ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಜೆಟ್‌ಗೆ ಹೀಗೂ ಒಂದು ಅರ್ಥವಿದೆ

Last Updated 2 ಜುಲೈ 2019, 16:45 IST
ಅಕ್ಷರ ಗಾತ್ರ

ಇಂತಹದೊಂದು ಬಜೆಟ್‌ನಲ್ಲಿಎಷ್ಟೂ ಸಿಕ್ಸರ್ ಹೊಡೆಯಬಹುದು. ಹೊಡೆದ ಬಾಲುಗಳನ್ನೆಲ್ಲ ಮೀಡಿಯಾ ಫೀಲ್ದರ್‌ಗಳು ಎತ್ತಿಎತ್ತಿ ಬೌಂಡರಿ ಗಡಿ ದಾಟಿಸಿ, ಸಿಕ್ಸರ್ ಎಂದು ಕೂಗಲಾರಂಭಿಸಿಯಾಗಿದೆ. ಹತ್ತಿರದಲ್ಲೇ ಚುನಾವಣೆ ಇರುವುದರಿಂದ ಸರ್ಕಾರಕ್ಕೆ ಬೇಕಾದದ್ದೂ ಇದೇ.

ಬಜೆಟ್‌ನಪ್ರೆಸೆಂಟೇಷನ್ ಅನ್ನು ತುಂಡುತುಂಡು ಮಾಡಿ, ಅದರಲ್ಲಿ ಕ್ರೀಂ ಇರುವ ಭಾಗವನ್ನು ಮಾತ್ರ ಎತ್ತಿ ತೋರಿಸುವುದು ರೂಢಿಯಾಗಿ ಈಗ ಕೆಲವು ವರ್ಷಗಳೇ ಆಗಿಬಿಟ್ಟಿವೆ. ಸುದ್ದಿಕೋಣೆಗಳಲ್ಲೂ ಇಡಿಯ ಬಜೆಟ್ ವಿಶ್ಲೇಷಿಸಿ ಸುದ್ದಿ ಮಾಡಬಲ್ಲ ಜನಗಳು ಇಲ್ಲ.ಹಾಗಾಗಿ ಬಜೆಟ್ ಅಂದರೆ ಹಣಕಾಸು ಸಚಿವರ ಸಿಕ್ಸರ್‌ಗಳು ಮತ್ತು ಸುದ್ದಿಮನೆಗಳ ಕೂಗುಮಾರಿಗಳ ‘ಚೀರ್ ಲೀಡಿಂಗ್’ಆಗಿಬಿಟ್ಟಿದೆ.

ಮೂಲಭೂತವಾಗಿ ಈ ‘ಲೇಖಾನುದಾನದ ವಾಯಿದೆ 2019’ ಎಪ್ರಿಲ್‌ನಿಂದ ಜುಲೈ ಅಂತ್ಯದ ತನಕದ್ದು. ಅದು ಸದನದ ಅನುಮತಿ ಕೋರುತ್ತಿರುವುದು, ಆ 4 ತಿಂಗಳಿಗೆ ಬೇಕಾದ ₹34,17,295.38 ಕೋಟಿ ರೂಪಾಯಿಗಳನ್ನು (₹34.17 ಲಕ್ಷ ಕೋಟಿ)ಖರ್ಚುಮಾಡಲು ಬೇಕಾದ ಅನುಮತಿಯನ್ನು. ಆದರೆ ಅದು ಇಡೀ 2019-20 ಹಣಕಾಸು ವರ್ಷಕ್ಕೆ ₹97,43,039.70 ಲಕ್ಷ ಕೋಟಿ ರೂಪಾಯಿಗಳ (₹97.43 ಲಕ್ಷ ಕೋಟಿ) ಖರ್ಚು ತೋರಿಸಿ, ಇಡಿಯ ಬಜೆಟ್‌ ಅನ್ನುಸದನದ ಮುಂದಿಟ್ಟಿದೆ. ಈ ಉಳಿಕೆ ಮೊತ್ತ ಕೇವಲ ಆಟಕ್ಕುಂಟು ಲೆಕ್ಕಕ್ಕಿಲ್ಲ. ಇದು ಇಂದು ಹಣಕಾಸು ಸಚಿವ ಪೀಯೂಷ್ ಗೋಯೆಲ್ ಅವರು ಮಂಡಿಸಿರುವ ಲೇಖಾನುದಾನದ (ಬಜೆಟ್ ಅಲ್ಲ)ಹೂರಣ.

ಹಾಗೆಂದ ಮಾತ್ರಕ್ಕೆ ಬಜೆಟ್ ಘೋಷಣೆಗಳೆಲ್ಲ ಪೊಳ್ಳಲ್ಲ. ಯಾಕೆಂದರೆ ಫೈನಾನ್ಸ್ ಬಿಲ್‌, ಆದಾಯ ತೆರಿಗೆ, ಸೆಕ್ಯುರಿಟಿಗಳಿಂದ ತೆರಿಗೆ ಸಂಗ್ರಹದ ಕುರಿತಾದ ಬದಲಾವಣೆ ಮಾಡಲು ಇಂಡಿಯನ್ ಸ್ಟಾಂಪ್ ಆಕ್ಟ್‌ನಲ್ಲಿ,ಅಗತ್ಯ ಬದಲಾವಣೆಗಳಿಗೂ ಸದನದ ಅನುಮತಿ ಪಡೆಯಲಾಗುವುದರಿಂದ ಅವೆಲ್ಲ ಜಾರಿಗೆ ಬರಲಿವೆ.

ಸರ್ಕಾರ ಹೊಡೆದಿರುವ ಸಿಕ್ಸರ್‌ಗಳೆಲ್ಲ ಶೀಘ್ರಬರಲಿರುವ ಚುನಾವಣೆಯತ್ತಲೇ ಗಮನ ಇಟ್ಟುಕೊಂಡದ್ದಾಗಿದೆ.ಅದರಲ್ಲಿ ಅನುಮಾನಗಳಿಲ್ಲ. ಅವೆಲ್ಲ ಮತವಾಗಿ ಎಷ್ಟರಮಟ್ಟಿಗೆ ಪರಿವರ್ತಿತವಾಗಲಿವೆ ಎಂಬುದೂ ಇನ್ನು 3-4 ತಿಂಗಳಲ್ಲಿ ನಮಗೆ ಕಾಣಸಿಗಲಿದೆ. ಪಿಯೂಷ್ ಗೋಯಲ್ ಅವರು ಮಂಡಿಸಿದ, ಆದರೆ ಓದಿಹೇಳದ ಅಂಕಿಸಂಖ್ಯೆಗಳನ್ನು ಗಮನಿಸಿದರೆ, ಕೆಲವು ವಿಚಾರಗಳು ಸ್ಪಷ್ಟ...

1) ನೋಟುರದ್ಧತಿಯಿಂದ ಆದಾಯ ತೆರಿಗೆಯಲ್ಲಿ ಆಗಿರುವ ಏರಿಕೆ ಕಂಡರೆ, ಇದು ಬೆಟ್ಟ ಅಗೆದು ಇಲಿ ಹಿಡಿದದ್ದೆಂಬುದು ಸ್ಪಷ್ಟ.

2) ಎರಡನೆಯದಾಗಿ 130 ಕೋಟಿ ಜನ ಇರುವ ಭಾರತದಲ್ಲಿ ಈ ಅವಧಿಯಲ್ಲಿ ಮೊದಲ ಬಾರಿ ತೆರಿಗೆ ರಿಟರ್ನ್ಸ್ ಸಲ್ಲಿಸಿದವರು ಬರೀ 1.06 ಕೋಟಿ ಜನ.

3) ಒಂದು ದೇಶ ಒಂದು ತೆರಿಗೆ ಕಲ್ಪನೆಯಡಿ ಬಂದ ಜಿಎಸ್‌ಟಿಯಗಾತ್ರ ದೊಡ್ಡದು ಕಾಣಿಸುತ್ತಿದೆಯಾದರೂ, ಅದರಲ್ಲಿ ರಾಜ್ಯದ ಪಾಲು ಇದೆ. ದೇಶದ ಒಟ್ಟು ನೇರ ತೆರಿಗೆ ಸಂಗ್ರಹದ ಗಾತ್ರದಲ್ಲಿ ಗಮನಾರ್ಹ ಬದಲಾವಣೆ ಆದಂತೆ ತೋರುತ್ತಿಲ್ಲ.

4) ಸರಕಾರ ನಷ್ಟದಲ್ಲಿರುವ ಬ್ಯಾಂಕ್‌ಗಳಿಗೆ2.6 ಲಕ್ಷ ಕೋಟಿ ರೀ ಕ್ಯಾಪಿಟಲೈಸೇಷನ್ ಒದಗಿಸಿದೆ, 3 ಲಕ್ಷ ಕೋಟಿ ಸುಸ್ತಿ ಸಾಲ ವಸೂಲಿ ಮಾಡಿದೆ ಎಂದು ಹೇಳುತ್ತಿದೆಯಾದರೂ ಬ್ಯಾಂಕುಗಳ ಆರೋಗ್ಯ ಸುಧಾರಿಸಿರುವುದು ತೋರುತ್ತಿಲ್ಲ.

(ಬಜೆಟ್ ವಿವರಗಳು ಬೇಕಿದ್ದವರು ಇಲ್ಲಿ ನೋಡಿ: https://www.indiabudget.gov.in/budget.asp)

ಈ ಅಂಕಿಸಂಖ್ಯೆಗಳ ಆಟಕ್ಕಿಂತ ನನಗೆ ಈ ಬಜೆಟ್ ಭಾಷಣದಲ್ಲಿ ಕುತೂಹಲಕರವೆನ್ನಿಸಿದ್ದು, ಸಚಿವರು ಹರಡಿಟ್ಟ ಭವಿಷ್ಯದ ಹತ್ತು ವಿಷನ್‌ಗಳು. ಹೆಚ್ಚಿನಂಶ ಇವು ನಾವೆಲ್ಲಿದ್ದೇವೆ, ಎತ್ತ ಹೋಗುತ್ತಿದ್ದೇವೆ ಎಂಬುದಕ್ಕೆ ಸ್ಪಷ್ಟ ದಿಕ್ಸೂಚಿ. 2030ರ ಹೊತ್ತಿಗೆ 10 ಶತಕೋಟಿ ಡಾಲರ್ ಆರ್ಥಿಕತೆ ಆಗುವ ಲಕ್ಷ್ಯ ಇಟ್ಟುಕೊಂಡ ವಿಷನ್‌ಗಳಿವು...

ಆ ಹತ್ತು ವಿಷನ್‌ಗಳು

1) ಮೂಲ ಸೌಕರ್ಯಗಳ ಅಭಿವೃದ್ಧಿ(ಬ್ರಹತ್ ಮೂಲಸೌಕರ್ಯ ಯೋಜನೆಗಳು)

2) ಡಿಜಿಟಲ್ ಇಂಡಿಯಾ

3) ಮಾಲಿನ್ಯ ಮುಕ್ತ ಭಾರತ (ಎಲೆಕ್ಟ್ರಿಕ್ ವಾಹನ, ಎನರ್ಜಿ ಸ್ಟೋರೇಜ್)

4) ಗ್ರಾಮೀಣ ಕೈಗಾರಿಕೀಕರಣ (ದೊಡ್ಡ ಕೈಗಾರಿಕೆಗಳಿಗೆ ಬೆಂಬಲ ನೀಡುವ MSME)

5) ಶುದ್ಧ ನದಿಗಳು (ಮೈಕ್ರೋ ಇರಿಗೇಷನ್)

6) ಕರಾವಳಿಯ ಸದುಪಯೋಗ (ಸಾಗರಮಾಲಾ)

7) ಬಾಹ್ಯಾಕಾಶ ಕಾರ್ಯಕ್ರಮ (ಗಗನಯಾನ)

8) ಆಹಾರ ಸ್ವಾವಲಂಬನೆ (ಕಾರ್ಪೋರೇಟ್ ಫಾರ್ಮಿಂಗ್)

9) ಆರೋಗ್ಯವಂತ ಭಾರತ (ಆಯುಷ್ಮಾನ್ ಭಾರತ)

10) ಮಾನವ ಸಂಪನ್ಮೂಲದ ಪರಿಣಾಮಕಾರಿ ಬಳಕೆ (ಆಧುನಿಕ, ಟೆಕ್ನಾಲಜಿ ಡ್ರಿವನ್)

ಈ ವಿಷನ್ ಗಳು ಒಟ್ಟಾಗಿ ಕೂಗುತ್ತಿರುವುದು ಇಷ್ಟೇ. ಭಾರತ ಸಂಪೂರ್ಣ ಕಾರ್ಪೋರೇಟೀಕರಣದತ್ತ ಹೆಜ್ಜೆ ಹಾಕುತ್ತಿದೆ. ಬಡವರು –ಸಿರಿವಂತರ ನಡುವಿನ ಅಂತರ ಇನ್ನಷ್ಟು ಹೆಚ್ಚಲಿದೆ. ದೇಶಪ್ರೇಮ, ದೇಶಭಕ್ತಿಯ ಮಾತನಾಡುತ್ತಲೇ ದೇಶವನ್ನು ಜಾಗತೀಕರಣದ ಶಕ್ತಿಗಳ ಕೈಗೆ ತಟ್ಟೆಯಲ್ಲಿಟ್ಟು ಒಪ್ಪಿಸಲಾಗುತ್ತಿದೆ.

ಈಗ ಚರ್ಚೆ ನಡೆಯಬೇಕಿದ್ದರೆ, ಅದು ಇವತ್ತು ಗೋಯಲ್ ಹೊಡೆದ ಸಿಕ್ಸರ್‌ಗಳ ಬಗ್ಗೆ ಅಲ್ಲ; ಈ ಹತ್ತು ವಿಷನ್‌ಗಳ ಬಗ್ಗೆ. #ಡಿಯರ್_ಮೀಡಿಯಾದ ಕೂಗುಮಾರಿಗಳಿಗೆ ಇದನ್ನು ತಿಳಿಹೇಳುವವರು ಯಾರು?!!!

(ಲೇಖಕರು ಫ್ರೀಲ್ಯಾನ್ಸ್‌ ಪತ್ರಕರ್ತರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT