ಇಲ್ಲ, ಅತ್ತ ಸೇವೆಗೂ ಲಭ್ಯರಿಲ್ಲ ಎಂಬಂತೆ ಮನೆಯಲ್ಲಿ ಕೂತಿರಬೇಕಾದ ಅವಧಿ ವಿಸ್ತರಣೆ ಗೊಳ್ಳುತ್ತಾ ಹೋಗುತ್ತಿದೆ. ಭವಿಷ್ಯದ ವೈದ್ಯ ಸಮೂಹವನ್ನು ನಾವು ರೂಪಿಸುತ್ತಿರುವ ಪರಿ ಇದು!

ಕೋವಿಡ್ ನಿಯಂತ್ರಣದಲ್ಲಿದ್ದಾಗ ಚುನಾವಣಾ ಜ್ವರ ಏರಿಸಿಕೊಂಡ ನಮ್ಮ ನಾಯಕಮಣಿಗಳು ಈಗ ಎರಡನೆಯ ಅಲೆ ಉತ್ತುಂಗ ತಲುಪುತ್ತಿರುವಾಗಲೂ ನಿರ್ಲಕ್ಷ್ಯದ ಹೇಳಿಕೆಗಳನ್ನು ಕೊಡುತ್ತ ಸಭೆ ಸಮಾರಂಭ ಗಳನ್ನು ನಡೆಸುತ್ತಿದ್ದಾರೆ. ಪರೀಕ್ಷೆಗಳಷ್ಟೇ ಒಂದಾದ ಮೇಲೊಂದು ಮುಂದೆ ಹೋಗುತ್ತಿವೆ.

ಈ ಕಾಲಮಾನ ಅದೆಂಥ ಮನೋಲಯದ ಭಾವಿ ಪೀಳಿಗೆಯನ್ನು ಸೃಷ್ಟಿಸಲಿದೆಯೋ?! ಅದಕ್ಷ, ಅಶಿಸ್ತಿನ, ಬದ್ಧತೆಯಿರದ ಕೆಲಸಗಳ್ಳರನ್ನು ಸೃಷ್ಟಿಸಲು ಏನೇನು ಬೇಕೋ ಅವೆಲ್ಲ ಸಮೃದ್ಧವಾಗಿ ತಯಾರಾಗುತ್ತಿವೆ. ಇದಕ್ಕೆ ಪರಿಹಾರವೆಂದರೆ, ಯುವ ವಿದ್ಯಾರ್ಥಿ ಸಮೂಹ ಎದ್ದು ನಿಲ್ಲಬೇಕು. ‘ನಾವು ಪರೀಕ್ಷೆಗೆ ಸಿದ್ಧರಿದ್ದೇವೆ, ಕೋವಿಡ್ ಆತಂಕದ ನಡುವೆಯೂ ದೇಶಸೇವೆಗೆ ಸಿದ್ಧರಿದ್ದೇವೆ’ ಎಂದು ದೇಶಪ್ರೇಮ ಮೆರೆಯಬೇಕು. ಲಸಿಕೆಯಷ್ಟೇ ಮುಖಗವಸೂ ಮುಖ್ಯ ಎಂದು ತೋರಿಸುತ್ತ, ಕಳೆದ ವರ್ಷದ ಎಸ್‌ಎಸ್‌ಎಲ್‌ಸಿ
ವಿದ್ಯಾರ್ಥಿಗಳಂತೆ ಶಿಸ್ತಾಗಿ ಪರೀಕ್ಷೆ ಬರೆಯಬೇಕು. ವೈಜ್ಞಾನಿಕ ಮನೋಭಾವ ರೂಢಿಸಿಕೊಂಡು, ತಮ್ಮ ಭವಿಷ್ಯವನ್ನು ತಾವೇ ಬರೆದುಕೊಳ್ಳುವಂತೆ ಆಗಬೇಕು.

  ಲೇಖಕಿ: ವೈದ್ಯೆ, ಕವಲಕ್ಕಿ, ಹೊನ್ನಾವರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು