ಮಂಗಳವಾರ, ಆಗಸ್ಟ್ 16, 2022
21 °C
ಪಂಚಾಯಿತಿ ಚುನಾವಣೆಯಲ್ಲಿ ಹೊಸ ಸಾಧ್ಯತೆ ಹೊರಹೊಮ್ಮುವುದೇ?

ಸಂಗತ: ಬದಲಾಗಬೇಕಿದೆ ಹಳ್ಳಿ ಚಹರೆ

ಸತೀಶ್ ಜಿ.ಕೆ. ತೀರ್ಥಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಗ್ರಾಮ ಪಂಚಾಯಿತಿ ಚುನಾವಣೆಯ ಕಾವೇರುತ್ತಿದ್ದಂತೆ ಅಧಿಕಾರ ವಿಕೇಂದ್ರೀಕರಣದ ಮೂಲಹಂತದಲ್ಲಿ ಪ್ರಜಾಪ್ರಭುತ್ವ ಹಬ್ಬದ ವೈಭವವೂ ಕಳೆಗಟ್ಟುತ್ತಲಿದೆ. ಹೊಸ ಕನಸು, ಆಶಯಗಳೂ ಗರಿಗೆದರುತ್ತಿವೆ.

ದೇಶಕಾಲಗಳಾಚೆಯ ಸಾಮಾನ್ಯ ವೈರುಧ್ಯದಂತೆ, ಪ್ರತೀ ಹಳ್ಳಿಯಲ್ಲೂ ಉಳ್ಳವರು ಮತ್ತು ಇಲ್ಲದವರು ಎಂಬೆರಡು ಭಾಗವಿರುತ್ತಿತ್ತು. ಹಾಗಿದ್ದೂ ಈ ಹಿಂದೆ ಕಡುಕಷ್ಟವನ್ನಷ್ಟೇ ಕಂಡುಂಡ ಹಳ್ಳಿಜನರಿಗೆ ಅಜ್ಞಾನದಲ್ಲಿ ಸುಖ, ಬಡತನದಲ್ಲಿಯೂ ತೃಪ್ತಿ ನೆಲೆಸಿದ್ದವು. ಇದ್ದ ಸೌಖ್ಯದಲ್ಲಿ ಸಹನೆಯೂ ವಿನಯವೂ ಇದ್ದವು. ಕಷ್ಟಸುಖಗಳಲ್ಲಿ ಪರಸ್ಪರ ಪಾಲ್ಗೊಳ್ಳುವಿಕೆ ಇತ್ತು. ಸಹಬಾಳ್ವೆಯ ಖುಷಿಯಿತ್ತು. ಸಂಬಂಧದಲ್ಲಿ ಪ್ರಾಶಸ್ತ್ಯವೂ ಪಾವಿತ್ರ್ಯವೂ ಇತ್ತು.

ಆದರೆ ಈಗೀಗ ಹಂಗಿನ ಚಿಪ್ಪಿನಿಂದ ಹೊರದಾಟುತ್ತಿರುವ ಹಳ್ಳಿಗಳು ಜಾಗತೀಕರಣದತ್ತ ಹೊರಳಿಕೊಂಡಿವೆ. ಬಡಕುಟುಂಬಗಳಿಗೆ ಸ್ವತಂತ್ರ ಬದುಕು ಸಾಧ್ಯವಾಗಿದೆ. ಶಿಕ್ಷಣವೆಂಬ ಬೆಳಕಿನ ಹಾದಿಯಲ್ಲಿ ಹೊರಜಗತ್ತಿಗೆ ತೆರೆದುಕೊಳ್ಳುತ್ತಿದ್ದಂತೆ ಬಹುತೇಕರ ನೋವು-ಹಸಿವು ನೀಗಿದೆ. ಹುಲ್ಲುಗುಡಿಸಲು, ಹೆಂಚಿನಮನೆಗಳೆಲ್ಲಾ ಕಾಂಕ್ರೀಟ್ ಹೊದ್ದುಕೊಂಡಿವೆ. ಗಾಡಿಹಾದಿಯು ಡಾಂಬರು ಮೆತ್ತಿಕೊಂಡಿದೆ. ಹಳ್ಳಿಗಳ ಆರ್ಥಿಕ ಸ್ವಾವಲಂಬನೆ ಮತ್ತು ಸಾಮಾಜಿಕ ಸ್ಥಿತ್ಯಂತರದಲ್ಲಿ ಗ್ರಾಮೀಣಾಭಿವೃದ್ಧಿ ಯೋಜನೆಗಳು, ಸ್ತ್ರೀಶಕ್ತಿ ಹಾಗೂ ಇನ್ನಿತರೆ ಸ್ವಸಹಾಯ ಸಂಘಗಳ ಪಾತ್ರವೂ ದೊಡ್ಡದಿದೆ.

ಹಳ್ಳಿಗಾಡಿನ ತಾಜಾ ಪರಿಸರ, ಮುಗ್ಧ ಜನಮನ, ಕಲುಷಿತಗೊಂಡಿರದ ಸಂಬಂಧಗಳು, ನಿರಾಡಂಬರ ಮನಸುಗಳಲ್ಲಿ ಮೂಡಿದ್ದ ಸುಂದರ ಚಿತ್ತಾರವೀಗ ಬಣ್ಣ ಮಾಸುತ್ತಿದೆ. ಸಾವಧಾನ- ಸಂತುಷ್ಟಿಯ ತವರಾಗಿದ್ದ ಹಳ್ಳಿಗಳೇಕೆ ಅತೃಪ್ತಿಯ ಗೂಡುಗಳಾಗುತ್ತಿವೆ? ಕೆಲವು ವರ್ಷಗಳ ಅಂತರದಲ್ಲಿ ಊರು ಕಾಣುತ್ತಿರುವ ಯುಗಪಲ್ಲಟವೊಂದು ಗಾಬರಿ ಹುಟ್ಟಿಸುತ್ತದೆ. ಆಧುನಿಕತೆಯ ಭರಾಟೆಯಲ್ಲಿ ಶ್ರಮಿಕವರ್ಗ ಸಹಜ ಸಂತಸವೊಂದನ್ನು ಕಳೆದುಕೊಳ್ಳುತ್ತಾ ಬಂದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಜಾಗತಿಕ ಚರಿತ್ರೆಯ ಸಂದರ್ಭದಲ್ಲಿ ಬಹುತೇಕ ಚಳವಳಿಯ, ಕ್ರಾಂತಿಯ ಶಕ್ತಿಯಾಗಿ ಉದಯಿಸಿದವರು ಅಲ್ಲಿಯ ಯುವಜನ. ಬಿಸಿರಕ್ತವನ್ನು ಸೋಮಾರಿತನ, ನಿಷ್ಕ್ರಿಯತೆ ಆವರಿಸಿಕೊಂಡಿದ್ದರ ಬಗ್ಗೆ, ಹಳ್ಳಿಗಳ ಸ್ಥಿತಿಗತಿ ಬಗ್ಗೆ ಸೂಕ್ಷ್ಮವಾಗಿ ಹೇಳುವಾಗ ಲಂಕೇಶರು ಮಾರ್ಮಿಕವಾಗಿ ‘ಬಾವಿಕೆರೆಗಳಲ್ಲಿ ಪಾಚಿ ಕಟ್ಟಿದೆ’ ಅಂದಿದ್ದರು. ಇವತ್ತಿನ ಹೊಸ ಜಮಾನದ ಹುಡುಗಹುಡುಗಿಯರು ಮೊಬೈಲು ಉಜ್ಜುವುದರಲ್ಲೇ ಕಳೆದುಹೋಗುತ್ತಿದ್ದು, ಹಳ್ಳಿಗಳೀಗ ಜೀವಂತಿಕೆ ಸೋತು ಹಾಳು ಸುರಿಯುತ್ತಿವೆ. ಕಾಣದ ಸುಖದ ಹುಡುಕಾಟದಲ್ಲಿ ಯುವಶಕ್ತಿಯ ವಲಸೆ ಮತ್ತು ಪ್ರತಿಭಾ ಪಲಾಯನಕ್ಕೊಳಗಾಗಿ ಬಿಕೋ ಎನ್ನುತ್ತಿರುವ ಊರೀಗ ಬರೀ ಹಿರಿಯರಷ್ಟೇ ಕಾಣಸಿಗುವ ಅಕ್ಷರಶಃ ವೃದ್ಧಾಶ್ರಮ!

ಎಳವೆಯಲ್ಲೇ ಮಕ್ಕಳನ್ನು ಅಂಕ-ರ‍್ಯಾಂಕ್‍ಗಳ ಹಿಂದೆ ತಳ್ಳಿ ಕೇವಲ ಕಾಸು ತರುವ ಉದ್ಯೋಗವನ್ನಷ್ಟೇ ಗುರಿಯಾಗಿಸಿದುದರ ಪರಿಣಾಮವಿದು. ಮಕ್ಕಳಿಗೆ ನೆಲದ ನಂಟನ್ನೂ ಕೂಡುಕುಟುಂಬದ ಒಡನಾಟವನ್ನೂ ವಂಚಿಸಿದ ಹೆತ್ತವರದು ಸ್ವಯಂಕೃತ ಅಪರಾಧವೂ ಹೌದು. ಕಲಿತವರ್ಗವು ಮೊದಲಿಗಿಂತಲೂ ಹೆಚ್ಚು ಜಾತೀಯತೆ ಮತ್ತು ಹೊಸ ಬಗೆಯ ಮೌಢ್ಯಗಳಲ್ಲಿ ಮುಳುಗೇಳುತ್ತಿರುವ ಸಂದರ್ಭವಿದು.

ಪಾಶ್ಚಾತ್ಯತೆಗೆ ಮರುಳಾಗಿರುವ ಮತ್ತು ಯಂತ್ರಗಳಿಗೆ ಶರಣಾಗಿರುವ ಹೊತ್ತಿನಲ್ಲಿ ಪ್ರೀತಿ-ವಿಶ್ವಾಸವಿರಬೇಕಾದಲ್ಲಿ ಸ್ವಾರ್ಥ-ಪ್ರತಿಷ್ಠೆಗಳ ಮೆರೆದಾಟವಿದೆ. ಸಂವೇದನೆ, ಮಾನವೀಯತೆಗೆ ಬರ ಬಂದು ಸಂಕುಚಿತತೆ ಮುನ್ನೆಲೆಯಲ್ಲಿದೆ. ಈಗೀಗ ಮನೆಮನಗಳಲ್ಲಿ ಬೇರೂರುತ್ತಿರುವ ಸ್ವಾರ್ಥ, ಧನದಾಹ, ಯಾಂತ್ರಿಕ ಜೀವನಕ್ರಮವು ಬಾಂಧವ್ಯದ ತಂತುವನ್ನು ಸಡಿಲಗೊಳಿಸಿವೆ. ಹೃದಯವೈಶಾಲ್ಯ ಮೆರೆಯುತ್ತಿದ್ದ, ಅನ್ನ ನೀಡುವ ಹಳ್ಳಿಗಳು ಹೀಗೆ ಸ್ವಾರ್ಥ ಮೆರೆದರೆ ಹೇಗೆ?

ಪರಿವರ್ತನೆ ಸಮಾಜದ ಚಲನೆಗೆ ಪೂರಕ. ಶತಮಾನದ ಹಿಂದೆಯೇ ಕಾರ್ಲ್‌ಮಾರ್ಕ್ಸ್‌ ಕಲ್ಪಿಸಿದ್ದ ಪರಿವರ್ತಿತ ಜಗತ್ತು ಒಳಗೊಂಡಿರಬೇಕಾದ ಮೂರು ಲಕ್ಷಣಗಳೆಂದರೆ ‘ಹಳ್ಳಿ-ಪಟ್ಟಣಗಳ ನಡುವಿನ ಅಂತರ, ಹೆಣ್ಣು-ಗಂಡುಗಳ ಮಧ್ಯದ ತರತಮ, ದೈಹಿಕ-ಬೌದ್ಧಿಕ ಶ್ರಮದ ಬಗೆಗಿನ ಅಸಮಾನ ಮನಃಸ್ಥಿತಿಗಳ ಪರಿವರ್ತನೆ ಮತ್ತು ನಿವಾರಣೆ’. ಹಾಗಾಗಿ ವಾಸ್ತವವನ್ನು ಒಪ್ಪಿಕೊಳ್ಳುತ್ತಲೇ ಎದುರಾದ ಹೊಸ ಸವಾಲುಗಳಿಗೆ ಸಮಾಜದ ಜಾಗೃತಪ್ರಜ್ಞೆ ಮಾನವೀಯ ನೆಲೆಯಲ್ಲಿ ಎದೆಗೊಡಬೇಕಿದೆ.

ನಕಾರಾತ್ಮಕ ಅಂಶಗಳನ್ನೂ ಮೀರಿ ಗ್ರಾಮಭಾರತ ಗಟ್ಟಿಗೊಂಡರೆ ಮಾತ್ರ ನಿಜವಾದ ದೇಶೋದ್ಧಾರ ಅನ್ನುವುದನ್ನು ಮನಗಂಡು, ವಿದ್ಯಾವಂತರೀಗ ಹೊಸ ಆದರ್ಶದೊಂದಿಗೆ ‘ರಾಜಕೀಯದ ಮಿನಿಸಮರ’ದಲ್ಲಿ ಹೊಸ ಸಾಧ್ಯತೆಗಳಾಗಿ ಹೊರಹೊಮ್ಮಬೇಕಿದೆ.
ಸ್ವ-ಉದ್ಯೋಗ ಸೃಜಿಸಿಕೊಂಡು ಹಳ್ಳಿಗಳನ್ನು ಮುರಿದುಕಟ್ಟಲು ಹೊರಡಬೇಕಿದೆ. ಭ್ರಷ್ಟಾಚಾರ ನಿಯಂತ್ರಿಸಿ, ದ್ವೇಷ ಮರೆತು, ಜೀವ ಬೆಸೆಯುವ ಮಾರ್ಗವನ್ನು ಅನ್ವೇಷಿಸಿಕೊಂಡು ಒಲವಮುಗುಳಲ್ಲಿ, ಮಣ್ಣಿನ ಸಾಮೀಪ್ಯ, ಹಸಿರಿನ ಸಾಂಗತ್ಯದಲ್ಲಿ ಹಳ್ಳಿ ಚಹರೆಗಳನ್ನು ಬದಲಿಸಬೇಕಿದೆ.

ಸಮ್ಮುಖ ಸುಖದಲ್ಲಿ ಸಾಂಸ್ಕೃತಿಕ ಚೌಕಟ್ಟಿನೊಳಗೆ ಸಾಮಾಜಿಕ ಮತ್ತು ರಚನಾತ್ಮಕ ಪಲ್ಲಟಗಳು ಒಡಮೂಡುವುದು ಈಗ ಅಗತ್ಯ. ಕೃಷಿ ಮತ್ತು ಗ್ರಾಮೋದ್ಯೋಗಗಳಿಗೆ ಬಲ ನೀಡಿ ಸುಸ್ಥಿರ ಅಭಿವೃದ್ಧಿಯ ಆದ್ಯತೆಯೊಂದಿಗೆ ಹೆಜ್ಜೆ ಹಾಕಿದರೆ ಮಾತ್ರ ದೇಶದ ಜೀವನಾಡಿಗಳಾದ ಹಳ್ಳಿಗಳ ಉಳಿವು ಸಾಧ್ಯವಾದೀತು. ಸಂದಿಗ್ಧ ಕಾಲಘಟ್ಟದಲ್ಲಿ ಪ್ರತೀ ಹಳ್ಳಿಯೂ ತನ್ನೆಲ್ಲಾ ಸದ್ಗುಣಗಳನ್ನು ಉಳಿಸಿಕೊಂಡೇ ಬದಲಾವಣೆಗೆ
ತೆರೆದುಕೊಳ್ಳುವುದು ಹೆಚ್ಚು ಅಪೇಕ್ಷಣೀಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.