ಹರಪನಹಳ್ಳಿ, ಆ. 26– ಇಲ್ಲಿಗೆ ಸಮೀಪದ ಉಚ್ಚಂಗಿದುರ್ಗದಲ್ಲಿ ಪ್ರಯಾಣಿಕರಿಂದ ತುಂಬಿದ್ದ ಖಾಸಗಿ ಬಸ್‌ವೊಂದು ರಸ್ತೆ ಪಕ್ಕದ ಬಾವಿಯಲ್ಲಿ ಮುಳುಗಿ 50ಕ್ಕೂ ಹೆಚ್ಚು ಮಂದಿ ಜಲಸಮಾಧಿ ಆಗಿರಬಹುದೆಂದು ಶಂಕಿಸಲಾಗಿದೆ.
ದಾವಣಗೆರೆ ಜಿಲ್ಲೆ ಹರಪನಹಳ್ಳಿಯಿಂದ 30 ಕಿ.ಮೀ. ದೂರದ ಉಚ್ಚಂಗಿದುರ್ಗದಲ್ಲಿರುವ ನೂರು ಚದರಡಿ ವಿಸ್ತೀರ್ಣದ ‘ಅರಿಸಿನ ಬಾವಿ’ಯಲ್ಲಿ ಈ ಬಸ್ ಮುಳುಗಿದೆ. ಬಸ್ಸಿನ ಮೇಲೆ ಸುಮಾರು ಏಳು ಅಡಿಯಷ್ಟು ನೀರಿದ್ದು ರಕ್ಷಣಾ ಕಾರ್ಯಕ್ಕೆ ಹೊಂಡದ ಗಲೀಜು ನೀರಿನಿಂದ ತೊಂದರೆಯಾಗಿದೆ.