ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಸಾಮಾಜಿಕ ಕ್ಷೋಭೆ ಮತ್ತು ಸಾಂಸ್ಕೃತಿಕ ನೆಲೆ

ಸಮಾಜವನ್ನು ಸರಿದಿಕ್ಕಿಗೆ ಕೊಂಡೊಯ್ಯುವ ಹೊಣೆಯನ್ನು ಮರೆತೆವೇಕೆ?
Published 11 ಮಾರ್ಚ್ 2024, 0:08 IST
Last Updated 11 ಮಾರ್ಚ್ 2024, 0:08 IST
ಅಕ್ಷರ ಗಾತ್ರ

ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಲು ಹಾದಿಗಳನ್ನು ಹುಡುಕುತ್ತಾ, ನಾಳೆಗಳನ್ನು ಎಣಿಸುತ್ತಾ, ಆ ಹೊತ್ತಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತಾ ಸದಾ ದುಡಿಮೆಯಲ್ಲಿ ತೊಡಗಿರುವ ಅಸಂಖ್ಯಾತ ಜನತೆ ಆಡಳಿತ ವ್ಯವಸ್ಥೆಯಿಂದ ಬಯಸುವುದು ಬರೀ ಶಾಂತಿ, ಸೌಹಾರ್ದದ ವಾತಾವರಣವನ್ನಷ್ಟೆ. ಆಡಳಿತ
ಪರಿಭಾಷೆಯಲ್ಲಿ ಕಾನೂನು-ಸುವ್ಯವಸ್ಥೆ ಎಂದು ಬಣ್ಣಿಸಲಾಗುವ ಈ ವಾತಾವರಣವನ್ನು ನಿತ್ಯ ಕಾಯಕ ಜೀವಿಗಳು ತಮ್ಮ ಬದುಕಿನ ಹಾದಿಯಲ್ಲಿ ಅತ್ಯವಶ್ಯವಾದ ಸೋದರಭಾವ ಹಾಗೂ ಸಮನ್ವಯದ ನೆಲೆಗಳಲ್ಲಿ ಕಾಣಲು ಬಯಸುತ್ತಾರೆ.

ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಎಕ್ಸ್‌, ವಾಟ್ಸ್‌ಆ್ಯಪ್‌ನಂತಹ ವಿದ್ಯುನ್ಮಾನ ಜಗತ್ತಿನ ಪರಿವೆಯೇ ಇಲ್ಲದೆ, ಇದ್ದರೂ ಅವುಗಳ ಪ್ರಭಾವಕ್ಕೊಳಪಡದೆ, ಸಮಾಜಕ್ಕೆ ಅಗತ್ಯವಾದ ಜೀವನಾವಶ್ಯ ಪರಿಕರಗಳನ್ನು
ಉತ್ಪಾದಿಸುವ ಈ ಶ್ರಮಜೀವಿಗಳನ್ನು ರಸ್ತೆ, ರೈಲು ಕಾಮಗಾರಿಗಳಿಂದ ಮುಗಿಲೆತ್ತರದ ಕಟ್ಟಡ ನಿರ್ಮಾಣದವರೆಗೂ ಕಾಣಬಹುದು. ಮತ್ತೊಂದು ಬದಿಯಲ್ಲಿ, ಕುಗ್ರಾಮದ ಹೊಲ ಗದ್ದೆಗಳಿಂದ ಹಿಡಿದು ಬೃಹತ್‌ ಪ್ಲಾಂಟೇಷನ್‌ಗಳವರೆಗೂ ಗುರುತಿಸಬಹುದು. ಭಾರತವು ಡಿಜಿಟಲ್‌ ಆರ್ಥಿಕತೆಯಲ್ಲಿ ಎಷ್ಟೇ ಮುನ್ನಡೆ‌ ಸಾಧಿಸಿದ್ದರೂ, ನಿಜವಾದ ಭಾರತವನ್ನು ಪ್ರತಿನಿಧಿಸುವ ಬಹುಸಂಖ್ಯಾತರು ಈ ಶ್ರಮಜೀವಿಗಳೇ ಆಗಿರುತ್ತಾರೆ. ಜಾತಿ ಶ್ರೇಷ್ಠತೆ, ಅಹಮಿಕೆ, ಧಾರ್ಮಿಕ ಪಾರಮ್ಯ, ಸಾಂಸ್ಕೃತಿಕ ಆಧಿಪತ್ಯ ಇದಾವುದರ ಗೊಡವೆಯೂ ಇಲ್ಲದೆ, ಈ ಬಹುಸಂಖ್ಯಾತ ವರ್ಗ ದೇಶ ಕಟ್ಟುವ ಪ್ರಕ್ರಿಯೆಯಲ್ಲಿ ನಿಷ್ಠೆಯಿಂದ ತೊಡಗಿರುತ್ತದೆ.

ನವ ಉದಾರವಾದದ ಮಾರುಕಟ್ಟೆ ಆರ್ಥಿಕತೆ ಮತ್ತು ಬಲಪಂಥೀಯತೆ ಪೋಷಿಸುತ್ತಿರುವ ಸಾಂಸ್ಕೃತಿಕ ರಾಜಕಾರಣವು ವ್ಯವಸ್ಥೆಯು ಸೃಷ್ಟಿಸುತ್ತಿರುವ ಅಸಮಾನತೆಯ ಕಂದಕಗಳನ್ನು ಮರೆಮಾಚುವ ಸಲುವಾಗಿಯೇ ಯುವಪೀಳಿಗೆಯನ್ನು ಈ ದುಡಿಮೆಯ ಜಗತ್ತಿನಿಂದಲೇ ಭ್ರಮಾಧೀನಗೊಳಿಸುತ್ತಿದೆ. ಸಮಾಜದಲ್ಲಿ ಕ್ಷೋಭೆಯನ್ನು ಹೆಚ್ಚಿಸುವ ವಿನೂತನ ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ. ಶಾಂತಿ, ಸಹಬಾಳ್ವೆ ಮತ್ತು ಮಾನವತೆಯನ್ನು ಬೋಧಿಸಬೇಕಾದ ಧರ್ಮಕೇಂದ್ರಗಳು ತಾತ್ವಿಕವಾಗಿ, ಗ್ರಾಂಥಿಕವಾಗಿ ಇದನ್ನೇ ಸಾರುತ್ತಿದ್ದರೂ ಮತ್ತೊಂದು ಬದಿಯಲ್ಲಿ ಇದೇ ಧರ್ಮಶ್ರದ್ಧೆ ಮತ್ತು ನಂಬಿಕೆಗಳು ಸಮಾಜದಲ್ಲಿ ಭಿನ್ನಭೇದಗಳನ್ನು ವಿಭಿನ್ನ ನೆಲೆಗಳಲ್ಲಿ ಸೃಷ್ಟಿಸುತ್ತಿವೆ. ದ್ವೇಷ ರಾಜಕಾರಣ ಎಂಬ ರಾಜಕೀಯ ಪರಿಭಾಷೆಯಿಂದಾಚೆ ನೋಡಿದಾಗ ಈ ದ್ವೇಷಾಸೂಯೆಗಳ ಮೂಲವನ್ನು ಇದೇ ಧಾರ್ಮಿಕ ಬೋಧನೆಗಳ ತಾತ್ವಿಕ ನೆಲೆಗಳ ನಡುವೆ ಗುರುತಿಸಬಹುದು.

ಎಲ್ಲರನ್ನೂ ಪ್ರೀತಿಸಿ ಎಂಬ ಗ್ರಾಂಥಿಕ ಉದ್ಘೋಷವನ್ನು ಸಾಕಾರಗೊಳಿಸಬೇಕಾದರೆ ವಿವಿಧ ಧಾರ್ಮಿಕ ನೆಲೆಗಳು ಸಮ್ಮಿಳಿತವಾಗುವುದು ಅತ್ಯವಶ್ಯ. ಇಂತಹ ಸೌಹಾರ್ದದ, ಸಮನ್ವಯದ ಪ್ರಸಂಗಗಳು ಸಮಾಜದ ವಿವಿಧ ಸ್ತರಗಳಲ್ಲಿ ಕಾಣಿಸಿಕೊಳ್ಳುತ್ತಿರುವಾಗಲೇ ಮತ್ತೊಂದೆಡೆ, ಧಾರ್ಮಿಕ ಅಸ್ಮಿತೆಗಳೇ ಮನುಷ್ಯ ಮನುಷ್ಯನ ನಡುವೆ ಗೋಡೆಗಳನ್ನು ಕಟ್ಟುವ ಅಥವಾ ಅಸ್ಮಿತೆಗಳ ಕೋಟೆಗಳನ್ನು ನಿರ್ಮಿಸುವ ಪ್ರಕ್ರಿಯೆಯನ್ನೂ ನಾವು ಗಮನಿಸುತ್ತಿದ್ದೇವೆ. ಈ ವಿಕೃತ ಬೌದ್ಧಿಕತೆಯ ಪರಿಣಾಮವಾಗಿಯೇ ಸಮಾಜದಲ್ಲಿ ನಡೆಯುವ ಪ್ರತಿಯೊಂದು ಅಪರಾಧವೂ ಪಾತಕ ಕೃತ್ಯವೂ ಸಾಪೇಕ್ಷತೆಯನ್ನು ಪಡೆದುಕೊಂಡು, ಸಾಮುದಾಯಿಕ ನೆಲೆಯಲ್ಲಿ ನಿರ್ವಚನೆಗೊಳಗಾಗುತ್ತದೆ. ಒಂದು ಬಾಂಬ್‌ ಸ್ಫೋಟ, ಒಂದು ಜಿಂದಾಬಾದ್‌ ಘೋಷಣೆ ಅಥವಾ ಒಂದು ಅತ್ಯಾಚಾರ ಹೀಗೆ ಯಾವುದೇ ಪಾತಕ ಕೃತ್ಯವಾದರೂ ಅಲ್ಲಿ ಧಾರ್ಮಿಕ ಅಸ್ಮಿತೆಗಳು ನುಸುಳುತ್ತವೆ.

ವ್ಯಕ್ತಿಗತ ನೆಲೆಯಲ್ಲಿ ಅಪರಾಧವನ್ನು ನಿರ್ವಚಿಸುವ ವ್ಯವಧಾನವನ್ನು ಎಂದೋ ಕಳೆದುಕೊಂಡಿರುವ ಭಾರತೀಯ ಸಮಾಜ, ವ್ಯಷ್ಟಿಯ ಪಾತಕಗಳನ್ನೂ ಸಮಷ್ಟಿಗೆ ಆರೋಪಿಸಿ ಇಡೀ ಸಮುದಾಯಗಳನ್ನು ಕಟಕಟೆಯಲ್ಲಿ ನಿಲ್ಲಿಸುವ ಒಂದು ಪರಿಪಾಟವನ್ನು ಸೃಷ್ಟಿಸಿಕೊಂಡಿದೆ. ಹಾಗಾಗಿಯೇ ಪ್ರತಿಯೊಂದು ಪಾತಕದ ಸಂದರ್ಭದಲ್ಲೂ ಅಪರಾಧಿಯನ್ನು ಮತ್ತು ಸಂತ್ರಸ್ತರನ್ನು ಯಾವುದೋ ಒಂದು ಅಸ್ಮಿತೆಯ ಚೌಕಟ್ಟಿಗೆ ಸಿಲುಕಿಸುವ ಸಾಪೇಕ್ಷತಾ ಸಿದ್ಧಾಂತ ಇಂದು ಪ್ರಚಲಿತವಾಗಿದೆ. ಜಾತಿ, ಮತ, ಧರ್ಮಗಳ ಚೌಕಟ್ಟುಗಳಿಂದಾಚೆ ನೋಡಿದಾಗ, ಈ ಪಾತಕ ಲೋಕ ತನ್ನೆಡೆಗೆ ಆಕರ್ಷಿಸುತ್ತಿರುವುದು
ಯಾರನ್ನು, ಯಾವ ವರ್ಗದವರನ್ನು, ಯಾವಸ್ತರದವರನ್ನು ಎಂಬ ವಾಸ್ತವದ ಅರಿವಾಗುತ್ತದೆ.

ಮನುಷ್ಯರ ನಡುವೆ ಪರಸ್ಪರ ದ್ವೇಷ ಹರಡಲು ಅತ್ಯಾಧುನಿಕ ವಿದ್ಯುನ್ಮಾನ ಸಾಧನಗಳನ್ನು ಬಳಸುವ ಒಂದು ಬೌದ್ಧಿಕ ವರ್ಗ ತಾನೇ ಸೃಷ್ಟಿಸುವ ಪಾತಕಲೋಕದ ಸದಸ್ಯರನ್ನು ಅಲಕ್ಷಿತ, ವಂಚಿತ ಸಮುದಾಯಗಳ ಯುವ ಸಂಕುಲದ ನಡುವಿನಿಂದ ಆಯ್ಕೆ ಮಾಡಿಕೊಳ್ಳುತ್ತದೆ.

ಅಪರಾಧ ಲೋಕದ ಕಡೆಗೆ ನೋಡುತ್ತಾ ಒಂದು ಸಮುದಾಯದ ಅಥವಾ ವರ್ಗದ ಸದಸ್ಯರನ್ನು ಕಟಕಟೆಯಲ್ಲಿ ನಿಲ್ಲಿಸುವ ಮೇಲ್‌ಸ್ತರದ ಬೌದ್ಧಿಕ ಮನಸುಗಳು, ಈ ಪಾತಕ ಜಗತ್ತಿನ ಉತ್ಪತ್ತಿಯಲ್ಲಿ ತಮ್ಮ ಕೊಡುಗೆಯೂ ಇದೆ ಎನ್ನುವುದನ್ನು ಗಮನಿಸುವುದೇ ಇಲ್ಲ. ಚಿಕಿತ್ಸಕ ಗುಣವನ್ನು ಕಳೆದುಕೊಂಡಿರುವ ಸಮಾಜದಲ್ಲಿ ಮಾತ್ರ ಇಂತಹ ಸಂದಿಗ್ಧವನ್ನು ಕಾಣಲು ಸಾಧ್ಯ. ಬಹುಶಃ ಭಾರತೀಯ ಸಮಾಜ ತನ್ನೆಲ್ಲಾ ಆಧುನಿಕತೆ, ನಾಗರಿಕತೆಯ ನಡುವೆಯೂ ಈ ಚಿಕಿತ್ಸಕ ಗುಣವನ್ನು ಕಳೆದುಕೊಂಡು ಬೆತ್ತಲಾಗಿದೆ ಎನಿಸುತ್ತದೆ. ಹಾಗಾಗಿಯೇ ವಿಶಾಲ ಸಮಾಜಕ್ಕೆ ಅಪರಾಧ ಕಾಣುತ್ತಿದೆ, ಅಪರಾಧಿ ಕಾಣುತ್ತಿದ್ದಾನೆ, ಆದರೆ ಪಾತಕ ಜಗತ್ತಿನ ಆದಿಮೂಲ ಗೋಚರಿಸುತ್ತಿಲ್ಲ ಅಥವಾ ಕಂಡೂ ಕಾಣದಂತೆ ಮಗುಮ್ಮಾಗಿದೆ. ನವ ಉದಾರವಾದ ಮತ್ತು ಬಲಪಂಥೀಯ ಸಾಂಸ್ಕೃತಿಕ ರಾಜಕಾರಣಕ್ಕೆ ಇದೇ ಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT