ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ| ವಿಸ್ತರಿಸುತ್ತಿರುವ ಅಮಲಿನ ಜಾಲ

ವೈದ್ಯರು, ವೈದ್ಯ ವಿದ್ಯಾರ್ಥಿಗಳೇ ಡ್ರಗ್ಸ್‌ ಜಾಲದಲ್ಲಿ ಸಿಲುಕಿರುವ ಮಂಗಳೂರಿನ ಪ್ರಸ್ತುತ ವಿದ್ಯಮಾನ ಈ ಜಾಲದ ಕರ
Last Updated 26 ಜನವರಿ 2023, 19:30 IST
ಅಕ್ಷರ ಗಾತ್ರ

ಆ ಯುವ ಸರ್ಕಾರಿ ಅಧಿಕಾರಿಯ ಪೋಷಕರು ದಿಕ್ಕೆಟ್ಟವರಂತೆ ಕೂತಿದ್ದರು. ಮಾದಕದ್ರವ್ಯ ವ್ಯಸನಿ ಮಗನನ್ನು ಪರಿಸ್ಥಿತಿ ಕೈಮೀರುವ ಮುನ್ನವೇ ಪುನಶ್ಚೇತನ ಶಿಬಿರಕ್ಕೆ ಸೇರಿಸಿ, ತುಂಬಾ ಪರಿಶ್ರಮದಿಂದ ಚಟ ಬಿಡಿಸಿದ್ದರು. ದೀರ್ಘ ವೈದ್ಯಕೀಯ ರಜೆಯ ನಂತರ ಕೆಲಸಕ್ಕೆ ಮರಳಿದವನು, ವರ್ಷ ಕಳೆಯುವುದರೊಳಗೆ ಮತ್ತೆ ವ್ಯಸನಕ್ಕೆ ಜಾರಿದ್ದ!

ಸಾರ್ವಜನಿಕರ ದೂರು, ಮೇಲಧಿಕಾರಿಗಳ ದಂಡನೆ, ಹದಗೆಡುತ್ತಿದ್ದ ಮಗನ ಆರೋಗ್ಯವು ಆ ಹಿರಿಯರನ್ನು ಕಂಗೆಡಿಸಿತ್ತು. ಬಲವಂತದಿಂದ ಮತ್ತೆ ವ್ಯಸನ ವಿಮುಕ್ತಿ ಕೇಂದ್ರಕ್ಕೆ ದಾಖಲಿಸುವುದನ್ನು ಬಿಟ್ಟು ಅನ್ಯಮಾರ್ಗ ಇಲ್ಲವೆಂದು ಮನದಟ್ಟು ಮಾಡಿಸುವಾಗ ಆ ಗೋಳು ಹೃದಯ ಕಲಕಿತ್ತು!

ಹೌದು, ಮಾದಕದ್ರವ್ಯ ವ್ಯಸನದ ಗ್ರಾಫ್ ಮೇಲೇರುತ್ತಲೇ ಸಾಗಿದೆ. ನಮ್ಮ ದೇಶವೊಂದರಲ್ಲೇ ಮಾದಕದ್ರವ್ಯ ವ್ಯಸನಿಗಳ ಸಂಖ್ಯೆ ಹತ್ತು ಕೋಟಿ ಮೀರಿದೆ! ಚಟ ಹತ್ತಿಸಿಕೊಂಡವರಲ್ಲಿ ಸೆಲೆಬ್ರಿಟಿಗಳು, ಸಿನಿ ತಾರೆಯರು, ಅಧಿಕಾರಸ್ಥರು, ಉನ್ನತ ಹುದ್ದೆಗಳಲ್ಲಿ ಇರುವವರು, ಕಾರ್ಮಿಕರು, ವಿದ್ಯಾರ್ಥಿಗಳು, ಶ್ರೀಸಾಮಾನ್ಯರು ಎಲ್ಲರೂ ಇದ್ದಾರೆ. ವಿದ್ಯೆ, ತಿಳಿವಳಿಕೆ, ಬುದ್ಧಿವಂತಿಕೆ, ಅಂತಸ್ತು, ಗೌರವ ಯಾವುದನ್ನೂ ಗಣನೆಗೆ ತೆಗೆದುಕೊಳ್ಳದ ರೀತಿಯಲ್ಲಿ ಡ್ರಗ್ಸ್‌ನ ಕರಾಳ ಬಾಹುಗಳು ಎಲ್ಲರತ್ತ ಚಾಚುತ್ತಿವೆ.

ಸಾರ್ವಜನಿಕರಲ್ಲಿ ಆರೋಗ್ಯ ಪ್ರಜ್ಞೆ ಮೂಡಿಸಬೇಕಿರುವ ವೈದ್ಯರು, ವೈದ್ಯ ವಿದ್ಯಾರ್ಥಿಗಳೇ ಮಾದಕದ್ರವ್ಯ ಸೇವನೆ, ಮಾರಾಟದ ದಂಧೆಯಲ್ಲಿ ಸಿಲುಕಿ ಪೊಲೀಸರಿಗೆ ಸೆರೆಯಾಗುತ್ತಿರುವ ಮಂಗಳೂರಿನ ಪ್ರಸ್ತುತ ವಿದ್ಯಮಾನ ಈ ಜಾಲದ ಕರಾಳ ಸ್ಥಿತಿಗೆ ತಾಜಾ ನಿದರ್ಶನ.

ಶಾಲಾ, ಕಾಲೇಜು ಮಕ್ಕಳಲ್ಲಿ ಮಾದಕ ಪದಾರ್ಥಗಳ ಸೇವನೆ ಹೆಚ್ಚುತ್ತಿರುವುದು ತುಂಬಾ ಆತಂಕಕಾರಿ ಸಂಗತಿ. ತಪ್ಪು ಒಪ್ಪುಗಳನ್ನು ವಿಮರ್ಶಿಸಿ ನಿರ್ಧಾರ ತೆಗೆದುಕೊಳ್ಳುವ ಮುಮ್ಮೆದುಳಿನ ನಿರ್ದಿಷ್ಟ ಭಾಗ ಹದಿಹರೆಯದವರಲ್ಲಿ ಇನ್ನೂ ಪೂರ್ಣವಾಗಿ ಬೆಳೆದಿರುವುದಿಲ್ಲ. ಜೊತೆಗೆ ಆಕರ್ಷಣೆಗಳೂ ಹೆಚ್ಚಿರುವ ಈ ವಯಸ್ಸಲ್ಲಿ ಸ್ನೇಹಿತರ ಒತ್ತಡ, ಕುತೂಹಲ, ಪ್ರಯೋಗಾತ್ಮಕ ಮನೋಭಾವ, ಮಾಧ್ಯಮಗಳ ಪ್ರಭಾವದ ಕಾರಣ ಅಮಲುಕಾರಕಗಳ ರುಚಿ ನೋಡಲು ಆರಂಭಿಸುತ್ತಾರೆ. ಮದ್ಯ ಮತ್ತು ತಂಬಾಕೇ ಇಲ್ಲಿ ಮೊದಲ ಸ್ವಾಗತಕಾರರು. ನಂತರದಲ್ಲಿ ಇದರ ಮತ್ತು ಕಡಿಮೆಯಾದಂತೆನಿಸಿ ಡ್ರಗ್ಸ್‌ಗೆ ಮೊರೆ ಹೋಗುತ್ತಾರೆ.

ಅಮಾಯಕ ಮಕ್ಕಳನ್ನು ಅರಿವಿಗೆ ಬಾರದಂತೆ ಈ ಕರಾಳ ಖೆಡ್ಡಾಕ್ಕೆ ಬೀಳಿಸುವ ಜಾಲ ತುಂಬಾ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ. ಶ್ರಮವಿಲ್ಲದೆ ಹಣ ಮಾಡುವ ಉದ್ಯೋಗದಂತೆ ಡ್ರಗ್ಸ್ ದಂಧೆಯನ್ನು ಬಿಂಬಿಸಿ ಹದಿಹರೆಯದವರನ್ನು ವಶೀಕರಣ ಮಾಡುವುದು ಕಷ್ಟವೇನಲ್ಲ. ಹೌದು, ದೇಶವೊಂದನ್ನು ಸೋಲಿಸಲು, ನಿರ್ನಾಮ ಮಾಡಲು ಶತ್ರುಗಳು ಯುದ್ಧವನ್ನೇ ಸಾರಬೇಕೆಂದಿಲ್ಲ. ಯುವಜನಾಂಗವನ್ನು ಮದ್ಯವ್ಯಸನ, ಮಾದಕದ್ರವ್ಯದ ಜಾಲಕ್ಕೆ ಬೀಳಿಸಿ ಹಾಳು ಮಾಡಿದರೆ ಸಾಕು, ಆ ದೇಶದ ಕತೆಯೇ ಮುಗಿದಂತೆ. ಈ ಪರೋಕ್ಷ ಯುದ್ಧ ದೊಡ್ಡ ನಗರಗಳೇನು, ಈಗ ಸಣ್ಣಪುಟ್ಟ ಪಟ್ಟಣಗಳು, ಹಳ್ಳಿಗಳಿಗೂ ವ್ಯಾಪಿಸಿದೆ! ಕೆಲವು ಅಪಘಾತ, ಅತ್ಯಾಚಾರ, ಗಲಭೆ, ಕೊಲೆ, ಸುಲಿಗೆಯಂತಹ ದುಷ್ಕೃತ್ಯಗಳ ಹಿಂದಿರುವುದು ಡ್ರಗ್ಸ್‌ ಪ್ರಭಾವ!

ಮಾದಕದ್ರವ್ಯದ ಪ್ರಭಾವದಿಂದ ಮೆದುಳಿನಲ್ಲಿ ಅಧಿಕ ಪ್ರಮಾಣದಲ್ಲಿ ಸ್ರವಿಸುವ ಡೋಪಮಿನ್, ವಾಸ್ತವ ಪರಿಸ್ಥಿತಿಯನ್ನು ಮರೆಸಿ ಯಾವುದೋ ಲೋಕದಲ್ಲಿ ತೇಲುವ ಅನುಭವ ದೊರಕಿಸುವುದಲ್ಲದೆ ಮತ್ತೆ ಮತ್ತೆ ರುಚಿ ನೋಡಲು ಪ್ರೇರೇಪಿಸುತ್ತದೆ. ಈ ಬಯಕೆ ಹತ್ತಿಕ್ಕ
ಲಾಗದೆ ಡ್ರಗ್ಸ್ ಹುಡುಕಿಕೊಂಡು ಹೊರಡುವವರು ಬೇಗನೆ ಚಟದ ಹಂತಕ್ಕೆ ಏರುತ್ತಾರೆ. ದೈಹಿಕ, ಮಾನಸಿಕ ಸ್ವಾಸ್ಥ್ಯ ಹದಗೆಡುತ್ತದೆ. ನರಗಳ ನಿಶ್ಶಕ್ತಿ, ದೈನಂದಿನ ಚಟುವಟಿಕೆಗಳು ಕುಂದುವುದು, ಮಂಕಾಗುವಿಕೆ, ಮರೆವು, ಹಸಿವು ಕಡಿಮೆಯಾಗುವುದು, ತೂಕ ನಷ್ಟ, ರೋಗನಿರೋಧಕ ಸಾಮರ್ಥ್ಯ ದುರ್ಬಲ ವಾಗುವುದಲ್ಲದೆ ಯಕೃತ್, ಹೃದಯ, ಮೂತ್ರಪಿಂಡಗಳಿಗೆ ಹಾನಿಯಾಗುತ್ತದೆ.

ಕಾನೂನು ಮಾತ್ರದಿಂದಲೇ ಮಾದಕದ್ರವ್ಯದ ಜಾಲವನ್ನು ಮಟ್ಟ ಹಾಕುವುದು ಅಸಾಧ್ಯ. ಶಾಲಾ, ಕಾಲೇಜು ಮಕ್ಕಳಲ್ಲಿ ಈ ಕುರಿತು ಅರಿವು ಮೂಡಿಸಬೇಕು. ಅಪರೂಪಕ್ಕೊಮ್ಮೆ ನಾಮಕಾವಸ್ತೆ ಕಾರ್ಯಕ್ರಮ ಮಾಡಿಬಿಟ್ಟರೆ ಸಾಲದು. ಪಠ್ಯದ ರೀತಿಯಲ್ಲಿ ಇದು ನಿರಂತರವಾಗಿರಬೇಕು. ಮನಸ್ಸಿಗೆ ನಾಟುವಂತೆ ಮಾದಕದ್ರವ್ಯಗಳ ರಕ್ಕಸ ಮುಖವನ್ನು ತೆರೆದಿಡಬೇಕು. ಪೋಷಕರಿಗೂ ಜಾಗೃತಿ ಮುಖ್ಯ. ಹೆತ್ತವರು ಮಕ್ಕಳನ್ನು ಗಮನಿಸುತ್ತಾ, ಆತ್ಮೀಯತೆಯಿಂದ ಮಾತನಾಡುತ್ತಾ ಪ್ರೀತಿ ತೋರುತ್ತಿದ್ದರೆ ಮಕ್ಕಳು ಹಾದಿ ತಪ್ಪುವ ಸಂಭವ ಕಡಿಮೆ. ಪ್ರೀತಿ ವಂಚಿತ ಮಕ್ಕಳು, ಅಸಡ್ಡೆಗೆ ಗುರಿಯಾಗಿರುವವರು ಈ ಜಾಲಕ್ಕೆ ಬೀಳುವ ಸಂಭವ ಹೆಚ್ಚು. ಮಾಧ್ಯಮಗಳು ಅದರಲ್ಲೂ ಪ್ರಮುಖವಾಗಿ ಎಲೆಕ್ಟ್ರಾನಿಕ್ ಮಾಧ್ಯಮದ ಹೊಣೆಗಾರಿಕೆ ದೊಡ್ಡದು. ವಿಚಾರಗಳನ್ನು ವೈಭವೀಕರಿಸದೆ, ಆಗುವ ಅನಾಹುತಗಳ ಕುರಿತಾಗಿ ಎಚ್ಚರಿಸುವ ಸಾಮಾಜಿಕ ಜವಾಬ್ದಾರಿ ಮೆರೆಯಬೇಕು.

ಸಹಸ್ರಾರು ಕೋಟಿ ವ್ಯವಹಾರದ ಈ ವಿಶ್ವವ್ಯಾಪಿ ದಂಧೆಯ ಜಾಲವನ್ನು ವ್ಯವಸ್ಥಿತವಾಗಿ ಮಟ್ಟ ಹಾಕುವುದು ಹಗರಣಗಳ ಮಾಯಾಪೆಟ್ಟಿಗೆಯನ್ನು ತೆರೆದಂತೆ! ಹೊರಬರುವ ಅನಿಷ್ಟಗಳು, ಅಪ್ರಿಯ ಸತ್ಯಗಳು, ಕರಾಳ ಮುಖಗಳನ್ನು ಎದುರಿಸಿ ಸಮರ ಸಾರುವುದು ಖಂಡಿತಾ ಸುಲಭವಲ್ಲ. ಕಾನೂನು ರಕ್ಷಕರು ಒತ್ತಡಗಳಿಗೆ ಬಾಗದೆ ಸರಿಯಾದ ರೀತಿಯಲ್ಲಿ ತನಿಖೆ ನಡೆಸಿ ಈ ಡ್ರಗ್ಸ್‌ ದಂಧೆಯನ್ನು ನಿಷ್ಠುರವಾಗಿ ಸದೆಬಡಿದಾಗ ಮಾತ್ರ ಮಾಯಾಪೆಟ್ಟಿಗೆಯ ಒಳಗಿರುವ ಕೊನೆಯ ಅಂಶ ‘ಭರವಸೆ’ ಹೊರಬರಲು ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT