ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಟಿ ಮತ್ತು ಬ್ಯಾಂಕ್‌

Last Updated 14 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಹೊಟ್ಟೆ ತುಂಬಿದವರ ಮುಂದೆ ಹಸಿವಿನ ಬಗ್ಗೆ ಮಾತನಾಡುವುದು ವ್ಯರ್ಥ. ಹಾಗೆಯೇ ಹಸಿವಿನ ಅನುಭವ ಇರದವರ ಮುಂದೆ ಅನ್ನದ ಮಹತ್ವ ಕುರಿತು ಮಾತನಾಡುವುದು ಅಷ್ಟೇ ನಿರರ್ಥಕ. ನಮ್ಮ ದೇಶದಲ್ಲಿ ಇಂದಿಗೂ ಒಪ್ಪೊತ್ತಿನ ಊಟಕ್ಕೆ ತತ್ವಾರಪಡುವವರು ಇದ್ದಾರೆ. ಖಾನಾವಳಿಗೆ ಊಟಕ್ಕೆಂದು ಬಂದವರು, ‘ಬರೀ ರೊಟ್ಟಿಗೆಷ್ಟು...? ಅನ್ನಕ್ಕೆಷ್ಟು...?’ ಎಂದು ಕೇಳಿ ತಮ್ಮ ಕಿಸೆಯೊಳಗಿರುವ ದುಡ್ಡಿಗೆ ತಕ್ಕಂತೆ ಊಟ ಮಾಡಿ, ಅರೆಹೊಟ್ಟೆಯಲ್ಲಿ ನಡೆಯುವವರು ರಾಶಿ ರಾಶಿ.

ಊಟಕ್ಕೆ ಕಾಸಿಲ್ಲದೆ ಅಲ್ಪ ಆಹಾರದಿಂದಲೇ ಹೊಟ್ಟೆ ತುಂಬಿಸಿಕೊಳ್ಳುವವರಿಗೂ ನಮ್ಮಲ್ಲಿ ಕೊರತೆ ಇಲ್ಲ.  ಇಂಥವರ ಪಾಲಿಗೆ ಸ್ವಾತಂತ್ರ್ಯಾ ನಂತರವೂ ‘ಅಚ್ಛೇ ದಿನ್’ ಬಂದಿಲ್ಲ. ಹಸಿವಿಗೆ ಹೆದರಿ ಬದುಕುವ ಈ ಜನರ ನಡುವೆ ಹಸಿವೇ ಆಗುತ್ತಿಲ್ಲವೆಂದು ಮಾತ್ರೆ ಸೇವಿಸುವವರು ಇರುವರೆಂಬ ವ್ಯಂಗ್ಯವೂ ಕಠೋರ. ಒಂದೆಡೆ ಹಿಡಿ ಅನ್ನಕ್ಕಾಗಿ ಕಸದ ತೊಟ್ಟಿಯ ಬಳಿ  ಪ್ರಾಣಿಗಳೊಂದಿಗೆ ಸ್ಪರ್ಧೆಗಿಳಿಯುವವರು, ಇನ್ನೊಂದೆಡೆ ತುತ್ತು ತಿಂದದ್ದೇ ಒತ್ತರಿಸಿ ಬರುವ ತೇಗಿಗೆ ಹೆದರಿ ಅನ್ನ ಇರುವ ತಟ್ಟೆಯಲ್ಲೇ ಕೈ ತೊಳೆದು ಎದ್ದು ನಡೆಯುವವರು.

ಹಸಿವಿನ ಭೀಕರತೆ ಎಲ್ಲ ನಾಚಿಕೆಗಳನ್ನೂ ಮೀರಿ ನಿಂತಿರುವಂಥದ್ದು, ನಮ್ಮ ಜನಪದ ಕತೆಗಳಲ್ಲಿ ಬರುವ ತಾಯಿಯೊಬ್ಬಳು ತನ್ನ ಮಗುವಿನ ಹೊಟ್ಟೆ ಬಗೆದು ಅನ್ನ ಮುಕ್ಕುವ ಚಿತ್ರ ಹಸಿವಿನ ಭಯಂಕರ ವಿಕಾರ ಮುಖದ ಪರಿಚಯವಲ್ಲದೆ ಮತ್ತೇನು? ಅಮೆರಿಕದ ಫ್ರ್ಯಾಂಕ್ ಮೆಕಾರ್ಟ್ ಎನ್ನುವ ಶಿಕ್ಷಕನೊಬ್ಬ ತನ್ನ ಬಾಲ್ಯದ ಹಸಿವಿನ ಕುರಿತು ಆತ್ಮ ಚರಿತ್ರೆಯಲ್ಲಿ ತುಂಬ ಭಾವನಾತ್ಮಕವಾಗಿ ಬರೆದುಕೊಂಡಿದ್ದಾನೆ.

ಆತ ಚಿಕ್ಕವನಿದ್ದಾಗ ಅತ್ಯಂತ ಕಡುಬಡತನದ ಸ್ಥಿತಿ. ಮನೆಯಲ್ಲಿ ಎಲ್ಲವೂ ಒಣ ಒಣ. ಹೀಗಿರುವಾಗ ಹಸಿವಿನಿಂದ ಕಂಗೆಟ್ಟ ಬಾಲಕ ಮೆಕಾರ್ಟ್ ರೈಲು ನಿಲ್ದಾಣದಲ್ಲಿ ಮೀನು ಫ್ರೈ ಸುತ್ತಿ ಬಿಸಾಡಿದ ಪೇಪರ್ ತುಂಡನ್ನೇ ಎತ್ತಿ ತಿಂದದ್ದರ ಬಗ್ಗೆ ಹೇಳಿರುವುದು ದಂತಕತೆಯಂತೂ ಅಲ್ಲ.

ನಮ್ಮ ಮನೆಯಲ್ಲೂ ಬಾಲ್ಯದಲ್ಲಿ ಅತ್ಯಂತ ಬಡತನ ಇತ್ತು. ಹೊಟ್ಟೆ ಮಾತ್ರ ನಾಚಿಕೆಯಿಲ್ಲದೆ ಸದಾ ಹಸಿವು ಹಸಿವು ಎಂದು ಹಲುಬುತ್ತಿತ್ತು. ಆದರೆ ತಿನ್ನಲು ಏನೂ ಇರುತ್ತಿರಲಿಲ್ಲ. ಹೊಟ್ಟೆಯನ್ನು ಮರುಗಿಸಿ ಬದುಕಿದ ದಿನಗಳಿಗೆ ಲೆಕ್ಕವಿಲ್ಲ. ಮನೆಯ ಎಲ್ಲರಿಗೂ ಈಡಾಗಲಿ ಎನ್ನುವ ಕಾರಣಕ್ಕೆ ನಮ್ಮವ್ವ ಗಂಜಿ, ನುಚ್ಚು, ಅಂಬಲಿ ಇಂಥದನ್ನೇ ಹೆಚ್ಚೆಚ್ಚು ಮಾಡುವುದಿತ್ತು. ಹಬ್ಬ ಹರಿದಿನಗಳಲ್ಲಿಯೂ ಅದೇ ಸ್ಥಿತಿ. ಹೀಗಿದ್ದ ನನಗೆ ತಂಗಳನ್ನವೂ ಬೆಳಗಿನ ಜಾವಕ್ಕೆ ಮೃಷ್ಟಾನ್ನವಾಗಿಬಿಡುತ್ತಿತ್ತು. ಈಗಲೂ ನನಗೆ ಆಹಾರ ಹಾಳಾಗುವುದನ್ನು ಸಹಿಸಲಾಗುವುದಿಲ್ಲ. ಆಹಾರವನ್ನು ಹಾಳು ಮಾಡಬಾರದು. ಅದರ ಮೌಲ್ಯ ಅಗಾಧವಾದುದು. ಹಸಿವು, ಕೊರತೆ, ಬಡತನದ ಬಾಧೆಯಲ್ಲಿ ಬೆಳೆದವರಿಗೆ ಮಾತ್ರ ಅದರ ನಿಜವಾದ ಮೌಲ್ಯ ಗೊತ್ತಾಗುತ್ತದೆ.

ನಮ್ಮ ಸುತ್ತಲೂ ನಡೆಯುವ ಅನೇಕ ಒಳ್ಳೆಯ ಕೆಲಸಗಳು ಅಷ್ಟಾಗಿ ಸುದ್ದಿಯಾಗುವುದಿಲ್ಲ. ಒಳ್ಳೆಯದು ಬಯಲಾಗಲು ತಡವಾಗುತ್ತದೆ. ಜೊತೆಗೆ ಬಹುತೇಕರು ಸಿನಿಕರಾಗಿರುವ ಸಮಕಾಲೀನ ಸಂದರ್ಭದಲ್ಲಿ ಒಳ್ಳೆಯತನ ಮತ್ತು ಒಳ್ಳೆಯ ಕೆಲಸಗಳು ಬೆಳಕಿಗೆ ಬರುವುದು ತಡವಾಗುತ್ತವೆ. ತಡವಾಗಲಿ, ಆದರೆ ಬೆಳಕಿಗೆ ಬಾರದೇ ಇರಬಾರದು. ನಮ್ಮಲ್ಲಿರುವ ಬಡವರು ಮತ್ತು ಹಸಿವಿನಿಂದ ಬಳಲುವವರ ಸಲುವಾಗಿ ಅಲ್ಲಲ್ಲಿ ಕೆಲವು ಚಟುವಟಿಕೆಗಳು ನಿರಂತರವಾಗಿ ನಡೆದಿರುತ್ತವೆ. ಅವುಗಳನ್ನು ಮತ್ತೆ ಮತ್ತೆ ತೋರಿಸುವ ಕೆಲಸಗಳಾಗಬೇಕು.

ಆ ಮೂಲಕ ಒಳ್ಳೆಯ ಕೆಲಸ ಮಾಡಲು ಮನಸಿದ್ದರೂ ಮುಂದೆ ಬಾರದವರಿಗೆ ಉತ್ತೇಜನ ನೀಡಿದಂತಾಗುತ್ತದೆ. ಎರಡು ತಿಂಗಳ ಹಿಂದೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ಯೂಸುಫ್‌ ಮುಕತಿ ಎನ್ನುವವರು ರೋಟಿ ಬ್ಯಾಂಕ್ ಎನ್ನುವ ಸಂಸ್ಥೆ ಸ್ಥಾಪಿಸುವ ಮೂಲಕ ಅಪಾರ ಮೆಚ್ಚುಗೆ ಗಳಿಸಿದರು. ಹಸಿವಿನಿಂದ ಕಂಗಾಲಾದವರು ಈ ರೋಟಿ ಬ್ಯಾಂಕ್ ಬಳಿ ಬಂದು ಅಂಗಲಾಚುವ ಮುನ್ನವೇ ಕೈಗೆ ಆಹಾರದ ಪೊಟ್ಟಣ ದಕ್ಕಿಬಿಡುತ್ತದೆ. ಹಸಿದ ನೂರಾರು ಜನ ಈ ರೋಟಿ ಬ್ಯಾಂಕಿನ ನೆರವನ್ನು ಪ್ರತಿದಿನ ಪಡೆಯುತ್ತಿದ್ದಾರೆ. ಈ ಬ್ಯಾಂಕಲ್ಲಿ ಸದಸ್ಯರಾಗ ಬಯಸುವವರು ಒಂದು ಖಾತೆ ತೆರೆಯಬೇಕು.

ಹಾಗೆ ಖಾತೆ ತೆರೆದಾದ ನಂತರ ಪ್ರತಿನಿತ್ಯ ಎರಡು ಚಪಾತಿ ಇಲ್ಲವೇ ರೋಟಿಗಳನ್ನು ಅಲ್ಲಿ ಜಮಾ ಮಾಡಬೇಕು. ಒಂದು ದಿನದಲ್ಲಿ ನೀವು ಬೇಕಾದಷ್ಟು ಬಾರಿ ಜಮಾ ಮಾಡಬಹುದು. ಹಾಗೆಯೇ ಇಲ್ಲಿ ಯಾರೂ ಖಾತೆ ತೆರೆಯಬಹುದು. ಇಲ್ಲಿ ಕೆಲಸ ಮಾಡುವವರು, ಜಮಾ ಮಾಡಲಾದ ಆಹಾರವನ್ನು ಸಸ್ಯಾಹಾರ ಮತ್ತು ಮಾಂಸಾಹಾರ ಎಂದು ವಿಂಗಡಣೆ ಮಾಡಿ ಪೊಟ್ಟಣ ಕಟ್ಟಿಡುತ್ತಾರೆ. ಯಾವುದಾದರೂ ದಿನ ಹೆಚ್ಚಿಗೆ ಆಹಾರ ಜಮಾ ಆದರೆ ಅದನ್ನು ಕೆಡದಂತೆ ಸಂಗ್ರಹಿಸಿ ಇಡಲಾಗುತ್ತದೆ. ಅದು ಮರುದಿನ ಹಾಳಾಗುತ್ತದೆ ಎಂದೆನಿಸಿದರೆ ಅದನ್ನು ಅಲ್ಲಿ ಕೆಲಸ ಮಾಡುವವರು ಹಂಚಿಕೊಂಡು ಬಳಸುತ್ತಾರೆ.

ಹಸಿದ ಬಡ ಜನರನ್ನು ಗಮನದಲ್ಲಿಟ್ಟುಕೊಂಡು ಆರಂಭವಾದ ಈ ರೋಟಿ ಬ್ಯಾಂಕ್ ಕೇವಲ ಔರಂಗಾಬಾದ್ ಮಾತ್ರವಲ್ಲದೇ ಇಡೀ ದೇಶದಾದ್ಯಂತ ಸ್ಥಾಪನೆಯಾಗಬೇಕು. ನಮ್ಮ ಕರ್ನಾಟಕದಲ್ಲೂ ಅಂಥ ರೋಟಿ ಬ್ಯಾಂಕ್ ಅವಶ್ಯಕತೆಯಿದೆ. ನಮ್ಮ ದೇಶ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವಂತೆ ಹಸಿವು ಮತ್ತು ಬಡತನದ ನಿರ್ಮೂಲನೆಯಲ್ಲಿಯೂ ಒಂದಡಿ ಮುಂದಿಡುವ ಅವಶ್ಯಕತೆಯಿದೆ. ಅನ್ನದಾನ ಎಲ್ಲ ದಾನಗಳಿಗಿಂತಲೂ ಶ್ರೇಷ್ಠ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT