ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಪ್ರತಿ ನಾಳೆಯೂ ಒಂದು ಸ್ಲೇಟು!

ಮಕ್ಕಳ ಕೈಯಲ್ಲಿ ಇರಬೇಕಾದುದು ಸ್ಮಾರ್ಟ್ ಫೋನಲ್ಲ, ಸ್ಮಾರ್ಟ್‌ ಸ್ಲೇಟ್
Published 13 ಮಾರ್ಚ್ 2024, 23:43 IST
Last Updated 13 ಮಾರ್ಚ್ 2024, 23:43 IST
ಅಕ್ಷರ ಗಾತ್ರ

ಇತ್ತೀಚೆಗೆ ತಳ್ಳುಗಾಡಿಯ ಸೊಪ್ಪಿನ ವ್ಯಾಪಾರಿಯ ನಾಜೂಕು ಕಂಡು ಬೆರಗಾದೆ. ಒಂದು ಸಾಧಾರಣ ಸ್ಲೇಟಿನ ಮೇಲೆ ಆತ ವಿವಿಧ ಸೊಪ್ಪುಗಳ ಧಾರಣೆಯನ್ನು ಅಂದವಾಗಿ ಸೀಮೆಸುಣ್ಣದಲ್ಲಿ ನಮೂದಿಸಿ ಒಂದು ಅಂಚಿಗಿರಿಸಿದ್ದ. ಧ್ವನಿವರ್ಧಕದ ಅಬ್ಬರವಿಲ್ಲದೆ ಆತ ಮೆರೆದ ಆ ಚೊಕ್ಕ ಸರಳ ಸೂಚನೆಯೇ ಸೊಪ್ಪುಸದೆ ಕೊಳ್ಳಲು ಗ್ರಾಹಕರನ್ನು ಸೆಳೆಯುತ್ತಿತ್ತು. ನಾಳೆ ಮತ್ತಷ್ಟು ತರಕಾರಿಗಳು, ಮತ್ತೊಂದು ಬರಹ.

50-60ರ ದಶಕದಲ್ಲಿ ನಾವು ಶಾಲಾ ವಿದ್ಯಾರ್ಥಿಗಳಾಗಿದ್ದಾಗ ಪಡುತ್ತಿದ್ದ ಸಡಗರ ಕಣ್ಣಿಗೆ ಕಟ್ಟಿದಂತಿದೆ. ಪುಸ್ತಕವಿರಲಿ, ಇಲ್ಲದಿರಲಿ, ಇರಲೇಬೇಕು ಒಂದು ಸ್ಲೇಟು, ಅಷ್ಟು ಬಳಪಗಳು. ಗುರುಗಳು ಬಳಪ ತರದವರ ಅಸಹಾಯಕತೆಯನ್ನು ಗಮನಿಸಿ ತುಂಡು ಸೀಮೆಸುಣ್ಣವನ್ನು ದಯಪಾಲಿಸುತ್ತಿದ್ದರು. ಬರೆಯುವುದಕ್ಕಿಂತ ಬಳಪ ಸೇವಿಸುವುದರಲ್ಲೇ ಕೆಲವರ ಆಸಕ್ತಿ ಇತ್ತೆನ್ನಿ! ಸಹಪಾಠಿಗಳಲ್ಲಿ ಕೆಲವರಲ್ಲಾದರೂ ಆಲದೆಲೆಯ ಸಂರಕ್ಷಣೆಯಲ್ಲಿ ಇರುತ್ತಿದ್ದ ತುಣುಕು ಒದ್ದೆ ಬಟ್ಟೆ. ಗೋಗರೆದರೆ ಮಾತ್ರ ಸ್ಲೇಟು ಅಳಿಸಲು ಅದು ಲಭಿಸುತ್ತಿತ್ತು. ಸ್ಲೇಟೆಂಬ ಮಿನಿ ಕಪ್ಪುಹಲಗೆಯ ಮೇಲ್ಭಾಗದಲ್ಲಿ ಅಳವಡಿಸಿದ್ದ ಎಣಿಕೆಯ ಮಣಿಕಟ್ಟು, ಲೆಕ್ಕಾಚಾರವನ್ನು
ಸರಾಗಗೊಳಿಸುತ್ತಿತ್ತು.

ನಮ್ಮ ಶಿಕ್ಷಣ ಪದ್ಧತಿಯು ಆಧುನಿಕ ತಂತ್ರಜ್ಞಾನ ಮತ್ತು ವಿಧಾನಗಳನ್ನು ಅಳವಡಿಸಿಕೊಳ್ಳುತ್ತಾ ಸಾಗುವುದು ಸರಿಯೆ. ಆದರೆ ಪರಂಪರಾಗತ ಕಲಿಕಾ ಪರಿಕರಗಳನ್ನು ಮೂಲೆಗುಂಪಾಗಿಸದೆ ಅವನ್ನು ಪೂರಕ ರೂಪಗಳಲ್ಲಾದರೂ ಬಳಸಬೇಕು. ಬಳಪವು ಜೇಡಿಪದರಕಲ್ಲಿಂದ ತಯಾರಾಗುವ ಮೃದು ವಸ್ತು. ಸ್ಲೇಟಿನಲ್ಲಿ ಬರೆದುದನ್ನು ಅಳಿಸಿ ಮತ್ತೆ ಬರೆಯಬಹುದು. ಹಿಡಿಯಲು ಹಗುರ ಮತ್ತು ದೀರ್ಘ ಬಾಳಿಕೆ. ಹಾಳೆಯ ಮೇಲೆ ಗೀಚುವುದು ತಪ್ಪುತ್ತದೆ. ಹಾಳೆಯ ಉಳಿತಾಯವೂ ಆದೀತು. ಸ್ಲೇಟಿನ ಮೇಲೆ ಬರೆಯುವುದರಿಂದ ಕೈಬರಹ ಉತ್ತಮವಾಗುತ್ತದೆ. ಜೊತೆಗೆ ಕೈನ ಸ್ನಾಯುಗಳಿಗೂ ಒಳ್ಳೆಯ ವ್ಯಾಯಾಮವಾಗುವುದು.

‘ಪ್ರಯೋಗ ಮತ್ತು ದೋಷ’ (ಟ್ರಯಲ್ ಆ್ಯಂಡ್ ಎರರ್) ವಿಧಾನಕ್ಕೆ ಹಾಗೂ ಕರಡು ತಯಾರಿಸಿ
ತಿದ್ದಲು, ಸ್ಫುಟವಾಗಿ ಬರೆಯಲು ಸ್ಲೇಟು ಹೇಳಿ ಮಾಡಿಸಿದ ಸಲಕರಣೆ. ಸ್ಲೇಟು, ಬಳಪ ಹಿಡಿದರೆ ಅವು ‘ಎಲ್ಲವೂ ನಿನ್ನ ಕೈನಲ್ಲಿ ಇವೆ’ ಎನ್ನುತ್ತವೆ! ಮನುಷ್ಯನ ನಾಗರಿಕತೆಗೆ ನಾಂದಿ ಹಾಡಿದ್ದೇ ಸ್ಲೇಟು. ಅವನ ಮನಸ್ಸಿಗೆ ಅದು ಉಪಮೆಯಾಗಿದೆ.

ಚಿತ್ರ ರಚನೆಗೆ ಸ್ಲೇಟು ಕ್ಯಾನ್ವಾಸಾಗುತ್ತದೆ. ಹಿರಿಯರ ಮಾರ್ಗದರ್ಶನದಲ್ಲಿ ಮಕ್ಕಳು ಅಕ್ಷರಾಭ್ಯಾಸ ಪ್ರಾರಂಭಿಸುವುದು, ಸರಳ ಹಾಗೂ ವಕ್ರ ರೇಖೆಗಳನ್ನು ರಚಿಸುವುದೇ ಒಂದು ರೋಚಕ ಅನುಭವ. ರೂಪಾಂತರಗೊಂಡ ನುಣುಪಾದ ಶಿಲೆಯಾದ ಸ್ಲೇಟು ರಂಧ್ರರಹಿತ ಮತ್ತು ನೀರು, ಬೆಂಕಿ ಹಾಗೂ ವಿದ್ಯುತ್ ಪ್ರತಿರೋಧಕ. ಸ್ವಾಭಾವಿಕ ಸ್ಲೇಟನ್ನು ಯಾವುದೇ ರಾಸಾಯನಿಕ ಉತ್ಸರ್ಜನಗಳಿಲ್ಲದೆ ಮರುಬಳಕೆ ಮಾಡಬಹುದು.

1960ರ ದಶಕದಿಂದ ಪಿಂಗಾಣಿ ಗಾಜಿನ ಲೇಪದ ಹಸಿರು ಬಣ್ಣದ ಸುಧಾರಿತ ಸ್ಲೇಟ್ ಸಹ ಬಳಕೆಗೆ ಬಂದಿತು. ಅದು ಮತ್ತಷ್ಟು ಹಗುರ, ಹೆಚ್ಚು ತಾಳಿಕೆ ಮಾತ್ರವಲ್ಲ ಸಾಗಣೆಯೂ ಸುಲಭ. ‘ಇ ಸ್ಲೇಟ್’, ‘ಮ್ಯಾಜಿಕ್ ಸ್ಲೇಟ್’ನಂತಹ ಆಧುನಿಕತೆಗೂ ಮಕ್ಕಳು ತೆರೆದುಕೊಳ್ಳಬೇಕು. ಸ್ಲೇಟ್ ಮೇಲೆ ಸ್ಟೈಲಸ್ (ಚೂಪಾದ ಸಲಕರಣೆ) ಬಳಸಿ ಅಂಧರು ಬರೆಯಬಹುದು ಮತ್ತು ಯಾರ ಸಹಾಯವೂ ಇಲ್ಲದೆ ಓದಬಹುದು.

