ಪ್ರೀತಿ ಆಚರಣೆಯಲ್ಲ, ಆರಾಧನೆ

7
ಪ್ರೀತಿಗೆ ನಾನಾ ರೂಪಗಳಿವೆ. ಪ್ರೀತಿ ಎಂದರೆ ಅದು ಬರಿಯ ಹದಿಹರೆಯದವರ ಬಾಹ್ಯ ಆಕರ್ಷಣೆಯ ತೋರ್ಪಡಿಕೆಯಲ್ಲ

ಪ್ರೀತಿ ಆಚರಣೆಯಲ್ಲ, ಆರಾಧನೆ

Published:
Updated:

ಜೀವಗಳೆರಡು ಭಾವ ಒಂದೇ ಎನ್ನುವ ಪ್ರೀತಿಗೆ ಒಂದು ದಿನದ ತೋರಿಕೆಯ ಆಚರಣೆ ಬೇಡವೇ ಬೇಡ. ಪ್ರತೀ ಕ್ಷಣವೂ ಪ್ರತೀ ದಿನವೂ ಪ್ರೇಮಿಗಳಿಗೆ ಸಂಭ್ರಮವೇ ಆಗಿರುತ್ತದೆ. ನೋವು– ನಲಿವು, ಸುಖ– ದುಃಖಗಳ ದಿಗಂತದ ದಾರಿಯಲ್ಲಿ ಪರಸ್ಪರ ನೊಂದು- ಬೆಂದು ಕುಣಿದು- ನಲಿದು ಸಾಗುವ ಪವಿತ್ರ ಪ್ರೇಮ ಬರಿಯ ಒಂದು ದಿನಕ್ಕೆ ಸೀಮಿತವಾದರೆ ಹೇಗೆ? ಅದು ಪ್ರತಿಕ್ಷಣವೂ ಚಿಮ್ಮುವ ಒಲವಿನ ಕಾರಂಜಿಯಾಗಿರಬೇಕು. ಆದರೆ ಇಂದು ಇಂತಹ ಪರಿಶುದ್ಧ ಪ್ರೇಮ ವಿರಳವಾಗಿದೆ ಎಂಬುದೇ ವಿಪರ್ಯಾಸ.

ಪ್ರೇಮಿಗಳ ದಿನಾಚರಣೆ ಎಂಬುದು ಈಗಿನ ಕಾಲದವರಿಗೆ ಅತೀ ಪ್ರಮುಖವೂ ಮತ್ತು ಸೂಕ್ತವೂ (ಅನಿವಾರ್ಯದ ಬದಲು) ಆದ ಒಂದು ದಿನದ ಸಂಭ್ರಮಾಚರಣೆಯಾಗಿದೆ. ಆಕರ್ಷಣೆಯ ಮಂಜು ಹನಿಗಳೆಂಬ ಅವೆಷ್ಟೋ ಪ್ರೀತಿಗಳ ಉಗಮಕ್ಕೆ ಕೂಡ ಇಂತಹ ಆಚರಣೆಯೇ ಕೇಂದ್ರ ಬಿಂದು. ಆದರೆ, ನಾನಾ ಕಾರಣಗಳಿಂದ ಕರಗಿಹೋಗಿ ಕೊರಗುವ ಪ್ರೀತಿಗಳೇ ಹೆಚ್ಚು. ಆದರೆ ಎಲ್ಲರಲ್ಲೂ ಹೊಸ ಬಗೆಯ, ಹೊಸ ಅನುಭವ ನೀಡುವ ಪ್ರೀತಿ ಎಂಬುದೇ ಒಂದು ಮೈಗಂಟಿದ ಹುಚ್ಚು.

ಹರೆಯಕ್ಕೆ ಕಾಲಿಟ್ಟ ಹೊಸತರಲ್ಲಿ ಭಾವನೆಗಳು ನಾಗಾಲೋಟದ ಜಿದ್ದಾಜಿದ್ದಿಯಲ್ಲಿರುವಾಗ, ಈ ಪ್ರೀತಿ ಪ್ರೇಮ ಆಕರ್ಷಣೆಯೆಂಬ ಹುಮ್ಮಸ್ಸು, ಜೀವನವೆಂಬ ಸಾಗರದ ತಿಳಿವಳಿಕೆ ಹತ್ತುವುದರೊಳಗೆ ಎಂತಹ ಅನಾಹುತವನ್ನಾದರೂ ಮಾಡಿಬಿಡಬಹುದು. ಪ್ರೀತಿಯಲ್ಲಿ ಬಿದ್ದಾಗ ಪ್ರತೀ ಕ್ಷಣವೂ ಸುಂದರ ಎನಿಸಬಹುದು. ಆದರೆ, ಅದೇ ಪ್ರೀತಿ ಮುಗ್ಗರಿಸಿ ಬಿದ್ದಾಗ ಅದನ್ನು ಸಹಿಸುವ ಮತ್ತು ನೋವಿನಿಂದ ಚೇತರಿಸಿಕೊಳ್ಳುವ ಮನೋಸ್ಥೈರ್ಯ ಈಗಿನ ಹೆಚ್ಚಿನ ಪ್ರಮಾಣದ ಯುವಜನರಲ್ಲಿ ಕಾಣಸಿಗುವುದಿಲ್ಲ.

