ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

25 ವರ್ಷಗಳ ಹಿಂದೆ | ಜಾತ್ಯತೀತ ತತ್ವಕ್ಕೆ ಬದ್ಧ: ವಾಜಪೇಯಿ ಭರವಸೆ

Published 22 ಮೇ 2024, 23:30 IST
Last Updated 22 ಮೇ 2024, 23:30 IST
ಅಕ್ಷರ ಗಾತ್ರ

ಐಜ್ವಾಲ್‌, ಮೇ 22 (ಪಿಟಿಐ)– ಕೇಂದ್ರ ಸರ್ಕಾರವು ಜಾತ್ಯತೀತ ತತ್ವಗಳಿಗೆ ಬದ್ಧವಾಗಿದ್ದು, ವಿವಿಧ ಜನಾಂಗ ಮತ್ತು ಧಾರ್ಮಿಕ ಗುಂಪುಗಳ ಮಧ್ಯೆ ಒಡಕು ಉಂಟುಮಾಡಲು ಯತ್ನಿಸುವವರ ವಿರುದ್ಧ ಕಠಿಣವಾಗಿ ವರ್ತಿಸಲಾಗುವುದು ಎಂದು ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಹೇಳಿದ್ದಾರೆ.

ಎಲ್ಲ ಜನಾಂಗ ಮತ್ತು ಧರ್ಮದವರನ್ನು ಸಮಾನ ದೃಷ್ಟಿಯಲ್ಲಿ ನೋಡಲಾಗುವುದು ಎಂದಿದ್ದಾರೆ.

ದೇಶದ ಈಶಾನ್ಯ ಭಾಗಗಳಲ್ಲಿ ವಿದೇಶಿ ಉಗ್ರಗಾಮಿಗಳು ನುಸುಳದಂತೆ ತಡೆಯಲು ಕೇಂದ್ರ ಗೃಹ ಸಚಿವಾಲಯ ಹೊಸ ಯೋಜನೆಯನ್ನು ಶೀಘ್ರವೇ ರೂಪಿಸುವುದು. ಮಿಜೋರಾಂಗೆ ಹೊಂದಿಕೊಂಡಿರುವ ಮ್ಯಾನ್ಮಾರ್‌ ಮತ್ತು ಬಾಂಗ್ಲಾದೇಶದ ಗಡಿ ಪ್ರದೇಶದಲ್ಲಿ ಹೆಚ್ಚು ಭದ್ರತಾ ಚೌಕಿಗಳನ್ನು ಸ್ಥಾಪಿಸುವ ವಿಷಯ ಗೃಹ ಸಚಿವಾಲಯದ ತೀವ್ರ ಗಣನೆಯಲ್ಲಿದೆ ಎಂದರು.

ಸಮಾನಮನಸ್ಕರ ಸಭೆಗೆ ಪಟೇಲ್‌ ಆಕ್ರೋಶ

ಬೆಂಗಳೂರು, ಮೇ 22– ಕೆಲವು ‘ಸಮಾನಮನಸ್ಕ’ ಸಚಿವರು ನಿನ್ನೆ ಕೃಷಿ ಸಚಿವ ಸಿ.ಬೈರೇಗೌಡ ಅವರ ನಿವಾಸದಲ್ಲಿ ಸಭೆ ಸೇರಿ ರಾಜ್ಯ ಜನತಾದಳದ ಇತ್ತೀಚಿನ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದರ ಬಗ್ಗೆ ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ಹೇಳಲಾಗಿದೆ.

‘ಮಾನಸಿಕವಾಗಿ ಅಸ್ವಸ್ಥರಾಗಿರುವ ಕೆಲವರು ರಾಜಕೀಯವಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದಾರೆ. ಇದಕ್ಕೆ ಮುನ್ನ ಪಕ್ಷದೊಳಗೆ ಗೊಂದಲ ಉಂಟುಮಾಡುವ ಯತ್ನ ನಡೆಸಿದ್ದಾರೆ. ಇದೇ ರೀತಿ ಗುಂಪು ಸಭೆಗಳು ಮುಂದುವರಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ’ ಎಂದು ‘ಜಿಂದಾಲ್‌’ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಅವರು ತೀಕ್ಷ್ಣವಾಗಿ
ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT