ದೇವರ ಹುಡುಕಾಟ ಎಲ್ಲಿ?

7

ದೇವರ ಹುಡುಕಾಟ ಎಲ್ಲಿ?

Published:
Updated:

‘ಕರ್ನಾಟಕ ಸಂಗೀತ ಕೋಮುವಾದಕ್ಕೆ ತುತ್ತಾಗುತ್ತಿದೆಯೇ’ ಎನ್ನುವ ವಿಷಯದ ಕುರಿತ ಒಂದು ಚರ್ಚೆಯನ್ನು ಟಿ.ವಿ.ಯಲ್ಲಿ ವೀಕ್ಷಿಸಿದೆ. ಇಂದಿನ ದಿನಗಳಲ್ಲಿ ಸೂಕ್ಷ್ಮ ವಿಚಾರಗಳ ಕುರಿತು ಚರ್ಚೆ ನಡೆಯುವಾಗೆಲ್ಲ ಗದ್ದಲದ ವಾತಾವರಣ ಉಂಟಾಗುವುದು ಸಾಮಾನ್ಯ. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಆದಿವಾಸಿ ಸಮುದಾಯಗಳು, ಲೈಂಗಿಕ ಅಲ್ಪಸಂಖ್ಯಾತರು ಮತ್ತು ಇತರ ದುರ್ಬಲ ಸಮುದಾಯಗಳ ಕಡೆ ಕೊಂಡೊಯ್ಯುತ್ತಿರುವ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಗಾಯಕ ಟಿ.ಎಂ. ಕೃಷ್ಣ ಅವರು ಅಂದಿನ ಚರ್ಚೆಯಲ್ಲಿ ಇದ್ದರು. ದುರ್ಬಲ ಸಮುದಾಯಗಳಲ್ಲಿ ಬೆಳೆದು ಬಂದಿರುವ ಸಂಗೀತ ಪರಂಪರೆಯನ್ನು ಕೃಷ್ಣ ಅವರು ಶಾಸ್ತ್ರೀಯ ಸಂಗೀತದ ಪ್ರಕಾರಗಳಿಗಿಂತ ಕೀಳಾಗಿ ಕಾಣುವುದಿಲ್ಲ. ಬದಲಿಗೆ ಅವರ ಸಂಗೀತ ಕೂಡ ಒಂದು ವಿಭಿನ್ನವಾದ ಪ್ರಕಾರ, ಆ ಸಂಗೀತ ಕೂಡ ಹೆಚ್ಚು ಚಲನಶೀಲವಾಗಿ ಇದೆ ಎಂದು ಗುರುತಿಸುತ್ತಾರೆ.

ಕೃಷ್ಣ ಅವರು ಸಂಗೀತದ ವಿಚಾರದಲ್ಲಿ ಇರುವ ಜಾತಿ ಹಾಗೂ ಸಾಮಾಜಿಕ ಬೇಲಿಗಳನ್ನು ಒಡೆಯುವ ಯಾನವೊಂದನ್ನು ಕೈಗೊಂಡಿದ್ದಾರೆ. ಆ ಯಾನದಲ್ಲಿ ಅವರು ಕೆಲವು ವಿವಾದಗಳನ್ನೂ ಎದುರಿಸುತ್ತಿದ್ದಾರೆ. ಅಂದು ನಡೆದ ಚರ್ಚೆಯಲ್ಲಿ ಕೇಳಿಬಂದ ಆರೋಪ–ಪ್ರತ್ಯಾರೋಪಗಳು ಏನು ಎಂಬುದನ್ನು ಗ್ರಹಿಸಲು ನನಗೆ ಸಾಧ್ಯವಾಯಿತು. ಕರ್ನಾಟಕ ಸಂಗೀತವನ್ನು ತಮ್ಮ ಕೆಲವು ಸಹವರ್ತಿಗಳು ಕ್ರೈಸ್ತ ಸಂಸ್ಥೆಗಳಲ್ಲಿ ಹಾಡಿದ್ದನ್ನು ಸಮರ್ಥಿಸಿಕೊಂಡಿದ್ದಕ್ಕಾಗಿಕೃಷ್ಣ ಅವರು ಹಿಂದೂ ಧಾರ್ಮಿಕ ಬಲಪಂಥೀಯ ಗುಂಪುಗಳಿಂದ ವಾಗ್ದಾಳಿಗೆ ಗುರಿಯಾಗಿದ್ದರು; ಅವರ ಪ್ರಕಾರ ಹೀಗೆ ಹಾಡಿದ್ದು ಹಿಂದೂ ಧರ್ಮಕ್ಕೆ ಅಗೌರವ ತಂದಂತೆ. ವಿಚಾರ ತಿಳಿದುಕೊಂಡಿರದ, ಸಂಕುಚಿತ ಮನಸ್ಸಿನ ವ್ಯಕ್ತಿಗಳು ಸಂಗೀತಕ್ಕೆ ಕೋಮು ಬಣ್ಣ ನೀಡುತ್ತಿದ್ದಾರೆ ಎಂದು ಕೃಷ್ಣ ಹೇಳಿದರು. ಕೃಷ್ಣ ಮತ್ತು ರಾಮನ ಬಗ್ಗೆ ಹಾಡುಗಳನ್ನು ಬರೆದ ಸೂಫಿ ಸಂತರ ಬಗ್ಗೆ, ಪಾಶ್ಚಾತ್ಯ ಶೈಲಿಗೆ ಅನುಗುಣವಾಗಿ ಸಂಸ್ಕೃತದ ಹಾಡುಗಳನ್ನು ಬರೆದ ಮುತ್ತುಸ್ವಾಮಿ ದೀಕ್ಷಿತರ್‌ ಬಗ್ಗೆ ಉಲ್ಲೇಖಿಸಿದರು.

ಈ ಚರ್ಚೆ ಮುಗಿದ ತಕ್ಷಣ ನನಗೆ ಹಲವು ಸಂದೇಶಗಳು ಬಂದವು. ಈ ಕಲಾವಿದರು ತಮ್ಮ ಆತ್ಮವನ್ನು ಕ್ರೈಸ್ತ ಮಿಷನರಿಗಳಿಗೆ ಮಾರಿಕೊಂಡಿದ್ದಾರೆ ಎಂಬ ಆಕ್ರೋಶ ಆ ಸಂದೇಶಗಳಲ್ಲಿ ಇತ್ತು. ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರಾದ ನಿತ್ಯಾಶ್ರೀ, ಒ.ಎಸ್. ಅರುಣ್, ಉನ್ನಿಕೃಷ್ಣನ್ ಅವರು ಕರ್ನಾಟಕ ಸಂಗೀತದ ಕೀರ್ತನೆಗಳಲ್ಲಿ ತ್ಯಾಗರಾಜರ ಹೆಸರಿನ ಬದಲು ಪ್ರಭು ಅಥವಾ ಯೇಸು ಎಂಬ ಪದ ಬಳಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಕರ್ನಾಟಕ ಸಂಗೀತದ ಕ್ರೈಸ್ತೀಕರಣಕ್ಕೆ ಅವಕಾಶ ಕೊಡಬಾರದು, ಇದನ್ನು ಮಿಷನರಿಗಳು ಮತಾಂತರಕ್ಕೆ ಬಳಸಿಕೊಳ್ಳಬಹುದು ಎಂಬ ಮಾತುಗಳೂ ಅಲ್ಲಿದ್ದವು.

ಕಲಾವಿದರ ಮೇಲೆ ವಾಗ್ದಾಳಿ ಮಾತ್ರವಲ್ಲದೆ, ಅವರ ಮೇಲೆ ಹಲ್ಲೆ ನಡೆಸಲಾಗುವುದು ಎಂಬ ಬೆದರಿಕೆಗಳು ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಬಂದಿವೆ ಎಂದು ವರದಿಯಾಗಿದೆ. ಕೃಷ್ಣ ಅವರು ತಮ್ಮ ಸಹವರ್ತಿಗಳ ಪರ ಎದ್ದುನಿಂತಿದ್ದು ಈ ಸಂದರ್ಭದಲ್ಲಿ. ಹಿಂದೂ ಸಂಘಟನೆಗಳನ್ನು ಪ್ರತಿನಿಧಿಸುವುದಾಗಿಹೇಳಿಕೊಳ್ಳುವ ತೀವ್ರವಾದಿಗಳ ಜೊತೆ ಜಗಳ ಬೇಡ ಎಂದು ಕೆಲವು ಗಾಯಕರು ಕ್ಷಮೆ ಕೋರಿದರು. ಕೃಷ್ಣ ಅವರನ್ನು ಬೆಂಬಲಿಸಿದವರ ಸಂಖ್ಯೆ ಕೂಡ ದೊಡ್ಡದಾಗಿಯೇ ಇದೆ.

ಉಸ್ತಾದ್‌ ಬಡೆ ಗುಲಾಮ್‌ ಅಲಿ ಖಾನ್‌, ಅಬ್ದುಲ್‌ ಕರೀಂ ಖಾನ್‌, ಬೇಗಂ ಅಖ್ತರ್‌, ವಿಲಾಯತ್ ಖಾನ್, ಬಿಸ್ಮಿಲ್ಲಾ ಖಾನ್‌ ಸೇರಿದಂತೆ ಹಿಂದೂಸ್ತಾನಿ ಸಂಗೀತ ಪ್ರಕಾರದ ಅನೇಕ ದಿಗ್ಗಜರು ಹಾಡಿದ್ದು ಹಿಂದೂ ದೇವ– ದೇವತೆಗಳ ಬಗ್ಗೆ. ಉಸ್ತಾದ್‌ ಬಡೆ ಗುಲಾಂ ಅಲಿ ಖಾನ್ ಅವರ ಭಜನೆಗಳು ನಿಮ್ಮನ್ನು ಸ್ವರ್ಗಕ್ಕೇ ಕೊಂಡೊಯ್ಯುತ್ತವೆ. ಅಲ್ಲಾಹುವಿನ ಕುರಿತ ಪಂಡಿತ್ ಜಸರಾಜ್‌ ಹಾಡಿದ ಭಜನೆಯನ್ನು ಕೇಳಿ, ಮನಸೋಲದವರು ಯಾರಿದ್ದಾರೆ? ಇದರಲ್ಲಿ ಜಸರಾಜ್ ಅವರು ಓಂಕಾರ ಮತ್ತು ಅಲ್ಲಾಹುವನ್ನು ಸಮೀಕರಿಸುತ್ತಾರೆ. ಇದನ್ನು ನಾನು ಕೇಳಿದ್ದು ಕೆಲವು ವರ್ಷಗಳ ಹಿಂದೆ, ಬೆಂಗಳೂರಿನಲ್ಲಿ, ರಾಮನವಮಿ ಉತ್ಸವದಲ್ಲಿ.

ಮಹಾತ್ಮ ಗಾಂಧೀಜಿಗೆ ಬಹಳ ಪ್ರಿಯವಾಗಿದ್ದ ‘ರಘುಪತಿ ರಾಘವ ರಾಜಾರಾಂ, ಈಶ್ವರ ಅಲ್ಲಾಹ್ ತೇರೆ ನಾಮ್’ ಭಜನೆಯನ್ನು ಯಾರಿಂದಲಾದರೂ ಮರೆಯಲು ಸಾಧ್ಯವೇ? ಇದನ್ನು ಹಾಡಿ, ಜನಪ್ರಿಯಗೊಳಿಸಿದವರು ಹಿಂದೂಸ್ತಾನಿ ಗಾಯಕ ಪಂಡಿತ್ ವಿಷ್ಣು ದಿಗಂಬರ ಪಲುಸ್ಕರ್.

ಭಾರತದಲ್ಲಿ ಸೂಫಿ ಪಂಥ ಹಾಗೂ ಅಧ್ಯಾತ್ಮದ ಲೇಪ ಇದ್ದ ಸೂಫಿ ಸಂಗೀತವು ಭಕ್ತಿ ಚಳವಳಿಯ ಜೊತೆ ಒಂದಾಯಿತು. ಇವೆರಡೂ ಸಾಂಪ್ರದಾಯಿಕ ಧರ್ಮ, ಆಚರಣೆಗಳ ವಿಚಾರದಲ್ಲಿ ತಟಸ್ಥವಾಗಿದ್ದವು. ಆದರೆ ಇವೆರಡೂ ಸರಳತೆ, ಪ್ರೀತಿ, ಸೌಹಾರ್ದ, ಶಾಂತಿ, ಭಕ್ತಿಯನ್ನು ಬೋಧಿಸಿದವು. ಭಕ್ತಿ ಪಂಥ ಮತ್ತು ಸೂಫಿ ಪಂಥ ಒಂದನ್ನೊಂದು ಪ್ರಭಾವಿಸಿದ್ದು ಮಾತ್ರವಲ್ಲದೆ, ಜೈನ, ಸಿಖ್ ಮತ್ತು ಬೌದ್ಧ ಧರ್ಮಗಳ ಮೇಲೆ ಕೂಡ ಪ್ರಭಾವ ಬೀರಿದವು ಎನ್ನಲಾಗಿದೆ. ಸೂಫಿ ಮತ್ತು ಭಕ್ತಿ ಪಂಥಗಳ ಹಿಂದಿನ ಹಾಗೂ ಇಂದಿನ ಎಲ್ಲ ಶಾಸ್ತ್ರೀಯ ಸಂಗೀತಗಾರರು ಎರಡೂ ಪಂಥಗಳ ಕವಿಗಳು ರಚಿಸಿದ ಹಾಡುಗಳನ್ನು ಹಾಡುತ್ತಾರೆ. ಕಬೀರ ಬರೆದ ಭಜನೆಗಳನ್ನು ಹಾಡದವರು ಯಾರಿದ್ದಾರೆ?

ಬಾಉಲ್‌ ಸಂಗೀತಗಾರರ ಹಾಡುಗಳನ್ನು ರವೀಂದ್ರನಾಥ ಟ್ಯಾಗೋರರು ಅನುವಾದಿಸಿದ್ದಾರೆ. ಟ್ಯಾಗೋರರು ಈ ಬಾಉಲ್‌ಗಳಿಂದ ಪ್ರಭಾವಿತರಾಗಿದ್ದವರು. ಬಾಉಲ್‌ಗಳಲ್ಲಿ ಹಿಂದೂ ವೈಷ್ಣವರು ಮತ್ತು ಸೂಫಿ ಮುಸ್ಲಿಮರು ಹೆಚ್ಚಿದ್ದಾರೆ. ಅವರಲ್ಲಿ ಬಾಂಗ್ಲಾದೇಶದವರೂ ಇದ್ದಾರೆ, ಪಶ್ಚಿಮ ಬಂಗಾಳದವರೂ ಇದ್ದಾರೆ.

ನಮ್ಮ ದೇಶದ ಮಧ್ಯಯುಗದ ಭಕ್ತಿ ಸಾಹಿತ್ಯ, ಜಾನಪದ ಹಾಡುಗಳಲ್ಲಿ ಧಾರ್ಮಿಕ ವಿಭಜನೆಗೆ ಇಂಬು ಕೊಡದ, ಸರ್ವಶಕ್ತನ ಬಗ್ಗೆ ಪ್ರೀತಿ ಇರುವ, ನಿಸರ್ಗವನ್ನು ಪೂಜಿಸುವ ಸಂದೇಶಗಳು ಇವೆ. ಅವುಗಳಲ್ಲೆಲ್ಲ ಒಂದು ಸಾಮಾನ್ಯ ನಂಬಿಕೆಯ ಎಳೆ ಇದೆ. ದೇವರಿಗಾಗಿನ ಹುಡುಕಾಟವು ದೇವಸ್ಥಾನಗಳು, ಮಸೀದಿಗಳು ಅಥವಾ ಚರ್ಚುಗಳ ಮೂಲಕ ನಡೆಯುವುದಲ್ಲ. ಬದಲಿಗೆ, ನಿಮ್ಮೊಳಗಿನ ದೇವರನ್ನು ಹುಡುಕಿಕೊಳ್ಳಬೇಕು. ದೇವನನ್ನು ನೀವು ವೈಯಕ್ತಿಕ ನೆಲೆಯಲ್ಲಿಯೇ ಹುಡುಕಬೇಕು.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !