ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲೇ ಕಮಲೋತ್ಪತ್ತಿಃ!

Last Updated 14 ಜೂನ್ 2019, 19:45 IST
ಅಕ್ಷರ ಗಾತ್ರ

ಬರೋಬ್ಬರಿ ಐದ್‌ ತಿಂಗ್ಳ ಹಿಂದ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ವಾಪಸ್‌ ಪಡೆದಿದ್ದ ಪಕ್ಷೇತರ ಶಾಸಕರಿಬ್ಬರು ‘ಘರ್‌ ವಾಪ್ಸಿ’ ಥರಾ ಬೆಂಬ್ಲಾ ವಾಪಸ್‌ನ ವಾಪಸ್‌ (!?) ತಗೊಂಡು ಸಚಿವರಾಗಿ ಪ್ರಮಾಣ ವಚ್ನಾ ಸ್ವೀಕರಿಸೋದನ್ನ ವಿಶ್ವದ ಎಂಟನೇ ಅದ್ಭುತ ಎಂಬಂತೆ ಟೀವ್ಯಾಗ್‌ ಕಣ್‌ ಬಿಟ್ಕೊಂಡ್‌ ನೋಡ್ತಾ ಕುತ್ಕೊಂಡಿದ್ದೆ. ಸಪ್ಪೆ ಮಾರಿ ಮಾಡ್ಕೊಂಡ್‌ ಬಂದ ಪ್ರಭ್ಯಾ, ಸೋಫಾ ಮ್ಯಾಗ ಕುಕ್ಕರಬಡ್ದ. ಅವ್ನ ಮಾರಿ ಮ್ಯಾಗ ಏನೂ ಕಳೇನ ಇರದ್ದನ್ನು ನೋಡಿ, ‘ಹಿಂಗ್ಯಾಕೊ ತಲಿ ಮ್ಯಾಲೆ ಗುಡ್ಡಾ ಕಡ್ದು ಬಿದ್ದಂಗ್ ಕಾಣಾಕತ್ತಿಯಲ್ಲ. ಜಡ್‌ ಗಿಡ್‌ ಬಂದದ ಏನ್‌’ ಎಂದು ಕೇಳಿದೆ.

‘ಏಯ್‌ ನಂದ ನನಗ್‌ ಹತ್ತೇದ. ‌ಕರ್ನಾಟಕ, ಮಧ್ಯಪ್ರದೇಶದಾಗ್‌ ಆಪರೇಷನ್‌ ಕಮಲ ಮಾಡಿ ಬಿಜೆಪಿ ಸರ್ಕಾರ ಅರಳುವುದಕ್ಕ ಸದ್ದೇಕ್‌ ಕಲ್‌ ಬಿದ್ದದ್ದು ನೋಡಿ ನನ್ನ ತಲಿ ಕೆಟ್ಟು ಕೆರಾ ಹಿಡ್ದದ’ ಅಂತ ಹೇಳ್‌ತಿದ್ಹಂಗ್‌ ಟೀವ್ಯಾಗ್‌ ಹೊಸ ಸಚಿವರ ಬೆಂಬಲಿಗರಿಂದ ಢಂ ಢಂ ಪಟಾಕಿ ಸದ್ದು ಕೇಳಿಬಂತು. ಪ್ರಭ್ಯಾನ ಮಾರಿ ಬ್ಯಾಸ್ಗಿಗೆ ಬತ್ತಿ ಹೋದ ಬಾವಿ ಹಂಗಾತು.

‘ಕಮಲೇ ಕಮಲೋತ್ಪತ್ತಿಃ ಎಂಬ ಒಗಟಿನಂತೆ (ಕಮಲದಲ್ಲಿ ಕಮಲಗಳು ಹುಟ್ಟುವಂತೆ), ಕೇಂದ್ರದಲ್ಲಿ ಕಮಲ ಸರ್ಕಾರ ಮತ್ತ ಅರಳೇದ. ಬಿಜೆಪಿ ದಕ್ಷಿಣದ ಹೆಬ್ಬಾಗಿಲನ್ಯಾಗ ಮತ್ತ ಮಧ್ಯಪ್ರದೇಶದಾಗ ಕಮಲ ಸರ್ಕಾರ ಅರಳಿಸಿ ಬ್ರೇಕಿಂಗ್‌ ನ್ಯೂಸ್‌ ನೀಡಲು ತುದಿಗಾಲಲ್ಲಿ ನಿಂತಿದ್ದವರಿಗೆ ಚಾಣಕ್ಯ ಶಾ ಬ್ರೇಕ್‌ ಹಾಕ್ಯಾನ. ಹೀಂಗಾಗಿ ನನ್ನಂತೋರಿಗೆ ಶಾಣೆ ಬೇಜಾರಾಗೇದ್‌’ ಅಂತ ಗೋಳ್‌ ತೋಡ್ಕೊಂಡ. ‘ಕುಮಾರಣ್ಣನ ಸರ್ಕಾರ ಮೇ 24ರ ಮುಂಜಾನೆ ಬಿದ್ದೇ ಹೋಗ್ತದ ಎಂದು ಹಲ್ಕಿರಿದಿದ್ದ ಸದಾ ಆನಂದ ಆಸೆನೂ ಇನ್ನೂ ಈಡೇರಿಲ್ಲ. ಸರ್ಕಾರ ಕಲ್ಲು ಬಂಡೆಯಂತೆ ಗಟ್ಟಿ ಇರೋದಕ್ಕ ಈ ಸಮಾರಂಭನ ಸಾಕ್ಷಿ ನೋಡ್‌’ ಅಂತ ನಾ ಹ್ಹಿ ಹ್ಹಿ ಹ್ಹೀ... ಅಂತ ಹಲ್ಕಿರಿದೆ.

ಇದು ಪ್ರಭ್ಯಾನಿಗೆ ಗಾಯಕ್ಕ ಉಪ್ಪು ಸವರಿದ್ಹಂಗಾತು. ‘ಏಯ್‌ ಮಂಗ್ಯಾನ ಮಗ್ನ, ಕುಮಾರಣ್ಣನ ಸರ್ಕಾರ ಈಗ ಉಳ್ದದ್‌ ಅಂತ ಹಲ್‌ ಕಿಸಿಬ್ಯಾಡ್‌. ನಿನ್ನ ಖುಷಿ ಭಾಳ್ ದಿನಾ ಇರೂದಿಲ್ಲ. ಕೋಳಿಗೆ ಜಡ್‌ ಬಂದ್ಹಂಗ್‌, ಒಂದಲ್ಲ ಒಂದ್‌ ದಿನ ಬಿದ್‌ ಹೋಗೋದು ಗ್ಯಾರಂಟಿ ಅಂತ ಕೋಳಿ(ವಾಡ) ಕೂಗಾಕತ್ತಾವ್‌’ ಎಂದ.

‘ಆ ಗ್ಯಾರಂಟಿ ಒಂದ್‌ ಕಡೆ ಇರ‍್ಲಿ. ಸದ್ಯಕ್ಕ ಸರ್ಕಾರ ಉಸರಾಡಾಕತ್ತದಲ್ಲ ನಮ್ಗ ಅಷ್ಟ ಸಾಕ್‌, ನಿನ್ನ ಹೊಟ್ಟಿ ಉರಸಾಕ್‌. ಕೂಸು ಹುಟ್ಟು ಮೊದ್ಲ ಕುಲಾವಿ ಹೊಲ್ದಂಗ್‌, ಸರ್ಕಾರ ಬೀಳ್ಸೊ ಮೊದ್ಲ ಸಫಾರಿ ಹೊಲಿದುಕೊಂಡು ಕನಸ್‌ನ್ಯಾಗೂ ‘ಆಡಿಯೋರಪ್ಪ ಹೆಸರಿನವನಾದ ನಾನು ಆಪರೇಷನ್‌ ಕಮಲದ ಹೆಸರ್‌ನ್ಯಾಗ್‌ ಸಿಎಂ ಆಗಿ ಪ್ರಮಾಣ ಸ್ವೀಕರಿಸಲು ಹೆಮ್ಮೆ ಅನ್ಸಾಕತ್ತದ... ಅಂತ ಸಾವಿರದ ಒಂದು ಬಾರಿ ಬಾಯಿಪಾಠ ಮಾಡಿದವ್ರಿಗೆ ಈಗ್ಲೂ ಮುಹೂರ್ತ ಕೈಕೊಟ್ಟದಲ್ಲ’ ಅಂತ ಲೊಚಗುಟ್ಟಿದೆ.

‘ಇದಕ್ಕೆಲ್ಲ ಚಾಣಕ್ಯನ ಅತಿ ಶಾಣೇತನನ ಕಾರಣ. ನಮೋ 2.0 ಸರ್ಕಾರದ ಮಧುಚಂದ್ರದ ಅವಧಿ ಮುಗಿಯೋವರ‍್ಗೂ ಯಾವುದೇ ಕೆಟ್ಟ ಕೆಲ್ಸಕ್‌ ಕೈಹಾಕಬಾರ‍್ದು ಅಂತ ಅಪ್ಪಣೆ ಕೊಡಿಸ್ಯಾನಂತ. ಇಲ್ಲಂದ್ರ ವಿಧಾನಸೌಧದಾಗ ಇಷ್ಟೊತ್ತಿಗೆ ಕಮಲ ಲಕಾ ಲಕಾ ಅಂತ ಅರಳಿರುತ್ತಿತ್ತು. ಆಡಿಯೋರಪ್ನೋರ್‌ ಶುಭವಾಗೈತಿ ಶುಭವಾಗೈತಿ ಅಂತ ಕಿಲ ಕಿಲಾ ನಗತಿದ್ದರು’ ಅಂತ ಪ್ರಭ್ಯಾ ಮೀಸೆ ತಿರುವಿದ.

‘ಜಟ್ಟಿ ನೆಲಕ್‌ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಅನ್ನೋ ಹಂಗ, ಸರ್ಕಾರ ಬೀಳದಿದ್ರೂ, ನಾಳೆ ಬೀಳ್ತದ ಇಲ್ಲಂದ್ರ ನಾಡ್ದ ಗ್ಯಾರಂಟಿ ಅಂತ ಬಾಯಿ ಬಡ್ಕೊಂಡಿದ್ದೇ ಬಂತ್‌ ಬಿಡೊ. ನಿಮ್ಮ ಕೈಲಿ ಏನಾಗ್ತದ’ ಎಂದು ರೇಗಿಸಿದೆ.

‘ಏಯ್‌ ಬಿಕನಾಸಿ. ನಂಗ್‌ ಸಿಟ್‌ ತರಸ್‌ಬ್ಯಾಡಾ. ಕೇಂದ್ರದಾಗ ನಮ್ದ ಸರ್ಕಾರ ಇರೋವಾಗ, ರಾಜ್ಯದಾಗೂ ಕಮಲ ಅರಳುವ ಕಾಲ ಬಂದೇ ಬರ್ತದ. ಅದಿರ‍್ಲಿ, ಅದೇನೋ ಕುಮಾರಣ್ಣ ವೆಸ್ಟ್‌ಎಂಡ್‌ ಬಿಟ್‌, ಹಳ್ಯಾಗ್‌ ಮತ್ತ ಸಾಲ್ಯಾಗ್‌ ವಸ್ತಿ ಒಗ್ಯಾಕ್‌ ಹೊಂಟಾನಲ್ಲಾ. ಸರ್ಕಾರ ದಿನಾ ಎಣಿಸೋ ಹೊತ್ತಿನ್ಯಾಗ್‌, ಈಗ ಬುದ್ಧಿ ಬಂದದಲ್ಲ. ಇಷ್ಟ್‌ ದಿನ ಎಲ್ಲಿ ಮಕ್ಕೊಂಡಿದ್ನಂತ’ ಅಂತ ಕೇಳ್ದ.

‘ಲೇ, ಹೀಂಗೆಲ್ಲಾ ಕೇಳಿದ್ರ ನಿನ್ನ ವಿರುದ್ಧಾನೂ ಎಫ್‌ಐಆರ್‌ ಹಾಕ್ಯಾರ್‌ ಹುಷಾರ್‌ದಾಗ್ ಇರು. ಸರ್ಕಾರ ಬೀಳೋ ಬಗ್ಗೆ ರಕ್ತದಾಗ ಬರ‍್ದು ಕೊಟ್ತೀನಿ ಅಂತ ಹೇಳಿದ್ದ ಎಂಎಲ್‌ಎ ಆಚಾರ್ಯರ ಮಾತೂ ಖರೆ ಆಗಿಲ್ಲ ನೋಡ್‌’ ಅಂತ ಅವ್ನ ಲಕ್ಷ್ಯ ಬೇರೆ ಕಡೆ ಎಳೆದೆ.

ನನ್ನ ಮಾತನ್ನ ಕಿವಿಮ್ಯಾಗ್‌ ಹಾಕ್ಕೊಳ್ದ, ಏನೋ ನೆನಪಾಗಿ ಧಿಗ್ಗನೆ ಎದ್ದು ನಿಂತು, ‘ಅರ್ಜೆಂಟ್ ಕೆಲ್ಸ ಐತಿ ನಾ ಹೋಗ್ತೀನಿ’ ಅಂತ ಹೊಂಟ. ‘ಏಯ್‌ ಕುಂದ್ರೊ. ಕ್ರಿಕೆಟ್‌ ಮ್ಯಾಚ್‌ ನೋಡ್ಕೊಂಡ್‌ ಹೋಗಂತಿ’ ಎಂದೆ. ‘ಮಳಿ ಆಟಾ ನೋಡಾಕ್‌ ನಂಗ್‌ ಹುಚ್‌ ಹಿಡ್ದಿಲ್ಲ. ಟೈಮೂ ಇಲ್ಲ. ನಮ್ಮ ಚಾಣಕ್ಯ ಹೇಳ್ದಂಗ್‌, ಕಮಲ ಇನ್ನೂ ದೊಡ್ಡದಾಗಿ ಅರಳಿ ಉತ್ತುಂಗಕ್ಕ ಏರಬೇಕಾಗೈತಿ. ಅದ್ಕ ಇವತ್ತನಿಂದ ಆಡಿಯೋರಪ್ಪನೋರು ಶ್ರೀಕಾರ ಹಾಕಾಕತ್ತಾರ್‌. ಎರ‍್ಡ್ ದಿನಾ ಜಿಂದಾಲ್‌ ವಿರುದ್ಧ ಅಹೋರಾತ್ರಿ ಪ್ರತಿಭಟನೆ ನಡಸಾವ‍್ರ ಅದಾರ’ ಅಂತ ಹೇಳ್ತಾ ಓಡು ನಡಿಗೆಯಲ್ಲಿ ಹೊರ ನಡೆದ.

ನಾ ರೇಡಿಯೊ ಚಾಲೂ ಮಾಡುತ್ತಿದ್ದಂತೆ... ‘ನಾ ಮೆಚ್ಚಿದ ಹುಡುಗನಿಗೆ ಕಾಣಿಕೆ ತಂದಿರುವೆ... ಈ... ಪತ್ರದಿ ಬರೆದಾ ಪದಗಳನು ಚುಂಬಿಸಿ ಕಳಿಸಿರುವೆ...’ ಹಾಡು ನನ್ನ ಪಾಲಿಗೆ, ‘... ಈ... ರಕ್ತದಲಿ ಬರೆದಾ ಪದಗಳನು ನರ್ಸ್‌ ಚುಂಬಿಸಿ ಕಳಿಸಿದ್ದಾಳೆ...’ ಅಂತ ಕೇಳಿದಂಗೆ ಭಾಸವಾಯ್ತು. ಎಂಎಲ್‌ಎ ಮತ್ತ ನರ್ಸ್‌ ಚುಂಬನ ಚಿತ್ರಗಳು ಪೇಪರ್‌ನ್ಯಾಗ್‌ ಪ್ರಿಂಟ್‌ ಆಗಿದ್ದು ನೆನಪಾಗಿ ನಗು ತಡೆಯಲಾರದೆ ಘೊಳ್ಳನೆ ನಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT