ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಹದ ತಪ್ಪದಿರಲಿ ಬೆಳಕು

ಆಕಾಶವನ್ನೇ ಬೆಳಗಿಸಿ ಕತ್ತಲೆಗೆ ಬರ ತಂದುಕೊಂಡ ಸ್ಥಿತಿ ನಮ್ಮದು
Last Updated 4 ಜನವರಿ 2021, 19:30 IST
ಅಕ್ಷರ ಗಾತ್ರ

‘ಕತ್ತಲಿಗೆ ಹೆದರುವ ಮಗುವನ್ನು ಕ್ಷಮಿಸಬಹುದು. ಬದುಕಿನ ದುರಂತವೆಂದರೆ, ಜನ ಬೆಳಕಿಗೆ ಹೆದರುವುದು’- ಕ್ರಿ.ಪೂ. ನಾಲ್ಕನೇ ಶತಮಾನದಲ್ಲಿ ದಾರ್ಶನಿಕ ಪ್ಲೇಟೊ ಹೀಗೆ ನುಡಿದ ಹಿನ್ನೆಲೆ ಹೇಗೂ ಇರಲಿ. ಜ್ಞಾನದ ದ್ಯೋತಕವಾದ ಬೆಳಕನ್ನು ಮನುಷ್ಯ ಕೈಯಾರೆ ವೈರಿಯಾಗಿಸಿಕೊಂಡಿದ್ದಾನೆ. ತಾನು ಮಾತ್ರವಲ್ಲ ಸಸ್ಯ ಹಾಗೂ ಪ್ರಾಣಿ ವೈವಿಧ್ಯಗಳೂ ತಳಮಳಿಸುವಂತಹ ಸ್ಥಿತಿ ನಿರ್ಮಿಸಿದ್ದಾನೆ. ನಾಗರಿಕತೆಯ ಬೆನ್ನೇರುವುದರ ಇತಿಮಿತಿ ಕಡೆಗಣಿಸಿದರೆ ಬೆಳಕಿನಲ್ಲಿ ಕತ್ತಲೆ ಕಳೆದುಹೋಗುತ್ತದೆ!

ನಮಗೆ ಎಷ್ಟು ಬೆಳಕು ಅಗತ್ಯವೋ ಅಷ್ಟೇ ಕತ್ತಲೂ ಅಗತ್ಯ ಎನ್ನುವುದು ವಾಸ್ತವ. ಕತ್ತಲಿದ್ದರೇನೆ ಬೆಳಕಿಗೆ ಅಸಲಿಯತ್ತು, ಕಿಮ್ಮತ್ತು. ಸಿನಿಮಾ ವೀಕ್ಷಿಸುವಾಗ ಆಕಸ್ಮಿಕವಾಗಿ ಬಾಗಿಲು ತೆರೆದರೆ, ಮಲಗುವ ಕೋಣೆಯಲ್ಲಿ ನಡುರಾತ್ರಿ ಸಮೀಪಿಸಿದರೂ ದೀಪ ಉರಿಯುತ್ತಿದ್ದರೆ ಅಥವಾ ಎದುರಿನಲ್ಲಿ ಬರುವ ವಾಹನದ ದೀಪ ಕಣ್ಣು ಕೋರೈಸಿದರೆ ಏನೆಲ್ಲ ಮುಜುಗರ, ಹಿಂಸೆ ಹೇಳಬೇಕಿಲ್ಲ. ಎಂದಮೇಲೆ ಹದ್ದುಮೀರಿದ ಬೆಳಕು ಹದ್ದುಮೀರಿದ ಶಬ್ದದಷ್ಟೇ ಮಾರಕ. ಹಾಗಾಗಿ ಬೆಳಕು ಹದ ತಪ್ಪದಂತೆ ನಿಗಾ ವಹಿಸುವುದು ಪರಿಸರ ಸಂರಕ್ಷಣೆಯ ಅವಿನಾಭಾವ ಅಂಗ.

ಬೆಳಕಿನ ಮಾಲಿನ್ಯವೆಂದರೆ ಯಾವುದೇ ಮನುಷ್ಯಕೃತ ದೀಪಗಳ ಪ್ರತಿಕೂಲ ಪರಿಣಾಮ. ಅಗತ್ಯಕ್ಕೂ ಮೀರಿದ, ದೋಷಪೂರ್ಣವಾಗಿ ನಿರ್ದೇಶಿಸಿದ ಅಸಮರ್ಥ ಬೆಳಕಿನಿಂದ ‘ದ್ಯುತಿ ಮಾಲಿನ್ಯ’. ಬೆಳಕಿನ ಅತಿಕ್ರಮಣ ಸೃಷ್ಟಿಸುವ ರಂಪ ಬಹುಮುಖಿ. ಪ್ರಾಣಿ, ಪಕ್ಷಿಗಳ ವರ್ತನೆ, ಅವು ಆಹಾರ ಅರಸುವ ನೆಲೆಗಳು, ವಲಸೆಯ ಕ್ರಮಗತಿ, ಸಂತಾನೋತ್ಪತ್ತಿ ಆವರ್ತಗಳು ತೀವ್ರವಾಗಿ ವ್ಯತ್ಯಯಗೊಳ್ಳುತ್ತವೆ. ಸಂಪೂರ್ಣ ಸೂರ್ಯಗ್ರಹಣ ಸಂದರ್ಭವನ್ನು ‘ನಡುಹಗಲ ಇರುಳು’ ಎಂದು ರೋಚಕವಾಗಿ ಬಣ್ಣಿಸಲಾಗುತ್ತದೆ. ಆದರೆ ಗಾಢಾಂಧಕಾರದ ಇರುಳನ್ನೇನೂ ನಿಸರ್ಗ ಹೇರದು. ‘ಬೆಳಕು-ಕತ್ತಲೆ’ ಲಯವನ್ನು ಅದು ನಿಭಾಯಿಸುತ್ತದೆ.

ಜಾಗತಿಕ ಮಟ್ಟದಲ್ಲಿ ಸಂಶೋಧಕರ ಒಂದು ವರ್ಗ ಅಂಕಿ ಅಂಶಗಳ ಸಮೇತ ನಕ್ಷೆಯೊಂದನ್ನು ಸಿದ್ಧಪಡಿಸಿದೆ. ನವದೆಹಲಿ, ಕೋಲ್ಕತ್ತ ಮತ್ತು ಬೆಂಗಳೂರು ಭಾರತದಲ್ಲೇ ಅತಿ ಹೆಚ್ಚು ದ್ಯುತಿ ಮಾಲಿನ್ಯಕ್ಕೊಳಪಟ್ಟಿರುವ ನಗರಗಳೆಂದು ಗುರುತಿಸಲಾಗಿದೆ. ಅಮೆರಿಕದ ‘ಅಂತರರಾಷ್ಟ್ರೀಯ ಡಾರ್ಕ್ ಸ್ಕೈ ಅಸೋಸಿಯೇಷನ್’ ನಡೆಸಿದ ಅಧ್ಯಯನವೊಂದರಿಂದ ಗಾಬರಿ ಹುಟ್ಟಿಸುವ ಸಂಗತಿ ಹೊರಬಂದಿದೆ. ಜಗತ್ತಿನಾದ್ಯಂತ ರಾತ್ರಿ ವೇಳೆ ಉರಿಯುವ ಹೆಚ್ಚುವರಿ ದೀಪಗಳಿಂದ ವರ್ಷಕ್ಕೆ 1.2 ಕೋಟಿ ಟನ್ನುಗಳಷ್ಟು ಕಾರ್ಬನ್ ಡೈಆಕ್ಸೈಡ್ ವಾತಾವರಣ ಸೇರುತ್ತಿದೆ. ಇಷ್ಟು ಅಗಾಧ ಪ್ರಮಾಣದ ಕಾರ್ಬನ್ ಡೈಆಕ್ಸೈಡ್ ಹೀರಲು ಪ್ರತಿವರ್ಷ 70.02 ಕೋಟಿ ವೃಕ್ಷಗಳು ಬೇಕು!

ಬೆಳಕಿನ ಮಾಲಿನ್ಯಕ್ಕೆ ಕೃತಕ ಹೊರಾಂಗಣ ದೀಪದ ಕೊಡುಗೆಯೇ ಬಹಳ. ಬೀದಿ ದೀಪಗಳೇನೋ ಸರಿಯೆ. ಆದರೆ ಸ್ಮಾರಕಗಳು, ಉದ್ಯಾನಗಳು, ಗಿರಿ, ಗುಡ್ಡಗಳು, ಜಹಜುಗಳು, ಜಲಪಾತಗಳು ರಂಗು ರಂಗಿನ ದೀಪಗಳಿಂದ ಮಿರುಗುತ್ತವೆ! ಹೊನಲು ಬೆಳಕಿನ ಆಟೋಟಗಳು, ಪಂದ್ಯಗಳು ಬೇರೆ. ಕಣ್ಣು ಕುಕ್ಕುವ ಜಾಹೀರಾತುಗಳ ಭರಾಟೆಗಳೇನು ಕಡಿಮೆಯೇ? ‌

ಸಾಗರ ತೀರಗಳಲ್ಲಿ ಕೃತಕ ಬೆಳಕು ಹರಿಸಿದರೆ ಜಲಚರಗಳು ತತ್ತರಿಸುತ್ತವೆ. ಜೀವವೈವಿಧ್ಯ ಹಗಲಿಗಿಂತಲೂ ಇರುಳನ್ನೇ ನೆಚ್ಚಿಕೊಂಡಿದೆ. ಗಿಡ, ಮರಗಳನ್ನೇ ಆವಾಸವಾಗಿಸಿಕೊಂಡಿರುವ ಪಕ್ಷಿ, ಕೀಟ, ಸರೀಸೃಪಗಳ ಪಾಡೇನು? ಚಿಟ್ಟೆಯಂತಹ ಕೀಟಗಳ ಬವಣೆ ವಿಭಿನ್ನ. ಅವು ಬೆಳಕಿನ ಆಕರಗಳಿಗೆ ಸುಲಭವಾಗಿ ಆಕರ್ಷಿತಗೊಂಡು ಸಾವಿಗೀಡಾಗುತ್ತವೆ. ಅವನ್ನು ಆಹಾರವಾಗಿಸಿಕೊಳ್ಳುವ ಜೀವಿಗಳು ನಲುಗುತ್ತವೆ. ಪ್ರಕೃತಿಯ ಸಮತೋಲನಕ್ಕೆ ಅಷ್ಟು ಸಂಚಕಾರ ಕಟ್ಟಿಟ್ಟ ಬುತ್ತಿ. ಕಟ್ಟಡಗಳೇ ವಿಶೇಷವಾಗಿ ಪಾರಿವಾಳ, ಜೇನ್ನೊಣ, ಬಾವಲಿಗಳ ಬಿಡಾರ. ನಮ್ಮ ಆಡಂಬರ, ಆರ್ಭಟಗಳಿಗೆ ಇತರ ಜೀವಿಗಳ ಬದುಕಿನ ತಾಳ ತಪ್ಪಿಸುವುದು ಎಂತಹ ಕ್ರೌರ್ಯ?

ಗಮನಾರ್ಹವೆಂದರೆ, ಶೇ 70ರಷ್ಟು ಸಸ್ತನಿ ಜೀವಪ್ರಭೇದಗಳು ನಿಶಾಚರಿಗಳೇ. ಯಾವುದೇ ಜೀವಿಯ ‘ನಿದ್ರೆ-ಎಚ್ಚರ’ಕ್ಕೆ ಒಂದು ಲಯವಿದೆ. ಅದು ಏರುಪೇರಾದರೆ ಆಲಸ್ಯ, ಅನಾರೋಗ್ಯ ಕಟ್ಟಿಟ್ಟ ಬುತ್ತಿ. ನಮ್ಮ ಜನಪದರು ವಿಧಿಸುವ ‘ಸೂರ್ಯನನ್ನು ದಿಟ್ಟಿಸಬೇಡ’ ‘ಎಳೆ ಕೂಸಿಗೆ ಕನ್ನಡಿ ತೋರಿಸಬಾರದು’ ಮುಂತಾದ ಕಟ್ಟಪಾಡುಗಳಲ್ಲಿ ಬೆಳಕಿನ ಆಕ್ರಮಣದ ಬಗೆಗಿನ ಎಚ್ಚರಿಕೆಯಿದೆ.

ಸ್ವಾಭಾವಿಕ ಬೆಳಕು ಮನುಷ್ಯನ ಅನುಭವಕ್ಕೆ ದೂರವಾಗುತ್ತಿದೆ. ಒಂದು ಕಾಲದಲ್ಲಿ ಗಗನದಲ್ಲಿ ಸುಮಾರು 8,000 ನಕ್ಷತ್ರಗಳನ್ನು ನೋಡಬಹುದಿತ್ತು. ಈಗ 4,000 ನಕ್ಷತ್ರಗಳು ಮಾತ್ರ ಕಾಣಲಭ್ಯ. ನಗರ ಪ್ರದೇಶದಿಂದ ಹೊರಹೋದರೆ ಮಾತ್ರ ಆಗಸದ ವಿಹಂಗಮ ನೋಟ. ಆಕಾಶವನ್ನೇ ಬೆಳಗಿಸಿ ಕತ್ತಲೆಗೆ ಬರ ತಂದುಕೊಂಡ ಅಯೋಮಯವಿದು.

ಸುದೈವದಿಂದ ದ್ಯುತಿ ಮಾಲಿನ್ಯ ಸಮಸ್ಯೆಗೆ ಪರಿಹಾರವಿದೆ. ದೃಢ ಸಂಕಲ್ಪ ಹಾಗೂ ಕಾರ್ಯಪ್ರವೃತ್ತಿ ಅಗತ್ಯವಷ್ಟೆ. ಒಂದು ಅರ್ಥದಲ್ಲಿ ದೀಪಗಳನ್ನು ಆರಿಸುವುದರಿಂದಲೇ ಹೊಣೆಗಾರಿಕೆ ಆರಂಭವಾಗಬೇಕಿದೆ. ಅನಿವಾರ್ಯವಾದರೆ ಮಾತ್ರ ದೀಪ ಉರಿಸುವುದು, ಮನೆಯ ಹೊರಗಡೆಯ ದೀಪಗಳ ಪ್ರಭೆ ಕನಿಷ್ಠತಮಗೊಳಿಸುವುದು, ಚರದೀಪಗಳ ಬಳಕೆ... ಇವು ಪ್ರತೀ ವಿಶ್ವಪ್ರಜೆ ಇಡಬಹುದಾದ ಸರಳ, ಸುಲಭ ಹೆಜ್ಜೆಗಳು. ‘ಕನಿಷ್ಠ ಬೆಳಕು, ಗರಿಷ್ಠ ಗೋಚರತೆ’ ಬದುಕಿನ ಶೈಲಿಯಾಗುವುದು ವಿವೇಕ. ತನ್ಮೂಲಕ ಅಷ್ಟರಮಟ್ಟಿಗೆ ಪರಿಸರದ ಸಂರಕ್ಷಣೆ, ಅಪಾರ ಶಕ್ತಿ ಸಂಪನ್ಮೂಲಗಳ ಉಳಿತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT