ಶುಕ್ರವಾರ, ಆಗಸ್ಟ್ 12, 2022
25 °C

ಸಂಗತ | ಸುದ್ದಿಯಾದರು ಇಬ್ಬರು ಪುತ್ರಿಯರು

ರವಿಚಂದ್ರ ಎಂ. Updated:

ಅಕ್ಷರ ಗಾತ್ರ : | |

ತಾವು ಹೇಳಬೇಕಾದುದನ್ನು ಮಾಧ್ಯಮಗಳ ಎದುರು ಹೇಳುವಷ್ಟು ಸಶಕ್ತರಾದ ಜನಪ್ರಿಯ ವರ್ಗವೊಂದು ನಮ್ಮಲ್ಲಿ ಇತ್ತು, ಇದೆ ಮತ್ತು ಮುಂದೆಯೂ ಇರಲಿದೆ. ಇವರು ನಡೆಸುವ ಪತ್ರಿಕಾಗೋಷ್ಠಿಗೆ ಮತ್ತು ಮಾಡುವ ಟ್ಟೀಟ್‍ಗಳಿಗೆ ಸದಾ ಬೇಡಿಕೆ ಇರುತ್ತದೆ. ಅವುಗಳನ್ನು ಅನುಸರಿಸುವ ದೊಡ್ಡ ಹಿಂಬಾಲಕರ ಪಡೆಯೂ ಇರುತ್ತದೆ. ಇಂತಹವರು ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಸುದ್ದಿಯಾಗುವುದರಲ್ಲಿ ವಿಶೇಷವೇನೂ ಇರದು. ಏಕೆಂದರೆ, ಇವರು ತಮ್ಮ ಪದವಿ, ಹಿನ್ನೆಲೆ ಅಥವಾ ಯಾವುದೋ ಕ್ಷೇತ್ರದಲ್ಲಿ ಅದಾಗಲೇ ಗಳಿಸಿರುವ ಜನಪ್ರಿಯತೆಯಿಂದ ಸುದ್ದಿಮನೆಗಳಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ಆದರೆ, ಬದುಕು ಒಡ್ಡಿದ ಸವಾಲುಗಳ ಮಹಾಪೂರವನ್ನೇ ಎದುರಿಸಿ, ಅದರಲ್ಲಿ ಗೆಲುವು ಸಾಧಿಸಿ, ಮಾಧ್ಯಮಗಳನ್ನು ತನ್ನೆಡೆ ಸೆಳೆದುಕೊಂಡಿರುವ 15 ವರ್ಷದ ಬಾಲಕಿ ಜ್ಯೋತಿ ಕುಮಾರಿ ಇಂತಹವರಿಗಿಂತ ಭಿನ್ನ.

ಟ್ವೀಟ್ ಆಗಲಿ ಅಥವಾ ಸಾಮಾಜಿಕ ಮಾಧ್ಯಮದಲ್ಲಿನ ವಾಲ್-ಬರಹವಾಗಲಿ ಇದೀಗ ಆಕೆಗೆ ಜನಪ್ರಿಯತೆ ತಂದುಕೊಟ್ಟಿಲ್ಲ. ಅಪಘಾತಕ್ಕೀಡಾಗಿ ದೆಹಲಿ ಬಳಿಯ ಗುರುಗ್ರಾಮದಲ್ಲಿ ಸಿಕ್ಕಿಕೊಂಡಿದ್ದ ತಂದೆಯನ್ನು 1,200 ಕಿ.ಮೀ. ದೂರದಲ್ಲಿರುವ ಬಿಹಾರದಲ್ಲಿನ ದರ್ಬಾಂಗ್ ಎಂಬ ತವರೂರಿಗೆ ಸೈಕಲ್ ಮೇಲೆ ಕೂರಿಸಿ ಕರೆದುಕೊಂಡು ಹೋದ ರೀತಿ, ಆಕೆಯನ್ನು ‘ಸುದ್ದಿಮನೆಗಳ ಡಾರ್ಲಿಂಗ್’ ಆಗಿಸಿದೆ.

ಸರ್ಕಾರಗಳು ಘೋಷಿಸುವ ಯೋಜನೆಗಳು ಜನರನ್ನು ತಲುಪಲಿ ಬಿಡಲಿ, ಆದರೆ ನಮ್ಮ ಜನ ಬದುಕು ಕಟ್ಟಿಕೊಳ್ಳುವ ರೀತಿ ಮತ್ತು ಅದರಲ್ಲಿ ಯಶಸ್ಸು ಪಡೆಯುವ ಬಗೆಯು ಎಲ್ಲ ದೇಶದವರೂ ಬೆಕ್ಕಸ-ಬೆರಗಾಗಿ ನಮ್ಮತ್ತ ನೋಡುವಂತೆ ಮಾಡುವುದು, ಜ್ಯೋತಿಯಂತಹವರ ಹೋರಾಟಗಳು.

ಜ್ಯೋತಿಯ ಸಾಧನೆ ಯಾವುದೇ ಒಲಿಂಪಿಕ್ ಪದಕ ವಿಜೇತರ ಸಾಧನೆಗಿಂತ ಕಡಿಮೆ ಇಲ್ಲ. ತಂದೆಯನ್ನು ಕೂರಿಸಿಕೊಂಡು 1,200 ಕಿ.ಮೀ. ದೂರವನ್ನು 7 ದಿನಗಳ ಅವಧಿಯಲ್ಲಿ ಕ್ರಮಿಸಿ, ಈಕೆ ನಡೆಸಿದ ಬದುಕಿನ ಯಾತ್ರೆ ಸಂಚಲನ ಮೂಡಿಸುತ್ತದೆ. ಮುಂದೆ ನಮ್ಮ ಶಾಲಾ ಮಕ್ಕಳು, ಶ್ರವಣಕುಮಾರನಲ್ಲಿನ ಮಾತಾ-ಪಿತ ಭಕ್ತಿಯ ಕಥೆಯ ಜೊತೆಯಲ್ಲಿಯೇ, ಜ್ಯೋತಿ ಕುಮಾರಿಯ ಕಥೆಯನ್ನೂ ಓದುವಂತೆ ಪಠ್ಯದಲ್ಲಿ ಅಳವಡಿಸಬೇಕಾದ ಜವಾಬ್ದಾರಿ ಶಿಕ್ಷಣ ತಜ್ಞರದ್ದು ಎಂದರೆ ಅತಿಶಯೋಕ್ತಿ ಆಗಲಾರದು.

ಜ್ಯೋತಿಯ ರೀತಿಯಲ್ಲಿಯೇ ತಮ್ಮ ತಮ್ಮ ಊರು ತಲುಪಲು ಸಾಹಸ ಯಾತ್ರೆಗಳನ್ನು ಕೈಗೊಂಡ ಅಸಂಖ್ಯ ವಲಸೆ ಕಾರ್ಮಿಕರ ಮನಕಲಕುವ ಕಥೆಗಳು ನಮ್ಮ ಈ ಕೊರೊನಾ ವಿರುದ್ಧದ ಹೋರಾಟದಲ್ಲಿ ಇರುವುದು ಅಷ್ಟೇ ಸತ್ಯ. ಅಖಂಡ ಭಾರತ ವಿಭಜನೆಯ ವಲಸೆಯನ್ನು ಕಂಡಂತಹ ಬಹಳ ಮಂದಿ ಇಂದು ಬದುಕಿರಲಿಕ್ಕಿಲ್ಲ. ಆದರೆ ಕೊರೊನಾ ಎಂಬ ಕ್ರಿಮಿಯು ವಲಸೆ ಕಾರ್ಮಿಕರ ಬದುಕನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತಿರುವುದಕ್ಕೆ, ಸ್ವಾತಂತ್ರ್ಯಾನಂತರ ಜನಿಸಿದ ನಮ್ಮಂತಹ ಅಸಂಖ್ಯ ಜನ ಸಾಕ್ಷಿಯಾಗಿದ್ದೇವೆ.

ಇಂತಹ ಅನಿವಾರ್ಯ ಸ್ಥಿತಿಯು ಜ್ಯೋತಿಗೆ ಬಂದದ್ದಾದರೂ ಏಕೆ ಎಂಬುದು ಇಲ್ಲಿ ಗಮನಾರ್ಹವಾದ ವಿಚಾರ. ಆಟೊ ಚಾಲಕರಾಗಿದ್ದ ಆಕೆಯ ತಂದೆ ಮೋಹನ್ ಪಾಸ್ವಾನ್ ರಸ್ತೆ ಅಪಘಾತದಲ್ಲಿ ಗಾಯಗೊಂಡು ಮನೆ ಸೇರಿದ್ದರು. ಅವರ ಬಳಿ ದಿನನಿತ್ಯದ ಬಳಕೆಗೆ ಕೂಡಿಟ್ಟಿದ್ದ ಹಣ ಖಾಲಿಯಾಗಿತ್ತಲ್ಲದೆ, ಮನೆ ಖಾಲಿ ಮಾಡುವಂತೆ ಮಾಲೀಕರು ಒತ್ತಾಯಿಸುತ್ತಿದ್ದರು. ಇವು ಆ ಬಾಲಕಿಯು ಇಂತಹ ಕಠಿಣ ನಿರ್ಧಾರಕ್ಕೆ ಬರಲು ಪ್ರೇರಣೆಯಾದವು. ನಮ್ಮ ಸರ್ಕಾರಗಳ ಮಾರ್ಗಸೂಚಿಗಳು (ಮನೆ ಮಾಲೀಕರಿಗೆ ನೀಡಿದ್ದ ಎಚ್ಚರಿಕೆ) ಎಷ್ಟರಮಟ್ಟಿಗೆ ಅನುಸರಣೆಯಾಗುತ್ತಿವೆ ಎಂಬುದಕ್ಕೆ ಇದು ಒಂದು ಸಣ್ಣ ಉದಾಹರಣೆಯಷ್ಟೇ.

ಈ ಬೃಹತ್ ದೇಶದಲ್ಲಿನ ಸಾಮಾನ್ಯ ಜನರಲ್ಲಿ ಮನೆಮಾಡಿರುವ ಕಾರುಣ್ಯ ರಸ, ಆ ಬಾಲಕಿ ಸುರಕ್ಷಿತವಾಗಿ ಗೂಡು ಸೇರಲು ಸಹಕಾರಿಯಾಯಿತು ಎಂಬ ವಿಚಾರವೂ ಇಲ್ಲಿ ಉಲ್ಲೇಖನೀಯ. ತಮ್ಮ ಪಯಣದಲ್ಲಿ ಜ್ಯೋತಿ ಮತ್ತು ಅವಳ ತಂದೆ ರಾತ್ರಿ ವೇಳೆ ಪೆಟ್ರೋಲ್ ಬಂಕ್‍ಗಳಲ್ಲಿ ನಿದ್ರಿಸುತ್ತಿದ್ದರಂತೆ. ಅಲ್ಲಿ ಅನೇಕ ಮಂದಿ ಇವರಿಗೆ ಊಟ ಮತ್ತು ನೀರು ನೀಡಿ ಉಪಚರಿಸಿದ್ದಾರೆ. ಮಾರ್ಗ ಮಧ್ಯದಲ್ಲಿ ಸ್ವಲ್ಪ ದೂರ ಕ್ರಮಿಸಲು ಲಾರಿ ಚಾಲಕರೊಬ್ಬರು ಸಹಾಯ ಮಾಡಿದ್ದಾರೆ. ಇವೆಲ್ಲವನ್ನೂ ಆ ಬಾಲಕಿ ಕೃತಜ್ಞತೆಯಿಂದ ಸ್ಮರಿಸಿದ್ದಾಳೆ.

ಇದಿಷ್ಟೂ, ಬದುಕು ಕಟ್ಟಿಕೊಳ್ಳಲು ಹೋರಾಡಿದ ಜ್ಯೋತಿ ಎಂಬ ಅಜ್ಞಾತ ಆಟೊ ಚಾಲಕನ ಪುತ್ರಿಯನ್ನು ಮಾಧ್ಯಮಗಳು ಗುರುತಿಸಲು ಸಾಧ್ಯ ಮಾಡಿದ ಕಥನವಾದರೆ, ಎಲೆಮರೆಕಾಯಿಯಂತಹ ಈ ಪುತ್ರಿಯ ಸಾಧನೆಯನ್ನು ತಮ್ಮ ಟ್ವೀಟ್‌ನಲ್ಲಿ ಮುಕ್ತವಾಗಿ ಶ್ಲಾಘಿಸುವ ಮೂಲಕ, ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‍ ಅವರ ಪುತ್ರಿ ಇವಾಂಕಾ ಟ್ರಂಪ್‍ರ ಮಾನವೀಯತೆಗೆ ಮಿಡಿಯುವ ಗುಣ ಸಹ ಇಲ್ಲಿ ಉಲ್ಲೇಖನಿಯ. ಅರಮನೆಯ ವಾಸಿಯಾಗಲಿ ಗುಡಿಸಲಿನ ವಾಸಿಯಾಗಲಿ ಎಲ್ಲರಿಗೂ ಮಾತಾಪಿತರ ಯೋಗಕ್ಷೇಮದ ವಿಚಾರದಲ್ಲಿ, ಅವರ ಮೇಲಿನ ಪ್ರೀತಿಯಲ್ಲಿ ಕೊರತೆ ಇರುವುದಿಲ್ಲ ಎಂಬುದನ್ನು ಈ ಇಬ್ಬರೂ ಪುತ್ರಿಯರ ನಡವಳಿಕೆ ಸಾಬೀತು ಮಾಡಿದೆಯಲ್ಲವೇ?

ಲೇಖಕ: ಪ್ರಾಧ್ಯಾಪಕ, ಮಾಹಿತಿ ತಂತ್ರಜ್ಞಾನ ವಿಭಾಗ ಸಪ್ತಗಿರಿ ಕಾಲೇಜ್ ಆಫ್ ಎಂಜಿನಿಯರಿಂಗ್, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು