ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಹನೆ ಬದಲು ಸುಧಾರಣಾವಾದ ಬೇಕಿತ್ತು

ಎನ್‌ಜೆಎಸಿ ಕಾಯ್ದೆಅಸಿಂಧುಗೊಳಿಸಿರುವುದು ಪ್ರಜಾತಂತ್ರ ವ್ಯವಸ್ಥೆಗೆ ಬಲವಾದ ಪೆಟ್ಟು
Last Updated 26 ಅಕ್ಟೋಬರ್ 2015, 19:53 IST
ಅಕ್ಷರ ಗಾತ್ರ

ಸಂವಿಧಾನದ 99ನೇ ತಿದ್ದುಪಡಿ ಮೂಲಕ ಜಾರಿಗೆ ಬಂದಿದ್ದ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‌ಜೆಎಸಿ) ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ ಅಸಿಂಧುಗೊಳಿಸಿತು. ಈ ತೀರ್ಪು ನೀಡಿದ ನ್ಯಾಯಮೂರ್ತಿಗಳು ಕೂಡ, ಈಗಿರುವ ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲ ಎಂಬುದಕ್ಕೆ ಸಹಮತ ವ್ಯಕ್ತಪಡಿಸಿ, ನೇಮಕ ಪ್ರಕ್ರಿಯೆಯನ್ನು ಇನ್ನಷ್ಟು ಸುಧಾರಿಸಲು ಏನು ಮಾಡಬೇಕು ಎಂಬ ಬಗ್ಗೆ ಸಲಹೆ ಸ್ವೀಕರಿಸಲು ನವೆಂಬರ್ 3ಕ್ಕೆ ವಿಚಾರಣೆ ನಿಗದಿ ಮಾಡಿದ್ದಾರೆ. ಇದು ಒಳ್ಳೆಯ ಬೆಳವಣಿಗೆ.

40 ವರ್ಷಗಳ ಹಿಂದೆ, ತುರ್ತು ಪರಿಸ್ಥಿತಿ ಕಾಲದಲ್ಲಿ ಅಂದಿನ ಸರ್ಕಾರ ‘ಬಗ್ಗಲು ಹೇಳಿದರೆ ತೆವಳಿದ’ ಕೆಲವು ಘಟನೆಗಳು ನಮ್ಮ ನ್ಯಾಯಾಂಗ ಕ್ಷೇತ್ರದಲ್ಲಿ ನಡೆದದ್ದನ್ನು ದೇಶ ಇನ್ನೂ ಮರೆತಿಲ್ಲ. ‘ತುರ್ತು ಪರಿಸ್ಥಿತಿಯ ಅವಧಿಯಲ್ಲಿ ದೇಶದ ನಾಗರಿಕನಿಗೆ ತನ್ನ ಜೀವದ ಮೇಲಿನ ಮೂಲಭೂತ ಹಕ್ಕೂ ಇರುವುದಿಲ್ಲ’ ಎಂಬ ಅಂದಿನ ಅಟಾರ್ನಿ ಜನರಲ್ ನಿರೇನ್ ಡೇ ಅವರ ಜೀರ್ಣಿಸಿಕೊಳ್ಳುವುದಕ್ಕೂ ಸಾಧ್ಯವಾಗದ ವಾದವನ್ನು ಸುಪ್ರೀಂ ಕೋರ್ಟ್‌ ಪುರಸ್ಕರಿಸಿದ ನೆನಪು ದೇಶದ ಜನಮಾನಸದಲ್ಲಿ ಇಂದಿಗೂ ಇದೆ.

ಅಂದಿನ ಸರ್ಕಾರದ ಕಾರ್ಯಸೂಚಿಗೆ ಸಹಕಾರ ನೀಡದ ಕೆಲವು ದಿಟ್ಟ ನ್ಯಾಯಮೂರ್ತಿಗಳಿಗೆ ತೀವ್ರ ಅವಮಾನ ಮಾಡಿರುವ ಪ್ರಸಂಗಗಳೂ ನಡೆದಿವೆ. ನ್ಯಾಯಾಂಗದ ಪರಮೋಚ್ಚತೆಗೆ, ಸ್ವಾತಂತ್ರ್ಯಕ್ಕೆ ತೀವ್ರ ಧಕ್ಕೆ ಬಂದ ಕರಾಳ ಅವಧಿಯದು. ತನ್ನ ಪರಮೋಚ್ಚತೆಗೆ ನಿಜವಾದ ಅರ್ಥದಲ್ಲಿ ಧಕ್ಕೆ ಬಂದರೂ ಮೌನವಾಗಿ ಸಹಿಸಿಕೊಂಡ ಭಾರತದ ನ್ಯಾಯಾಂಗದ ಅತಿ ಕಹಿ ಗಳಿಗೆ ಅದಾಗಿತ್ತು.

ಇಂದು ಅದಕ್ಕೆ ತೀರಾ ಭಿನ್ನವಾದ ಸನ್ನಿವೇಶವನ್ನು ಕಾಣುತ್ತಿದ್ದೇವೆ. ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ  ಪಾರದರ್ಶಕತೆ ತರುವ ಶಾಸಕಾಂಗ ಹಾಗೂ ಕಾರ್ಯಾಂಗದ ಒಂದು ಪ್ರಾಮಾಣಿಕ ಪ್ರಯತ್ನವನ್ನು, ‘ನ್ಯಾಯಾಂಗದ ಪರಮೋಚ್ಚತೆ’ಗೆ ಧಕ್ಕೆ ಬರುತ್ತದೆ ಎಂಬ ಭಾವನೆ ಆಧಾರದಲ್ಲಿ ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ.

ಎನ್‌ಜೆಎಸಿ ಕಾಯ್ದೆಯಿಂದ ನ್ಯಾಯಾಂಗದ ಪರಮೋಚ್ಚತೆಗೆ ನಿಜಕ್ಕೂ ಧಕ್ಕೆ ಬರುತ್ತಿತ್ತೇ ಎಂಬ ಪ್ರಶ್ನೆಗೆ ನನ್ನ ಸರಳ ಉತ್ತರ: ‘ಖಂಡಿತ ಇಲ್ಲ’. ಆದರೆ ಸಂಸತ್ತಿನ ಎರಡೂ ಸದನಗಳಲ್ಲಿ ಸರ್ವಾನುಮತದಿಂದ ಅನುಮೋದನೆ ಪಡೆದು, 20 ರಾಜ್ಯಗಳ ವಿಧಾನ ಮಂಡಲಗಳಲ್ಲಿ ಅನುಮೋದನೆ ಪಡೆದ ಸಂವಿಧಾನದ ಈ ತಿದ್ದುಪಡಿ ಅಸಿಂಧುಗೊಳಿಸಿರುವುದು ಪ್ರಜಾತಂತ್ರ ವ್ಯವಸ್ಥೆಗೆ ಬಲವಾದ ಪೆಟ್ಟು ಎಂದು ವಿಧಿಯಿಲ್ಲದೆ ಹೇಳಬೇಕಾಗಿದೆ.

ನಾಡಿಗೆ ಅಗತ್ಯವೆನಿಸಿದ ಕಾನೂನು ರಚಿಸುವ ಅಧಿಕಾರ ಸಂಸತ್ತಿಗೆ – ರಾಜ್ಯಗಳ ಶಾಸನಸಭೆಗಳಿಗೆ ಸಂವಿಧಾನದತ್ತವಾಗಿ ಲಭಿಸಿದೆ. ಶಾಸಕಾಂಗದ ಮೂಲ ಜವಾಬ್ದಾರಿಯೇ ಶಾಸನ ರಚನೆ. ಈ ಕಾರ್ಯ ಮಾಡುವಾಗ ಸಂವಿಧಾನದಲ್ಲಿ ಸೂಚಿಸಿರುವ ಲಕ್ಷ್ಮಣ ರೇಖೆಯನ್ನು ಈ ಸಾಂವಿಧಾನಿಕ ಸಂಸ್ಥೆಗಳು ಉಲ್ಲಂಘಿಸಿದರೆ ನ್ಯಾಯಾಂಗ ಮಧ್ಯಪ್ರವೇಶಿಸುವ, ಸೂಕ್ತ ಕ್ರಮ ಕೈಗೊಳ್ಳುವ ಅವಶ್ಯಕತೆಯನ್ನು ಎಲ್ಲರೂ ಒಪ್ಪುತ್ತಾರೆ.

ನ್ಯಾಯಾಂಗದ ಸ್ವಾತಂತ್ರ್ಯ ಅತ್ಯಂತ ಮಹತ್ವದ್ದು. ಅದರಲ್ಲಿ ಯಾವುದೇ ರಾಜಿ ಅಸಾಧ್ಯ ಎಂಬ ಮಾತು ಈ ತೀರ್ಪಿನ ನಂತರ ಕೇಳಿಬರುತ್ತಿದೆ. ನ್ಯಾಯಾಂಗದ ಸ್ವಾತಂತ್ರ್ಯ ಎಷ್ಟು ಮಹತ್ವದ್ದೋ ಅಷ್ಟೇ ಮಹತ್ವ  ಇರಬೇಕಿರುವುದು ನ್ಯಾಯಾಂಗದ ವಿಶ್ವಾಸಾರ್ಹತೆಗೆ. ಉಪ್ಪು ಒಂದೊಮ್ಮೆ ತನ್ನ ರುಚಿ ಕಳೆದುಕೊಂಡರೆ ಲೋಕದಲ್ಲಿ ಅದಕ್ಕೆ ಪರ್ಯಾಯ ಹೇಗೆ ಅಸಾಧ್ಯವೋ, ಅದೇ ರೀತಿ ನ್ಯಾಯಾಂಗದಿಂದ ವಿಶ್ವಾಸಾರ್ಹತೆ ಕಣ್ಮರೆಯಾದರೆ ಎದುರಾಗಬಹುದಾದ ಪರಿಸ್ಥಿತಿ ಭಯಾನಕವೇ ಸರಿ.

ನ್ಯಾಯಮೂರ್ತಿಗಳ ಆಯ್ಕೆಯನ್ನು ನ್ಯಾಯಮೂರ್ತಿಗಳ ಸಮಿತಿ (ಕೊಲಿಜಿಯಂ) ಮಾಡಿಕೊಳ್ಳುವ ಹಾಲಿ ವ್ಯವಸ್ಥೆಯಲ್ಲಿ ಯಾರಿಗೂ ಸಮಾಧಾನವಿಲ್ಲ. ಶಾಸಕರ ವೇತನ-ಭತ್ಯೆ ಪರಿಷ್ಕರಣೆಯನ್ನು ಶಾಸಕರೇ ಮಾಡಿಕೊಳ್ಳುತ್ತಿರುವುದು ಸಮ್ಮತವಲ್ಲವೆಂಬ ಜನಾಭಿಪ್ರಾಯದ ಹಿನ್ನೆಲೆಯಲ್ಲಿ ಅದಕ್ಕೊಂದು ಹೊಸ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಅದೇ ರೀತಿ ನ್ಯಾಯಮೂರ್ತಿಗಳ ಆಯ್ಕೆಯನ್ನು ನ್ಯಾಯಮೂರ್ತಿಗಳೇ ಮಾಡಿಕೊಳ್ಳುವುದು ಸರಿಯಲ್ಲ ಎಂಬ ಅಭಿಪ್ರಾಯ ಸಾರ್ವತ್ರಿಕವಾದದ್ದು. ರಾಜ್ಯದಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದವ ರೊಬ್ಬರನ್ನು ಸುಪ್ರೀಂ ಕೋರ್ಟ್‌ಗೆ ನೇಮಿಸುವಾಗ ನ್ಯಾಯಾಂಗ ಎದುರಿಸಿದ ಮುಜುಗರದ ಪ್ರಸಂಗ ಹಸಿರಾಗಿಯೇ ಇದೆ.

90ರ ದಶಕದಲ್ಲಿ ವಕೀಲರ ಮಧ್ಯೆ ಚಲಾವಣೆಯಲ್ಲಿದ್ದ ಮಾತೆಂದರೆ: ‘ನ್ಯಾಯಮೂರ್ತಿಯಾಗಲು ಕಾನೂನು ಗೊತ್ತಿಲ್ಲದಿದ್ದರೂ ಪರವಾಗಿಲ್ಲ, ಕಾನೂನು ಸಚಿವರು ಗೊತ್ತಿದ್ದರೆ ಸಾಕು’ ಎಂಬುದು. ಇತ್ತೀಚಿನ ದಿನಗಳಲ್ಲಿ ಬೇರೊಂದು ನಂಬಿಕೆ ಬೇರೂರಿದೆ. ‘ನ್ಯಾಯಮೂರ್ತಿಯಾಗಲು ಕಾನೂನು ಗೊತ್ತಿಲ್ಲದಿದ್ದರೂ ಪರವಾಗಿಲ್ಲ, ಪ್ರಭಾವಿ ನ್ಯಾಯಮೂರ್ತಿಗಳು ಗೊತ್ತಿದ್ದರೆ ಸಾಕು’ ಎಂದು.

ಪ್ರಪಂಚದ ಪ್ರಮುಖ ರಾಷ್ಟ್ರಗಳಲ್ಲೆಲ್ಲೂ ನ್ಯಾಯಮೂರ್ತಿಗಳೇ ನ್ಯಾಯಮೂರ್ತಿಗಳನ್ನು ನೇಮಕ ಮಾಡಿಕೊಳ್ಳುವ ಪದ್ಧತಿ ಇಲ್ಲ. ದೇಶದ ನಾಗರಿಕರು ಭರವಸೆಯ ಕಣ್ಣುಗಳಿಂದ ನ್ಯಾಯಕ್ಕಾಗಿ ಎದುರು ನೋಡುವ ಇಂದಿನ ವಾತಾವರಣದಲ್ಲಿ ನ್ಯಾಯಮೂರ್ತಿಗಳ ಆಯ್ಕೆಯಲ್ಲಿ ರಹಸ್ಯತನಕ್ಕೆ ಅವಕಾಶ ಇರಕೂಡದು.

ನ್ಯಾಯಾಂಗದಲ್ಲಿ ನಂಬಿಕೆ ಹೆಚ್ಚಾಗಲು ನ್ಯಾಯಮೂರ್ತಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ನಾಗರಿಕರ ಪಾತ್ರ ಪರೋಕ್ಷವಾಗಿಯಾದರೂ ಇರಬೇಕು ಎಂಬುದು ಬಹು ಚರ್ಚಿತ ವಿಷಯ. ವರ್ಷಗಳಿಂದ ನಡೆದ ದೀರ್ಘ ಪ್ರಯತ್ನದ ನಂತರ ಆರೇಳು ಸಂಸದೀಯ ಸಮಿತಿಗಳಲ್ಲಿ ವಿಸ್ತೃತ ಚರ್ಚೆಯಾಗಿ,  ನ್ಯಾಯಾಂಗ ಆಯೋಗಗಳ ಎದುರು ಪರೀಕ್ಷೆಗೆ ಒಳಪಟ್ಟು ರಚಿತವಾಗಿದ್ದ ಪರಿಹಾರ ಎನ್‌ಜೆಎಸಿ. ಆಳವಾದ ಚಿಂತನೆಯ ಮೂಲಕ ಮೂಡಿದ ಅತ್ಯಗತ್ಯ ತಿದ್ದುಪಡಿಯನ್ನು,  ನ್ಯಾಯಾಂಗದಲ್ಲಿ ಕಾರ್ಯಾಂಗದ ಹಸ್ತಕ್ಷೇಪ ಎಂದು ಪರಿಗಣಿಸಿ ಅಸಿಂಧುಗೊಳಿಸಲಾಗಿದೆ.

ಎನ್‌ಜೆಎಸಿ ಕಾಯ್ದೆಯಲ್ಲಿ ನ್ಯಾಯಾಂಗದ ದೃಷ್ಟಿಯಲ್ಲಿ ಆಕ್ಷೇಪಾರ್ಹವಾಗಿದ್ದ ಅಂಶ ಯಾವುದು? ನ್ಯಾಯಮೂರ್ತಿಗಳ ನೇಮಕ ಸಮಿತಿಯಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ (ಸಿಜೆಐ) ಜೊತೆ ಸುಪ್ರೀಂ ಕೋರ್ಟ್‌ನ ಇಬ್ಬರು ಅತ್ಯಂತ ಹಿರಿಯ ನ್ಯಾಯಮೂರ್ತಿಗಳು, ಕೇಂದ್ರ ಕಾನೂನು ಸಚಿವರು ಮತ್ತು ಸಮಾಜದಲ್ಲಿ ಹಿರಿಮೆ ಗಳಿಸಿರುವ ಜನರ ಭಾವನೆಗಳಿಗೆ ಧ್ವನಿ ನೀಡಬಲ್ಲ ಇಬ್ಬರು ಶ್ರೇಷ್ಠ ವ್ಯಕ್ತಿಗಳು ಇರುತ್ತಿದ್ದರು. ಸಿಜೆಐ, ಪ್ರಧಾನಿ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ಇರುವ ಸಮಿತಿಯ ಮೂಲಕ ಆ ಇಬ್ಬರು ಹಿರಿಯ ವ್ಯಕ್ತಿಗಳ ಆಯ್ಕೆ ನಡೆಯುವುದರ ಬಗ್ಗೆ ಕಾನೂನಿನಲ್ಲಿ ಸ್ಪಷ್ಟತೆ ಇತ್ತು.

ಈ ವ್ಯವಸ್ಥೆ ಮೂಲಕ ನಡೆಯುವ ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಗೆ ಹೆಚ್ಚು ವಿಶ್ವಾಸಾರ್ಹತೆ ಬರುತ್ತಿತ್ತು ಎಂಬುದು ಅನುಭವದ ಅಭಿಪ್ರಾಯ. ಆದರೆ ಕಾನೂನು ಸಚಿವ ಮತ್ತು ಇಬ್ಬರು ಹಿರಿಯರ ಇರುವಿಕೆಯನ್ನು ಹಸ್ತಕ್ಷೇಪವೆಂದು ಪರಿಗಣಿಸಲಾಯಿತು. ದೇಶ ಕಂಡ ಅತ್ಯಂತ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಲ್ಲಿ ಒಬ್ಬರಾದ, ನಮ್ಮ ರಾಜ್ಯದ ಹೆಮ್ಮೆಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ನೇತೃತ್ವದ ಸಂವಿಧಾನ ಪರಿಶೀಲನಾ ಸಮಿತಿ ನೀಡಿದ ಪ್ರಮುಖ ಶಿಫಾರಸು, ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಯಲ್ಲಿ ಕೇಂದ್ರ ಕಾನೂನು ಸಚಿವ ಮತ್ತು ಒಬ್ಬ ಹಿರಿಯ ವ್ಯಕ್ತಿ ಇರಬೇಕು ಎಂಬುದಾಗಿತ್ತು.

ರಾಜಕಾರಣಿಗಳ ಚಾರಿತ್ರ್ಯ, ಅವರ ವಿವೇಚನಾ ಶಕ್ತಿ, ಕೆಲವೊಮ್ಮೆ ಅವರ ದೇಶ ಭಕ್ತಿಯನ್ನೂ ಪ್ರಶ್ನಿಸಿ ಹೀಗಳೆಯುವುದು ಒಂದು ಹವ್ಯಾಸವಾಗಿಬಿಟ್ಟಿದೆ. ಅದರ ನೆರಳು ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿಯೂ ಧಾರಾಳವಾಗಿ ಕಾಣುತ್ತದೆ.

ದೇಶ ಕಂಡ ಅತ್ಯುತ್ತಮ ನ್ಯಾಯಮೂರ್ತಿಗಳಲ್ಲಿ ಒಬ್ಬರಾದ, ತುಂಬು ಅಂತಃಕರಣದ, ಬಡವರು, ಅಸಹಾಯಕರಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ಆಕ್ರೋಶದಿಂದ ತುಂಬಿರುತ್ತಿದ್ದ ಅನೇಕ ಐತಿಹಾಸಿಕ ತೀರ್ಪುಗಳನ್ನು ನೀಡಿದ ನ್ಯಾಯಮೂರ್ತಿ ವಿ.ಆರ್.ಕೃಷ್ಣ ಅಯ್ಯರ್ ಅವರು ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸುವ ಮುನ್ನ ಕೇರಳದಲ್ಲಿ ಶಾಸಕರಾಗಿ, ಸಚಿವರಾಗಿ (ಅರ್ಥಾತ್ ರಾಜಕಾರಣಿಯಾಗಿ) ಸೇವೆ ಸಲ್ಲಿಸಿದ್ದರು ಎಂಬುದು ಉಲ್ಲೇಖಾರ್ಹ.

ದೇಶದ ಮೂರು ಪ್ರಮುಖ ಸ್ತಂಭಗಳಾದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳ ನಡುವೆ ಪರಸ್ಪರ ಗೌರವ-ವಿಶ್ವಾಸ-ಸಹನೆ ಇರಬೇಕಿರುವುದು ಪ್ರಜಾತಂತ್ರ ವ್ಯವಸ್ಥೆಗೆ ಭೂಷಣ. ಸುಪ್ರೀಂ ಕೋರ್ಟ್‌, ಎನ್‌ಜೆಎಸಿಯನ್ನು ಅಸಹನೆಯಿಂದ ಸಾರಾಸಗಟಾಗಿ ಕಿತ್ತೊಗೆಯುವ ಬದಲು, ಆ ಕಾನೂನನ್ನು ಇನ್ನಷ್ಟು ಸುಧಾರಿಸುವ ಮೂಲಕ ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಯ ವಿಶ್ವಾಸಾರ್ಹತೆ ಹೆಚ್ಚಿಸುವುದು ಹೇಗೆಂಬುದರ ಬಗ್ಗೆ ಗಮನ ಹರಿಸಬೇಕಿತ್ತು.

ಲೇಖಕ ಮಾಜಿ ಕಾನೂನು ಸಚಿವ, ರಾಜಾಜಿನಗರ ಕ್ಷೇತ್ರದ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT