‘ಬಂಗಾರದ ಮನುಷ್ಯ’ ಬಿಡುಗಡೆಯ ಸಮಯ. ಸಿದ್ಧಲಿಂಗಯ್ಯನವರ ಕಲ್ಪನೆಯ ರಾಜೀವ ಪಾತ್ರದಿಂದ ಸ್ಫೂರ್ತಿ ಪಡೆದ ಅನೇಕ ಯುವಕರು ನಗರ ಬಿಟ್ಟು ‘ಕೃಷಿತೋ ನಾಸ್ತಿ ದುರ್ಭಿಕ್ಷಂ’ ಎಂಬ ಮಾತಿನಂತೆ ತಮ್ಮ ಹಳ್ಳಿಗಳ ಕಡೆಗೆ ಮುಖ ಮಾಡಿದರು. ದೊರೈ-ಭಗವಾನ್ ನಿರ್ದೇಶನದ ‘ಜೀವನಚೈತ್ರ’ ಸಿನಿಮಾ ಮದ್ಯಪಾನದ ವಿರುದ್ಧ ಪ್ರಬಲವಾದ ಅಸ್ತ್ರವಾಗಿ ಜನಮಾನಸದಲ್ಲಿ ನಿಂತು ಹೋಯಿತು. ಇದು, ಸಮಾಜದ ಮೇಲೆ ಸಿನಿಮಾ ಬೀರುವ ಧನಾತ್ಮಕ ಪ್ರಭಾವ.

‘ದೃಶ್ಯಂ’ ಸಿನಿಮಾ ನೋಡಿ ಪ್ರೇರಣೆ ಪಡೆದು ಯುವಕನೊಬ್ಬ ಕೊಲೆ ಮಾಡಿ ಸಿಕ್ಕಿಬಿದ್ದಿರುವ ಘಟನೆ ಇರಬಹುದು, ‘ಚೆಲುವಿನ ಚಿತ್ತಾರ’ ನೋಡಿ ಸ್ಫೂರ್ತಿಗೊಂಡು ಶಾಲಾ ಮಕ್ಕಳು ಮನೆಬಿಟ್ಟು ಓಡಿಹೋದ ಸಂಗತಿಯಾಗಬಹುದು, ಇವೆಲ್ಲ ಸಮಾಜದ ಮೇಲೆ ಸಿನಿಮಾ ಬೀರುವ ನಕಾರಾತ್ಮಕ ಪ್ರಭಾವ. ಸಿನಿಮಾ ಒಂದು ಮನರಂಜನೆಯ ಮಾಧ್ಯಮವೇ ಹೊರತು ಅದೆಂದೂ ಸಾಮಾಜಿಕ ಪರಿವರ್ತನಾ ಮಾರ್ಗವಲ್ಲ. ಆದರೆ ಮನರಂಜನೆಯ ಜೊತೆಗೆ ಸಿನಿಮಾಗೆ ಜನಸಾಮಾನ್ಯನನ್ನು ಪ್ರಭಾವಿಸುವ ಶಕ್ತಿ, ತಾಕತ್ತು ಎರಡೂ ಇವೆ ಎಂಬುದನ್ನು ಮರೆಯಲಾಗದು.

ಕಾಳಿದಾಸ, ನಾಟಕವನ್ನು ‘ಕಾವ್ಯೇಶು ನಾಟಕಂ ರಮ್ಯಂ’ ಎಂದು ಕರೆದ. ಕಾರಣವಿಷ್ಟೆ, ಕಾವ್ಯದ ಎಲ್ಲಾ ರೂಪಗಳು ಪಂಡಿತರಿಗೆ ಮಾತ್ರವೇ ತಲುಪುತ್ತವೆ. ಆದರೆ ನಾಟಕ ಮಾತ್ರ ನೇರಾನೇರವಾಗಿ ಜನಸಾಮಾನ್ಯನ ಮನಸ್ಸಿಗೆ ನಾಟುತ್ತದೆ. ಈಗ ನಾಟಕವನ್ನು ಪಕ್ಕಕ್ಕೆ ಸರಿಸಿ ಅದರ ಜಾಗದಲ್ಲಿ ನಾವು ಸಿನಿಮಾವನ್ನು ನೋಡಬಹುದು.

ಸಿನಿಮಾದ ಪ್ರಭಾವ ಬಹಳ ಪರಿಣಾಮಕಾರಿಎಂಬ ಎಚ್ಚರಿಕೆ ಸಿನಿಮಾ ಮಂದಿಯಲ್ಲಿ ಇರಲೇಬೇಕು. ಇದೇ ಕಾರಣಕ್ಕೆ ರಾಜ್‌ಕುಮಾರ್ ಅವರು ಸಿಗರೇಟು ಸೇದುವ, ಮದ್ಯ ಸೇವಿಸುವ ದೃಶ್ಯಗಳಲ್ಲಿ ಅಭಿನಯಿಸಲಿಲ್ಲ. ಇದು ಅವರಲ್ಲಿನ ಸಾಮಾಜಿಕ ಬದ್ಧತೆ. ಇಂತಹ ಸಾಮಾಜಿಕ ಬದ್ಧತೆ ಎಷ್ಟು ನಟರಲ್ಲಿ ಕಾಣಸಿಗುತ್ತದೆ?

ಸಿನಿಮಾಗೆ ಗೆಲುವಿನ ಮಾನದಂಡವೇ ಅಂತಿಮವಾಗಿರುವ ಕಾಲಘಟ್ಟದಲ್ಲೂ ಎರಡು ತರದ ಸಿನಿಮಾಗಳ ನಿರ್ಮಾಣದ ಬಗ್ಗೆ ಯೋಚಿಸಬೇಕಿದೆ. ಒಂದು ಪ್ರಯೋಗಾತ್ಮಕ, ಇನ್ನೊಂದು ಸಂವೇದನೆ ಅಥವಾ ಭಾವುಕತೆಯಿಂದ ಕಟ್ಟುವ ಸಿನಿಮಾಗಳು. ಇಂತಹ ಸಿನಿಮಾಗಳು ಕನ್ನಡದಲ್ಲಿ ಎಷ್ಟು ಬರುತ್ತಿವೆ? ‘ತಿಥಿ’ ಒಂದು ಪ್ರಯೋಗ, ‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಒಂದು ಸಂವೇದನೆ. ಉಳಿದ ಈ ವರ್ಷದ ಹಿಟ್ ಚಿತ್ರಗಳಲ್ಲಿ ಇವೆರಡರ ಕೊರತೆ ಎದ್ದು ಕಾಣುತ್ತದೆ.

ವ್ಯಾಪಾರಿ ಮನೋಭಾವವೇ ಮುಖ್ಯವಾಗಿರುವ ಸಿನಿಮಾಗಳಲ್ಲಿ ಸಾಮಾಜಿಕ ಕಾಳಜಿಯ ಒಂದು ಅಂಶವಾದರೂ ಇಲ್ಲದೇ ಹೋದರೆ ಹೇಗೆ?
ಕತೆಯೊಂದನ್ನು ಬಿಟ್ಟು ಮಿಕ್ಕೆಲ್ಲಾ ವಿಭಾಗಗಳಲ್ಲಿ ಅದ್ಧೂರಿತನ ಕಾಣುತ್ತಿದ್ದೇವೆ. ಇಂದಿನ ನಿರ್ದೇಶಕರು, ಕತೆಗಾರರು ಸಾಕಷ್ಟು ಬುದ್ಧಿವಂತರು.

ದುರಂತವೆಂದರೆ ಅನೇಕರಿಗೆ ಸಾಮಾಜಿಕ ಅಂಶಗಳ ಅರಿವು, ಸಂಸ್ಕೃತಿಯ ಪ್ರಜ್ಞೆ, ಮಾನವೀಯ ಮೌಲ್ಯಗಳ ಚಿಂತನೆ ಇಲ್ಲವಾಗಿದೆ. ಹಾರರ್, ಕಾಮಿಡಿ, ಫ್ಯಾಮಿಲಿ, ರೌಡಿಸಂನಂಥ ಸಿದ್ಧಸೂತ್ರದ ಸಿನಿಮಾ ಮಾಡುವುದು ಬೇರೆ. ಸೈನ್ಸ್ ಫಿಕ್ಷನ್‌ಗಳು, ಬಯೋಪಿಕ್‌ಗಳು (ರೌಡಿಗಳ ಕತೆಗಳಲ್ಲ!), ಮಕ್ಕಳ ಸಂವೇದನೆ (ಮಕ್ಕಳ ಸಿನಿಮಾದ ಹೆಸರಲ್ಲಿ ಪ್ರಶಸ್ತಿಗಾಗಿ ತೆಗೆಯುವ ಸಿನಿಮಾಗಳಲ್ಲ) ಕನ್ನಡದಲ್ಲಿ ಕಾಣಸಿಗದಾಗಿವೆ.

70- 80ರ ದಶಕ ಭಾರತೀಯ ಸಿನಿಮಾ ರಂಗದಲ್ಲಿ ಪರಿವರ್ತನಾ ಕಾಲಮಾನ. ಒಂದು ಕಡೆ ಕಲಾತ್ಮಕ ಸಿನಿಮಾಗಳ ಬೆಳವಣಿಗೆಯ ಜೊತೆಗೆ ಪುರಾಣ, ಇತಿಹಾಸ, ಕೂಡುಕುಟುಂಬಗಳ ಕತೆಗಳನ್ನು ಬಿಟ್ಟು ಮಧ್ಯಮವರ್ಗದ ಬದುಕು ಬವಣೆ, ಸಮಾಜದ ಆಶೋತ್ತರಗಳನ್ನು ಪ್ರಶ್ನಿಸುವ ವಿಲಕ್ಷಣ ಕತೆಗಳು ತೆರೆಯ ಮೇಲೆ ಮೂಡಿಬಂದವು. ಇದರಿಂದಾಗಿ ಹಿಂದಿಯಲ್ಲಿ ಹೃಷಿಕೇಶ್ ಮುಖರ್ಜಿಯವರ ‘ಗೋಲ್‌ಮಾಲ್’ನ ಅಮೋಲ್ ಪಾಲೇಕರ್, ‘ಅಭಿಮಾನ’ದ ಅಮಿತಾಭ್ ಬಚ್ಚನ್, ‘ಆನಂದ್’ನ ರಾಜೇಶ್ ಖನ್ನಾ ಇಷ್ಟವಾಗುವುದು. ಬಸು ಚಟರ್ಜಿಯವರ ‘ಚಿತ್‌ಚೋರ್’, ‘ಛೋಟಿ ಸಿ ಬಾತ್’, ‘ರಜನಿಗಂಧ’ದಂತಹ ಸಿನಿಮಾಗಳು ಸ್ಟಾರ್‌ಗಳಿಲ್ಲದೆ ಜನಮಾನಸದಲ್ಲಿ ಎಂದೂ ಮರೆಯದ ಚಿತ್ರಗಳಾಗಿ ಸ್ಥಾನ ಪಡೆದಿರುವುದು.

ತಮಿಳಿನಲ್ಲಿ ಕೆ.ಬಾಲಚಂದರ್, ಭಾರತಿರಾಜಾ ಅವರಂಥ ನಿರ್ದೇಶಕರು ಕಲಾವಿದರನ್ನು ತಯಾರಿಸುವ ಫ್ಯಾಕ್ಟರಿಗಳೇ ಆಗಿದ್ದರು. ಕನ್ನಡದಲ್ಲಿ ಪುಟ್ಟಣ್ಣ ಕಣಗಾಲ್ ಕೂಡ ಅದೇ ಪರಂಪರೆಗೆ ಸೇರಿದವರಾಗಿದ್ದರು. ಸಿದ್ಧಲಿಂಗಯ್ಯ ನಿರ್ದೇಶನದ ‘ಬೂತಯ್ಯನ ಮಗ ಅಯ್ಯು’ ಪ್ರಯೋಗ, ಸಂವೇದನೆ, ಭಾವುಕತೆ, ಕಮರ್ಷಿಯಲ್ ಹೀಗೆ ಎಲ್ಲಾ ಆಯಾಮಗಳಿಗೂ ಅತ್ಯುತ್ತಮ ಉದಾಹರಣೆ. ತೆಲುಗಿನಂಥ ವ್ಯಾಪಾರಿ ಸಿನಿಮಾಗಳ ನೆಲದಲ್ಲೂ ಬಾಪು (ಮುತ್ಯಾಲಮುಗ್ಗು, ಪೆಳ್ಲಿಪುಸ್ತಕಂ), ಕೆ.ವಿಶ್ವನಾಥ್ (ಶಂಕರಾಭರಣಂ, ಸಾಗರಸಂಗಮಂ, ಸ್ವಾತಿಮುತ್ಯಂ) ಪ್ರಯೋಗ- ಸಂವೇದನೆಯ ಸಿನಿಮಾಗಳನ್ನು ಮಾಡಿದರು.

ವ್ಯಾಪಾರವೇ ಪ್ರಧಾನವಾಗಿರುವ ಈ ಕಾಲಘಟ್ಟದಲ್ಲೂ ಸಿನಿಮಾಗಳನ್ನು ಸಂವೇದನೆಯಾಗಿ ಪರಿವರ್ತಿಸಿ ಗೆಲುವನ್ನು ದಾಖಲಿಸುತ್ತಿರುವ ತಮಿಳು, ಹಿಂದಿ ಸಿನಿಮಾಗಳನ್ನು ನೋಡಿದಾಗ, ಕನ್ನಡ ಸಿನಿಮಾರಂಗ ಚಿಂತನೆಯ ದೃಷ್ಟಿಯಿಂದ ಬಹಳಷ್ಟು ದೂರದಲ್ಲಿದೆ ಎಂಬುದು ಮೇಲ್ನೋಟಕ್ಕೆ ಕಾಣುವ ನಗ್ನಸತ್ಯ. ತಮಿಳಿನಲ್ಲಿ ನೇಕಾರರ ಬದುಕು-ಬವಣೆಯನ್ನು ಕಣ್ಣಿಗೆ ಕಟ್ಟುವಂತೆ ನಿರ್ದೇಶಕ ಪ್ರಿಯದರ್ಶನ್ ರೂಪಿಸಿದ ‘ಕಾಂಜೀವರಂ’, ಅಮಾಯಕರನ್ನು ಬಲಿಪಶು ಮಾಡುವ ವ್ಯವಸ್ಥೆಯ ಬಗ್ಗೆ ನಿರ್ದೇಶಕ ವೇಟ್ರಿಮಾರನ್ ಅವರು ರೂಪಿಸಿದ ‘ವಿಸಾರಣೈ (ಇದು ಆಸ್ಕರ್‌ಗೆ ಆಯ್ಕೆಯಾಗಿರುವ ಅಧಿಕೃತ ಭಾರತೀಯ ಸಿನಿಮಾ), ಚೆನ್ನೈ ಕೊಳೆಗೇರಿಯ ಇಬ್ಬರು ಬಡ ಮಕ್ಕಳು ಒಂದು ಪಿಜ್ಜಾ ತಿನ್ನಲು ಕಾಣುವ ಕನಸಿನ ಸುತ್ತಲೂ ಹೆಣೆದ ಎಂ.ಮಣಿಕಂಠನ್ ನಿರ್ದೇಶನದ ‘ಕಾಕಾಮೊಟ್ಟೆ’ಯಂತಹ ಸಿನಿಮಾಗಳು ಕೇವಲ ಪ್ರಯೋಗಗಳಾಗಿರದೆ ಗಲ್ಲಾಪೆಟ್ಟಿಗೆಯಲ್ಲೂ ಗೆದ್ದಿವೆ. ರಾಧಾಮೋಹನ್, ವೇಟ್ರಿಮಾರನ್, ಮಿಸ್ಕಿನ್, ವೆಂಕಟಪ್ರಭು, ಬಾಲ ಹೀಗೆ ಸ್ಟಾರ್‌ಗಳನ್ನು ಪಕ್ಕಕ್ಕಿಟ್ಟು ಪ್ರಯೋಗಗಳನ್ನು ಮಾಡಲು ಅಲ್ಲಿ ಪ್ರತಿಭಾವಂತರ ದಂಡೇ ಇದೆ.

ಹಿಂದಿ ಸಿನಿಮಾರಂಗದಲ್ಲಂತೂ ಪ್ರಯೋಗಗಳು ಬಹುದೊಡ್ಡ ಮಟ್ಟಿಗೆ ಸಾಧ್ಯವಾಗಿವೆ. ಸಂಜಯ್ ಲೀಲಾ ಬನ್ಸಾಲಿ ಅವರ ‘ಬ್ಲ್ಯಾಕ್’, ನೀರಜ್ ಘಯ್ವಾನ್‌ರ ‘ಮಸಾನ್’, ಮೇಘನಾ ಗುಲ್ಜಾರ್‌ರ ‘ತಲ್ವಾರ್’, ಅನಿರುದ್ಧ ರಾಯ್ ಚೌಧರಿಯವರ ‘ಪಿಂಕ್’, ವಿಕಾಸ್ ಬಹಲ್‌ರ ‘ಕ್ವೀನ್’ ಎಲ್ಲವೂ ಸಂವೇದನೆಯ ಹಲವು ಮುಖಗಳೇ ಆಗಿವೆ. ದಿಬಂಕರ್ ಬ್ಯಾನರ್ಜಿ, ವಿಶಾಲ್ ಭಾರದ್ವಾಜ್, ಮಧುರ್ ಭಂಡಾರ್ಕರ್, ಸುರ್ಜಿತ್ ಸರ್ಕಾರ್, ನೀರಜ್ ಪಾಂಡೆ, ಅನುರಾಗ್ ಕಶ್ಯಪ್ ಹೀಗೆ ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯೇ ಸಿದ್ಧವಾಗುತ್ತದೆ. ಕಮರ್ಷಿಯಲ್ ಸಿನಿಮಾಗಳಿಗೆ ಕಲಾತ್ಮಕತೆಯ ಸ್ಪರ್ಶ ನೀಡಿ ಸೃಜನಶೀಲವಾಗಿಸುವ ಕಲೆ ಇವರಿಗೆಲ್ಲ ಅದ್ಭುತವಾಗಿ ಸಿದ್ಧಿಸಿದೆ.

ಕನ್ನಡಕ್ಕೆ ಬೇಕಿರುವುದು ಹೊಸ ಆಲೋಚನೆಗಳು, ಚಿಂತನೆಗಳೇ ಹೊರತು ಸತ್ವಹೀನವಾದ ಸಿನಿಮಾಗಳಲ್ಲ. ಈಗಂತೂ ಒಂದು ಕೆಟ್ಟ ಪರಂಪರೆ ಇಲ್ಲಿ ಆರಂಭವಾಗಿದೆ. ಯಾವುದೇ ಸಿನಿಮಾ ಬಿಡುಗಡೆಗೆ ಹತ್ತಿರವಾದಾಗ ಆ ಸಿನಿಮಾದ ಮಂದಿ ‘ನಮ್ಮ ಸಿನಿಮಾ ತೆಲುಗಿಗೆ- ತಮಿಳಿಗೆ ರೀಮೆಕ್ ಆಗ್ತಾಯಿದೆ’ ಎಂದು ಹೇಳಿಕೆ ನೀಡುತ್ತಾರೆ. ಸಿನಿಮಾ ಬಿಡುಗಡೆಯಾದ ಮೇಲೆ ನೋಡಿದರೆ ಅದೆಲ್ಲಾ ಕೇವಲ ಪ್ರಚಾರದ ತಂತ್ರವಾಗಿರುತ್ತದೆ.

ಇಂತಹ ಸಿನಿಮಾಗಳ ಹಣೆಬರಹ ಬಿಡುಗಡೆಗೆ ಮೊದಲೇ ಗೊತ್ತಾಗಿರುತ್ತದೆ. ಸಾಮಾಜಿಕ ತಾಣಗಳಲ್ಲಿ ಇದೇ ವಿಚಾರ ಇಟ್ಟುಕೊಂಡು ಕನ್ನಡೇತರರು ನಗೆಯಾಡುತ್ತಿದ್ದಾರೆ. ತೆಲುಗು ಆತ್ಮವನ್ನು ಆವರಿಸಿಕೊಂಡಿರುವ ಇಂದಿನ ಕನ್ನಡ ಸಿನಿಮಾಗಳಲ್ಲಿ ಪ್ರಯೋಗಗಳು, ಸಂವೇದನೆ, ಭಾವುಕತೆ, ಸಂಸ್ಕೃತಿ ಯಾವುದೂ ಇಲ್ಲವಾಗಿದೆ. ಕೊನೆಯದಾಗಿ ಹೇಳಬೇಕೆಂದರೆ ಕನ್ನಡತನವೇ ಕಾಣದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.