ಹಾಗಾದರೆ ಪ್ರೇಮಿಗಳ ದಿನಾಚರಣೆ ಎಂಬುದು ಒಂದು ಅರ್ಥವಿಲ್ಲದ ಆಚರಣೆಯೇ ಎಂದರೆ ಖಂಡಿತಾ ಇಲ್ಲ. ವಿವಾಹಿತರೂ ಪರಸ್ಪರ ಪ್ರೇಮಿಗಳೇ. ದಿನನಿತ್ಯದ ಜಂಜಾಟದಲ್ಲಿ ಈ ಒಂದು ದಿನವನ್ನು ಮನಸ್ಫೂರ್ತಿಯಾಗಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು, ಇಬ್ಬರ ನಡುವಿನ ಪ್ರೀತಿ ಸೇತುವೆಯಲ್ಲಿ ವಿಹರಿಸಲು ಸಮಯ ನೀಡುವುದಕ್ಕೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು.

ಕೇವಲ ಉಡುಗೊರೆಗಳಿಗೆ ಪ್ರೀತಿ ಸೀಮಿತವಾಗುವುದಾದರೆ ನಿಮ್ಮ ಸಮಯ ಮತ್ತು ಕಾಳಜಿಗಿಂತ ಅತ್ಯಮೂಲ್ಯವಾದ ಉಡುಗೊರೆ ಮತ್ತೊಂದಿಲ್ಲ. ಆದರೆ ಪ್ರೇಮಿಗಳ ದಿನಾಚರಣೆ ಹೆಚ್ಚು ಪ್ರಸಿದ್ಧವಾಗಿರುವುದೇ ವಸ್ತುಗಳ ಉಡುಗೊರೆ ಹಾಗೂ ಪ್ರೇಮ ನಿವೇದನೆಯೆಂಬ ಕಾರಣಕ್ಕೆ. ಪರಿಶುದ್ಧ ಪ್ರೀತಿ ಎಂದಿಗೂ ಒಂದು ಆಚರಣೆಯಲ್ಲ. ಅದು ಒಂದು ಆರಾಧನೆ.

ಪ್ರೀತಿಗೆ ನಾನಾ ರೂಪಗಳಿವೆ. ಪ್ರೀತಿ ಎಂದರೆ ಬರಿಯ ಹದಿಹರೆಯದವರ ಬಾಹ್ಯ ಆಕರ್ಷಣೆಗಳ ತೋರ್ಪಡಿಕೆಯಲ್ಲ. 

ಜನ್ಮವಿತ್ತು, ಜೀವ ಕೊಟ್ಟು ರೂಪ ನೀಡಿದವಳು ಹೆತ್ತವಳು...ಅನ್ನವಿತ್ತು, ಆಶ್ರಯವನಿತ್ತು, ಪೊರೆಯುವವಳು ಹೊತ್ತವಳು (ಭೂಮಿ ತಾಯಿ)...

ಇಂತಹ ಪ್ರೀತಿ ನಾವು ಹುಟ್ಟಿದಾಗಿನಿಂದ ಕೊನೆಗೆ ಮಣ್ಣಾಗುವವರೆಗೂ ಯಾವುದೇ ಒಂದು ದಿನಕ್ಕೆ ಸೀಮಿತವಾಗದೆ ಪ್ರತೀ ದಿನ, ಪ್ರತೀ ಕ್ಷಣ ತನ್ನ ಪಾವಿತ್ರ್ಯವನ್ನು ಕಾಯ್ದುಕೊಳ್ಳುವುದಿಲ್ಲವೇ? ಹಾಗೆಯೇ ಹೆಣ್ಣು– ಗಂಡಿನ ನಡುವಿನ ಪ್ರೀತಿಯೂ ಅಷ್ಟೆ. ಕೇವಲ ಆಕರ್ಷಣೆ, ಮೋಹ ಅಥವಾ ಇನ್ಯಾವುದೇ ಬಾಹ್ಯಾಕರ್ಷಣೆಗೆ ಒಳಗಾಗದೆ ಅಂತರಂಗವನ್ನು ಹೊಕ್ಕು ಸದಾ ಶುದ್ಧ, ನಿರ್ಮಲ, ಸತ್ಯವಾಗಿ ಎರಡೂ ಜೀವಗಳಲ್ಲಿ ಏಕರೂಪ ಭಾವವಾಗಿ ಮಿಳಿತಗೊಂಡು ಪವಿತ್ರವಾಗಿರಬೇಕು...

-ಸತ್ಯ, ಹರಿಹರಪುರ

***

ತುಸು ಭಿನ್ನವಾಗಿರಲಿ

ನಮ್ಮ ಯುವಪೀಳಿಗೆ ಪ್ರೇಮಿಗಳ ದಿನವನ್ನು ಈ ಸಲ ತುಸು ಗಂಭೀರಗೊಳಿಸಲು ಯತ್ನಿಸಿದರೆ ಹೇಗಿರುತ್ತದೆ? ಅಸಹಿಷ್ಣುತೆಯ ವಾತಾವರಣದಲ್ಲಿ ಸೌಹಾರ್ದಕ್ಕೆ ಸೇತುವೆ ಕಟ್ಟುವುದಕ್ಕೋ, ಬರದಿಂದ ಕಂಗೆಟ್ಟಿರುವ ರೈತ ಸಮುದಾಯಕ್ಕೆ ಕಿಂಚಿತ್ತು ನೆರವಾಗುವುದಕ್ಕೋ, ಮೇವಿನ ಕೊರತೆಯಿಂದ ಪರಿತಪಿಸುತ್ತಿರುವ ಜಾನುವಾರುಗಳಿಗೆ ಒಪ್ಪೊತ್ತು ಮೇವು ಪೂರೈಸುವುದಕ್ಕೋ ಪ್ರಯತ್ನಿಸಿದರೆ ವಿಭಿನ್ನವಾಗಿರುತ್ತದೆ, ಅಲ್ಲವೇ?

ಪ್ರತೀ ಸಲ ಅದೇ ರಾಗ ಅದೇ ಹಾಡು ಎಂದರೆ ಗಮ್ಮತ್ತು ಇರುವುದಿಲ್ಲ. ಸದಾ ಹೊಸತನ್ನು ಬಯಸುವ ನಮ್ಮ ಯುವತಿ–ಯುವಕರು ಪ್ರೇಮಿಗಳ ದಿನಕ್ಕೂ ನಾವೀನ್ಯದ ಲೇಪ ಹಚ್ಚಲಿ. ಒಂದು ಸಣ್ಣ ಹೊಣೆಗಾರಿಕೆಯನ್ನು ತೋರುವ ಮೂಲಕ ಮಾದರಿಯಾಗಲಿ. ಇಂತಹುದೇ ಮಾಡಿ ಅಂತ ಹೇಳಿದರೆ ತಪ್ಪಾಗುತ್ತದೆ. ನಾಲ್ಕು ಮಂದಿ ಸೇರಿಕೊಂಡು ತಮಗೆ ತೋಚಿದ್ದನ್ನು, ತಮ್ಮ ಹಣಕಾಸಿನ ಇತಿಮಿತಿಯಲ್ಲಿ ಅರ್ಥಪೂರ್ಣವಾಗಿ ಏನನ್ನಾದರೂ ಮಾಡಲಿ. ಪ್ರತೀ ವರ್ಷ ಅಲ್ಲದಿದ್ದರೂ ನಡುವೆ ಒಮ್ಮೊಮ್ಮೆ ಇಂತಹ ಪ್ರಯತ್ನಗಳು ಆದರೆ ಚೆಂದ. ಅಲ್ಲವೇ?

ವ್ಯಕ್ತಿ ನೆಲೆಯಲ್ಲಿ ಯೋಚಿಸುವುದೇ ಹೆಚ್ಚಾಗಿದೆ. ಸಮಷ್ಟಿ ಪ್ರಜ್ಞೆ ಮತ್ತು ಸಾಮಾಜಿಕ ಹೊಣೆಗಾರಿಕೆಯ ಬೀಜಗಳು ಇಂತಹ ದಿನಗಳ ಮೂಲಕ ಬಿತ್ತನೆಯಾದರೆ ಮುಂದೊಂದು ದಿನ ಅದು ಮರವಾಗಿ, ಫಲ ಕೊಡಬಹುದು. ಪ್ರಯತ್ನಪಡೋಣ. ಪ್ರಯತ್ನಿಸುವುದರಲ್ಲಿ ತಪ್ಪಿಲ್ಲ.

ಚಾರುಲತಾ, ಸದಲಗಾ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !