ಗುರುವಾರ , ನವೆಂಬರ್ 21, 2019
20 °C
ಟಿಪ್ಪು ವಿಷಯದಲ್ಲಿ ಪಠ್ಯಪುಸ್ತಕಗಳನ್ನು ಸಾಂಸ್ಕೃತಿಕ ರಾಜಕಾರಣಕ್ಕೆ ಬಲಿ ಕೊಡಲಾಗಿದೆ

ಸಂಗತ | ಟಿಪ್ಪು ಸುಲ್ತಾನ್ ಆಡಳಿತ: ಶಾರದಮ್ಮಂಗೆ ಬೆಣ್ಣೆ, ಉಚ್ಚಂಗಮ್ಮಂಗೆ ಸುಣ್ಣ!

Published:
Updated:
Prajavani

ಕರ್ನಾಟಕ ಸರ್ಕಾರದ 7ನೇ ತರಗತಿ ಮತ್ತು 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಹೈದರಾಲಿ ಮತ್ತು ಟಿಪ್ಪು ಕುರಿತು ಸುದೀರ್ಘ ಪಾಠಗಳಿವೆ. ಈ ಇಬ್ಬರ ಬಗ್ಗೆ ಎಲ್ಲಿಯೂ ಅಪಥ್ಯವಾದದ್ದು ನುಸುಳದಂತೆ ಈ ಪಾಠಗಳನ್ನು ರೂಪಿಸಲಾಗಿದೆ. ಆದರೆ, ಇತಿಹಾಸದ ದಾಖಲೆಗಳು ಈ ಇಬ್ಬರು ನವಾಬರ ಕ್ರೌರ್ಯ, ದೌರ್ಜನ್ಯದ ಅನೇಕ ಸಂಗತಿಗಳನ್ನು ಹೇಳುತ್ತವೆ. ಈ ಪಠ್ಯ ರೂಪಿಸಿದವರು ಅದ್ಯಾವುದನ್ನೂ ಸ್ವಲ್ಪವೂ ಪರಿಗಣಿಸಿಲ್ಲ. ‘ಒಳ್ಳೆಯ ರಾಜ, ಆಡಳಿತಗಾರ, ಶೂರ, ಪರಾಕ್ರಮಿ, ಪರಮತಸಹಿಷ್ಣು’ ಎಂದು ಬಿಂಬಿಸಲಾಗಿದೆ.

ಕೊಡಗಿನಲ್ಲಿ ಹಾಗೂ ಕೇರಳದಲ್ಲಿ ಅನೇಕ ದೇವಾಲಯಗಳ ಮೇಲೆ ಟಿಪ್ಪು ದಾಳಿ ಮಾಡಿದ. ಯುದ್ಧಕ್ಕೆ ನೇರ ಸಂಬಂಧ ಇಲ್ಲದ ಸಾವಿರಾರು ಜನರನ್ನು ಹಿಂಸಿಸಿದ, ಮತಾಂತರಿಸಿದ. ಕರಾವಳಿಯಲ್ಲಿ ಆಗ ಇದ್ದ 27 ಚರ್ಚುಗಳ ಪೈಕಿ 25 ಚರ್ಚುಗಳ ಮೇಲೆ ದಾಳಿ ನಡೆಸಿದ. ಸಾವಿರಾರು ಅಮಾಯಕರು ಹಿಂಸೆಗೆ ಒಳಗಾದರು. 1931- 1955ರ ಸಮಯದಲ್ಲಿ ಮಂಗಳೂರಿನ ಬಿಷಪ್‌ರಾಗಿದ್ದ ವಿಕ್ಟರ್ ಫರ್ನಾಂಡಿಸ್ ಅವರು ಟಿಪ್ಪುವಿನ ಕ್ರೌರ್ಯದ ನೆನಪಿಗೆ ನಂತೂರು ಪದವು ಎಂಬಲ್ಲಿ ದೊಡ್ಡ ಶಿಲುಬೆಯನ್ನು ಸ್ಥಾಪಿಸಿದ್ದಾರೆ. 1990ರ ದಶಕದಲ್ಲಿ ಕ್ರೈಸ್ತ ಸಮುದಾಯದವರು, ಟಿಪ್ಪುವಿನ ಕ್ರೌರ್ಯಕ್ಕೆ ಬಲಿಯಾದವರ ನೆನಪಿನಲ್ಲಿ ಶ್ರೀರಂಗಪಟ್ಟಣದಿಂದ ಮಂಗಳೂರಿಗೆ ಪಾದಯಾತ್ರೆ ಮಾಡಿದ್ದರು. ಕೊಡಗಿನವರು ಹಾಗೂ ಕರಾವಳಿಯ ಕ್ರೈಸ್ತರು ಬ್ರಿಟಿಷರ ಪರವಾಗಿದ್ದರು, ಹಾಗಾಗಿ ಈ ದಾಳಿ ನಡೆದಿದೆ ಎಂದು ವಾದಿಸಲಾಗುತ್ತದೆ.

ಇದನ್ನೂ ಓದಿ: ಭಾರತದ ಮೊದಲ ಸ್ವಾತಂತ್ರ್ಯ ಸೇನಾನಿ ಟಿಪ್ಪು ಸುಲ್ತಾನ್‌

‘ನನ್ನ ವಿಜಯ ಖಡ್ಗ ಮುಸಲ್ಮಾನರಲ್ಲದವರ ಮೇಲೆ ಮಿಂಚಿನಂತೆ ಪ್ರಹಾರ ಮಾಡುತ್ತದೆ. ಓ ಅಲ್ಲಾ, ಮುಸ್ಲಿಮರಿಗೆ ವಿಜಯ ದೊರೆಯುವಂತೆ ಮಾಡು. ಮುಸಲ್ಮಾನರಾಗಲು ನಿರಾಕರಿಸಿದವರು ಇದರಿಂದಲೇ ನಾಶವಾಗುವಂತೆ ಮಾಡು’ (History of Mysore, C.H. Rao, Vol. 3, page 1013)- ಇದು ಟಿಪ್ಪುವಿನ ಖಡ್ಗದ ಮೇಲಿನ ಬರಹ. ಈಗ ಹೇಳಿ– ಕೊಡವರು ಹಾಗೂ ಕ್ರೈಸ್ತರು ಬ್ರಿಟಿಷರ ಪರವಾಗಿದ್ದರು ಎಂಬ ವಾದ ಸಬೂಬು ಅನ್ನಿಸುವುದಿಲ್ಲವೇ?

ಘಜ್ನಿ, ಘೋರಿ, ಔರಂಗಜೇಬ್ ವಿಷಯ ಪಠ್ಯಪುಸ್ತಕಗಳಲ್ಲಿ ಇದೆಯಲ್ಲವೇ? ಅದನ್ನು ತೆಗೆಯಬೇಕೆಂದು ಯಾರೂ ಆಗ್ರಹಿಸಿಲ್ಲ. ಕಾರಣ ಸ್ಪಷ್ಟ, ಪಠ್ಯ ಪುಸ್ತಕ ರಚಿಸಿದವರು ಅವರನ್ನು ಹೇಗಿದ್ದರೋ ಹಾಗೇ ಚಿತ್ರಿಸಿದ್ದಾರೆ. ಟಿಪ್ಪು ವಿಷಯದಲ್ಲಿ ಹಾಗಾಗಲಿಲ್ಲ.

ಟಿಪ್ಪುವನ್ನು ಪರಮತಸಹಿಷ್ಣು, ಕೋಮು ಸೌಹಾ ರ್ದದ ಹರಿಕಾರ ಎಂದು ವಾದಿಸುವವರು, ಶೃಂಗೇರಿ, ನಂಜನಗೂಡು ದೇಗುಲಗಳಿಗೆ ಟಿಪ್ಪು ನೀಡಿದ ದಾನ- ದೇಣಿಗೆಗಳನ್ನು ಉಲ್ಲೇಖಿಸುತ್ತಾರೆ. ಶೃಂಗೇರಿಯ ಮೇಲೆ ಮರಾಠಾ ಸೈನ್ಯದ ಗುಂಪೊಂದು ದಾಳಿ ನಡೆಸಿ ಲೂಟಿ ಮಾಡಿದ್ದು ಮತ್ತು ಆನಂತರ ಟಿಪ್ಪು ಎಲ್ಲ ರೀತಿಯ ಸಹಾಯ ನೀಡಿದ್ದು ಘಟನೆಗೆ ಮೆರುಗು ಸಿಗಲು ಕಾರಣವಾಗಿವೆ. ಮರಾಠರು ಶೃಂಗೇರಿಯಲ್ಲಿ ನಡೆಸಿದ ಪುಂಡಾಟಕ್ಕೂ, ಚಿತ್ರದುರ್ಗದಲ್ಲಿ ಟಿಪ್ಪು ನಡೆಸಿದ ಪುಂಡಾಟಕ್ಕೂ ಏನಾದರೂ ವ್ಯತ್ಯಾಸ ಇದೆಯೇ ಎಂಬುದನ್ನು ಪ್ರಾಂಜಲ ಮನಸ್ಸಿನಿಂದ ಪರಿಶೀಲಿಸಬೇಕು.

ಇದನ್ನೂ ಓದಿ: ಟಿಪ್ಪು ಪಠ್ಯ ವಿವಾದ ಶ್ರೀರಂಗಪಟ್ಟಣದಲ್ಲಿ ಬಿಸಿಬಿಸಿ ಚರ್ಚೆ

ಚಿತ್ರದುರ್ಗದ ಪಾಳೆಗಾರರು ಬ್ರಿಟಿಷರ ಪರವಾಗಿ ಇರಲಿಲ್ಲ. ಹೈದರ್-ಟಿಪ್ಪು ಸೈನ್ಯ ಪದೇಪದೇ ಚಿತ್ರ ದುರ್ಗದ ಮೇಲೆ ದಾಳಿ ಮಾಡಿದ್ದು ಸಾಮ್ರಾಜ್ಯ ವಿಸ್ತರಣೆಗಾಗಿ. ಮದಕರಿನಾಯಕನ ಅಕ್ಕಪಕ್ಕದ ಶತ್ರುಗಳನ್ನು ಒಟ್ಟು ಮಾಡಿಕೊಂಡು ಮಾಡಿದ ದಾಳಿಯೂ ಸಫಲವಾಗಿರಲಿಲ್ಲ. ಹಾಗೆ ನೋಡಿದರೆ ಪಾಳೆಗಾರನು ಗುತ್ತಿ, ನಿಡುಗಲ್ಲುಗಳನ್ನು ಗೆಲ್ಲಲು ನವಾಬನಿಗೆ ಸಹಾಯ ಮಾಡಿದ್ದ. 1779ರಲ್ಲಿ ಪಾಳೆಗಾರನೊಂದಿಗೆ ಇದ್ದ ಮೂರು ಸಾವಿರ ಮುಸ್ಲಿಂ ಸೈನಿಕರಲ್ಲಿ ಮತೀಯ ಭಾವನೆ ಪ್ರಚೋದಿಸಿ ಮೋಸ ದಾಟದಲ್ಲಿ ಅವರನ್ನು ಸೆರೆಹಿಡಿಯಲಾಯಿತು,  ಮಾತು ಕತೆಯ ಹೆಸರಿನಲ್ಲಿ ಮದಕರಿ ನಾಯಕನನ್ನು ಶ್ರೀರಂಗ ಪಟ್ಟಣಕ್ಕೆ ಕರೆದೊಯ್ದು ವಿಷಹಾಕಿ ಕೊಲ್ಲಲಾಯಿತು ಎಂದು ಇತಿಹಾಸಕಾರ ಡಾ. ಬಿ.ರಾಜಶೇಖರಪ್ಪ ಬರೆಯುತ್ತಾರೆ (ಪ್ರಾಚೀನ ಚಿತ್ರದುರ್ಗ, ಪುಟ 208, 209. ಪ್ರಕಾಶಕರು: ಮುರುಘಾಮಠ, ಚಿತ್ರದುರ್ಗ) ಮತ್ತೊಬ್ಬ ಇತಿಹಾಸಕಾರ ಲಕ್ಷ್ಮಣ ತೆಲಗಾವಿ ತಮ್ಮ ‘ಚಂದ್ರವಳ್ಳಿ- ಚಿತ್ರದುರ್ಗ ಜಿಲ್ಲೆಯಲ್ಲಿ ಪಾಳೆಗಾರರ ಆಳ್ವಿಕೆ’ ಪುಸ್ತಕದಲ್ಲಿ, ಚಿತ್ರದುರ್ಗದಲ್ಲಿ ಟಿಪ್ಪು ನಡೆಸಿದ ಲೂಟಿ, ಮತಾಂತರವನ್ನು ಸವಿಸ್ತಾರವಾಗಿ ವಿವರಿಸಿದ್ದಾರೆ.

ಮತ್ತೊಬ್ಬ ಇತಿಹಾಸಕಾರ ಹುಲ್ಲೂರು ಶ್ರೀನಿವಾಸ ಜೋಯಿಸರು ತಮ್ಮ ‘ಐತಿಹಾಸಿಕ ಲೇಖನಗಳು’ ಪುಸ್ತಕದಲ್ಲಿ (ಪುಟ 113, 114) ಪಾಳೆಗಾರರ ಮನೆದೇವತೆಯಾದ ಉತ್ಸವಾಂಬೆ, ಗ್ರಾಮದೇವತೆಯಾದ ಏಕನಾಥೇಶ್ವರಿ, ಸಂಪಿಗೆ ಸಿದ್ಧೇಶ್ವರ ದೇವಾಲಯಗಳ ಮೇಲೆ ನಡೆದ ದಾಳಿ, ಲೂಟಿಯನ್ನು ವಿವರಿಸಿದ್ದಾರೆ. ಚಿತ್ರದುರ್ಗದ ಜಿಲ್ಲಾ ಗೆಜೆಟಿಯರ್‌ನ ಪುಟ 394ರಲ್ಲಿ ‘ಚಿತ್ರದುರ್ಗದಲ್ಲಿ ಜುಮ್ಮಾ ಮಸೀದಿಯನ್ನು ಟಿಪ್ಪು ಕಟ್ಟಿಸಿಕೊಟ್ಟನು. ಉಚ್ಚಂಗಮ್ಮನ ಗುಡಿಯ ಎರಡು ಅಂತಸ್ತಿನ ಗೋಪುರವನ್ನು ಕೆಡವಿಸಿ, ಅದೇ ಕಲ್ಲುಗಳನ್ನು ಬಳಸಿ ಮಸೀದಿ ಕಟ್ಟಲಾಯಿತು’ ಎಂಬ ಸ್ಪಷ್ಟ ಉಲ್ಲೇಖವಿದೆ.

ಇದನ್ನೂ ಓದಿ: ಟಿಪ್ಪು ಬಗ್ಗೆ ತಿಳಿದಿರಬೇಕಾದ 10 ಸಂಗತಿಗಳು

ಬ್ರಾಹ್ಮಣ ಗುರುಪೀಠದ ಶೃಂಗೇರಿಯ ಶಾರದಮ್ಮನಿಗೆ ಚಿನ್ನ, ಬೆಳ್ಳಿ, ನಗ, ನಾಣ್ಯ ಒಪ್ಪಿಸುವುದು- ಗ್ರಾಮೀಣ ಜನಪದರ, ಶೂದ್ರರ ದೇವತೆಯಾದ ಉಚ್ಚಂಗಮ್ಮನ ಗುಡಿಯ ಮೇಲೆ ಅಟ್ಟಹಾಸ ನಡೆಸು ವುದು ಯಾವ ಸೀಮೆಯ ಕೋಮುಸೌಹಾರ್ದ ಸ್ವಾಮಿ?

ಟಿಪ್ಪು ವಿಷಯದಲ್ಲಿ ಪಠ್ಯಪುಸ್ತಕಗಳನ್ನು ಸಾಂಸ್ಕೃತಿಕ ರಾಜಕಾರಣಕ್ಕೆ ಬಲಿ ಕೊಡಲಾಗಿದೆ. ಶಾರದಮ್ಮಂಗೆ ಬೆಣ್ಣೆ- ಉಚ್ಚಂಗಮ್ಮಂಗೆ ಸುಣ್ಣ! ಇದ್ಯಾವ ಖಾಜಿ ನ್ಯಾಯ ಸ್ವಾಮಿ?

ಇನ್ನಷ್ಟು...

ಟಿಪ್ಪು ಪಾಠವನ್ನು 101 ಪರ್ಸೆಂಟ್‌ ತೆಗೆದುಹಾಕುತ್ತೇವೆ: ಯಡಿಯೂರಪ್ಪ

ಟಿಪ್ಪು ಜಯಂತಿ- ಕಾಂಗ್ರೆಸ್‌, ಬಿಜೆಪಿ ನಡುವೆ ವಾಕ್ಸಮರ ತಾರಕಕ್ಕೆ

ಪ್ರತಿಕ್ರಿಯಿಸಿ (+)