ಸ್ಲೇಟು ಒಂದು ತೆರೆದುಕೊಳ್ಳುವ ಕಾವ್ಯ. ಖಾಲಿ ಸ್ಲೇಟಿನಲ್ಲಿ ಏನೆಲ್ಲ ಸೃಷ್ಟಿಸಬಹುದು. ಒಮ್ಮೆ ಯಶಸ್ಸು, ಇನ್ನೊಮ್ಮೆ ವೈಫಲ್ಯ. ನಿನ್ನೆ ಹೇಗೂ ಇರಲಿ, ಆದರೆ ಪ್ರತಿ ನಾಳೆಯೂ ಒಂದು ಸ್ವಚ್ಛ ಸ್ಲೇಟು, ಹೊಸ
ಸಾಧ್ಯತೆಗಳು.

ಲ್ಯಾಪ್‌ಟಾಪ್ ಮತ್ತು ಪೆನ್, ಪೇಪರ್ ಬಳಕೆ ಪರಿಸರವನ್ನು ಭಿನ್ನ ಭಿನ್ನವಾಗಿ ಸೊರಗಿಸುತ್ತದೆ. ಲ್ಯಾಪ್‌ಟಾಪ್ ಚಾಲನೆಗೆ ವಿದ್ಯುತ್ ಬೇಕು. ಅಲ್ಲದೆ ಇತರ ವಿದ್ಯುನ್ಮಾನ ಉಪಕರಣಗಳಂತೆ ಅದರ ಉತ್ಪಾದನೆ ಹಾಗೂ ಉಪಯೋಗದ ನಂತರ ವಿಲೇವಾರಿಯಿಂದ ಪರಿಸರ ಮಾಲಿನ್ಯ. ಪ್ರಾಥಮಿಕ ಶಾಲೆಯ ಒಬ್ಬ ವಿದ್ಯಾರ್ಥಿ ವರ್ಷಕ್ಕೆ ಬರೆಯಲು ಬಳಸುವುದು ಸರಾಸರಿ 1,200 ಹಾಳೆಗಳು. ಅದಕ್ಕಾಗಿ ಒಂದು ವೃಕ್ಷದ ಒಂದಷ್ಟು ಭಾಗವನ್ನು ಕಡಿಯಬೇಕಾಗುತ್ತದೆ. ಹಾಗಾಗಿ, ಸ್ಲೇಟು, ಬಳಪ ಉಪಯೋಗಿಸಿದರೆ ಅಷ್ಟರ
ಮಟ್ಟಿಗೆ ಕಾಡನ್ನು ಉಳಿಸಬಹುದು. ರದ್ದಿ ಕಾಗದ ಸೃಷ್ಟಿಸುವ ಸವಾಲೇನು ಕಡಿಮೆಯೇ? ಸುಟ್ಟರೆ ಹೊಗೆ, ಪುನರ್‌ಬಳಕೆಯ ಪ್ರಕ್ರಿಯೆ ಅಗ್ಗವೇನೂ ಅಲ್ಲವಲ್ಲ.

ಮಗುವಿನ ಸಮಗ್ರ ಬೆಳವಣಿಗೆಗೆ ಮುದ್ರಿತ ಜ್ಞಾನವೊಂದೇ ಸಾಲದು. ಮಗು ಸ್ವತಃ ಗ್ರಹಿಸಿ,
ಗ್ರಹಿಸಿದ್ದನ್ನು ಬರೆಯಬೇಕು. ಬರೆದಿದ್ದರಲ್ಲಿ ತಪ್ಪುಗಳಿದ್ದರೆ ತಿದ್ದಿ ಒಪ್ಪಾಗಿಸಬೇಕು. ಸ್ಲೇಟಲ್ಲದೆ ಮತ್ತ್ಯಾವ ಸಲಕರಣೆಯಲ್ಲಿ ಇದು ಸಾಧ್ಯ? ಮಕ್ಕಳ ಕೈಯಲ್ಲಿ ಇರಬೇಕಾದದ್ದು ಸ್ಮಾರ್ಟ್ ಫೋನಲ್ಲ, ಅಷ್ಟೇ ಕಿರಿದಾದರೂ ಸರಿ, ಒಂದು ಸ್ಲೇಟು.

ರೇಖಾ ಪಾಟೀಲ್ ಅವರ ಮಕ್ಕಳ ಕವಿತೆಯೊಂದು ಸ್ಲೇಟು-ಬಳಪದ ವೈಭವವನ್ನು ಮನಮುಟ್ಟಿಸುತ್ತದೆ:

‘ಸ್ಲೇಟು ಬಳಪದ ಗಮ್ಮತ್ತು,

ಈಗೀನ ಮಕ್ಕಳಿಗೇನು ಗೊತ್ತು?

ನೋಟ್ಸು, ಪ್ಯಾಡು, ಫೋನು 

ಕೈಯಲ್ಲಿ ಮೂರೂ ಹೊತ್ತು... 

ಹೋಗುತಿದೆ ಎಲ್ಲವೂ ಮರೆತು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT