ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಢ್ಯದ ಮಲಿನ ಮನಗಳು

ಅಸ್ಪೃಶ್ಯತೆ ಆಚರಣೆ ತೊಲಗಿಸಲು ಯುವಜನ ಮನಸ್ಸು ಮಾಡಬೇಕಿದೆ
Last Updated 10 ಮಾರ್ಚ್ 2020, 19:32 IST
ಅಕ್ಷರ ಗಾತ್ರ

‘ಜಗತ್ತು ದೂರ ತಳ್ಳಿದಾಗ ನನ್ನನ್ನು ಅಪ್ಪಿಕೊಂಡಿದ್ದು ಪುಸ್ತಕಗಳು’– ಹೀಗೆ ಹೇಳಿದವರು ಡಾ. ಬಿ.ಆರ್.ಅಂಬೇಡ್ಕರ್. ದೂರ ತಳ್ಳಿದವರೇ ಸಂವಿಧಾನ ರಚಿಸಲು ಅವರನ್ನು ಆಹ್ವಾನಿಸಿದ್ದು ಈಗ ಇತಿಹಾಸ. ಅದು ಸಾಧ್ಯವಾಗಿದ್ದು ಶಿಕ್ಷಣದಿಂದ. ಅಕ್ಷರಗಳನ್ನು ಅಪ್ಪಿಕೊಂಡರೆ ಬಹಿಷ್ಕರಿಸಿದವರೇ ಬಾಗುತ್ತಾರೆ, ನಮಸ್ಕರಿಸುತ್ತಾರೆ. ಇದನ್ನು ಇಂದಿನ ತಳಸಮುದಾಯ ಗಳು ಅರ್ಥೈಸಿಕೊಂಡು, ಒಂದ್ಹೊತ್ತು ಉಂಡರೂ ಮೂರ‍್ಹೊತ್ತೂ ಅಕ್ಷರಗಳನ್ನು ಅಪ್ಪಿಕೊಳ್ಳಲೇಬೇಕಾಗಿದೆ.

ರಾಜ್ಯದ ಕೆಲವೆಡೆ ಈಗಲೂ ಅಸ್ಪೃಶ್ಯತೆ ಆಚರಿಸುತ್ತಿರುವುದು (ಪ್ರ.ವಾ., ಮಾರ್ಚ್‌ 9) ಅವರ ಮನಃಸ್ಥಿತಿಯನ್ನು ತೋರಿಸುತ್ತದೆ. ಅದರಲ್ಲೂ ಹಿಂದುಳಿದ ಸಮುದಾಯಗಳಿಗೆ ಸೇರಿದವರು ಸಹ ಈ ಅನಿಷ್ಟ ಆಚರಣೆಯಲ್ಲಿ ಪಾಲುದಾರರಾಗಿರುವುದು ವಿಪರ್ಯಾಸವೇ ಸರಿ. ಇಂತಹ ಸ್ಥಿತಿಯಲ್ಲಿ, ಕೆಲವು ಸಮುದಾಯಗಳು ತಮ್ಮನ್ನು ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ಆಗಾಗ ಹೋರಾಟ ನಡೆಸುವುದು ಎಷ್ಟು ಸಮಂಜಸವೋ ಅರ್ಥವಾಗದು!

ಸರ್ಕಾರವು ಮಹಾನ್ ನಾಯಕರ ಜಯಂತಿಗಳನ್ನು ಆಚರಿಸುವ ಉದ್ದೇಶವೇ ಇಂತಹ ಹೀನ ಆಚರಣೆಗಳನ್ನು ಅಳಿಸಿ, ಸಾಮರಸ್ಯದ ಬದುಕು ಕಲ್ಪಿಸಿಕೊಡಬೇಕೆಂಬ ಕಾರಣದಿಂದ. ಆದರೆ ಇಂದು ಆಗುತ್ತಿರುವುದೇನು? ಚಂದ್ರನಲ್ಲಿ ಕಾಲಿಟ್ಟರೂ ಮಡಿ– ಮೈಲಿಗೆಯ ಕೀಳು ಮನಗಳ ಅಟ್ಟಹಾಸ ಮಾತ್ರ ನಿಂತಿಲ್ಲ. ಇಂತಹ ಮೌಢ್ಯದ ಮಲಿನ ಮನದೊಳಗೆ ಇನ್ನೆಷ್ಟು ಕಾಲ ಬಿದ್ದು ಹೊರಳಾಡುವಿರಿ?

-ಕುಮಾರ್ ಹೆಬ್ಬಾಲೆ, ಮದ್ದೂರು

**
ಬರೀ ಮಾತಿನಲ್ಲಿಲ್ಲ
ಪ್ರತೀ ಸಮುದಾಯದಲ್ಲೂ ಒಬ್ಬೊಬ್ಬರಾದರೂ ಮಹಾನುಭಾವರು ಜನಿಸಿ ಮನುಕುಲದ ಏಳಿಗೆಗಾಗಿ ಶ್ರಮಿಸಿದ್ದಾರೆ. ವಿಪರ್ಯಾಸವೆಂದರೆ, ಈ ಮಹಾನ್ ಮಾನವತಾವಾದಿಗಳ ಹೆಸರನ್ನು ಬಳಸಿಕೊಂಡು ಈಗಿನವರು ರಾಜಕೀಯ ಮಾಡುತ್ತಾರೆ ವಿನಾ ಅವರ ತತ್ವಗಳನ್ನು ಪಾಲಿಸುವುದಿಲ್ಲ.

ಪ್ರತಿಯೊಬ್ಬರಿಗೂ ಆತ್ಮಗೌರವ ಇರುತ್ತದೆ ಎಂಬು ದನ್ನು ನಾವೆಲ್ಲರೂ ಮನಗಾಣಬೇಕು. ಸುಂದರ ಮತ್ತು ಸಮ ಸಮಾಜದ ನಿರ್ಮಾಣ ಮಾತಿನಲ್ಲಿಲ್ಲ, ನಮ್ಮ ಕೃತಿಯಲ್ಲಿದೆ.

-ಹರೀಶ್ ಕಮ್ಮನಕೋಟೆ, ತುಮಕೂರು

**
ಜಾತಿಯ ವಿರಾಟ್‌ ರೂಪ
ಅಸ್ಪೃಶ್ಯತೆ ಎಂಬ ಅನಿಷ್ಟ ಪದ್ಧತಿಯಿಂದ ಜನ ಅಷ್ಟು ಸುಲಭದಲ್ಲಿ ಹೊರಬರಲಾರರು. ನಮ್ಮ ಸಂವಿಧಾನದಿಂದಾಗಿ ಈಗ ವಾತಾವರಣ ಈ ಮಟ್ಟಿಗಾದರೂ ಇದೆ. ಆದರೆ, ಜಾತಿ ಕಾರಣಕ್ಕಾಗಿ ನಡೆಯುವ ಮರ್ಯಾದೆಗೇಡು ಹತ್ಯೆಗಳು, ದಲಿತರು ಎದುರಿಗೆ ಬಂದರೆ ಅಶುಭ ಎನ್ನುವುದು, ಅವರಿ ಗಾಗಿಯೇ ಪ್ರತ್ಯೇಕ ಕೇರಿಗಳು, ದಲಿತ ಮಹಿಳೆಯು ಅಂಗನವಾಡಿಯಲ್ಲಿ ಅಡುಗೆ ಮಾಡಿದರೆ ಸವರ್ಣೀ ಯರು ತಮ್ಮ ಮಕ್ಕಳನ್ನು ಅಂಗನವಾಡಿಗೇ ಕಳುಹಿಸದಿರುವುದು, ಸಂಸ್ಥೆಗಳಲ್ಲಿ ತಮ್ಮ ಜಾತಿಯವರಿಗೆ ಮಾತ್ರ ಕೆಲಸ ಕೊಡುವುದು, ವಿಶ್ವವಿದ್ಯಾಲಯಗಳಲ್ಲಿ ಜಾತಿನಿಂದನೆ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಯುವ ವಿದ್ಯಾರ್ಥಿಗಳು, ಜಾತಿಗೊಂದರಂತೆ ಸಂಘ–ಸಂಸ್ಥೆ ಸ್ಥಾಪನೆಯಾಗಿ ತಮ್ಮ ತಮ್ಮ ಜಾತಿಯವರಿಗಷ್ಟೇ ವಿದ್ಯಾರ್ಥಿ ವೇತನ ನೀಡುವುದು, ಮದುವೆಯಾಗದೆ ಹೀಗೇ ಇದ್ದರೂ ಅಡ್ಡಿಯಿಲ್ಲ ಅನ್ಯ ಜಾತಿಯ ಹುಡುಗಿಯನ್ನು ಮದುವೆಯಾಗಲಾರೆ ಎನ್ನುವ ಹುಡುಗರು, ಮನೆಗೆಲಸಕ್ಕೆ ಬರುವ ದಲಿತ ಮಹಿಳೆಯ ಬಳಿ ಪಾತ್ರೆ ತೊಳೆಸಿಕೊಂಡು, ಒಳಗಿನ ಕೆಲಸ ಮಾಡಿಸಿಕೊಳ್ಳದೆ ಹಿಂಬಾಗಿಲಿನಿಂದ ಕಳುಹಿಸುವ ಮಹಿಳೆಯರು, ಜಾತ್ಯಸ್ಥ ಮಹಿಳೆಯರು ಮಾತ್ರ ಸೇರಿಕೊಂಡು ಮಹಿಳಾ ಸಂಘ ರಚಿಸಿಕೊಳ್ಳುವುದು, ತಮ್ಮ ಜಾತಿಯ ಹುಡುಗಿಯರೊಂದಿಗೆ ಮಾತ್ರ ಸ್ನೇಹ ಮಾಡಿಕೊಳ್ಳುವ ಹುಡುಗಿಯರು, ಜಾತಿಯ ಇಂತಹ ವಿರಾಟ್‌ ರೂಪ ಒಂದೇ, ಎರಡೇ. ಬುದ್ಧ, ಬಸವಣ್ಣ, ಗಾಂಧೀಜಿ, ಅಂಬೇಡ್ಕರ್, ನಾರಾಯಣ ಗುರು ಅವರಂತಹ ಮಾನವತಾವಾದಿಗಳ ವಿಚಾರಧಾರೆಯ ಪಾಠ ಸಮಾಜಕ್ಕೆ ಅಗತ್ಯವಾಗಿ ಬೇಕಾಗಿದೆ.

-ಸರೋಜ ಎಂ‌.ಎಸ್., ಸಾಗರ

**
ಇಚ್ಛಾಶಕ್ತಿ ಪ್ರದರ್ಶಿಸಲಿ
ರಾಜ್ಯದಲ್ಲಿ ಅಸ್ಪೃಶ್ಯತೆ ಜೀವಂತವಾಗಿ ಇರುವುದರ ನಡುವೆಯೂ ದಲಿತೇತರ ಜಾತಿಗಳ ಹೆಚ್ಚಿನ ವಿದ್ಯಾವಂತರಲ್ಲಿ ಅಸ್ಪೃಶ್ಯತೆ ಆಚರಣೆ ಸರಿಯಲ್ಲ ಎಂಬ ಆಳವಾದ ತಿಳಿವಳಿಕೆಯೂ ಇದೆ. ವೈವಾಹಿಕ ಸಂಬಂಧ ಹೊರತುಪಡಿಸಿ ಉಳಿದೆಲ್ಲ ವ್ಯವಹಾರ
ಗಳಲ್ಲಿ ದಲಿತರೊಟ್ಟಿಗೆ ಬೆರೆಯುವವರಿದ್ದಾರೆ. ಸಹಪಂಕ್ತಿ ಭೋಜನ ಸೇರಿದಂತೆ ದಲಿತರ ಮನೆಯ ಸಮಾರಂಭ ಗಳಲ್ಲಿ ಪ್ರೀತಿಯಿಂದ ಪಾಲ್ಗೊಂಡು, ಶುಭ ಹಾರೈಸಿ ಆಹಾರ ಸ್ವೀಕರಿಸುವುದು ಸಾಮಾನ್ಯವಾಗುತ್ತಿದೆ. ಇದರ ನಡುವೆ, ಕುಗ್ರಾಮಗಳಲ್ಲಿ ಈಗಲೂ ದಲಿತರಿಗೆ ದೇಗುಲ, ಹೋಟೆಲ್, ಕ್ಷೌರದಂಗಡಿ ಪ್ರವೇಶ ಸಾಧ್ಯವಾಗದಿರುವುದು ನೋವಿನ ಸಂಗತಿ.

ಈ ತಲೆಮಾರಿನ ದಲಿತೇತರ ಯುವಜನ ಮನಸ್ಸು ಮಾಡಿದರೆ ಅಸ್ಪೃಶ್ಯತೆ ನಿವಾರಣೆ ಅಸಾಧ್ಯವೇನಲ್ಲ. ಆದರೆ, ಊರಿನ ಯಜಮಾನರನ್ನು ಅಥವಾ ಅಸ್ಪೃಶ್ಯತೆ ಬಗ್ಗೆ ಪೂರ್ವಗ್ರಹಪೀಡಿತ ನಿಲುವು ಹೊಂದಿರುವ ತಂದೆ, ತಾಯಿ, ಅಜ್ಜ, ಅಜ್ಜಿಯನ್ನು ಪ್ರಶ್ನಿಸಲು ಯಾರೂ ಮುಂದಾಗುತ್ತಿಲ್ಲ.

ಬುದ್ಧಿಜೀವಿಗಳೆಂದು ಹಣೆಪಟ್ಟಿ ಹೊತ್ತು ಕೊಂಡವರು, ಸಾಹಿತಿಗಳು, ಕಲಾವಿದರು, ರಾಜಕಾರಣಿ ಮಹಾಶಯರು ತಮ್ಮ ತಮ್ಮ ಹುಟ್ಟೂರು ಗಳಲ್ಲಿ ಅಸ್ಪೃಶ್ಯತೆ ನಿವಾರಣೆಯ ಬಗ್ಗೆ ಯುವಜನರೊಡಗೂಡಿ ಸಹಬಾಳ್ವೆಯ ಅರಿವು ಮೂಡಿಸುವ ಇಚ್ಛಾಶಕ್ತಿ ಪ್ರದರ್ಶಿಸಲು ಮುಂದಾದರೆ ಎಷ್ಟೋ ಬದಲಾವಣೆಯಾದೀತು.

-ಪುಟ್ಟದಾಸು, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT