ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಳ ಭದ್ರವಿಲ್ಲದ ‘ಬೇಸ್‌’!

ಉನ್ನತ ಶಿಕ್ಷಣ ಸಂಸ್ಥೆ ಮೇಲೆ ಸರ್ಕಾರದ ನಿಯಂತ್ರಣದ ಉದ್ದೇಶವಾದರೂ ಏನು?
Last Updated 13 ಜೂನ್ 2019, 20:36 IST
ಅಕ್ಷರ ಗಾತ್ರ

ವಿಶ್ವದ ಪ್ರತಿಷ್ಠಿತ ‘ಲಂಡನ್‌ ಸ್ಕೂಲ್ ಆಫ್‌ ಎಕನಾಮಿಕ್ಸ್‌’ (ಎಲ್‌ಎಸ್‌ಇ) ಸಂಸ್ಥೆಯ ಮಾದರಿಯಲ್ಲಿ ಎರಡು ವರ್ಷಗಳ ಹಿಂದೆ ಕರ್ನಾಟಕ ಸರ್ಕಾರ ‘ಬೆಂಗಳೂರು ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌’ (BASE) ಸಂಸ್ಥೆಯನ್ನು ಅಸ್ತಿತ್ವಕ್ಕೆ ತಂದಿತು. ಇದು ನಡೆದು ಬಂದ ದಾರಿ ನೋಡಿದರೆ, ಅತ್ಯಗತ್ಯವಾದ ಶೈಕ್ಷಣಿಕ ಸ್ವಾಯತ್ತತೆಯೂ ಒಳಗೊಂಡಂತೆ ಹೊಸ ಕಲ್ಪನೆಗಳಾಗಲೀ, ವಿನೂತನ ಮಾರ್ಗಗಳ ಚಿಂತನೆಯಾಗಲೀ ಕಾಣದೆ, ಯಾಂತ್ರಿಕವಾಗಿ ಸೃಷ್ಟಿಯಾದ ಕೇಂದ್ರವಾಗಿ ಮಾರ್ಪಟ್ಟಂತಿದೆ.

ಸ್ವಾಯತ್ತ ಸಂಸ್ಥೆಗೂ ಸರ್ಕಾರದ ಆರ್ಥಿಕ ಬೆಂಬಲ ಅವಶ್ಯಕ. ಆದರೆ ನಿಯಂತ್ರಣ ಅನಿವಾರ್ಯವಲ್ಲ. ಉನ್ನತ ಕಾರ್ಯನಿರ್ವಹಣೆಯಲ್ಲಿ ಸರ್ಕಾರಗಳ ಈವರೆಗಿನ ಪಾತ್ರ ಅನರ್ಥಕಾರಕವಾಗಿದೆ. ನಿಯಂತ್ರಣದ ಉದ್ದೇಶಗಳಾದರೂ ಏನು? ಬೇಕಾದವರನ್ನು ಕುಲಪತಿ, ರಿಜಿಸ್ಟ್ರಾರ್, ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸುವುದು. ಮತ್ತೊಂದು, ರಾಜಕೀಯ ಪಕ್ಷದ ಸೈದ್ಧಾಂತಿಕ ನಿಲುವಿನ ಪ್ರತಿಪಾದನೆಗಾಗಿ ಚರಿತ್ರೆ, ವಿಜ್ಞಾನ, ರಾಷ್ಟ್ರೀಯತೆ ಇತ್ಯಾದಿ ವಿಷಯಗಳನ್ನು ಪಠ್ಯವಸ್ತು ಮಾಡುವುದು. ಇಂಥ ಉದ್ದೇಶಗಳು ಮುಕ್ತ ಚಿಂತನೆಗೆ, ವಿಚಾರ ವಿನಿಮಯಕ್ಕೆ ಮಾರಕ. ಬದಲಾಗಿ, ಚಿಂತನೆ ಮತ್ತು ಶೈಕ್ಷಣಿಕ ಆತ್ಮವಿಶ್ವಾಸಕ್ಕೆ ಪೂರಕವಾಗಿ ಸಂಸ್ಥೆಯ ನಿರ್ದೇಶಕರು, ಕುಲಪತಿ, ಬೋಧಕರು ಮತ್ತು ಬೋಧಕೇತರರು, ಪಠ್ಯಗಳ ಅಳವಡಿಕೆ, ವಿದ್ಯಾರ್ಥಿಗಳ ಮೌಲ್ಯಮಾಪನ ಸೇರಿದಂತೆ ಎಲ್ಲ ವಿಷಯಗಳಲ್ಲೂ ಸಂಸ್ಥೆಗೆ ಪೂರ್ಣ ಅಧಿಕಾರ ಇರಬೇಕು. ಹೊರಗಿನ ವ್ಯಕ್ತಿಗಳು ಮೂಗು ತೂರಿಸಬಾರದು.

ಎಲ್‌ಎಸ್‌ಇ ಮಾತ್ರವಲ್ಲ, ಅಲ್ಲಿನ ಹಲವಾರು ವಿಶ್ವವಿದ್ಯಾಲಯಗಳು ಖಾಸಗಿ ದತ್ತಿಗಳನ್ನು ಸ್ವೀಕರಿಸುವುದರ ಜತೆಗೆ ಸರ್ಕಾರದ ಅನುದಾನವನ್ನೂ ಪಡೆಯುತ್ತಿವೆ. ಆದರೂ ಸರ್ಕಾರ ಪ್ರಜ್ಞಾಪೂರ್ವಕವಾಗಿಯೇ ಯಾವುದೇ ವಿಶ್ವವಿದ್ಯಾಲಯದ ಸ್ವಾಯತ್ತತೆ ಮತ್ತು ಆಂತರಿಕ ಆಡಳಿತದಲ್ಲಿ ಕೈಹಾಕದಿರುವ ಸಂಪ್ರದಾಯ ಗಟ್ಟಿಯಾಗಿ ಬೇರು ಬಿಟ್ಟಿದೆ. ಅಷ್ಟೇ ಅಲ್ಲ, ಅಧ್ಯಾಪಕ ಮತ್ತು ವಿದ್ಯಾರ್ಥಿಗಳೂ ಅದನ್ನು ಒಪ್ಪುವುದಿಲ್ಲ. ನಮ್ಮ ಕುಲಪತಿಗಳಲ್ಲಿ ಆ ರೀತಿಯ ಶೈಕ್ಷಣಿಕ, ನೈತಿಕ ನಾಯಕತ್ವ ಎಲ್ಲಿದೆ? ಮೇಲಿಂದ ಬರುವ ನಿರ್ದೇಶನಗಳಿಗೆ ತಲೆಬಾಗುವುದೇ ನಮ್ಮ ಸಂಪ್ರದಾಯವಾಗಿದೆ.

ಟೀಕೆ ಟಿಪ್ಪಣಿಗಳು, ಮುಕ್ತ ಚಿಂತನೆಯ ಸಾಧ್ಯತೆಗಳನ್ನು ನೋಡಿ: 2017ರವರೆಗೆ ಎಲ್‌ಎಸ್‌ಇ 16 ಮಂದಿ ನೊಬೆಲ್‌ ಪುರಸ್ಕೃತರನ್ನು ಜಗತ್ತಿಗೆ ನೀಡಿದೆ. ಜಗತ್ತಿನ ಹಲವು ಶ್ರೇಷ್ಠ ಅರ್ಥಶಾಸ್ತ್ರಜ್ಞರು ಇಲ್ಲಿನ ವಿದ್ಯಾರ್ಥಿಗಳು. ಸದಾ ಅತ್ಯುನ್ನತ ದರ್ಜೆಯ ಶಿಕ್ಷಣ ಮತ್ತು ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆಗಳಿಗೆ ಒತ್ತು ನೀಡಿದ್ದರ ಫಲ ಇದು. ಇಂತಹ ಧ್ಯೇಯೋದ್ದೇಶಗಳಿಗೆ ಮತ್ತು ಅಂಬೇಡ್ಕರ್‌ ಅವರ ಪ್ರತಿಷ್ಠೆಗೂ ಕುಂದು ಬರದಂತೆ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ಆರಂಭಿಸುವ ಜವಾಬ್ದಾರಿ ಸರ್ಕಾರದ ಮೇಲಿತ್ತು. ಅದು ಅಸಾಧ್ಯವಾಗಿತ್ತೇ?

ಮುಂದೇನು ಎಂಬ ಪ್ರಶ್ನೆ ಸಹಜ. ಮೊದಲಿಗೆ, ಖ್ಯಾತ ಆರ್ಥಿಕ ತಜ್ಞರನ್ನು ಒಳಗೊಂಡ ಸಮಿತಿಯೊಂದು ಪ್ರತಿಷ್ಠಿತ ನಿರ್ದೇಶಕರನ್ನು ಆಯ್ಕೆ ಮಾಡುವ ವ್ಯವಸ್ಥೆಯಾಗಬೇಕು. ಸಮಿತಿಗೆ ಪ್ರೊ.ಅಮರ್ತ್ಯಸೆನ್‌, ಪ್ರೊ.ಪ್ರಭಾತ್‌ ಪಟ್ನಾಯಕ್‌, ಪ್ರೊ.ಥೋರಟ್‌, ಪ್ರೊ.ತೇಲ್‌ತುಂಬ್ಡೆ ಅಂತಹವರ ನೇತೃತ್ವ ಇದ್ದಾಗ, ಯೋಗ್ಯ ವ್ಯಕ್ತಿಯ ಆಯ್ಕೆ ಸುಲಭಸಾಧ್ಯ. ಅರ್ಥಶಾಸ್ತ್ರದ ಜೊತೆಗೆ ಕೈಗಾರಿಕೆ, ಉದ್ಯಮ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿದವರನ್ನು ಬೋಧಕರ ಹುದ್ದೆಗಳಿಗೆ ನೇಮಿಸಬೇಕು. ಈ ಆಯ್ಕೆಗಳಲ್ಲಿ ಸರ್ಕಾರದ ಹಸ್ತಕ್ಷೇಪ ಕೂಡದು. ಆಗ ಮಾತ್ರ ಜಾತಿ, ಧರ್ಮ, ರಾಜಕೀಯ ಮತ್ತು ಹಣದ ಪ್ರಭಾವದಿಂದ ಕುಲಪತಿ, ಕುಲಸಚಿವ ಹಾಗೂ ಸಿಂಡಿಕೇಟ್‌ ಸದಸ್ಯರಾಗಲು ಲಾಬಿ ನಡೆಸಲು ಸಾಧ್ಯವಾಗುವುದಿಲ್ಲ.

‘ಬೇಸ್‌’ಗೆ ಸರ್ಕಾರವೇನೋ ಅನುದಾನ ಬಿಡುಗಡೆ ಮಾಡಿದೆ. ಕಾಲೇಜು, ಹಾಸ್ಟೆಲ್‌, ಗ್ರಂಥಾಲಯ ಹೀಗೆ ಭೌತಿಕ ಸೌಲಭ್ಯಗಳಿಗೆ 43 ಎಕರೆ (!) ಭೂಮಿಯನ್ನೂ ನೀಡಿದೆ. ಆದರೆ, ವಿಶೇಷವಾದ ಈ ಸಂಸ್ಥೆಗೆ ವಿಶಿಷ್ಟವಾದ ಶಿಕ್ಷಣವೂ ಸೇರಿದಂತೆ ಸಮಗ್ರ ಚಿತ್ರಣಕ್ಕೆ ಒಂದು ಮುನ್ನೋಟ ಸರ್ಕಾರಕ್ಕೆ ಹೊಳೆಯಲಿಲ್ಲವೇ? ಎಲ್‌ಎಸ್‌ಇ ಈಗಲೂ ಕೇವಲ ನಾಲ್ಕೈದು ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಕಟ್ಟಡದ ಬಾಹ್ಯ ಆಡಂಬರಕ್ಕಿಂತ ಬೌದ್ಧಿಕ ಜ್ಞಾನಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ.

ಪ್ರತಿಭಾನ್ವಿತ ವಿದ್ಯಾರ್ಥಿಗಳು ಇತರ ಪ್ರತಿಷ್ಠಿತ ಕಾಲೇಜುಗಳ ಪ್ರವೇಶಾವಕಾಶ ಬದಿಗಿಟ್ಟು ‘ಬೇಸ್‌’ ಸೇರಿದ್ದರು. ಇಲ್ಲಿನ ದುರವಸ್ಥೆಗೆ ಬೇಸತ್ತು ಕೆಲವು ತಿಂಗಳ ಹಿಂದೆ ಪ್ರತಿಭಟನೆ ನಡೆಸಿದ್ದು, ದೊಡ್ಡ ಸುದ್ದಿಯಾಗಿತ್ತು. ಎರಡನೇ ವರ್ಷ ಮುಗಿಯುತ್ತಾ ಬಂದರೂ ಒಬ್ಬನೇ ಒಬ್ಬ ಕಾಯಂ ಬೋಧಕರ ನೇಮಕ ಆಗಿಲ್ಲ. ಇಬ್ಬರು ಅಧ್ಯಾಪಕರನ್ನು ವಾರ್ಷಿಕ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ. ಶೈಕ್ಷಣಿಕ ಹಿನ್ನೆಲೆ ಇರುವ ಅರ್ಥಶಾಸ್ತ್ರಜ್ಞರನ್ನು ನಿರ್ದೇಶಕರನ್ನಾಗಿ ನೇಮಿಸಬೇಕೇ ಹೊರತು ಅಧಿಕಾರಿಗಳನ್ನಲ್ಲ ಎಂಬುದು ವಿದ್ಯಾರ್ಥಿಗಳ ಆಗ್ರಹವಾಗಿತ್ತು. ಪ್ರತಿಭಟನೆ ಮಾಡಿದ್ದಕ್ಕೆ ನಾಲ್ವರನ್ನು ಅಮಾನತು ಮಾಡಲಾಗಿತ್ತು. ಅಮಾನತು ಯಾವ ಸಮಸ್ಯೆಗೆ ಪರಿಹಾರವಾಗಿದೆ?

ಅಂಬೇಡ್ಕರ್‌ ಅವರ ಚಿಂತನಾ ಕ್ರಮದಂತೆ ಸಾಂಪ್ರದಾಯಿಕ ಅರ್ಥಶಾಸ್ತ್ರಕ್ಕೆ ಸವಾಲಿನಂತಾಗುವ ರಾಜಕೀಯ ಆರ್ಥಿಕತೆ, ಅಂದರೆ ರಾಜಕೀಯ ಸಿದ್ಧಾಂತಗಳ ಹಿಂದಿರುವ ಅರ್ಥಶಾಸ್ತ್ರದ ಮೌಲ್ಯಗಳ ವಿಶ್ಲೇಷಣಾ ಸಾಮರ್ಥ್ಯ ಕಲಿಸುವುದೇ ಬೇಸ್ ಉದ್ದೇಶವಾಗಿರ
ಬೇಕು. ಅದಕ್ಕೆ ತರಗತಿಯೊಳಗಿನ ಕಲಿಕೆ, ಉಪನ್ಯಾಸದ ಕಲೆ ಎಲ್ಲವೂ ಈವರೆಗಿನ ಪರಿಪಾಟಕ್ಕಿಂತ ವಿಭಿನ್ನವಾಗಿರುವುದು ಅವಶ್ಯ. ಹಾಗಾಗಿ, ನಿರೀಕ್ಷಿತ ಬೌದ್ಧಿಕ ಸಾಧನೆಗಳಿಂದ ಬೇಸ್ ಸದ್ಯಕ್ಕಂತೂ ಸಾವಿರ ಮೈಲುಗಳಷ್ಟು ಹಿಂದಿದೆ. ಈಗಲೂ ಲೋಪಗಳನ್ನು ಸರಿಪಡಿಸಿಕೊಂಡರೆ ಅದು ಪ್ರತಿಷ್ಠಿತ ಕೇಂದ್ರವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT