ಅಡ್ವಾಣಿ ವಿರುದ್ಧ ಆರೋಪಪಟ್ಟಿ ಸಲ್ಲಿಕೆಗೆ ಆದೇಶ
ನವದೆಹಲಿ, ಸೆ. 6 (ಯುಎನ್‌ಐ, ಪಿಟಿಐ)– ಜೈನ್ ಹವಾಲ ಹಗರಣಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಎಲ್.ಕೆ. ಅಡ್ವಾಣಿ ಅವರ ವಿರುದ್ಧ ‘ಭ್ರಷ್ಟಾಚಾರ ಹಾಗೂ ಅಪರಾಧೀಕರಣ ಪಿತೂರಿ’ ಆರೋಪಪಟ್ಟಿಯನ್ನು ಸಲ್ಲಿಸಲು ವಿಶೇಷ ನ್ಯಾಯಾಲಯ ಇಂದು ಆದೇಶಿಸಿದೆ.
ಸಿಬಿಐ ಸಲ್ಲಿಸಿರುವ ದೋಷಾರೋಪಪಟ್ಟಿ ಹಾಗೂ ಸಾಕ್ಷ್ಯಾಧಾರಗಳಿಂದ ಅಡ್ವಾಣಿ ಅವರ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ವಿಶೇಷ ನ್ಯಾಯಾಧೀಶ ವಿ.ಬಿ. ಗುಪ್ತಾ ಕಿಕ್ಕಿರಿದು ತುಂಬಿದ್ದ ನ್ಯಾಯಾಲಯದಲ್ಲಿ ಘೋಷಿಸಿದರು.
ಆಡಳಿತದಲ್ಲಿ ಹಸ್ತಕ್ಷೇಪ ತಡೆಗೆ ಭರವಸೆ
ಬೆಂಗಳೂರು, ಸೆ. 6– ಅಭಿವೃದ್ಧಿ ಕಾರ್ಯಗಳ ಅನುಷ್ಠಾನದಲ್ಲಿನ ವಿಳಂಬ ನೀತಿ, ಆಡಳಿತದಲ್ಲಿನ ಅಸಂಬದ್ಧತೆ ತೊಡೆದು ಹಾಕಿ ಜನತೆಯ ಆಶೋತ್ತರಗಳಿಗೆ ಸ್ಪಂದಿಸಿ ಕಾರ್ಯ ನಿರ್ವಹಿಸುವಂತೆ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಇಂದು ಇಲ್ಲಿ ಉನ್ನತ ಅಧಿಕಾರಿಗಳಿಗೆ ಕರೆ ನೀಡಿದರು.
ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾ ಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ವಿಭಾಗಾಧಿಕಾರಿ ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರ ಸಮಾವೇಶ ಉದ್ಘಾಟಿಸಿದ ಅವರು, ಸರ್ಕಾರ ಹಾಗೂ ಜನತೆಯ ನಡುವಿನ ಕೊಂಡಿಯಾಗಿರುವ ಅಧಿಕಾರಶಾಹಿಯ ಕಾರ್ಯಕ್ಷಮತೆಯೇ ಯಾವುದೇ ಸರ್ಕಾರದ ಕಾರ್ಯವೈಖರಿಗೆ ಅಳತೆಗೋಲಾಗುವುದು ಎಂದರು.
ಆಡಳಿತ ಯಂತ್ರವನ್ನು ಧೃತಿಗೆಡಿಸುವ ಕೆಲವು ರಾಜಕೀಯ ಶಕ್ತಿಗಳು ಸದಾ ಕಾಲದಲ್ಲಿಯೂ ಕೆಲಸ ಮಾಡುತ್ತಿರುತ್ತವೆ. ಇಂಥ ಶಕ್ತಿಗಳ ವಿಚ್ಛಿದ್ರಕಾರಕ ಯತ್ನಗಳಿಗೆ ಅಳುಕಬೇಕಾಗಿಲ್ಲ ಎಂದ ಅವರು, ಆಡಳಿತದಲ್ಲಿ ರಾಜಕೀಯ ಹಸ್ತಕ್ಷೇಪ ಇಲ್ಲದಂತೆ ನೋಡಿಕೊಳ್ಳುವ ಭರವಸೆ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.