ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ವಾಸ್ತವ್ಯದ ಪ್ರಯೋಜನ...

ಮುಖ್ಯಮಂತ್ರಿ ಒಂದು ದಿನ ಇರುತ್ತಾರೆ ಎನ್ನುವ ನೆವಕ್ಕೆ ಆ ಶಾಲೆ ಯಾವ ಮಟ್ಟಿಗೆ ಸಿದ್ಧವಾಗಬಹುದು ಎಂಬುದನ್ನು ಕಲ್ಪಿಸಿಕೊಂಡರೆ ಖುಷಿಯಾಗುತ್ತದೆ
Last Updated 6 ಜೂನ್ 2019, 18:52 IST
ಅಕ್ಷರ ಗಾತ್ರ

‘ಮೈಸೂರು ಚೆನ್ನಾಗಿದೆ ಮಾರ‍್ರೆ, ಬಾಳ ಕ್ಲೀನ್ ಆಗಿದೆ’ ಅಂತ ಯಾರಾದರೂ ಅಂದರೆ ನನಗೆ ನೆನಪಾಗುವುದು ದಸರೆ. ಪ್ರತಿವರ್ಷ ದಸರೆಯ ಹೊತ್ತಿಗೆ ರಸ್ತೆಗಳ ಗುಂಡಿ ಮುಚ್ಚಿ, ಡಾಂಬರು ಬಳಿದು, ಚರಂಡಿ ಕ್ಲೀನ್ ಮಾಡಿ, ಬಣ್ಣ ಬಳಿದು ಸುಂದರಗೊಳಿಸಬೇಕು. ಮೂಲ
ಸೌಕರ್ಯಗಳನ್ನು ಒದಗಿಸಬೇಕು. ಇಲ್ಲದಿದ್ದರೆ ದಸರೆಗೆ ಅಂತ ಬರುವ ಜನ ಈ ಎಲ್ಲಾ ಅವಾಂತರಗಳನ್ನು ನೋಡಿ ಸುಮ್ಮನಿರುತ್ತಾರೆಯೇ? ಮಾಧ್ಯಮಗಳು ಸುಮ್ಮನಿರುತ್ತವೆಯೇ? ಕೆಲವೊಂದು ಭಯಕ್ಕಾದರೂ ಆ ಕೆಲಸಗಳಾಗುತ್ತವೆ. ಬಹುಶಃ ಮೈಸೂರಿನ ಪಾಲಿಗೆ ದಸರೆ ಇಲ್ಲದೇ ಹೋಗಿದ್ದರೆ, ಮೂರು ಮತ್ತೊಂದು ಜಿಲ್ಲಾ ಕೇಂದ್ರಗಳಂತೆ ಅದು ಕೂಡ ಆಗುತ್ತಿತ್ತಾ?

ಹಳ್ಳಿಯ ರಸ್ತೆಗಳಲ್ಲಿರುವ ಗುಂಡಿಗಳಿಗೆ ಮಣ್ಣು ತುಂಬಲಾಗುತ್ತಿದೆ ಎಂದರೆ, ಬೀದಿದೀಪಗಳನ್ನು ಹುಡುಕಿ ಹುಡುಕಿ ಸರಿ ಮಾಡಲಾಗುತ್ತಿದೆ ಎಂದರೆ, ಅಧಿಕಾರಿಗಳು ಹಳ್ಳಿಯನ್ನೇ ದತ್ತು ತೆಗೆದುಕೊಂಡವರಂತೆ ಅಲ್ಲೇ ತಿರುಗಾಡುತ್ತಿದ್ದಾರೆ ಎಂದರೆ, ಒಂದೆರಡು ದಿನಗಳಲ್ಲಿ ಅಲ್ಲಿಗೆ ಭಾರಿ ಪ್ರಭಾವ ಉಳ್ಳ ಅತಿಗಣ್ಯ ವ್ಯಕ್ತಿ ಯಾರೋ ಬರುತ್ತಿದ್ದಾರೆ ಅಂತಲೇ ಅರ್ಥ. ಅವರು ಹಾಗೆ ಬರುವ ನೆಪದಲ್ಲಿ ಊರು ಒಂದಷ್ಟು ಚೆನ್ನಾಗಿಯೇ ತಯಾರಾಗುತ್ತದೆ. ಕೆಲವು ಸೌಲಭ್ಯಗಳು ಲಭ್ಯವಾಗುತ್ತವೆ. ಊರಿನ ಪಾಲಿಗೆ ಅದೇ ಪುಣ್ಯ. ನಮಗೆ ಬೇಕಾದ ಮೂಲಸೌಕರ್ಯಗಳು ಪೂರ್ಣವಾಗಿ ದಕ್ಕಬೇಕಾದರೆ, ಯಾರಾದರೂ ದೊಡ್ಡವರು ಭೇಟಿ ನೀಡುತ್ತಾರೆ ಅನ್ನುವ ಭಯವೊಂದು ಆಡಳಿತ ವರ್ಗಕ್ಕೆ ಮುಟ್ಟಲೇಬೇಕೇ?

ಮಳೆ ಬಂದರೆ ಸೋರುವ ನೀರಿಗೆ ಎಲ್ಲಿ ಪುಸ್ತಕಗಳು ತೊಯ್ದುಬಿಡುತ್ತವೋ ಅಂತ ಬ್ಯಾಗ್ ಎತ್ತಿಕೊಂಡು ಮೂಲೆಯಲ್ಲಿ ನಿಲ್ಲುವ ಮಕ್ಕಳನ್ನು, ಮಧ್ಯಾಹ್ನ ಊಟ ಮಾಡಿ ತಟ್ಟೆ ತೊಳೆಯಲು, ಕುಡಿಯಲು ನೀರು ಹುಡುಕುತ್ತಾ ಶಾಲೆಯ ಅಕ್ಕಪಕ್ಕದ ಮನೆಯವರ ಬಳಿ ಹೋಗಿ ನಿಲ್ಲುವ ಮಕ್ಕಳನ್ನು, ಶಾಲೆ ತುಂಬಾ ಇರುವ ಮಕ್ಕಳು ತಮ್ಮ ಬ್ಯಾಗಿನ ತುಂಬಾ ಇರುವ ಪುಸ್ತಕಗಳಿಗೆ ಬರೀ ಇಬ್ಬರು ಮೇಷ್ಟ್ರುಗಳಿಂದ ಪಾಠ ಹೇಳಿಸಿಕೊಳ್ಳಬೇಕಾದುದನ್ನು, ಶಾಲಾ ಅಂಗಳದಲ್ಲಿ ಆಟಕ್ಕೆ ಜಾಗವಿಲ್ಲದೆ ಊರಿನ ರಸ್ತೆಯಲ್ಲಿ ಓಟವನ್ನು ಕಲಿಸುವ ಮೇಷ್ಟ್ರುಗಳನ್ನು, ಹೈಸ್ಕೂಲ್ ಕಳೆದರೂ ಕಂಪ್ಯೂಟರನ್ನು ಬೆರಗುಗಣ್ಣಿನಿಂದ ನೋಡುವ ಮಕ್ಕಳನ್ನು, ಸೂಕ್ತ ಶೌಚಾಲಯವಿಲ್ಲದೆ ಸಂಕಟಪಡುವ ಮಕ್ಕಳನ್ನು ನೋಡಿದಾಗ, ಯಾಕೆ ಶಾಲೆಯ ಕಡೆ ಮುಖ್ಯಮಂತ್ರಿಯೋ ಪ್ರಧಾನಮಂತ್ರಿಯೋ ಬರಬಾರದು ಎಂದು ನಾನು ಹತ್ತಾರು ಬಾರಿ ಯೋಚಿಸಿದ್ದಿದೆ. ಅವರು ಬರುತ್ತಾರೆ ಅನ್ನುವ ಸುದ್ದಿ ಸಿಕ್ಕ ತಕ್ಷಣ, ಎರಡು-ಮೂರು ದಿನಕ್ಕೇ ತಯಾರಾಗಿ ಬಿಡುವ ಮೂಲಭೂತ ಸೌಕರ್ಯ
ಗಳಾದರೂ ಮಕ್ಕಳಿಗೆ ಸಿಗಲಿ ಅಂದುಕೊಂಡಿದ್ದಿದೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡುವುದಾಗಿ ಹೇಳಿದಾಗ ನನಗೆ ಥಟ್ಟನೆ ನೆನಪಾಗಿದ್ದು ನನ್ನ ಈ ಯೋಚನೆಗಳು. ಮುಖ್ಯಮಂತ್ರಿ ಅವರ ರಾಜಕೀಯ ಲೆಕ್ಕಾಚಾರ ಏನಾದರೂ ಇರಲಿ, ಅವರು ಒಂದು
ದಿನ ಶಾಲೆಯಲ್ಲಿ ಇರುತ್ತಾರೆ ಎನ್ನುವ ನೆವಕ್ಕೆ ಆ ಶಾಲೆ ಮತ್ತು ಅದರ ಸುತ್ತಮುತ್ತಲಿನ ಶಾಲೆಗಳು ಯಾವ ಮಟ್ಟಿಗೆ ಸಿದ್ಧವಾಗಬಹುದು ಎಂಬುದನ್ನು ಕಲ್ಪಿಸಿಕೊಂಡರೆ ಖುಷಿಯಾಗುತ್ತದೆ.

ನೀರಿಲ್ಲ, ಆಟದ ಮೈದಾನ ಇಲ್ಲ, ಕಾಂಪೌಂಡ್ ಇಲ್ಲ, ಮೇಷ್ಟ್ರು ಇಲ್ಲ, ಶೌಚಾಲಯ ಇಲ್ಲ, ಕಂಪ್ಯೂಟರ್ ಇಲ್ಲ... ಹೀಗೆ ಹಲವು ಸೌಲಭ್ಯಗಳು ಇಲ್ಲ ಎಂದು ಅರ್ಜಿ ಬರೆದು ಬರೆದು ಸುಸ್ತಾದ ಹೊತ್ತಿನಲ್ಲಿ, ಈಗ ಮುಖ್ಯಮಂತ್ರಿ ಬಂದು ಇಲ್ಲಿ ಉಳಿಯಲಿದ್ದಾರೆ ಎನ್ನುವ ನೆವಕ್ಕೆ ಈ ‘ಇಲ್ಲ’ಗಳಲ್ಲಿ ಕೆಲವಾದರೂ ಕೈಗೂಡುತ್ತವಲ್ಲ ಎನ್ನುವುದೇ ಖುಷಿಯ ವಿಚಾರ. ಪೋಷಕರಾಗಲೀ, ಮೇಷ್ಟ್ರುಗಳಾಗಲೀ ನಮ್ಮ ಶಾಲೆಗೆ ಇದು ಬೇಕು, ಅದು ಬೇಕು ಎಂದು ಅರ್ಜಿ ಹಿಡಿದು ನಿಂತಾಗ, ಅದೇ ಶಾಲೆಗೆ ಬಂದಿರುವ ಮುಖ್ಯಮಂತ್ರಿ ‘ಇಲ್ಲ’ ಎನ್ನಲು ಸಾಧ್ಯವಾಗುವುದಿಲ್ಲ. ಸುತ್ತಮುತ್ತಲಿನ ಶಾಲೆಗಳ ಬೇಡಿಕೆಗಳನ್ನು ಅವರು ನಿರಾಕರಿಸಲಾಗುವುದಿಲ್ಲ. ಸೌಲಭ್ಯವಂಚಿತ ಆಯಾ ಸರ್ಕಾರಿ ಶಾಲೆಯ ಪಾಲಿಗೆ ಹೀಗೆ ದೊಡ್ಡವರು ಬರುವ ದಿನಗಳೇ ಒಳ್ಳೆಯ ದಿನಗಳೇನೊ!

ಮಂತ್ರಿಗಳು ಬರುತ್ತಾರೆ, ಅಧಿಕಾರಿಗಳು ಬರುತ್ತಾರೆ ಎನ್ನುವ ಕಾರಣಕ್ಕೆ ಮೂಲಸೌಕರ್ಯಗಳನ್ನು ಕೊಡಲಾಗುತ್ತದೆ ಎಂದರೆ, ಇನ್ನೂ
ನಾವೆಂತಹ ಸ್ಥಿತಿಯಲ್ಲಿದ್ದೇವೆ? ನಮ್ಮ ಆಡಳಿತ ವ್ಯವಸ್ಥೆ ಯಾಕೆ ಹೀಗೆ ಕುಂಟುತ್ತಿದೆ? ಸರ್ಕಾರಿ ಶಾಲೆಗಳ ಮಟ್ಟಿಗೆ ಸಮಸ್ಯೆಗಳ ದೊಡ್ಡ ಉಗ್ರಾಣವೇ ಇದೆ. ಅದು ಬರೀ ಭೌತಿಕವಲ್ಲದೆ ಬೌದ್ಧಿಕವಾಗಿಯೂ ಹೌದು. ಹಲವು ‘ಇಲ್ಲ’ಗಳು, ಸರ್ಕಾರಿ ಶಾಲೆ ಎಂದರೆ ಸಮಾಜವು ಮೂಗು ಮುರಿಯುವಂತೆ ಮಾಡಿವೆ. ಸರ್ಕಾರಿ ಶಾಲೆಗಳಲ್ಲಿ ಮುಖ್ಯಮಂತ್ರಿ ಅವರ ವಾಸ್ತವ್ಯವು ಆ ಶಾಲೆಗಳಿಗೆ ಹೊಸ ಚೈತನ್ಯ ಮೂಡಿಸಬಹುದು. ಸರ್ಕಾರಿ ಶಾಲೆಯಲ್ಲಿ ಉಳಿದುಕೊಂಡು ಗ್ರಹಿಸುವ ಸಮಸ್ಯೆಗಳ ಆಳ ಮತ್ತು ಅವುಗಳನ್ನು ಆಧರಿಸಿ ಇಡೀ ರಾಜ್ಯದ ಎಲ್ಲಾ ಶಾಲೆಗಳ ಒಂದು ನಿಖರ ಅಭಿವೃದ್ಧಿಗೆ ಅವರು ಮನಸ್ಸು ಮಾಡಬಹುದು. ಅಂತಹ ಆಶಾಭಾವನೆ ಇಟ್ಟುಕೊಳ್ಳೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT