ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ನವಪೀಳಿಗೆ ಮತ್ತು ನೈಜ ಜಗತ್ತು

ತಂತ್ರಜ್ಞಾನ ನಿರ್ಮಿತ ಜಗತ್ತಿನ ಮೇಲಿನ ಅತಿಯಾದ ಅವಲಂಬನೆಯಿಂದ ಮಕ್ಕಳು ಸಾಮಾಜಿಕ ಸಂವಹನದಿಂದ ದೂರವಾಗುತ್ತಿರುವುದು ಹಲವಾರು ಸಮಸ್ಯೆಗಳನ್ನು ಸೃಷ್ಟಿಸಿದೆ
ಶಿವಲಿಂಗಸ್ವಾಮಿ ಎಚ್.ಕೆ.
Published 21 ಫೆಬ್ರುವರಿ 2024, 20:42 IST
Last Updated 21 ಫೆಬ್ರುವರಿ 2024, 20:42 IST
ಅಕ್ಷರ ಗಾತ್ರ

ನಮ್ಮ ಕಣ್ಮುಂದೆ ಇರುವ ನವಪೀಳಿಗೆಯನ್ನು ಜೆನ್‌ ಝಡ್‌ (Gen Z) ಎಂದು ಕರೆಯುತ್ತಾರೆ. ಈ ಮಕ್ಕಳು 1990ರಿಂದ 2010ರ ನಡುವೆ ಹುಟ್ಟಿದವರಾಗಿರುತ್ತಾರೆ. ಇವರೆಲ್ಲರ ವೈಶಿಷ್ಟ್ಯ ಏನೆಂದರೆ, ಬಡವ ಬಲ್ಲಿದ ಎನ್ನದೆ ಇವರೆಲ್ಲರನ್ನೂ ಸುತ್ತುವರಿದಿರುವುದು ಸಾಮಾಜಿಕ ಜಾಲತಾಣಗಳು, ಅಭೂತಪೂರ್ವ ತಂತ್ರಜ್ಞಾನ ಮತ್ತು ಅಂಗೈಯಲ್ಲಿ ಸುಲಭವಾಗಿ ದೊರೆಯುವ ಅಂತರ್ಜಾಲ. ಇವುಗಳ ಕಾರಣದಿಂದ ಈ ಮಕ್ಕಳು ನೈಜ ಜಗತ್ತಿಗೆ ಸಂಪೂರ್ಣ ಪರಕೀಯರಾಗಿ ತಮ್ಮದೇ ವರ್ಚುವಲ್‌  (ವಾಸ್ತವೋಪಮ) ಜಗತ್ತನ್ನು ತಮ್ಮ ಮೊಬೈಲುಗಳಲ್ಲಿ ಕಟ್ಟಿಕೊಳ್ಳುತ್ತಾರೆ. ಆ ಜಗತ್ತಿನಲ್ಲಿ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ ಮತ್ತು ನೈಜ ಜಗತ್ತಿಗೆ ವಿಮುಖರಾಗುತ್ತಾರೆ.

ತಮ್ಮೆಲ್ಲ ಆಜ್ಞೆಗಳನ್ನು ವಿಧೇಯವಾಗಿ ಪಾಲಿಸುವ ವರ್ಚುವಲ್‌ ಸಹಾಯಕ ತಂತ್ರಜ್ಞಾನ ‘ಅಲೆಕ್ಸಾ’ ಅಥವಾ ‘ಸಿರಿ’ಯನ್ನು ತಮ್ಮ ಸ್ನೇಹಿತರು ಎಂದು ಪರಿಭಾವಿಸುತ್ತಾರೆ. ಈ ಕೃತಕಬುದ್ಧಿಮತ್ತೆಯ ತಂತ್ರಜ್ಞಾನ
ದೊಂದಿಗೆ ನಿರಂತರ ಸಂಭಾಷಣೆಯಲ್ಲಿ ತೊಡಗುವ ಇವರಿಗೆ ವಾಸ್ತವದ ಅವಶ್ಯಕತೆಯೇ ಬರುವುದಿಲ್ಲ. ಇದಕ್ಕೆ ಅದ್ಭುತ ಉದಾಹರಣೆ ಎಂದರೆ, ಚಾರ್ಲಿ ಬ್ರೂಕರ್ ಅವರು ನಿರ್ಮಿಸಿರುವ ‘ಬ್ಲ್ಯಾಕ್ ಮಿರರ್’ ಎಂಬ ವೆಬ್ ಸೀರೀಸ್. ಇದರಲ್ಲಿ ಕೃತಕ ಬುದ್ಧಿಮತ್ತೆಯ ಇಂದಿನ ಅಗಾಧ ಬೆಳವಣಿಗೆಯ ಬಗ್ಗೆ ಮೈ ಕಂಪಿಸುವಂತೆ ತೋರಿಸಲಾಗಿದೆ.

ಒಂದು ಅಧ್ಯಾಯದಲ್ಲಿ, ಯುವತಿಯೊಬ್ಬಳ ಗಂಡ ಸಾವನ್ನಪ್ಪಿರುತ್ತಾನೆ. ಅತೀವ ದುಃಖದಲ್ಲಿರುವ ಈಕೆಯನ್ನು ಸಂತೈಸುವ ಸಲುವಾಗಿ ಸ್ನೇಹಿತೆ ಒಂದು ಫೋನ್‌ ನಂಬರ್ ಕೊಟ್ಟು, ಅದನ್ನು ಸಂಪರ್ಕಿಸುವಂತೆ ಹೇಳುತ್ತಾಳೆ. ಯುವತಿಯು ಆ ನಂಬರನ್ನು ಸಂಪರ್ಕಿಸಿ ದೊಡನೆಯೇ ಸತ್ತಿರುವ ಆಕೆಯ ಪತಿಯ ಮೆಸೇಜು ಬರುತ್ತದೆ. ನಂತರ ಅವನ ಕರೆ ಬರುತ್ತದೆ. ಕಡೆಗೆ ಕೃತಕ ಬುದ್ಧಿಮತ್ತೆಯ ಸೃಷ್ಟಿಯಾದ ಅವನೇ ಬರುತ್ತಾನೆ. ಆದರೆ ಆ ಜಗತ್ತಿನಲ್ಲಿ ಮಾನವ ಸಹಜ ಭಾವನೆಗಳು ಇಲ್ಲದಿರುವುದು ಆಕೆಗೆ ಅಸಹನೀಯ ಅನ್ನಿಸಿ, ಪುಣ್ಯವಶಾತ್ ಪುನಃ ವಾಸ್ತವಕ್ಕೆ ಹಿಂದಿರುಗುತ್ತಾಳೆ.

ತಂತ್ರಜ್ಞಾನ ಮತ್ತು ಅಂತರ್ಜಾಲದ ಗೀಳು ಹಾಗೂ ಅದರ ದುಷ್ಪರಿಣಾಮಗಳನ್ನು ಜೆಫ್ ಅರ್ಲೊಸ್ಕಿ ಅವರು ನಿರ್ಮಿಸಿರುವ ‘ದ ಸೋಷಿಯಲ್ ಡೈಲೆಮ’ ಎಂಬ ಸಾಕ್ಷ್ಯಚಿತ್ರ ಅದ್ಭುತವಾಗಿ ಮನಗಾಣಿಸುತ್ತದೆ. ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸುವವರು ತಮ್ಮ ಅಲ್ಗಾರಿದಂಗಳ ಮೂಲಕ ಬಳಕೆದಾರರ ಮನಃಸ್ಥಿತಿಯನ್ನು ಹಿಡಿತದಲ್ಲಿ ಇಟ್ಟುಕೊಂಡು ಮೊಬೈಲ್ ಗೀಳು ಹತ್ತಿಸುತ್ತಾರೆ. ಈ ಅಲ್ಗಾರಿದಂಗಳು ಜನರ ಆಸಕ್ತಿಯ ಕ್ಷೇತ್ರಗಳು ಯಾವುವು ಎಂಬುದನ್ನು ಗ್ರಹಿಸಬಲ್ಲವು. ಹೀಗಿರುವಾಗ, ಯಾವುದೇ ವ್ಯಕ್ತಿ ಮೊಬೈಲನ್ನು ಬದಿಗೊತ್ತಿ ತನ್ನ ಭೌತಿಕ ಜಗತ್ತಿನತ್ತ ಗಮನಹರಿಸುವ ಪ್ರಯತ್ನ ಮಾಡಿದರೆ, ಸಾಮಾಜಿಕ ಜಾಲತಾಣಗಳ ಕೃತಕ ಬುದ್ಧಿಮತ್ತೆ ಅವನನ್ನು ನೂರೆಂಟು ಪ್ರಲೋಭನೆ ಗಳಿಗೆ ತಳ್ಳಿ ಪುನಃ ಮೊಬೈಲ್ ಗೀಳಿಗೆ ಹಚ್ಚುವಂತಹ
ಸಾಮರ್ಥ್ಯವನ್ನು ಹೊಂದಿದೆ.

ಈ ಕಾರಣದಿಂದ, ಜೆನ್‌ ಝಡ್‌ ಮಕ್ಕಳು ದಿನದಲ್ಲಿ 6ರಿಂದ 7 ಗಂಟೆಗಳನ್ನು ಮೊಬೈಲ್ ಮೇಲೆಯೇ ವ್ಯಯಿಸುತ್ತಾರೆ. ಇದರಿಂದ ಸಾಮಾಜಿಕ ಜಾಲತಾಣಗಳಿಗೆ ಹೇರಳ ಲಾಭ ಮತ್ತು ಮಕ್ಕಳಿಗೆ ಮೊಬೈಲ್ ವ್ಯಸನ. ಸದಾಕಾಲ ವರ್ಚುವಲ್‌ ಜಗತ್ತಿನಲ್ಲಿ ಮುಳುಗಿರುವ ಮಕ್ಕಳು ನೈಜ ಭೌತಿಕ ಜಗತ್ತನ್ನು
ಪ್ರವೇಶಿಸಿದೊಡನೆ ಅವರನ್ನು ಅತೀವವಾದ ಮಾನಸಿಕ ಒತ್ತಡ ಕಾಡುತ್ತದೆ ಎಂದು ‘ದ ಅಮೆರಿಕನ್ ಸೈಕಲಾಜಿಕಲ್ ಅಸೋಸಿಯೇಷನ್’ ಅಭಿಪ್ರಾಯಪಡುತ್ತದೆ. ಆಲ್ವಿನ್ ಟಾಫ್ಲರ್ ಎಂಬ ಅಮೆರಿಕದ ಲೇಖಕ ತಮ್ಮ ‘ಫ್ಯೂಚರ್ ಶಾಕ್’ ಎಂಬ ಪುಸ್ತಕದಲ್ಲಿ, ಆಧುನಿಕ ಜಗತ್ತಿನಲ್ಲಿ ಆಗುತ್ತಿರುವ ತೀವ್ರತರ ತಾಂತ್ರಿಕ ಬೆಳವಣಿಗೆಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾರೆ. ಶರವೇಗದಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನದಿಂದ ನಮ್ಮ ಭವಿಷ್ಯ ನಮ್ಮನ್ನು ಆಘಾತಕ್ಕೆ ಒಳಪಡಿಸುತ್ತದೆ, ನಮ್ಮ ಸಾಂಪ್ರದಾಯಿಕ ವ್ಯವಸ್ಥೆಗಳು ಈ ಪೀಳಿಗೆಯ ಬೆಳವಣಿಗೆ ಗಳಿಗೆ ಹೊಂದಿಕೊಳ್ಳಲು ನಿಸ್ಸಹಾಯಕವಾಗಿವೆ ಎಂದು ಈ ಪುಸ್ತಕ ವಾದಿಸುತ್ತದೆ.

ತಂತ್ರಜ್ಞಾನದ ಬೆಳವಣಿಗೆಗಳಿಂದ ಆಗುವ ಲಾಭಗಳು ಹೇರಳ. ನಿಜ, ಜೆನ್‌ ಝಡ್‌ ಮಕ್ಕಳು ಸಾಮಾಜಿಕ ನ್ಯಾಯ, ಜನಾಂಗೀಯ ಸಮಾನತೆ, ಲಿಂಗತ್ವ ಸಮಾನತೆಯಂತಹ ವಿಷಯಗಳಲ್ಲಿ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿರುವುದು ಬೆಳಕಿಗೆ ಬಂದಿದೆ. ಆದರೆ ಈ ಹಂತಗಳಲ್ಲಿ ಕೆಲವು ಮಕ್ಕಳು ಆನ್‌ಲೈನ್‌ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂಬುದೂ ಸತ್ಯ. ತಂತ್ರಜ್ಞಾನ ನಿರ್ಮಿತ ಜಗತ್ತಿನ ಮೇಲೆ ಅತಿಯಾದ ಅವಲಂಬನೆಯಿಂದ ಈ ಮಕ್ಕಳು ಸಾಮಾಜಿಕ ಸಂವಹನದಿಂದ ದೂರವಾಗು ತ್ತಿದ್ದಾರೆ. ಸಣ್ಣಪುಟ್ಟ ಸಮಸ್ಯೆಗಳಿಗೂ ಆತ್ಮಹತ್ಯೆಯೇ ಪರಿಹಾರ ಎಂಬಂತೆ ಈ ಮಕ್ಕಳು ಮಾತನಾಡುವುದು ಹಿರಿಯರನ್ನು ಇನ್ನೂ ಹೆಚ್ಚು ಆತಂಕಕ್ಕೆ ದೂಡುತ್ತಿದೆ.

ಉದ್ಯೋಗ ಮಾರುಕಟ್ಟೆ ಮತ್ತು ನಮ್ಮ ಶಿಕ್ಷಣ ವ್ಯವಸ್ಥೆ ನಿರೀಕ್ಷಿಸುವ ಗುಣಮಟ್ಟಕ್ಕೆ ಏರಬೇಕೆಂದರೆ, ಜೆನ್‌ ಝಡ್‌ ಮಕ್ಕಳಿಗೆ ವರ್ಚುವಲ್‌ ಜಗತ್ತಿಗೆ ಬದಲಾಗಿ ನೈಜ ಜಗತ್ತಿನೊಡನೆ ಸಂಪರ್ಕ ಇರಬೇಕು. ಆಗಷ್ಟೇ ಅವರು ಸ್ಪರ್ಧಾತ್ಮಕವಾಗಿಯೂ ಬೆಳೆಯಲು ಸಾಧ್ಯ. ಕಾಲ ಕೆಟ್ಟುಹೋಯಿತು ಎಂದು ನಾವು ಹಲುಬದೇ ಇರಬೇಕೆಂದರೆ, ನಮ್ಮ ಜೆನ್‌ ಝಡ್‌ ಮಕ್ಕಳು ಸಹಜವಾದ ಮಾನವ ಸಂಬಂಧಗಳನ್ನು ಕಟ್ಟಿಕೊಳ್ಳುವಂತೆ ಆಗಬೇಕು. ಮೊಬೈಲ್‌ನ ಅತಿಯಾದ ಬಳಕೆಯನ್ನು ತಪ್ಪಿಸಿ ಜೀವನದ ನಿಜವಾದ ಸವಾಲುಗಳನ್ನು ವಿಮರ್ಶಾತ್ಮಕ ಚಿಂತನೆಯ ಮೂಲಕ ಎದುರಿಸುವುದನ್ನು ಕಲಿಯಬೇಕು.

ಲೇಖಕ: ಪ್ರಾಧ್ಯಾಪಕ, ತುಮಕೂರು ವಿಶ್ವವಿದ್ಯಾಲಯ ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT