ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಮಹಿಳಾ ಮೀಸಲಾತಿ ಮತ್ತು ತಾತ್ವಿಕ ಸವಾಲು

ಸಾಂಸ್ಥಿಕ ತಡೆಗೋಡೆಯನ್ನು ದಾಟಿದ ನಂತರವೂ ಈ ಮಸೂದೆಯು ಶಾಸನವಾಗಿ ಅನುಷ್ಠಾನಗೊಳ್ಳಲು ಇನ್ನೂ ಏಳು ವರ್ಷ ಕಾಯಬೇಕಿರುವುದು ಯಾವ ಕಾರಣಕ್ಕಾಗಿ?
Published 22 ಸೆಪ್ಟೆಂಬರ್ 2023, 23:03 IST
Last Updated 22 ಸೆಪ್ಟೆಂಬರ್ 2023, 23:03 IST
ಅಕ್ಷರ ಗಾತ್ರ

ಹಿಂದಿನ ಮೂರು ದಶಕಗಳಲ್ಲಿ ಭಾರತದ ಅಧಿಕಾರ ರಾಜಕಾರಣದ ಆವರಣದಲ್ಲಿ ಕಾಣಬಹುದಾದ ಸಮಾನ ಎಳೆ ಎಂದರೆ, ಲಿಂಗಸೂಕ್ಷ್ಮತೆಯ ಕೊರತೆ ಮತ್ತು ವ್ಯಾವಹಾರಿಕ ಪ್ರಜ್ಞೆಯ ಹೆಚ್ಚಳ. ತಳಮಟ್ಟದ, ಅವಕಾಶವಂಚಿತ ಜನರನ್ನು ತಲುಪುವಂತಹ ಶಾಸನಗಳನ್ನು ಜಾರಿಗೊಳಿಸುವಾಗಲೂ ಮುಂದಿನ ಚುನಾವಣೆಗಳಲ್ಲಿ ಲಭ್ಯವಾಗಬಹುದಾದ ಲಾಭ–ನಷ್ಟಗಳ ಲೆಕ್ಕಾಚಾರದೊಂದಿಗೇ ಮುಂದಡಿ ಇಡುವುದು, ಹಾಲಿ ಕಾಯ್ದೆಗಳಿಗೆ ತಿದ್ದುಪಡಿ ಮಾಡುವುದು ಅಥವಾ ಹೊಸ ಮಸೂದೆಗಳನ್ನು ಮಂಡಿಸುವುದು ಈ ಅವಧಿಯಲ್ಲಿ ಗುರುತಿಸಬಹುದಾದ ವಿದ್ಯಮಾನ.

ಸಂಸತ್ತು ಅಥವಾ ವಿಧಾನಸಭೆಯಲ್ಲಿ ಕುಳಿತಿರುವ ಜನಪ್ರತಿನಿಧಿಗಳಿಗೆ ತಾವು ಸಾಂವಿಧಾನಿಕ ಶಿಸ್ತಿಗೊಳಪಟ್ಟ ಸಿಪಾಯಿಗಳು, ಸಮಸ್ತ ಜನಕೋಟಿಯ ಪ್ರಗತಿಗಾಗಿ ದುಡಿಯಲು ಆಯ್ಕೆ ಮಾಡಲಾಗಿರುವ ‘ಪ್ರತಿನಿಧಿಗಳು’ ಎಂಬ ಅರಿವೇ ಇಲ್ಲದಂತಹ ಪರಿಸ್ಥಿತಿಯನ್ನು ಅಸ್ಮಿತೆಕೇಂದ್ರಿತ ಸಾಂಸ್ಕೃತಿಕ ರಾಜಕಾರಣ ಸೃಷ್ಟಿಸಿದೆ.

ಈ ವಾತಾವರಣದ ನಡುವೆಯೂ ಹೊರಹೊಮ್ಮಿದ ಒಂದು ಮಹತ್ವಾಕಾಂಕ್ಷಿ ಮಸೂದೆ ಎಂದರೆ ಮಹಿಳೆಯರಿಗೆ ಶಾಸನಸಭೆಗಳಲ್ಲಿ ಶೇ 33ರಷ್ಟು ಮೀಸಲಾತಿ ನೀಡುವ ಒಂದು ಮಸೂದೆ. ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳಾ ಸಮೂಹಕ್ಕೆ ಮೂರನೇ ಒಂದರಷ್ಟು ಸ್ಥಾನಗಳನ್ನು ನೀಡುವ ಅತಾರ್ಕಿಕ ನಿಲುವು ಸಾರ್ವಕಾಲಿಕ ಪ್ರಶ್ನೆಯಾಗಿ ಉಳಿದರೂ, ಪುರುಷಾಧಿಪತ್ಯದ ಆಡಳಿತ ವ್ಯವಸ್ಥೆಯು ಈ ಮಟ್ಟಿಗಾದರೂ ಮಹಿಳೆಯರಿಗೆ ಪ್ರಾತಿನಿಧ್ಯವನ್ನು ನೀಡಲು ಮುಂದೆ ಬಂದಿದ್ದು ಕೊಂಚ ಮಟ್ಟಿಗೆ ಕ್ರಾಂತಿಕಾರಕವೇ ಎನ್ನಬಹುದು. ಆದರೆ ಈ ಮಸೂದೆ ಯಾವುದೇ ರಾಜಕೀಯ ಪಕ್ಷದ ಅಥವಾ ಚಿಂತನೆಯ ಔದಾರ್ಯದ ಫಲ ಅಲ್ಲ ಎನ್ನುವ ವಾಸ್ತವವನ್ನೂ ಪಕ್ಷ ರಾಜಕಾರಣದ ವಾರಸುದಾರರು ಒಪ್ಪಿಕೊಳ್ಳಲೇಬೇಕು. ದಶಕಗಳ ಮಹಿಳಾ ಹೋರಾಟಗಳಲ್ಲಿ ನಿರಂತರವಾಗಿ ಪ್ರವಹಿಸಿರುವ ಒಂದು ಸಾಂವಿಧಾನಿಕ ಹಕ್ಕೊತ್ತಾಯವೇ ಆಡಳಿತ ವ್ಯವಸ್ಥೆಯಲ್ಲಿ ಸಮಪಾಲು ಮತ್ತು ಘನತೆಯ ಸ್ಥಾನಮಾನ.

1980ರ ನಂತರದಲ್ಲಿ ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಪಂಚಾಯಿತಿ ಮಟ್ಟದಲ್ಲಿ, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ನೀತಿ ಜಾರಿಯಲ್ಲಿ ಇರುವುದಾದರೂ, ಸಂಸತ್ತು ಹಾಗೂ ವಿಧಾನಸಭೆಗಳಲ್ಲಿ ಈ ಹಕ್ಕು ಪಡೆಯಲು ಆಧುನಿಕ ಭಾರತಕ್ಕೆ ಮೂರು–ನಾಲ್ಕು ದಶಕಗಳೇ ಬೇಕಾದವು. 1996ರಲ್ಲಿ ಮಂಡನೆಯಾದ ಈ ಮಸೂದೆಯನ್ನು ಜಾರಿಗೊಳಿಸುವ ಪ್ರಯತ್ನಗಳು ಆನಂತರದ ಸರ್ಕಾರಗಳ ಅವಧಿಯಲ್ಲೂ ನಡೆದವು. ಆದರೂ ಸ್ಥಾಪಿತ ವ್ಯವಸ್ಥೆಯ ವಾರಸುದಾರರಂತೆ ವರ್ತಿಸುವ ಪಿತೃಪ್ರಾಧಾನ್ಯದ ಪರಿಚಾರಕರು ಪ್ರತಿಬಾರಿಯೂ ಈ ಉದ್ದೇಶವು ಕ್ರಿಯೆಗೆ ಇಳಿಯದಂತೆ ಮಾಡುವಲ್ಲಿ ಸಫಲರಾಗಿರುವುದು ಚರಿತ್ರೆಯ ವಿಪರ್ಯಾಸ.

13 ವರ್ಷಗಳ ಹಿಂದೆ ರಾಜ್ಯಸಭೆಯಲ್ಲಿ ಅನುಮೋದನೆಗೊಂಡರೂ ಈ ಮಸೂದೆ ಲೋಕಸಭೆಯ ಹೊಸಿಲನ್ನು ದಾಟಲು ಸಾಧ್ಯವಾಗಲಿಲ್ಲ. ಆ ಸಂದರ್ಭದಲ್ಲಿ ತಮ್ಮದೇ ಆದ ತಾತ್ವಿಕ ನಿಲುಮೆಗಳಿಗಾಗಿ ಮಸೂದೆಯನ್ನು ವಿರೋಧಿಸಿದ ಹಲವು ನಾಯಕರು ಇಂದು ಎದೆತಟ್ಟಿಕೊಳ್ಳುತ್ತಿರುವುದು ಸಮಕಾಲೀನ ಭಾರತದ ವಿಡಂಬನೆ.

ಇಷ್ಟೆಲ್ಲಾ ಗೊಂದಲಗಳ ನಡುವೆಯೂ ಮಹಿಳಾ ಮೀಸಲಾತಿ ಮಸೂದೆಯನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿ, ಉಭಯ ಸದನಗಳಲ್ಲಿ ಅನುಮೋದನೆ ಪಡೆದಿದೆ. ಮೂಲತಃ ಅಡ್ಡಿಯಾಗಬಹುದಾಗಿದ್ದ ಈ ಸಾಂಸ್ಥಿಕ ತಡೆಗೋಡೆಯನ್ನು ದಾಟಿದ ನಂತರವೂ ಈ ಮಸೂದೆಯು ಅನುಷ್ಠಾನಗೊಳ್ಳಲು ಇನ್ನೂ ಏಳು ವರ್ಷಗಳು ಕಾಯಬೇಕಿರುವುದು ಯಾವ ಕಾರಣಕ್ಕಾಗಿ? 2026ರಲ್ಲಿ ನಡೆಯಲಿರುವ ಜನಗಣತಿ, ತದನಂತರ ನಡೆಯಲಿರುವ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆಯ ನಂತರ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸುವುದೇ ಆದರೆ, 2029ರ ಚುನಾವಣೆಯನ್ನೂ ದಾಟಿಹೋಗುವ ಸಾಧ್ಯತೆಯಿದೆ.

2014ರಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ತನ್ನ ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿದ್ದಂತೆ ಬಿಜೆಪಿ ನೇತೃತ್ವದ ಸರ್ಕಾರ ಈ ಮಸೂದೆಯನ್ನು ಮಂಡಿಸಿದ್ದಲ್ಲಿ, ಈ ವೇಳೆಗೆ ಒಂದು ನಿರ್ಣಾಯಕ ಹಂತ ತಲುಪಬಹುದಿತ್ತು. ಆದರೆ 9 ವರ್ಷ ಮೌನ ವಹಿಸಿ 2024ರ ಚುನಾವಣೆಗೆ ಮುನ್ನ ಮಸೂದೆಯನ್ನು ಮಂಡಿಸಿರುವುದು ಪಕ್ಷದ ರಾಜಕೀಯ ಚಾಣಾಕ್ಷತನವನ್ನು ತೋರಿಸುತ್ತದೆ.

ಮಹಿಳೆಯರಿಗೆ ರಾಜಕೀಯ ಅಧಿಕಾರ ಮತ್ತು ಪ್ರಾತಿನಿಧ್ಯ ನೀಡಬಹುದಾದ ಈ ಮಸೂದೆ ತಾತ್ವಿಕವಾಗಿ ನಮ್ಮ ಮುಂದಿದ್ದರೂ ವಾಸ್ತವವಾಗಿ ಇದು ಪುರುಷಾಧಿಪತ್ಯದ ಬುಡವನ್ನು ಸದ್ಯಕ್ಕಂತೂ ಅಲುಗಾಡಿಸುವುದಿಲ್ಲ. ಜನಗಣತಿ, ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಗಳು ಮುಂದೂಡಲ್ಪಟ್ಟಷ್ಟೂ ಮಸೂದೆಯೂ ಇದೇ ಸ್ಥಿತಿಯಲ್ಲಿ ಮುಂದುವರಿಯುತ್ತದೆ. ಪಿತೃಪ್ರಧಾನ ಸಮಾಜ ಮತ್ತು ಪುರುಷಾಧಿಪತ್ಯದ ರಾಜಕೀಯ ವ್ಯವಸ್ಥೆಯಲ್ಲಿ ಲಿಂಗಸೂಕ್ಷ್ಮತೆ ಮತ್ತು ಸ್ತ್ರೀ ಸಂವೇದನೆಯ ಒಂದಂಶವಾದರೂ ಇದ್ದಿದ್ದಲ್ಲಿ ಈ ಮಸೂದೆ ಮೂರು ದಶಕಗಳ ಕಾಲ ನನೆಗುದಿಗೆ ಬೀಳುತ್ತಿರಲಿಲ್ಲ.

ಬಿಲ್ಕಿಸ್‌ ಬಾನು ಪ್ರಕರಣ, ಮಹಿಳಾ ಕುಸ್ತಿಪಟುಗಳ ಹೋರಾಟ, ಮಣಿಪುರದ ಬೆತ್ತಲೆ ಮೆರವಣಿಗೆ... ಇಂತಹ ಪ್ರಸಂಗಗಳಲ್ಲಿ, ಈಗಾಗಲೇ ಅಧಿಕಾರ ರಾಜಕಾರಣದ ಫಲಾನುಭವಿಗಳಾಗಿರುವ ಬಹುತೇಕ ಮಹಿಳಾ ಪ್ರತಿನಿಧಿಗಳ ತಣ್ಣನೆಯ ಮೌನವನ್ನು ಗಮನಿಸಿದಾಗ, ಭಾರತದ ಪಿತೃಪ್ರಧಾನ ರಾಜಕೀಯ ವ್ಯವಸ್ಥೆಯು ಆಡಳಿತ ವಲಯದಲ್ಲಿ ಸ್ತ್ರೀ ಸಂವೇದನೆಯನ್ನು ಹೇಗೆ ನಿಷ್ಕ್ರಿಯಗೊಳಿಸಿದೆ ಎನ್ನುವುದು ಅರ್ಥವಾಗುತ್ತದೆ.

ಈ ತಾತ್ವಿಕ ಸವಾಲುಗಳ ನಡುವೆಯೇ ಮಹಿಳಾ ಮೀಸಲಾತಿ ಮಸೂದೆ ಆದಷ್ಟು ಬೇಗ ಜಾರಿಯಾಗಲಿ. ಆ ನಿರೀಕ್ಷೆಯಲ್ಲಿ ಇರೋಣವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT