ರಾಜೀವ್ ಹತ್ಯೆ ಸಂಚು: ಕರುಣಾನಿಧಿ ಹೆಸರು ಕೈಬಿಡಲು ಕೇಂದ್ರ ನಿರ್ಧಾರ
ಚೆನ್ನೈ, ಆಗಸ್ಟ್ 24– ಜೈನ್ ಆಯೋಗದ ಅಂತಿಮ ವರದಿಯ ಸಂಬಂಧ ಸರ್ಕಾರ ಪ್ರಕಟಿಸಿದ ‘ಕ್ರಮ ಕೈಗೊಂಡ ವರದಿ’ಯಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಕರುಣಾನಿಧಿ ಅವರ ಹೆಸರು ಅಚಾತುರ್ಯದಿಂದಾಗಿ ಸೇರ್ಪಡೆ ಆಗಿರುವುದನ್ನು ಶೀಘ್ರವೇ ಸರಿಪಡಿಸಲಾಗುವುದು ಎಂದು ಗೃಹ ಸಚಿವ ಎಲ್.ಕೆ. ಅಡ್ವಾಣಿ ತಿಳಿಸಿದ್ದಾರೆ.
ಅಡ್ವಾಣಿ ಅವರ ಈ ಬಗೆಯ ಹೇಳಿಕೆಯಿಂದಾಗಿ ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ವಿರಸ ಮತ್ತಷ್ಟು ಹೆಚ್ಚುವ ಸಾಧ್ಯತೆಗಳು ಕಂಡುಬಂದಿವೆ.
ಕೇಂದ್ರದ ಮಾಜಿ ಸಚಿವ ಮತ್ತು ಡಿಎಂಕೆ ಸಂಸದೀಯ ಪಕ್ಷದ ನಾಯಕ ಮುರಸೋಳಿ ಮಾರನ್ ಅವರಿಗೆ ಬರೆದ ಪತ್ರದಲ್ಲಿ ಗೃಹ ಸಚಿವರು ಈ ‘ಪ್ರಮಾದ’ವನ್ನು ಒಪ್ಪಿಕೊಂಡಿದ್ದಾರೆ. ಅಡ್ವಾಣಿ ಅವರ ಪತ್ರದ ಪ್ರತಿಗಳನ್ನು ಮುರಸೋಳಿ ಮಾರನ್ ಅವರು ಪತ್ರಿಕಾಗೋಷ್ಠಿಯಲ್ಲಿ ಇಂದು ಬಿಡುಗಡೆ ಮಾಡಿದರು.
ಹೊಸೂರು ಕಳ್ಳಬಟ್ಟಿ ದುರಂತ ಸತ್ತವರ ಸಂಖ್ಯೆ 54ಕ್ಕೆ ಏರಿಕೆ
ಚೆನ್ನೈ, ಆಗಸ್ಟ್ 24 (ಪಿಟಿಐ, ಯುಎನ್‌ಐ)– ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಹೊಸೂರಿನಲ್ಲಿ ಶನಿವಾರ ಕಳ್ಳಬಟ್ಟಿ ಸೇವಿಸಿದ್ದರಿಂದ ಸತ್ತವರ ಸಂಖ್ಯೆ ಈಗ 54ಕ್ಕೆ ಏರಿದೆ ಎಂದು ಇಲ್ಲಿನ ಶಾಸಕ
ಬಿ. ವೆಂಕಟಸ್ವಾಮಿ ಅವರು ತಿಳಿಸಿದ್ದಾರೆ.
ಕಳ್ಳಬಟ್ಟಿ ಸೇವನೆಯಿಂದ ಅಸ್ವಸ್ಥರಾಗಿರುವವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ಹೊಸೂರು ಮತ್ತು ಕೃಷ್ಣಗಿರಿ ಆಸ್ಪತ್ರೆಗಳಲ್ಲಿ ಸುಮಾರು 125 ಮಂದಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.