ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಸಭೆ, ವಾರ್ಡ್‌ಸಭೆ ಬಲವರ್ಧನೆ ಹೇಗೆ?

Last Updated 20 ಜೂನ್ 2013, 19:59 IST
ಅಕ್ಷರ ಗಾತ್ರ

ಳೆದ ವಾರ ವಿಧಾನಸಭೆಯಲ್ಲಿ ಸರ್ಕಾರವು ಗ್ರಾಮಸಭೆಗೆ ಸಂಬಂಧಿಸಿದಂತೆ ಒಂದು ಮಹತ್ವದ ನಿರ್ಣಯ ತೆಗೆದುಕೊಂಡಿತು. ಸರ್ಕಾರ ಅಂಗೀಕರಿಸಿದ ಪಂಚಾಯತ್‌ರಾಜ್ (ತಿದ್ದುಪಡಿ) ಮಸೂದೆಯ ಪ್ರಕಾರ ವರ್ಷಕ್ಕೆ ಕನಿಷ್ಠ ಎರಡು ಬಾರಿ ಗ್ರಾಮಸಭೆ ಹಾಗೂ ವಾರ್ಡ್ ಸಭೆಗಳನ್ನು ನಡೆಸಲಾಗದ ಗ್ರಾಮಪಂಚಾಯಿತಿಯ ಅಧ್ಯಕ್ಷ ಹಾಗೂ ಸಂಬಂಧಪಟ್ಟ ವಾರ್ಡ್ ಸದಸ್ಯರನ್ನು ಅನರ್ಹಗೊಳಿಸಲಾಗುವುದು.

ಸಭೆ ಕರೆಯುವಲ್ಲಿ ಅಧಿಕಾರಿಗಳು ಕರ್ತವ್ಯಲೋಪ ಎಸಗಿದರೆ ಅವರ ವಿರುದ್ಧವೂ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಆದರೆ “ಇದೊಂದು ಸೂಕ್ಷ್ಮ ವಿಚಾರ. ತಜ್ಞರ ಸಲಹೆ ಪಡೆದು ಸಾಂವಿಧಾನಿಕವಾಗಿ ನಿರ್ಧಾರ ಕೈಗೊಳ್ಳುವುದು ಉತ್ತಮ“ ಎಂದು ಸಲಹೆ ನೀಡುತ್ತಾರೆ ಪ್ರೊಫೆಸರ್ ಅಬ್ದುಲ್ ಅಜೀಜ್.
ಹಾಗೆ ನೋಡಿದರೆ ಪಂಚಾಯಿತಿಗಳ ಹುಟ್ಟಿನೊಂದಿಗೇ ಜನ್ಮ ಪಡೆದದ್ದು ಗ್ರಾಮಸಭೆ.

ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ ಎರಡು ಬಾರಿ ಗ್ರಾಮಸಭೆ ಕರೆಯಬೇಕೆಂಬುದು ಸಂವಿಧಾನದ 73ನೆಯ ತಿದ್ದುಪಡಿಯ ಕಟ್ಟಪ್ಪಣೆ. ಆದರೆ ಬಹುತೇಕ ಪಂಚಾಯಿತಿಗಳಲ್ಲಿ ಈ ಮಹತ್ವದ ವಿಷಯ ಚುನಾಯಿತರ ಜಾಣ ಮರೆವಿನಿಂದ ನಿರ್ಲಕ್ಷ್ಯಕ್ಕೆ ಒಳಗಾಗಿಬಿಡುತ್ತದೆ. ಗ್ರಾಮಸಭೆಗಳ ನಿಷ್ಕ್ರಿಯತೆಗೆ ಜನರಲ್ಲಿನ ಅರಿವಿನ ಕೊರತೆ ಒಂದು ಕಾರಣವಾದರೆ ಚುನಾಯಿತ ಅಭ್ಯರ್ಥಿಗಳಲ್ಲಿ ಜನರನ್ನು ಎದುರಿಸುವ ನೈತಿಕ ಸ್ಥೈರ‌್ಯ ಇಲ್ಲದೇ ಹೋಗಿದ್ದು ಮತ್ತೊಂದು ಕಾರಣ.
ಹಳ್ಳಿಯ ಪ್ರತಿಯೊಬ್ಬ ಮತದಾರನೂ ಗ್ರಾಮಸಭೆ ಸದಸ್ಯ. ಅಂದರೆ ಗ್ರಾಮ ಪಂಚಾಯಿತಿ ಆಯ್ಕೆಯಾಗುವುದೇ ಗ್ರಾಮಸಭಾ ಸದಸ್ಯರಿಂದ.

ಗ್ರಾಮ ಪಂಚಾಯಿತಿಯು ಗ್ರಾಮಸಭೆಯಲ್ಲಿ ತನ್ನ ಆಡಳಿತದ ವರದಿ, ವಾರ್ಷಿಕ ಲೆಕ್ಕಪತ್ರ ಮಂಡನೆ, ತೆರಿಗೆಗೆ ಸಂಬಂಧಿತ ವಿಚಾರಗಳ ಜೊತೆಗೆ ಸರ್ಕಾರ ಹೊರಡಿಸುವ ಯೋಜನೆಗಳನ್ನು ಜನರಿಗೆ ಮುಟ್ಟಿಸಬೇಕು. ತನ್ನನ್ನು ಆಯ್ಕೆ ಮಾಡಿದ ಜನರೆದುರು ಎಲ್ಲವನ್ನೂ ವಿವರವಾಗಿ ತಿಳಿಸಬೇಕು. ಗ್ರಾಮ ಪಂಚಾಯಿತಿ ಸರಿಯಾದ ಹಾದಿಯಲ್ಲಿ ಕೆಲಸ ಮಾಡುತ್ತಿದೆಯೋ ಇಲ್ಲವೋ ಎಂಬುದನ್ನು ವೀಕ್ಷಿಸುವ ಗುರುತರ ಜವಾಬ್ದಾರಿ ಗ್ರಾಮಸಭೆಯದು.

ಹೀಗಾಗಿ ಇದೊಂದು ಗ್ರಾಮೀಣ ಜನ ನೇರವಾಗಿ ಆಡಳಿತದಲ್ಲಿ ಭಾಗವಹಿಸಲು ಇರುವ ಅಪೂರ್ವ ಅವಕಾಶವನ್ನು ಕಲ್ಪಿಸಿಕೊಡುತ್ತದೆ. ಗ್ರಾಮ ಪಂಚಾಯಿತಿಯನ್ನು ಆರಿಸುವಲ್ಲಿಯೂ ಅದನ್ನು ಸೂಕ್ತ ರೀತಿಯಲ್ಲಿ ನಡೆಸುವಲ್ಲಿಯೂ ಗ್ರಾಮಸಭೆಯದು ಮಹತ್ವದ ಪಾತ್ರ. ಗ್ರಾಮಸಭೆ ಶಾಸನಸಭೆಯಂತೆಯೂ, ಗ್ರಾಮ ಪಂಚಾಯಿತಿಯು ಸಚಿವ ಸಂಪುಟದಂತೆಯೂ ಕಾರ‌್ಯನಿರ್ವಹಿಸಬೇಕೆನ್ನುವುದು ಇಲ್ಲಿನ ಮೂಲ ಆಶಯ.
ಆದರೆ ವಾಸ್ತವದ ಚಿತ್ರಣವೇ ಬೇರೆ.

ಸಿದ್ಧಾಂತಗಳಿಗೂ ವಾಸ್ತವಕ್ಕೂ ನಮ್ಮಲ್ಲಿ ಎಲ್ಲೆಡೆಯೂ ದೊಡ್ಡ ಕಂದಕ. ವರ್ಷಕ್ಕೆ ಒಂದು ಬಾರಿಯೂ ಗ್ರಾಮಸಭೆ ಕರೆಯದ ಪಂಚಾಯಿತಿಗಳಿವೆ. ಅನೇಕ ಕಡೆ ಗ್ರಾಮಸಭೆಗಳು ಕಾಟಾಚಾರಕ್ಕೆ ನಡೆಯುತ್ತವೆ. ಮುಖ್ಯವಾಗಿ ಗ್ರಾಮದ ಜನರಿಗೇ ತಮ್ಮ ಅಧಿಕಾರದ ಬಗ್ಗೆ ತಿಳಿವಳಿಕೆ ಇಲ್ಲ. ಇನ್ನೂ ಕೆಲವು ಕಡೆ ಸೋತ ಪಕ್ಷದವರು ಗೆದ್ದವರ ಕಾಲೆಳೆಯಲು ಗ್ರಾಮಸಭೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಅಧಿಕಾರ ಸಿಗದ ಸಿಟ್ಟು, ಅವಮಾನಗಳಿಂದಾಗಿ ಪ್ರಚೋದಿತ ಪ್ರಶ್ನೆಗಳನ್ನು ಹಾಕಿ ಆಡಳಿತ ಪಕ್ಷದವರನ್ನು ಮುಜುಗರಕ್ಕೆ ಒಳಪಡಿಸುತ್ತಾರೆ. ಗ್ರಾಮ ಪಂಚಾಯಿತಿಗಳು ಈಗ ಪಕ್ಷಾತೀತವಾಗಿ ಉಳಿದಿಲ್ಲ. ಪಕ್ಷಗಳು ಕಾಲಿಟ್ಟ ಕಡೆ ದ್ವೇಷ ರಾಜಕಾರಣ ಸದ್ದಿಲ್ಲದೆ ಹೊಗೆಯಾಡುತ್ತಿರುತ್ತದೆ.

ಈಗ ಪಂಚಾಯಿತಿಗಳ ಪರಿಸ್ಥಿತಿ ಹಿಂದಿನಂತಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಸಾಕಷ್ಟು ಪ್ರಮಾಣದ ಅನುದಾನಗಳು, ಯೋಜನೆಗಳು ಹರಿದುಬರುತ್ತಿವೆ. ಅದರಲ್ಲೂ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಲಕ್ಷಾಂತರ ರೂಪಾಯಿಯ ಅನುದಾನ ಗ್ರಾಮ ಪಂಚಾಯಿತಿಗೆ ಬಿಡುಗಡೆಯಾಗುತ್ತಿದ್ದು ಅವನ್ನೆಲ್ಲಾ ಸೂಕ್ತ ರೀತಿಯಲ್ಲಿ ಜನರಿಗೆ ತಲುಪಿಸಬೇಕಿದೆ. ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಫಲಾನುಭವಿಗಳನ್ನು ಆರಿಸುವ ಹೊಣೆ ಪಂಚಾಯಿತಿಗಳದು.

ಆದರೆ ಸ್ವಾರ್ಥ ರಾಜಕಾರಣಿಗಳ, ಸ್ಥಳೀಯ ಮಟ್ಟದ ಅಧಿಕಾರಶಾಹಿಗಳ ಹಾಗೂ ಸ್ಥಾಪಿತ ಹಿತಾಸಕ್ತಿಗಳ ಧೂರ್ತತನದಿಂದ ಸೌಲಭ್ಯಗಳು ಬಡ ಜನರನ್ನು ತಲುಪುತ್ತಿಲ್ಲ. ಬೇನಾಮಿ ಹೆಸರಲ್ಲಿ ಆಶ್ರಯಮನೆಗಳನ್ನು ಲಪಟಾಯಿಸುವ ಅಧ್ಯಕ್ಷ- ಉಪಾಧ್ಯಕ್ಷರು, ತಮ್ಮ ಮನೆಯವರ ಹೆಸರುಗಳನ್ನು ಉದ್ಯೋಗ ಖಾತ್ರಿ ಯೋಜನೆಯ ಪಟ್ಟಿಯಲ್ಲಿ ಸೇರಿಸುವ ಸದಸ್ಯರು ಹೆಜ್ಜೆ ಇಟ್ಟಲ್ಲೆಲ್ಲಾ ಕಾಣಸಿಗುತ್ತಾರೆ.

ಗ್ರಾಮಸಭೆ ನಡೆಸುವ ಎರಡು- ಮೂರು ದಿನಗಳ ಮುನ್ನವೇ ನಿರ್ದಿಷ್ಟ ಸ್ಥಳಕ್ಕೆ ನಿರ್ದಿಷ್ಟ ಸಮಯದಲ್ಲಿ ಜಮಾಯಿಸುವಂತೆ ತಮಟೆ ಬಾರಿಸಿ ಸುತ್ತಲಿನ ಗ್ರಾಮಸ್ಥರಿಗೆ ವಿಷಯ ತಿಳಿಸಲಾಗುತ್ತದೆ. ಇಂಥ ಕೆಲವು ಗ್ರಾಮಸಭೆಗಳಿಗೆ ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಹಿಂದೆ ಕೆಲವು ಪಂಚಾಯಿತಿಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ಅರಳೀಕಟ್ಟೆಯ ಕೆಳಗೆ ಸೇರುತ್ತಿದ್ದರು. ಅರಿವುಳ್ಳ ಹಿರಿಯರು ಪ್ರಶ್ನೆ ಕೇಳುತ್ತಿದ್ದರು, ತಮ್ಮೂರಿಗೆ ಆಗಲೇ ಬೇಕಾದ ಕೆಲಸಗಳನ್ನು ಆದ್ಯತೆಯ ಮೇರೆಗೆ ಚರ್ಚಿಸುತ್ತಿದ್ದರು.

ಆದರೆ ತಮ್ಮ ಮಾತಿಗೆ ಪಂಚಾಯಿತಿ ಅಧ್ಯಕ್ಷ ಹಾಗೂ ಸದಸ್ಯರಿಂದ ಬೆಲೆ ಸಿಗದಾದಾಗ ಈ ಉತ್ಸಾಹ ಕೆಲವೆಡೆ ಕಡಿಮೆಯಾಯಿತು. ಇನ್ನೂ ಕೆಲವು ಕಡೆ ಇದೆಲ್ಲ ನಿಷ್ಪ್ರಯೋಜಕ ಎನಿಸಿತು. ಮತ್ತೆ ಕೆಲವೆಡೆ ಜಗಳಗಳಲ್ಲಿ ಅಂತ್ಯಗೊಂಡಿತು.ಈಗ ಪರಿಸ್ಥಿತಿ ಸುಧಾರಿಸಿದ್ದರೂ ಜನರ ಭಾಗವಹಿಸುವಿಕೆ ಕಡಿಮೆಯೇ. ಮಹಿಳೆಯರ ಸಂಖ್ಯೆಯಂತೂ ತೀರಾ ಕನಿಷ್ಠ.

ವಿದ್ಯೆ ಹಾಗೂ ತಿಳಿವಳಿಕೆಯುಳ್ಳ ಗ್ರಾಮಗಳಲ್ಲಿ ಪುರುಷರಂತೆ ಜಾಗೃತಿಯುಳ್ಳ ಹೆಣ್ಣುಮಕ್ಕಳೂ ಗ್ರಾಮಸಭೆಗೆ ಬರುತ್ತಾರೆ, ಚರ್ಚಿಸುತ್ತಾರೆ. ಸ್ತ್ರೀಶಕ್ತಿ ಯೋಜನೆಯಿಂದಾಗಿ ಮಹಿಳೆಯ ದನಿಗೂ ಅಷ್ಟಿಷ್ಟು ಜಾಗ ಸಿಗುತ್ತಿದೆ. ಆದರೆ ಇಂಥ ಪಂಚಾಯಿತಿಗಳು ಬೆರಳೆಣಿಕೆಯಷ್ಟು. ಕರ್ನಾಟಕದಲ್ಲಿರುವ ಗ್ರಾಮಪಂಚಾಯಿತಿಗಳು ಸುಮಾರು 5659. ಸಾವಿರಾರು ಸಂಖ್ಯೆಯ ಗ್ರಾಮಪಂಚಾಯಿತಿಗಳ ಗ್ರಾಮಸಭೆಗಳ ಪಾಡು ಊಹೆಗೂ ನಿಲುಕದಷ್ಟು ಅಧೋಗತಿಯಲ್ಲಿ ನಡೆಯುತ್ತವೆ.

ಗ್ರಾಮಸಭೆಗಳು ಇಂದು ಫಲಾನುಭವಿಗಳ ಆಯ್ಕೆಗೆ ಮಾತ್ರ ಸೀಮಿತವಾಗಿವೆ. ಆದರೆ ಅದೂ ನ್ಯಾಯಯುತವಾಗಿ ನಡೆಯದೇ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡದಿಂದ ಯಾವ ಯೋಜನೆಗಳೂ ಅಶಕ್ತರನ್ನು ತಲುಪುತ್ತಿಲ್ಲ. ಬಸವ, ಇಂದಿರಾ ಆವಾಸ್, ಆಶ್ರಯ ವಸತಿ ಯೋಜನೆಯಡಿ ನೂರಾರು ಮನೆಗಳ ಸೌಲಭ್ಯ ಹರಿದು ಬರುತ್ತಿದ್ದರೂ ಅನೇಕ ಗ್ರಾಮ ಪಂಚಾಯಿತಿಗಳು ಅವನ್ನು ಬಳಸಿಕೊಳ್ಳದ ಶೋಚನೀಯ ಪರಿಸ್ಥಿತಿ ಇದೆ! ಅರ್ಹ ಫಲಾನುಭವಿಗಳನ್ನು ವಾರ್ಡ್ ಮಟ್ಟದಲ್ಲಿ ಅಯ್ಕೆ ಮಾಡುವುದರಿಂದ ಯೋಜನೆಗಳು ಯೋಗ್ಯರಿಗೆ ತಲುಪಬಲ್ಲವು. ಗ್ರಾಮಸಭೆಗಳಲ್ಲಿ ತಯಾರಾಗುವ ಆಯ್ಕೆದಾರರ ಪಟ್ಟಿಯನ್ನು ಶಾಸಕರು, ಸಚಿವರು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಿಸುವಂತಿಲ್ಲ.

ತಾಲ್ಲೂಕು, ಜಿಲ್ಲಾ ಪಂಚಾಯಿತಿಗಳು ಮೂಗು ತೂರಿಸುವಂತಿಲ್ಲ. ಆದರೆ ಈ ಪಟ್ಟಿ ಹಲವು ಹಂತಗಳಲ್ಲಿ ಬದಲಾವಣೆಯಾಗುತ್ತಾ ಕೊನೆಗೆ ಕಡುಬಡವರ ಹೆಸರುಗಳೇ ಅಲ್ಲಿ ಕಾಣೆಯಾಗುತ್ತವೆ. ಇದರಿಂದ ಜನರಲ್ಲಿ ಗ್ರಾಮಸಭೆಗಳ ಮೇಲಿನ ನಂಬಿಕೆ ಕುಸಿಯುತ್ತಿದೆ. ಗ್ರಾಮಸ್ಥರ ದನಿಯ ಬಲವಿಲ್ಲದ ಗ್ರಾಮಸಭೆಗಳ ಅಧಿಕಾರವನ್ನು ಸ್ವಾರ್ಥ ರಾಜಕಾರಣಿಗಳು ಬಳಸಿಕೊಳ್ಳುತ್ತಿದ್ದಾರೆ.

ಭಾರತ ಸರ್ಕಾರವು 2009-10ನೇ ಸಾಲಿನ ವರ್ಷವನ್ನು ಗ್ರಾಮ ಸಭೆಯ ವರ್ಷವೆಂದೇ ಘೋಷಿಸಿ ಗ್ರಾಮ ಸಭೆಯ ಮಹತ್ವವನ್ನು ಅಂದರೆ ಸಮಗ್ರ ಅಭಿವದ್ಧಿಗೆ ಗ್ರಾಮದ ಜನತೆಯ ಅಗತ್ಯತೆಯನ್ನು ಎತ್ತಿ ತೋರಿಸುವ ಯತ್ನ ಮಾಡಿತು. ಈ ಹಿನ್ನೆಲೆಯಲ್ಲಿ ಗ್ರಾಮಸಭೆ ಹಾಗೂ ವಾರ್ಡ್ ಸಭೆಗಳ ಬಲವರ್ಧನೆಗಾಗಿ ತಿದ್ದುಪಡಿಯ ಮೂಲಕ ಕರ್ನಾಟಕ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ ಸಂಗತಿಯೇ.

ಆದರೆ ಆ ಸದುದ್ದೇಶದ ಸಾಧನೆಗೆ ತುಳಿದ ಹಾದಿ ಸರಿಯೇ? ಸಭೆ ನಡೆಸದ ಅಧ್ಯಕ್ಷ ಹಾಗೂ ಸದಸ್ಯರನ್ನು ಪದಚ್ಯುತಗೊಳಿಸಬೇಕೆನ್ನುವ ನಿರ್ಣಯ ಎಷ್ಟರಮಟ್ಟಿಗೆ ಸರಿ? ಅದೂ ಅವರನ್ನು ಅನರ್ಹಗೊಳಿಸುವ ಅಧಿಕಾರವನ್ನು ಪ್ರಾದೇಶಿಕ ಆಯುಕ್ತರಿಗೆ ನೀಡಿದ್ದು ಮತ್ತೊಂದು ಪ್ರಮಾದಕ್ಕೆ ದಾರಿ ಮಾಡಿಕೊಟ್ಟಂತಾಗುವುದಿಲ್ಲವೇ? ಜನರಿಂದ ಚುನಾಯಿತರಾದ ಅಭ್ಯರ್ಥಿಗಳನ್ನು ಅಧಿಕಾರಿಗಳು ಪದಚ್ಯುತಗೊಳಿಸುವುದೆಂದರೆ ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಧಕ್ಕೆ ತಂದಂತೆ.

`ತಿದ್ದುಪಡಿಗಳು ಅಧಿಕಾರವನ್ನು ನೀಡಬೇಕೇ ಹೊರತು ಕಿತ್ತುಕೊಳ್ಳುವಂತಿರಬಾರದು' ಎನ್ನುತ್ತಾರೆ ಐಸೆಕ್‌ನ ಪ್ರೊ. ಶಿವಣ್ಣ. ಗ್ರಾಮಸಭೆಯನ್ನು ಸಬಲಗೊಳಿಸಲೆಂಬ ಆಶಯ ಸರ್ಕಾರಕ್ಕೆ ಇದ್ದಲ್ಲಿ ಇದಕ್ಕಿಂತ ಅತ್ಯುತ್ತಮ ಹಾದಿಗಳಿವೆ. ಗ್ರಾಮಸಭೆಗಳಿಗೆ ಅಧಿಕಾರಿಗಳ ಜೊತೆಗೆ ಶಾಸಕರು, ಸಚಿವರು ಆಗಾಗ ಹಾಜರಾಗುವ ಪರಿಪಾಠ ಇಟ್ಟುಕೊಂಡರೆ ಜನರಲ್ಲಿ ವ್ಯವಸ್ಥೆಯ ಬಗ್ಗೆ ಭರವಸೆ ಹುಟ್ಟುತ್ತದೆ.

ಗ್ರಾಮಸಭೆ, ವಾರ್ಡ್‌ಸಭೆಗಳನ್ನು ನಡೆಸದ ಗ್ರಾಮಪಂಚಾಯಿತಿಗೆ ಅನುದಾನವನ್ನು ಕಡಿತ ಮಾಡುತ್ತೇವೆ ಎಂಬ ಬೆದರಿಕೆ ಹಾಕಬಹುದು. ಇಲ್ಲವೇ ಪ್ರತಿವರ್ಷದ ಈ ಸಭೆಗಳ ವರದಿಯನ್ನು ಪರಿಶೀಲಿಸಿಯೇ ಪಂಚಾಯಿತಿಗಳಿಗೆ ಅಭಿವದ್ಧಿಯ ಮುಂದಿನ ಕಂತುಗಳನ್ನು ಬಿಡುಗಡೆ ಮಾಡಲಾಗುವುದೆಂಬ ನಿಯಮವನ್ನು ಹಾಕಿಕೊಳ್ಳಬಹುದು.

ಸ್ಥಳೀಯ ಆಡಳಿತ ಪರಿಣಾಮಕಾರಿಯಾಗಿ ನಡೆಯಬೇಕಾದರೆ ಗ್ರಾಮಸಭೆಗೆ ಶಕ್ತಿ ತುಂಬುವುದು ಅನಿವಾರ‌್ಯ. ನೆರೆ ರಾಜ್ಯಗಳ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ವರ್ಷಕ್ಕೆ ಮೂರು- ನಾಲ್ಕು ಬಾರಿ ಗ್ರಾಮಸಭೆಗಳನ್ನು ಕರೆಯುವ ಪರಿಪಾಠವಿದೆ. ಅಲ್ಲಿ ಸಾಧ್ಯವಾದದ್ದು ನಮ್ಮಲ್ಲಿ ಅಸಾಧ್ಯ ಹೇಗಾಗುತ್ತದೆ? ಗ್ರಾಮಸಭೆಯ ವಿರಾಟ್ ಶಕ್ತಿ ಪೂರ್ಣ ಪ್ರಮಾಣದಲ್ಲಿ ಪ್ರಕಟಗೊಂಡರೆ ಇಡೀ ಪಂಚಾಯತ್ ವ್ಯವಸ್ಥೆ ಹೊಸತನ ಪಡೆದುಕೊಳ್ಳುವುದರಲ್ಲಿ ಯಾವ ಸಂದೇಹವೂ ಇಲ್ಲ.
-ಕೆ.ಆರ್. ಮಂಗಳಾ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT