ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

25 ವರ್ಷಗಳ ಹಿಂದೆ: ಎಸ್‌ಎಸ್‌ಎಲ್‌ಸಿವರೆಗೆ ಕನ್ನಡದಲ್ಲೇ ಶಿಕ್ಷಣ– ಭೈರಪ್ಪ ಆಗ್ರಹ

Published 26 ಫೆಬ್ರುವರಿ 2024, 23:30 IST
Last Updated 26 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಡಿ.ಎಲ್.ನರಸಿಂಹಾಚಾರ್ ನಗರ (ಕನಕಪುರ), ಫೆ. 26– ಕರ್ನಾಟಕದಲ್ಲಿ ಕನ್ನಡವೇ ಶಿಕ್ಷಣ ಮಾಧ್ಯಮವಾಗ
ಬೇಕು; ಆಡಳಿತ ಭಾಷೆಯಾಗಬೇಕು; ಇದಕ್ಕೆ ಸಂವಿಧಾನದ ಯಾವುದೇ ಅನುಚ್ಛೇದ
ಅಡ್ಡಿಯಾಗುವಂತಿದ್ದರೆ ಅದನ್ನು ನಿವಾರಿಸಲು ಸೂಕ್ತ ತಿದ್ದುಪಡಿ ತರಬೇಕು; ಗಡಿ ಸೀಮೆಯ ರಕ್ಷಣೆ, ಕನ್ನಡಿಗರಿಗೆ ಉದ್ಯೋಗಾವಕಾಶ ಸೇರಿದಂತೆ ನಾಡು–ನುಡಿ ರಕ್ಷಣೆಗೆ ಸರ್ಕಾರ ರಾಜಕೀಯ ಸಂಕಲ್ಪ ಮಾಡಬೇಕು ಎಂದು ಅಖಿಲ ಭಾರತ ಅರವತ್ತೇಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಹಾಗೂ ಹೆಸರಾಂತ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಕರೆ ನೀಡಿದರು.

ಇಂದು ಇಲ್ಲಿನ ಡಾ. ಅನುಪಮಾ ನಿರಂಜನ ವೇದಿಕೆಯಲ್ಲಿ ಆರಂಭವಾದ ಅರವತ್ತೇಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಅವರು, ‘ಕನ್ನಡ ನಾಡು–ನುಡಿಯ ಏಳ್ಗೆಗಾಗಿ ಒಳನೋಟ, ವಿಶ್ಲೇಷಣೆ, ಚಿಂತನೆಗಳಿಗೆ ಕರ್ನಾಟಕದಲ್ಲಿ ಯಾವತ್ತೂ ಕೊರತೆ ಇಲ್ಲ; ಕೊರತೆಯಿರುವುದು ಅವುಗಳನ್ನು
ಕಾರ್ಯಗತಗೊಳಿಸಲು ಬೇಕಾದ ರಾಜಕೀಯ ಸಂಕಲ್ಪ ಶಕ್ತಿಯಲ್ಲಿ; ನಾಡು–ನುಡಿಗಳ ಹಿತರಕ್ಷಣೆ ಮತ್ತು ಬೆಳವಣಿಗೆಗಳ ಬಗೆಗೆ ನೆರೆ ರಾಜ್ಯಗಳ ಜನರಿಗಿರುವಷ್ಟು ಸ್ಪಷ್ಟ ಪ್ರಜ್ಞೆ
ಕನ್ನಡಿಗರಿಗಿಲ್ಲ’ ಎಂದು ವಿಷಾದಿಸಿದರು.

‘ಮುಂದಿನ ಸಾಹಿತ್ಯ ಹೀಗೇ ಇರುತ್ತದೆ ಎಂದು ಯಾರೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ; ಆದರೆ ಕನ್ನಡ ಸಾಹಿತ್ಯವು ಮುಂದೆಯೂ ಉಳಿಯುತ್ತದೆಯೇ ಬೆಳೆಯುತ್ತದೆಯೇ ಎಂಬ ಬಗೆಗೆ ಪ್ರತಿಯೊಬ್ಬರೂ ಆತಂಕಪಡಬೇಕಾದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಸಾವಿರದ ಐನೂರು ವರ್ಷಗಳ ಲಿಖಿತ ಇತಿಹಾಸವುಳ್ಳ ಕನ್ನಡ ಸಾಹಿತ್ಯದ ಸೃಜನಶೀಲತೆಯು ಇನ್ನು ಕೆಲವು ದಶಕಗಳಲ್ಲಿ ನಿಂತುಹೋಗುವ ಸಂಭವವಿದೆ. ಈ ಮುಂದಿನ ತಲೆಮಾರು ಇಂಗ್ಲಿಷಿನಲ್ಲಾದರೂ ಸಾಹಿತ್ಯ ಸೃಷ್ಟಿಸುವುದು ಸಾಧ್ಯವಿಲ್ಲ. ಏಕೆಂದರೆ ಅದು ಅವರ ಇಡೀ ಜನಾಂಗದ ಸಂಸ್ಕೃತಿಯನ್ನು ಅಭಿವ್ಯಕ್ತಿಸುವ ಭಾಷೆಯಲ್ಲ. ಎಸ್‌ಎಸ್‌ಎಲ್‌ಸಿ ಮುಗಿಯುವವರೆಗಾದರೂ ಕರ್ನಾಟಕದಲ್ಲಿ ಕನ್ನಡವೇ ಶಿಕ್ಷಣ ಮಾಧ್ಯಮ ಆಗಬೇಕು. ಭಾಷಾವಾರು ಪ್ರಾಂತ್ಯ ರಚನೆಯ ಮೂಲ ಉದ್ದೇಶಗಳಲ್ಲಿ ಇದೂ ಒಂದು’ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT