ಮುಂದುವರಿದ ಎನ್‌ಡಿಎ ಬಿಕ್ಕಟ್ಟು
ನವದೆಹಲಿ, ಆ. 13– ಜನತಾದಳ (ಯು) ಜತೆ ಸ್ಥಾನ ಹೊಂದಾಣಿಕೆ ಕುರಿತಂತೆ ಬಿಜೆಪಿಯು ಒಪ್ಪಿದೆ ಎಂಬುದಾಗಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಹೇಳಿದ್ದರೆ, ಅದನ್ನು ಬಿಜೆಪಿಯು ಸ್ಪಷ್ಟವಾಗಿ ಅಲ್ಲಗಳೆಯುವ ಮೂಲಕ ಈ ವಿವಾದ ಮತ್ತೆ ಕಗ್ಗಂಟಾಗಿಯೇ ಮುಂದುವರಿದಿದೆ.
ಎರಡು ಪಕ್ಷಗಳ ಈ ವಿಭಿನ್ನ ನಿಲುವುಗಳಿಂದ ಮತ್ತಷ್ಟು ಗೊಂದಲ ಮುಂದುವರಿದಿದೆ. ಈ ಮಧ್ಯೆ ಅಭ್ಯರ್ಥಿಗಳ ಆಯ್ಕೆಗಾಗಿ, ನಾಳೆ ಕೊನೆಯ ಸುತ್ತಿನ ಚರ್ಚೆಗಾಗಿ ಸೇರುತ್ತಿರುವ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರುವುದು ಖಚಿತವಾಗಿದೆ. ಈ ಸಭೆಯಲ್ಲಿ ತಮ್ಮ ರಾಜ್ಯ ಘಟಕದ ನಿಲುವನ್ನು ಪುನರುಚ್ಚರಿಸುವುದಾಗಿ ಸಚಿವ ಅನಂತ ಕುಮಾರ್ ತಿಳಿಸಿದ್ದಾರೆ.
ಆದರೆ ಈ ಹಿನ್ನೆಲೆಯಲ್ಲಿ, ಕಳೆದ ಮೂರು ವಾರಗಳಿಂದ ನನೆಗುದಿಗೆ ಬಿದ್ದಿರುವ ಹೊಂದಾಣಿಕೆ ವಿವಾದದ ಕುರಿತಂತೆ ಬಿಜೆಪಿ ನಾಯಕರು ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಂಭವ ಇದೆ.